ಶಿರಾಲಿಯ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ

Source: sonews | By Staff Correspondent | Published on 30th December 2018, 11:28 PM | Coastal News | Don't Miss |

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡವನ್ನು ಶಾಸಕ ಸುನಿಲ್ ನಾಯ್ಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇದು ಕಳೆದ ಸುಮಾರು 98 ವರ್ಷಗಳಿಂದ ರೈತರಿಗೆ, ಬಡವರಿಗೆ ಸಾಲ ನೀಡುತ್ತಾ ಬಂದಿದ್ದು ಸಹಕಾರಿ ಸಂಸ್ಥೆಗಳಲ್ಲಿಯೇ ಮಾದರಿ ಸಂಸ್ಥೆಯಾಗಿದೆ ಎಂದರು. 

ಮೊದಲು ಸಣ್ಣಪುಟ್ಟ ಸಾಲವನ್ನು ಮಾತ್ರ ಕೊಡುತ್ತಿದ್ದ ಸಂಘ ಕಾಲ ಕ್ರಮೇಣ ಎಲ್ಲ ರೀತಿಯ ಸಾಲ ನೀಡಲು ಆರಂಭಿಸಿದ್ದು ಇಂದು ಅತ್ಯಂತ ಬಲಿಷ್ಟವಾಗಿ ಬೆಳೆದು ನಿಂತಿದೆ. ಸಹಕಾರಿ ಬ್ಯಾಂಕುಗಳಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಲ ಸೌಲಭ್ಯ ದೊರೆಯುವುದರಿಂದ ಜನರನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಉತ್ತಮ ಸೇವೆ ನೀಡುವುದಕ್ಕೆ ಸಹಕಾರಿ ಬ್ಯಾಂಕುಗಳು ಪ್ರಥಮದ್ದಾಗಿವೆ ಎಂದ ಅವರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ವಿಳಂಬ ನೀತಿಯೂ ಕೂಡಾ ಸಹಕಾರಿ ಸಂಘಗಳ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು. 

ತಾವೂ ಕೂಡಾ ಒಂದು ಕಾಲದಲ್ಲಿ ಇದೇ ಸಂಘದಿಂದ ಸಾಲವನ್ನು ಪಡೆದಿರುವುದನ್ನು ನೆನಪಿಸಿಕೊಂಡ ಅವರು ಇನ್ನೊಂದು ಬಾರಿಯೂ ತಮಗೆ ಇಲ್ಲಿಯೇ ಸಾಲ ನೀಡಿದ್ದಾರೆ ಎಂದರು. ಕೇವಲ ಕೆಲವೇ ಶೇಖಡಾ ಬಡ್ಡಿ ವ್ಯತ್ಯಾಸವಿರುವುದರಿಂದ ಸಹಕಾರಿ ಕ್ಷೇತ್ರ ರಾಷ್ಟ್ರೀಕೃತ ಬ್ಯಾಂಕುಗಳಿಗೇ ಪೈಪೋಟಿ ನೀಡುವಷ್ಟು ಬೆಳೆದಿವೆ. ಅಲ್ಲದೇ ಸಹಕಾರಿ ರಂಗದಲ್ಲಿ ನಗುಮೊಗದ ಸೇವೆ ಲಭ್ಯವಿರುವುದು ಸಹಕಾರಿ ರಂಗ ಬೆಳವಣಿಗೆಗೆ ಇನ್ನಷ್ಟು ಸಹಕಾರಿಯಾಗಿದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವೆಂಕಟೇಶ ಎನ್. ನಾಯ್ಕ ಮಾತನಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ಬೆಳೆದು ಬಂದ ದಾರಿಯನ್ನು ಮೆಲುಕು ಹಾಕುತ್ತಾ ಸಂಘದ ಬೆಳವಣಿಗೆಯಲ್ಲಿ ಮಾಜಿ ಅಧ್ಯಕ್ಷರುಗಳ ಹಾಗೂ ಶೇರುದಾರರ ಸಹಕಾರವನ್ನು ಸ್ಮರಿಸಿದರು. ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸಿಬ್ಬಂದಿಗಳ ಸಹಕಾರ ಹಾಗೂ ಗ್ರಾಹಕರ ಸಹಕಾರ ಕಾರಣವಾಗಿದೆ ಎಂದ ಅವರು ಸಂಘದ ನಿದಿಯಿಂದ ಶಿರಾಲಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಒಂದು ಲಕ್ಷ ರೂಪಾಯಿಗಳ ಕೊಡುಗೆಯನ್ನು ಘೋಷಿಸಿದರು. 

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಸುಭದ್ರಾ ದೇವಡಿಗ, ಸಹಕಾರಿ ಉಪ ನಿಬಂಧಕ ಜಿ.ಎಸ್. ಜಯಪ್ರಕಾಶ, ಸಹಕಾರಿ ಅಭಿವೃದ್ಧಿ ಅಧಿಕಾರಿ ಭಾಸ್ಕರ ನಾಯ್ಕ, ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಮಾದೇವ ನಾಯ್ಕ ಬೆಟ್ಕೂರ್, ಎ.ಬಿ.ಚಿತ್ರಾಪುರ, ಮಾಜಿ ಕಾರ್ಯದರ್ಶಿ ಜಿ.ವಿ.ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳನ್ನು, ಹಾಲಿ ಸಿಬ್ಬಂದಿಗಳನ್ನು, ಪಿಗ್ಮಿ ಸಂಗ್ರಾಹಕರನ್ನು ಹಾಗೂ ನೂತನ ಕಟ್ಟಡವನ್ನು ಕಟ್ಟಲು ಸಹಕರಿಸಿದ ಗುತ್ತಿಗೆದಾರರು, ಇಂಜಿನಿಯರ್‍ಗಳನ್ನು ಸನ್ಮಾನಿಸಲಾಯಿತು. 

ನಾಗಶ್ರೀ ಸಂಗಡಿಗರು ಪ್ರಾರ್ಥಿಸಿ, ಸ್ವಾಗತ ಗೀತೆ ಹಾಡಿದರು. ಕೆ.ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಪ್ರಭಾಕರ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಕ ಕೆ.ಎನ್. ಚಿತ್ರಾಪುರ ವರದಿ ವಾಚಿಸಿದರು. ನಾರಾಯಣ ನಾಯ್ಕ ಹಾಗೂ ಮಂಜುನಾಥ ನಾಯ್ಕ ನಿರ್ವಹಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...