ಭಾರತ Vs ಆಸ್ಟ್ರೇಲಿಯಾ: ರೋಹಿತ್, ರಹಾನೆ, ಪಾಂಡ್ಯ ಫಿಪ್ಟಿ; ಭಾರತಕ್ಕೆ ಸರಣಿ ಗೆಲುವು

Source: ಟೈಮ್ಸ್ ಆಫ್ ಇಂಡಿಯಾ/VK | By I.G. Bhatkali | Published on 25th September 2017, 1:06 AM | National News | Sports News | Don't Miss |

ಇಂದೋರ್: ಓಪನರುಗಳಾದ ರೋಹಿತ್ ಶರ್ಮಾ (71) ಹಾಗೂ ಅಜಿಂಕ್ಯಾ ರಹಾನೆ (70) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹಾರ್ದಿಕ್ ಪಾಂಡ್ಯ (78) ಗಳಿಸಿರುವ ಆಕರ್ಷಕ ಅರ್ಧಶತಕಗಳ ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯವನ್ನು ಟೀಮ್ ಇಂಡಿಯಾ ಐದು ವಿಕೆಟ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿದೆ.

ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯನ್ನು ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿರುವಂತೆಯೇ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಇಂದೋರ್ ಮೈದಾನದಲ್ಲಿ ಭಾನುವಾರ ನಡೆದ ಮೂರನೇ ಪಂದ್ಯದಲ್ಲಿ ಗೆಲುವಿಗಾಗಿ 294 ರನ್ ಬೆನ್ನತ್ತಿದ ಟೀಮ್ ಇಂಡಿಯಾ ಇನ್ನು13 ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಉತ್ತಮ ಆರಂಭವೊದಗಿಸಿದರು. ಆಸೀಸ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ರಹಾನೆ-ರೋಹಿತ್ ಜೋಡಿಯು ಮೊದಲ ವಿಕೆಟ್‌ಗೆ 21.4 ಓವರ್‌ಗಳಲ್ಲಿ 139 ರನ್‌ಗಳ ಜೊತೆಯಾಟ ನೀಡಿದರು.

ಅಷ್ಟೇ ಅಲ್ಲದೆ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. 76 ಎಸೆತಗಳನ್ನು ಎದುರಿಸಿದ ರಹಾನೆ ಒಂಬತ್ತು ಬೌಂಡರಿಗಳಿಂದ 70 ರನ್ ಗಳಿಸಿದರು. ಈ ಮೂಲಕ ಸತತ ಎರಡನೇ ಅರ್ಧಶತಕ ಬಾರಿಸಿದರು.

ಅತ್ತ ಫಾರ್ಮ್‌ಗೆ ಮರಳಿದ ರೋಹಿತ್ ಸಹ ಫಿಫ್ಟಿ ಸಾಧನೆ ಮಾಡಿದರು. ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿದ ರೋಹಿತ್ 62 ಎಸೆತಗಳಲ್ಲಿ 71 ರನ್ ಬಾರಿಸಿದರು. ಇದರಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಮನಮೋಹಕ ಸಿಕ್ಸರ್‌ಗಳು ಸೇರಿದ್ದವು.

ಇಲ್ಲಿಂದ ಬಳಿಕ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಜವಾಬ್ದಾರಿಯನ್ನು ನಾಯಕ ವಿರಾಟ್ ಕೋಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ವಹಿಸಿಕೊಂಡರು. ಇವರಿಬ್ಬರು ತೃತೀಯ ವಿಕೆಟ್‌ಗೆ 56 ರನ್‌ಗಳ ಜೊತೆಯಾಟ ನೀಡಿದ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಈ ಹಂತದಲ್ಲಿ 28 ರನ್ ಗಳಿಸಿದ ಕೋಹ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 35 ಎಸೆತಗಳನ್ನು ಎದುರಿಸಿದ ಕೋಹ್ಲಿ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿಗಳು ಸೇರಿದ್ದವು. ಇದರ ಬೆನ್ನಲ್ಲೇ ಕೇದರ್ ಜಾಧವ್ (2) ಮರಳುವ ಮೂಲಕ ಟೀಮ್ ಇಂಡಿಯಾ ಪಾಳೇಯದಲ್ಲಿ ಆತಂಕವುಂಟಾಗಿತ್ತು.

ಏತನ್ಮಧ್ಯೆ ಕೆಚ್ಚೆದೆಯ ಬ್ಯಾಟಿಂಗ್ ಮುಂದುವರಿಸಿದ ಪಾಂಡ್ಯ ಬಿರುಸಿನ ಅರ್ಧಶತಕ ಬಾರಿಸುವ ಮೂಲಕ ಗಮನ ಸೆಳೆದರು. ಆಸೀಸ್ ಬೌಲರ್‌ಗಳನ್ನು ನಿರಾಂತಕವಾಗಿ ದಂಡಿಸಿದ ಪಾಂಡ್ಯ ತಂಡವನ್ನು ಗೆಲುವಿನ ಅಂಚಿಗೆ ತಲುಪಿಸಿದರು.

ಅಲ್ಲದೆ ಐದನೇ ವಿಕೆಟ್‌ಗೆ ಮನೀಶ್ ಪಾಂಡೆ ಜೊತೆಗೆ 78 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಕೇವಲ 72 ಎಸೆತಗಳನ್ನು ಎದುರಿಸಿದ ಪಾಂಡ್ಯ ಐದು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 78 ರನ್ ಗಳಿಸಿದರು.

ಅತ್ತ ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಮನೀಶ್ ಪಾಂಡ್ಯ, ನಿರ್ಣಾಯಕ ಪಂದ್ಯದಲ್ಲಿ ಅಮೂಲ್ಯ 36 ರನ್ ಗಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿದರು. 32 ಎಸೆತಗಳನ್ನು ಎದುರಿಸಿದ ಪಾಂಡ್ಯ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿಗಳು ಸೇರಿದ್ದವು. ಇನ್ನುಳಿದಂತೆ ಮಹೇಂದ್ರ ಸಿಂಗ್ ಧೋನಿ 3 ರನ್ ಗಳಿಸಿ ಔಟಾಗದೆ ಉಳಿದರು.

ಇದರಂತೆ 47.5 ಓವರ್‌ಗಳಲ್ಲಿ ಭಾರತ ಐದು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು. ಆಸೀಸ್ ಪರ ಪ್ಯಾಟ್ ಕಮ್ಮಿನ್ಸ್ ಎರಡು ಮತ್ತು ನೆಥನ್ ಕೌಲ್ಟರ್ ನೈಲ್, ಆಶ್ಟನ್ ಆಗರ್ ಮತ್ತು ಕೇನ್ ರಿಚರ್ಡ್ಸನ್ ತಲಾ ಒಂದು ವಿಕೆಟನ್ನು ಹಂಚಿಕೊಂಡರು.

ಟಾರ್ಗೆಟ್ 294; ಭಾರತ ಉತ್ತಮ ಆರಂಭ...
ಭಾರತ ವಿರುದ್ಧ ಸಾಗುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪ್ರವಾಸಿ ಆಸ್ಟ್ರೇಲಿಯಾ ತಂಡವು ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಆ್ಯರೋನ್ ಫಿಂಚ್ (124) ಅಮೋಘ ಶತಕ ಮತ್ತು ನಾಯಕ ಸ್ಟೀವ್ ಸ್ಮಿತ್ (63) ಆಕರ್ಷಕ ಅರ್ಧಶತಕದ ನೆರವಿನೊಂದಿಗೆ ನಿಗದಿತ 50 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 293 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.

ಆರಂಭಿಕರಾದ ಡೇವಿನ್ ವಾರ್ನರ್ ಮತ್ತು ಆ್ಯರೋನ್ ಫಿಂಚ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 13.3 ಓವರ್‌ಗಳಲ್ಲಿ 70 ರನ್ ಒಟ್ಟು ಸೇರಿಸಿದರು.

ಭಾರತೀಯ ಸ್ಪಿನ್ನರ್‌ಗಳನ್ನು ಎದುರಿಸಲು ಉತ್ತಮ ಆರಂಭ ನೀಡುವುದು ಅಗತ್ಯ ಎಂಬ ಹೇಳಿಕೆ ನೀಡಿದ್ದ ವಾರ್ನರ್ ತಮ್ಮ ಹೇಳಿಕೆಗೆ ತಕ್ಕಂತೆ ಉತ್ತಮ ಆರಂಭವೊದಗಿಸಿದರು. 44 ಎಸೆತಗಳನ್ನು ಎದುರಿಸಿದ ವಾರ್ನರ್ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 42 ರನ್ ಗಳಿಸಿದರು.

ಈ ಹಂತದಲ್ಲಿ ವಾರ್ನರ್ ಕ್ಲೀನ್ ಬೌಲ್ಡ್ ಮಾಡಿದ ಹಾರ್ದಿಕ್ ಪಾಂಡ್ಯ ಮೊದಲ ಬ್ರೇಕ್ ಒದಗಿಸಿದರು. ಅತ್ತ ಗಾಯದ ತೊಂದರೆಯಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿದ್ದ ಫಿಂಚ್ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು.

ಇಲ್ಲಿಂದ ಬಳಿಕ ನಾಯಕ ಸ್ಟೀವ್ ಸ್ಮಿತ್ ಜತೆಗೂಡಿ ರನ್ ಗತಿಗೆ ಆವೇಗವನ್ನು ತುಂಬಿದರು. ಭಾರತೀಯ ಸ್ಪಿನ್ನರ್‌ಗಳನ್ನು ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಫಿಂಚ್-ಸ್ಮಿತ್ ಜೋಡಿಯು ಶತಕದ ಜೊತೆಯಾಟವನ್ನು ನೀಡಿದರು.

ಈ ನಡುವೆ ಆಕರ್ಷಕ ಶತಕ ಬಾರಿಸಿದ ಫಿಂಚ್, ತಂಡದಲ್ಲಿ ತಮ್ಮ ಸ್ಥಾನವನ್ನು ಸಮರ್ಥಿಸಿಕೊಂಡರು. ಅಲ್ಲದೆ 35 ಓವರ್‌ಗಳಲ್ಲಿ ಆಸೀಸ್ ಒಂದು ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು.

ಇದಾದ ಬೆನ್ನಲ್ಲೇ ನಾಯಕ ಸ್ಮಿತ್ ಅರ್ಧಶತಕ ಸಾಧನೆ ಮಾಡಿದರು. ಈ ಹಂತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಫಿಂಚ್, ಚೈನಾಮನ್ ಖ್ಯಾತಿಯ ಕುಲ್‌ದೀಪ್‌ಗೆ ಬಲಿಯಾದರು. 125 ಎಸೆತಗಳನ್ನು ಎದುರಿಸಿದ ಫಿಂಚ್ 124 ರನ್ ಗಳಿಸಿದರು. ಇದರಲ್ಲಿ 12 ಬೌಂಡರಿ ಹಾಗೂ ಐದು ಅಮೋಘ ಸಿಕ್ಸರ್‌ಗಳು ಸೇರಿದ್ದವು.

ಅಷ್ಟೇ ಅಲ್ಲದೆ ನಾಯಕ ಸ್ಮಿತ್ ಜೊತೆ ಎರಡನೇ ವಿಕೆಟ್‌ಗೆ 174 ರನ್‌ಗಳ ಮಹತ್ವದ ಜೊತೆಯಾಟ ನೀಡಿದ್ದರು. ಆದರೆ ಫಿಂಚ್ ಪತನದ ಬೆನ್ನಲ್ಲೇ ಸ್ಮಿತ್ ಕೂಡಾ ಪೆವಿಲಿಯನ್ ಹಾದಿ ಹಿಡಿದರು.

ಆರಂಭದಲ್ಲಿ ಹೆಚ್ಚು ರನ್ ಬಿಟ್ಟುಕೊಡುವ ಮೂಲಕ ದಂಡಿಸ್ಪಟ್ಟಿದ್ದ ಕುಲ್‌ದೀಪ್ ಯಾದವ್, ಸೆಟ್ ಬ್ಯಾಟ್ಸ್‌ಮನ್ ಫಿಂಚ್ ಬೆನ್ನಲ್ಲೇ ಸ್ಮಿತ್ ವಿಕೆಟ್ ಪಡೆಯುವ ಮೂಲಕ ಕಮ್ ಬ್ಯಾಕ್ ಮಡಿದರು. 71 ಎಸೆತಗಳನ್ನು ಎದುರಿಸಿದ ಸ್ಮಿತ್ ಐದು ಬೌಂಡರಿಗಳಿಂದ 63 ರನ್ ಗಳಿಸಿದರು.

ಸ್ವಲ್ಪದರಲ್ಲೇ ಗ್ಲೆನ್ ಮ್ಯಾಕ್ಸ್‌ವೆಲ್ (5) ಲೆಗ್ ಸ್ಪಿನ್ನರ್ ಚಹಲ್ ಎಸೆತದಲ್ಲಿ ಮಗದೊಂದು ಧೋನಿ ಸ್ಟಂಪಿಂಗ್‌ಗೆ ಬಲಿಯಾದರು. ಇದರಿಂದಾಗಿ ಅಂತಿಮ ಹಂತದಲ್ಲಿ ಆಸೀಸ್‌ಗೆ ಸ್ವಲ್ಪ ಹಿನ್ನಡೆಯಾಯಿತು.

ಬಳಿಕ ಬಂದ ಟ್ರಾವಿಸ್ ಹೆಡ್ (4) ಬಲಗೈ ವೇಗಿ ಜಸ್ಪ್ರೀತ್ ಬುಮ್ರಾ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಒಂದು ಹಂತದಲ್ಲಿ 37.4 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಆಸೀಸ್ 45.3 ಓವರ್‌ಗಳಲ್ಲಿ 260 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಹಿನ್ನಡೆಗೊಳಗಾಯಿತು.

ಅಂತಿಮ ಹಂತದಲ್ಲಿ ಮಗದೊಮ್ಮೆ ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದ ಮಾರ್ಕಸ್ ಸ್ಟೊಯಿನಿಸ್ (27*) ತಂಡದ ಮೊತ್ತ 275ರ ಗಡಿ ದಾಟಿಸುವಲ್ಲಿ ನೆರವಾದರು. ಇನ್ನುಳಿದಂತೆ ವಿಕೆಟ್ ಕೀಪರ್ ಪೀಟರ್ ಹ್ಯಾಂಡ್ಸ್‌ಕಾಂಬ್ (3), ಆಶ್ಟನ್ ಆಗರ್ (9*) ರನ್ ಗಳಿಸಿದರು.

ಬುಮ್ರಾ ಎಸೆತದಲ್ಲಿ ಸಿಕ್ಸರ್ ಲೈನ್‌ನಲ್ಲಿ ಪೀಟರ್ ಹ್ಯಾಂಡ್ಸ್‌ಕಾಂಬ್ ಕ್ಯಾಚ್ ಅನ್ನು ಮನೀಷ್ ಪಾಂಡೆ ಅದ್ಭುತವಾಗಿ ಹಿಡಿರುವುದು ರೋಚಕ ಕ್ಷಣವನ್ನು ಸೃಷ್ಟಿ ಮಾಡಿತ್ತು. ಅಂತಿಮವಾಗಿ ಆಸೀಸ್ ನಿಗದಿತ 50 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿತ್ತು. ಕೊನೆಯ 10 ಓವರ್‌ಗಳಲ್ಲಿ ಕಾಂಗಾರೂ ಪಡೆ ನಾಲ್ಕು ವಿಕೆಟ್ ಪಡೆದುಕೊಂಡು 59 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಭಾರತದ ಪರ ಜಸ್ಪ್ರೀತ್ ಬುಮ್ರಾ ಮತ್ತು ಕುಲ್‌ದೀಪ್ ಯಾದವ್ ತಲಾ ಎರಡು ಮತ್ತು ಯಜುವೇಂದ್ರ ಚಹಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್‌ಗಳನ್ನು ಕಿತ್ತು ಮಿಂಚಿದರು.

ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್...
ಪ್ರವಾಸಿ ಕಾಂಗೂರೂ ಪಡೆಯಲ್ಲಿ ಮಗದೊಮ್ಮೆ ಎರಡು ಬದಲಾವಣೆ ತರಲಾಗಿದ್ದು, ಸ್ಫೋಟಕ ಬ್ಯಾಟ್ಸ್‌ಮನ್ ಆ್ಯರೋನ್ ಫಿಂಚ್ ಮತ್ತು ಪೀಟರ್ ಹ್ಯಾಂಡ್ಸ್‌ಕಾಂಬ್ ತಂಡಕ್ಕೆ ಪುನರಾಗಮನ ಮಾಡಿಕೊಂಡಿದ್ದಾರೆ. ಇವರಿಬ್ಬರಿಂಗೆ ಕಾರ್ಟ್‌ವ್ರೈಟ್ ಮತ್ತು ವೇಡ್ ತಮ್ಮ ತಮ್ಮ ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ.

ಅತ್ತ ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ವಶಪಡಿಸಿಕೊಳ್ಳುವ ಇರಾದೆಯಲ್ಲಿರುವ ಟೀಮ್ ಇಂಡಿಯಾದಲ್ಲಿ ಯಾವುದೇ ಬದಲಾವಣೆ ತರಲಾಗಿದೆ.

ಚೆನ್ನೈನಲ್ಲಿ ನಡೆದ ಮಳೆ ಬಾಧಿತ ಮೊದಲ ಪಂದ್ಯದಲ್ಲಿ ಭಾರತ ತಂಡವು ಡಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ 26 ರನ್ ಅಂತರದಲ್ಲಿ ಗೆಲುವು ದಾಖಲಿಸಿದ್ದರೆ ಕೋಲ್ಕತ್ತಾದ ದ್ವಿತೀಯ ಪಂದ್ಯದಲ್ಲಿ 50 ರನ್ ಅಂತರದ ಅಮೋಘ ವಿಜಯ ಸಾಧಿಸಿತ್ತು.
 

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ.

ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ...

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...