ಶಿಕ್ಷಣ ಬದುಕಿಗೆ ದಾರಿದೀಪವಾದರೆ, ಕುಟುಂಬಕ್ಕೆ ಆಧಾರ ಸ್ಥಂಭವಾಗುವುದು-ಪರ್ತಗಾಳಿ ಶ್ರೀ

Source: sonews | By Staff Correspondent | Published on 26th October 2018, 5:45 PM | Coastal News | Don't Miss |

ಭಟ್ಕಳ: ಶಿಕ್ಷಣವು ವ್ಯಕ್ತಿಯ ಬದುಕಿಗೆ ದಾರಿದೀಪವಾದರೆ, ಸಮಾಜ, ಕುಟುಂಬದ ಹೊಣೆ ಹೊರುವವರಿಗೆ ಅಧಾರ ಸ್ಥಂಭವಾಗುವುದು ಎಂದು ಗೋಕರ್ಣ ಶ್ರೀ ಪರ್ತಗಾಳಿ ಜೀವೋತ್ತಮ ಮಠದ ಶ್ರೀಮದ್ ವಿದ್ಯಾಧಿರಾಜತೀರ್ಥ ಸ್ವಾಮೀಜಿ ಹೇಳಿದರು.

ಅವರು ತಾಲೂಕಿನ ಅಳ್ವೇಕೋಡಿ ಶ್ರೀ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ಸಭಾ ಭವನದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. 
 
ವಿದ್ಯೆಯು ವಿನಯವನ್ನು ನೀಡುವುದರೊಂದಿಗೆ ಪ್ರತಿಯೊಂದು ಹಂತದಲ್ಲಿಯೂ ಮನುಶ್ಯನಿಗೆ ಅಗತ್ಯವಾದುದುದಾಗಿದೆ. ಅಳ್ವೇಕೋಡಿಯಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಿಯ ಅನುಗ್ರಹದಿಂದ ಇಲ್ಲಿನ ಭಜಕರು ದೇವಾಲಯದ ಆಡಳಿತ ಕಮಿಟಿಯವರು ಪ್ರತಿ ವರ್ಷ ಹಮ್ಮಿಕೊಳ್ಳುತ್ತಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದರು. ವಿದ್ಯೆಯಿಂದ ಉತ್ತಮ ಬುದ್ಧಿ ಪ್ರಾಪ್ತವಾಗುವುದರೊಂದಿಗೆ ಪ್ರತಿಯೋರ್ವರಿಗೂ ಶ್ರೇಯಸ್ಸನ್ನು ತಂದು ಕೊಡಲಿ ಎಂದೂ ಶ್ರೀಗಳು ಹಾರೈಸಿದರು. 

ಶ್ರೀಗಳ ಪಟ್ಟದ ಶಿಷ್ಯ ಶ್ರೀಮದ್ ವಿದ್ಯಾದೀಶ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ಓರ್ವ ವಿದ್ಯಾವಂತನಿಗೆ ಕೇವಲ ಅವನ ಊರು ಮಾತ್ರವಲ್ಲ, ರಾಜ್ಯ, ರಾಷ್ಟ್ರದಲ್ಲಿಯೂ ಗೌರವ ದೊರೆಯುತ್ತದೆ. ಆತ ರಾಜನಿಗಿಂತಲೂ ಮಿಗಿಲಾದ ಗೌರವವನ್ನು ಪಡೆಯುವಂತವನಾಗುತ್ತಾನೆ. ಇಂದು ಪ್ರತಿಭಾ ಪುರಸ್ಕಾರಕ್ಕೊಳಪಟ್ಟ ವಿದ್ಯಾರ್ಥಿಗಳು ಮುಂದೆ ದೇಶ ವಿದೇಶದಲ್ಲಿ ಉತ್ತಮ ಹೆಸರು ಗಳಿಸಿ ಉತ್ತಮ ಗೌರವವನ್ನು ತಂದು ಕೊಡುವಂತಾಗಲಿ ಎಂದು ಹಾರೈಸಿದರು. 

ಮನುಷ್ಯನ ಜೀವನದಲ್ಲಿ ವಿದ್ಯೆಯಿಂದ ವಂಚಿತನಾದರೆ ಆತನು ನೀರಿಲ್ಲದ ನದಿಯಂತೆ ನಿಷ್ಪ್ರಯೋಜಕನಾಗುತ್ತಾನೆ. ಯಾರೂ ಕೂಡಾ ಆತನಿಗೆ ಗೌರವವನ್ನು ಕೊಡುವುದಿಲ್ಲ, ಹಣದಿಂದ ಗಳಿಸಲಾಗದ ಗೌರವವನ್ನು ವಿದ್ಯೆಯಿಂದ ಗಳಿಸಲು ಸಾಧ್ಯ ಎಂದೂ ಶ್ರೀಗಳು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. 

ಪ್ರತಿಯೋರ್ವ ವಿದ್ಯಾರ್ಥಿಯೂ ಕೂಡಾ ತಾವು ಪಡೆದ ಶಿಕ್ಷಣವನ್ನು ಇತರರಿಗೆ ಸಹಕಾರ ಮಾಡವ ಮೂಲಕ, ಹಂಚುವ ಮೂಲಕ ಅದನ್ನು ಸಾರ್ಥಕಗೊಳಿಸಿಕೊಳ್ಳುವಂತೆಯೂ ಶ್ರೀಗಳು ಹೇಳಿದರು. 
ಕಾರ್ಯಕ್ರಮದ ಅತಿಥಿಯಾಗಿ ಉಪಸ್ಥಿತರಿದ್ದ ಶ್ರೀ ಅಳ್ವೇಕೋಡಿ ಮಾರಿ ಜಾತ್ರ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮ ಮೊಗೇರ ಮಾತನಾಡಿ ಜಾತಿ, ಧರ್ಮ, ಜನಾಂಗವನ್ನು ಮೀರಿ ಈ ಕಾರ್ಯಕ್ರಮ ನಡೆಸುತ್ತಿದ್ದು ತಾಲೂಕಿನಲ್ಲಿ ಪ್ರತಿ ವರ್ಷ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.90% ಅಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರೆದು ಅವರಿಗೆ ಗೌರವಿಸುವುದರೊಂದಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು. 

ಇನ್ನೊರ್ವ ಅತಿಥಿ  ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ ಮಾತನಾಡಿ ಶ್ರೀಗಳು  ತಮ್ಮ ಅಮೃತ ಹಸ್ತದಿಂದ ಪುರಸ್ಕಾರ ಹಾಗೂ ಆಶೀರ್ವಚನ ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ  ದೊರೆಯುವಂತೆ ಮಾಡುವುದೇ  ಶ್ರೀ ದುರ್ಗಾದೇವಿ ಚಾರಿಟೇಬಲ್ ಟ್ಟಸ್ಟ್‍ನ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಗುರುಗಳಿಲ್ಲಿ ಭಕ್ತಿ ದೇವರಲ್ಲಿ ನಂಬಿಕೆ ಇಟ್ಟರೆ ಜೀವನದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದೂ ಹೇಳಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ  ಎಮ್. ಆರ್. ಮುಂಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಸುನಿಲ್ ನಾಯ್ಕ ಉಪಸ್ಥಿತರಿದ್ದರು. 

ವೇದಿಕೆಯಲ್ಲಿ ಶ್ರೀ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ತಿಮ್ಮಪ್ಪ ಎನ್. ಹೊನ್ನಿಮನೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಹನುಮಂತ ಎಂ. ನಾಯ್ಕ, ಅರ್ಚಕ ಮಧುಸೂಧನ ಗೋವರ್ಧನ ಪುರಾಣಿಕ, ನರಸಿಂಹ ಪುರಾಣಿಕ, ಪ್ರಮುಖರಾದ ಜಟ್ಗಾ ದುರ್ಗಪ್ಪ ಮೊಗೇರ, ಯಾದವ ವೆಂಕಟರಮಣ ಮೊಗೇರ, ಬಾಬು ಮೊಗೇರ, ಎಫ್. ಕೆ.ಮೊಗೇರ, ಭಾಸ್ಕರ ಮೊಗೇರ ಮುಂತಾದವರು ಉಪಸ್ಥಿತರಿದ್ದರು. 

ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ ಸ್ವಾಗತಿಸಿದರು, ಅರವಿಂದ ಪೈ ವರದಿ ವಾಚಿಸಿದರು. ಶ್ರೀಧರ ಶೇಟ್ ನಿರ್ವಹಿಸಿದರು. 
 

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...