ಇರಾನ್ ಭೂಕಂಪ:  450ಕ್ಕೂ ಅಧಿಕ ಸಾವು, 7,000 ಮಂದಿಗೆ ಗಾಯ

Source: sonews | By sub editor | Published on 14th November 2017, 11:59 PM | Global News | Don't Miss |

ಟೆಹರಾನ್: ಇರಾನ್‌ನಲ್ಲಿ ರವಿವಾರ ಸಂಭವಿಸಿದ ಭೀಕರ ಭೂಕಂಪದ ಬಳಿಕ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸುವ ಕಾರ್ಯಾಚರಣೆ ಮಂಗಳವಾರವೂ ಮುಂದುವರಿದಿದೆ.

ಇರಾಕ್‌ನೊಂದಿಗೆ ಗಡಿ ಹೊಂದಿರುವ ಇರಾನ್‌ನ ಪಶ್ಚಿಮದ ರಾಜ್ಯ ಕೆರ್ಮಾನ್‌ಶಾದ ಗುಡ್ಡಗಾಡು ಪ್ರದೇಶದಲ್ಲಿರುವ ಪಟ್ಟಣಗಳು ಮತ್ತು ಗ್ರಾಮಗಳಲ್ಲಿ ಕುಸಿದಿರುವ ಮನೆಗಳ ಅಡಿಯಲ್ಲಿ ಜನರು ಇನ್ನೂ ಸಿಲುಕಿಕೊಂಡಿದ್ದಾರೆ. ಅವರನ್ನು ಹೊರದೆಗೆಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.

ರವಿವಾರ ರಾತ್ರಿ ಸಂಭವಿಸಿದ ರಿಕ್ಟರ್ ಮಾಪಕದಲ್ಲಿ 7.3ರ ತೀವ್ರತೆಯ ಭೂಕಂಪದಲ್ಲಿ 450ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ 7,000 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ಇಂಗ್ಲಿಷ್ ಭಾಷೆಯ ‘ಪ್ರೆಸ್ ಟಿವಿ’ ಹೇಳಿದೆ.

ರಕ್ಷಣಾ ತಂಡಗಳು ಇರಾನ್‌ನ ದುರ್ಗಮ ಪ್ರದೇಶಗಳನ್ನು ತಲುಪುತ್ತಿರುವಂತೆಯೇ ಸಾವು-ನೋವಿನ ಸಂಖ್ಯೆ ಹೆಚ್ಚಬಹುದು ಎಂಬ ಭೀತಿಯನ್ನು ಸ್ಥಳೀಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಇರಾನ್‌ನ ಹಲವು ಪ್ರಾಂತಗಳಲ್ಲಿ ಭೂಕಂಪ ಅನುಭವಕ್ಕೆ ಬಂದರೂ, ಅದು ಭೀಕರ ಪರಿಣಾಮವನ್ನು ತೋರಿಸಿದ್ದು ಕೆರ್ಮಾನ್‌ಶಾ ಪ್ರಾಂತದ ಮೇಲೆ. ಮೃತಪಟ್ಟವರ ಪೈಕಿ 300ಕ್ಕೂ ಅಧಿಕ ಮಂದಿ ಆ ರಾಜ್ಯದ ಸರ್ಪೊಲ್-ಇ- ಝಹಬ್ ಕೌಂಟಿಯವರು.

ಭೂಕಂಪದಿಂದಾಗಿ ಹಲವು ಗ್ರಾಮಗಳಲ್ಲಿ ಭಾರೀ ಹಾನಿ ಸಂಭವಿಸಿದೆ ಎಂದು ಇರಾನ್‌ನ ಸರಕಾರಿ ಟೆಲಿವಿಶನ್ ವರದಿ ಮಾಡಿದೆ. ಈ ಗ್ರಾಮಗಳಲ್ಲಿ ಮಣ್ಣಿನಿಂದ ಮನೆಗಳನ್ನು ನಿರ್ಮಿಸಲಾಗಿದೆ.

ಮರಗಟ್ಟಿಸುವ ಚಳಿಯಲ್ಲಿ ನಡುಗಿದ ಸಂತ್ರಸ್ತರು

ಭೂಕಂಪದಿಂದಾಗಿ ನಿರ್ವಸಿತರಾದ ಸಾವಿರಾರು ಇರಾನಿಯನ್ನರು ಸೋಮವಾರ ರಾತ್ರಿ ಚಳಿಯಿಂದ ನಡುಗಿದರು.

ಚಳಿಯಿಂದ ಬಳಲುತ್ತಿರುವ ತಮಗೆ ಸೂಕ್ತ ಆಶ್ರಯ ಕಲ್ಪಿಸಲಾಗಿಲ್ಲ ಎಂಬುದಾಗಿ ಸಂತ್ರಸ್ತರು ದೂರಿದ್ದಾರೆ.

‘‘ನಮಗೆ ತುರ್ತಾಗಿ ಆಶ್ರಯ ಬೇಕಾಗಿದೆ. ಎಲ್ಲಿಗೆ ನೆರವು?’’ ಎಂದು ಸಂತ್ರಸ್ತರೊಬ್ಬರು ಪ್ರಶ್ನಿಸಿದರು.

‘‘ನನ್ನ ಕುಟುಂಬಕ್ಕೆ ಇನ್ನೊಂದು ಶೀತಲ ರಾತ್ರಿಯನ್ನು ಹೊರಗಡೆ ಕಳೆಯಲು ಸಾಧ್ಯವಾಗದು’’ ಎಂದು ಅವರು ಹೇಳಿದರು.

Read These Next