ಹೊನ್ನಾವರ ಪರೇಶ ಮೇಸ್ತಾ ಸಾವು: ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ?

Source: sonews | By Staff Correspondent | Published on 11th December 2017, 11:33 PM | Coastal News | State News | Special Report | Incidents | Don't Miss |

ಪರೇಶ್ ಮೇಸ್ತ ಸಾವು ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಸಂಘಪರಿವಾರ ಹರಡಿದ ಭೀಕರ ವದಂತಿಗಳೇನು?, ವಾಸ್ತವವೇನು?

ಕುಮಟಾ: ಹೊನ್ನಾವರದ ಯುವಕ ಪರೇಶ್ ಮೇಸ್ತ ಸಾವಿಗೆ ಸಂಬಂಧಿಸಿ ರಾಜಕೀಯ ಪಕ್ಷವೊಂದು ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕರೊಂದಿಗೆ ಹಂಚಿಕೊಂಡಿರುವ ಆರೋಪಗಳು ಹಾಗು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿ ಸುಳ್ಳಾಗಿದ್ದು, ನಿರಾಧಾರವಾದುದೆಂದು ಪಶ್ಚಿಮ ವಲಯದ ಐಜಿಪಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟಪಡಿಸಿದ್ದಾರೆ. 

ಈ ಎಲ್ಲಾ ಆರೋಪಗಳನ್ನು ತನಿಖಾಧಿಕಾರಿಯವರು ಸಂಗ್ರಹಿಸಿದ್ದು, ಶವಪರೀಕ್ಷೆಯನ್ನು ನಡೆಸಿದ ವೈದ್ಯರಿಗೆ ಪ್ರಶ್ನಾವಳಿಯೊಂದನ್ನು ಕಳುಹಿಸಿಕೊಟ್ಟಿದ್ದಾರೆ. ಈ ಪ್ರಶ್ನೆಗಳಿಗೆ ವೈದ್ಯರಿಂದ ಸ್ವೀಕರಿಸಿದ್ದಾರೆ. ವೈದ್ಯರು ಸಲ್ಲಿಸಿರುವ ವರದಿಯು, ರಾಜಕೀಯ ಪಕ್ಷದ ಪತ್ರಿಕಾ ಹೇಳಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ಬುಡಮೇಲುಗೊಳಿಸಿದೆಯೆಂದು ಐಜಿಪಿಯವರ ಪ್ರಕಟನೆ ತಿಳಿಸಿದೆ.

ತನಿಖಾಧಿಕಾರಿಯವರ ಪ್ರಶ್ನೆಗಳಿಗೆ ವೈದ್ಯರು ನೀಡಿದ ಉತ್ತರಗಳು ಇಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಘಪರಿವಾರ ಹರಡಿದ ಭೀಕರ ವದಂತಿಗಳು ಹಾಗು ವಾಸ್ತವಾಂಶದ ಸಂಪೂರ್ಣ ವಿವರ ಇದಾಗಿದೆ.

ಪ್ರ.1: ಮೃತನ ದೇಹದ ಮೇಲೆ ಆಯುಧಗಳಿಂದ ಗಾಯಗಳು ಉಂಟಾಗಿರುವ ಬಗ್ಗೆ ಯಾವುದೇ ಪುರಾವೆಗಳು ಲಭಿಸಿವೆಯೇ ?. ಒಂದು ವೇಳೆ ಪುರಾವೆಗಳಿದ್ದಲ್ಲಿ, ಆಯುಧದ ಸ್ವರೂಪವೇನು?. ಮೊಂಡಾಗಿರುವುದೇ ಅಥವಾ ಹರಿತವಾದುದೇ?.

ಉತ್ತರ: ಮೃತನ ದೇಹದ ಮೇಲೆ ಆಯುಧಗಳಿಂದ ಗಾಯಗಳುಂಟಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾದ ಬಾಹ್ಯ ಗಾಯ ಸಂಖ್ಯೆ 1 (ಜಜ್ಜಲ್ಪಟ್ಟಿರುವುದು) ಹಾಗೂ ಬಾಹ್ಯ ಗಾಯ ಸಂಖ್ಯೆ 2 (ಜಜ್ಜಲ್ಪಟ್ಟಿರುವುದು), ಬಾಹ್ಯಶಕ್ತಿಯ (blunt force trauma)ಆಘಾತದಿಂದ ಉಂಟಾಗಿದೆ.

ಪ್ರ.2: ಮೃತನ ಮುಖದ ಬಣ್ಣದಲ್ಲಿ ಮಾರ್ಪಾಡಾಗಿದೆ. ದಾಳಿಯಿಂದಾಗಿ ಹೀಗಾಯಿತೇ?. ಅಲ್ಲವಾದರೆ, ಅದು ಹೇಗಾಯಿತು?.

ಉತ್ತರ: ಮೃತದೇಹವು ಕೊಳೆಯತೊಡಗಿದ್ದರಿಂದ ಮುಖದ ಬಣ್ಣದಲ್ಲಿ ಬದಲಾವಣೆಯಾಗಿದೆ.

ಪ್ರ. 3: ಮೃತದೇಹದ ಮೇಲೆ ಮೊಳೆ ಅಥವಾ ಸೂಚಿ ಚುಚ್ಚಿರುವ ಬಗ್ಗೆ ಯಾವುದೇ ಸಾಕ್ಷಗಳಿವೆಯೇ?.

ಉತ್ತರ: ಮೃತ ದೇಹದ ಮೇಲೆ ಮೊಳೆ ಅಥವಾ ಸೂಜಿಯನ್ನು ಚುಚ್ಚಿರುವುದನ್ನು ಸೂಚಿಸುವ ಯಾವುದೇ ಪುರಾವೆಗಳಿಲ್ಲ.

ಪ್ರ.4: ಮೃತರ ದೇಹದ ಮೇಲೆ ಯಾವುದಾದರೂ ಹಚ್ಚೆಯ ಗುರುತಿದೆಯೇ?

ಉತ್ತರ: ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಿರುವಂತೆ ಬಲ ಮುಂಗೈಯ ಮುಂಭಾಗದಲ್ಲಿ ಮಣಿಕಟ್ಟಿನಿಂದ 7 ಸೆಂ.ಮೀ. ಮೇಲೆ, ಶಿವಾಜಿಯ ಚಿತ್ರವನ್ನು ಬಿಂಬಿಸುವ ಹಾಗೂ ಹಿಂದಿಯಲ್ಲಿ ‘ಮರಾಠ’ ಎಂದು ಬರೆದಿರುವ ಹಚ್ಚೆಯ ಗುರುತಿದೆ.

ಪ್ರ 5: ಸಾವಿನ ಮೊದಲು ಅಥವಾ ಸಾವಿನ ಆನಂತರ ಹಚ್ಚೆಯು ನಾಶಗೊಂಡಿದೆಯೇ?

ಉತ್ತರ: ಹಚ್ಚೆಯು ನಾಶಗೊಂಡಿಲ್ಲ.

ಪ್ರ. 6: ಮೃತನ ಮೇಲೆ ಬಿಸಿ ನೀರು ಅಥವಾ ಆ್ಯಸಿಡ್‌ಗಳಂತಹ ರಾಸಾಯನಿಕಗಳನ್ನು ಬಳಸಿ ದಾಳಿ ಮಾಡಲಾಗಿತ್ತೇ?

ಉತ್ತರ: ಆ್ಯಸಿಡ್‌ಗಳಂತಹ ರಾಸಾಯನಿಕಗಳು ಅಥವಾ ಬಿಸಿನೀರಿನಿಂದ ದಾಳಿ ನಡೆಸಲಾಗಿದೆಯೆಂಬುದನ್ನು ಸೂಚಿಸುವಂತಹ ಯಾವುದೇ ಪುರಾವೆಗಳು ಮೃತನ ದೇಹದ ಮೇಲೆ ಇಲ್ಲ.

ಪ್ರ.7: ಮೃತನ ಬಾಯಿಯ ಕುಹರ (oral cavity)ದಲ್ಲಿ ಅಜ್ಞಾತವಾದ ವಸ್ತುವಿರುವ ಬಗ್ಗೆ ಯಾವುದೇ ಸಾಕ್ಷಗಳಿವೆಯೇ?

ಉತ್ತರ: ಹೌದು. ಕಪ್ಪುಬಣ್ಣದ ಅರೆ ಘನ ವಸ್ತುವೊಂದು ಬಾಯಿಯ ಕುಹರ, ಶ್ವಾಸನಾಳ ಹಾಗೂ ಶ್ವಾಸಕೋಶದಲ್ಲಿ ಕಂಡುಬಂದಿದೆ. ಅದನ್ನು ರಾಸಾಯನಿಕ ವಿಶ್ಲೇಷಣೆಗಾಗಿ ಸಂರಕ್ಷಿಸಿಡಲಾಗಿದೆ.

ಪ್ರ.8: ಮೃತನ ಬಾಯಿಯ ಕುಹರದಲ್ಲಿ ಮೂತ್ರ ಅಥವಾ ಮಲದ ಯಾವುದೇ ಕುರುಹುಗಳು ಕಂಡುಬಂದಿವೆಯೇ?

ಉತ್ತರ: ಮೃತನ ಬಾಯಿಯ ಕುಹರದಲ್ಲಿ ಮೂತ್ರ ಅಥವಾ ಮಲದ ಯಾವುದೇ ಕುರುಹುಗಳು ಕಂಡುಬಂದಿಲ್ಲ.

ಪ್ರ.9: ಮೃತನ ಶಿಶ್ನ ಹಾಗೂ ವೃಷಣಕೋಶವು ಸಹಜಸ್ಥಿತಿಯಲ್ಲಿತ್ತೇ? ಅಥವಾ ಯಾವುದೇ ದಾಳಿ ನಡೆದಿರುವ ಪುರಾವೆಗಳಿವೆಯೇ?.

ಉತ್ತರ: ಮೃತರ ಶಿಶ್ನ ಹಾಗೂ ವೃಷಣಕೋಶವು ಊದಿಕೊಂಡಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವಿವರಿಸಿರುವಂತೆ, ಕೊಳೆಯುವಿಕೆಯಿಂದಾಗಿ ಈ ಬದಲಾವಣೆಯಾಗಿದೆ.

ಪ್ರ.10: ಮೃತನ ಅವಯವಗಳ ಮೇಲೆ ಹಗ್ಗ ಅಥವಾ ಇನಾವುದೇ ಸಾಮಗ್ರಿಗಳನ್ನು ಕಟ್ಟಲಾಗಿರುವ ಬಗ್ಗೆ ಪುರಾವೆಗಳಿವೆಯೇ?

ಉತ್ತರ: ಮೃತನ ಅವಯವಗಳ ಮೇಲೆ ಹಗ್ಗ ಅಥವಾ ಇನಾವುದೇ ಸಾಧನಗಳು ಕಟ್ಟಿರುವುದನ್ನು ಸೂಚಿಸಿರುವ ಯಾವುದೇ ಪುರಾವೆಗಳಿಲ್ಲ.

ಪ್ರ.11: ದೇಹದ ಮೇಲೆ ಗುಳ್ಳೆ ಇತ್ತೇ? ಈ ಗುಳ್ಳೆಗಳುಂಟಾಗಲು ಕಾರಣವೇನು?.

ಉತ್ತರ: ಕೊಳೆಯುವಿಕೆಯಿಂದ ಉಂಟಾದ ಬದಲಾವಣೆಯಿಂದಾಗಿ ಮೃತನ ದೇಹದಲ್ಲಿ ಗುಳ್ಳೆಗಳು ಉಂಟಾಗಿವೆ.

ಪ್ರ.12: ಮೃತನ ಕಿವಿಗಳ ಮೇಲೆ ಯಾವುದೇ ಗಾಯಗಳಾಗಿರುವ ಬಗ್ಗೆ ಸಾಕ್ಷಗಳಿವೆಯೇ?

ಉತ್ತರ: ಮೃತನ ಕಿವಿಗಳ ಮೇಲೆ ಯಾವುದೇ ಗಾಯಗಳಾಗಿಲ್ಲ.

ಪ್ರ.13: ಮೃತನ ಮೇಲೆ ರಕ್ತದ ಯಾವುದೇ ಕುರುಹುಗಳಿವೆಯೇ?. ಒಂದು ವೇಳೆ ಇದ್ದಲ್ಲಿ ಅದಕ್ಕೆ ಕಾರಣವೇನು?

ಉತ್ತರ: ಮೃತನ ಮೇಲೆ ರಕ್ತದ ಯಾವುದೇ ಕುರುಹುಗಳಿಲ್ಲ. ಆದಾಗ್ಯೂ, ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸಿರುವಂತೆ ಮೂಗಿನ ಹೊಳ್ಳೆಗಳು ಹಾಗೂ ಬಾಯಿಯ ಕುಹರದಲ್ಲಿ ಮರಣಾನಂತರದ ಶುದ್ಧ ದ್ರಾವಣ(purge fluid) ಕಂಡುಬಂದಿದೆ. ಇದೊಂದು ಸಾಮಾನ್ಯವಾದ ಮರಣಾನಂತರದ ಬದಲಾವಣೆಯಾಗಿದೆ.

ಪ್ರ.14: ತಲೆಯ ಮೇಲೆ ದಾಳಿ ನಡೆದಿರುವ ಬಗ್ಗೆ ಯಾವುದೇ ಪುರಾವೆಗಳಿವೆಯೇ?

ಉತ್ತರ: ಮೃತನ ಶಿರದ ಮೇಲೆ ದಾಳಿ ನಡೆದಿರುವುದನ್ನು ಸೂಚಿಸುವ ಯಾವುದೇ ಸಾಕ್ಷಗಳಿಲ್ಲ.

ಪ್ರ.15: ತಲೆ ಅಥವಾ ದೇಹದ ಇತರ ಯಾವುದೇ ಭಾಗದಲ್ಲಿ ರಕ್ತಸ್ರಾವವಾಗಿದೆಯೇ?. ಒಂದು ವೇಳೆ ಆಗಿದ್ದಲ್ಲಿ ಅದು ದಾಳಿಯಿಂದಾದುದೇ?

ಉತ್ತರ: ತಲೆ ಅಥವಾ ದೇಹದ ಭಾಗದ ಮೇಲೆ ರಕ್ತಸ್ರಾವವಾಗಿರುವ ಯಾವುದೇ ಸಾಕ್ಷಗಳಿಲ್ಲ. ಆದಾಗ್ಯೂ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಿರುವ ಹಾಗೆ ಮೂಗಿನ ಹೊಳ್ಳೆಗಳು ಹಾಗೂ ಬಾಯಿಯ ಕುಹರದಲ್ಲಿ ಶುದ್ಧ ದ್ರಾವಣ(purge fluid) ಕಂಡುಬಂದಿದೆ. ಇದು ಮರಣಾನಂತರದ ಸಾಮಾನ್ಯ ಬದಲಾವಣೆಯಾಗಿದೆ.

ಪ್ರ.16: ಉಸಿರುಗಟ್ಟುವಂತೆ ಮಾಡಲು ಮೃತನನ್ನು ಹಗ್ಗ ಅಥವಾ ಇತರ ಯಾವುದೇ ಸಾಧನವನ್ನು ಬಳಸಿಕೊಂಡು ದೈಹಿಕವಾಗಿ ಕತ್ತುಹಿಸುಕಲಾಗಿದೆಯೇ ಅಥವಾ ದಾರದಿಂದ ಕತ್ತುಹಿಸುಕಲಾಗಿದೆಯೇ?

ಉತ್ತರ: ಉಸಿರುಗಟ್ಟಿಸಲು ಮೃತನನ್ನು ಹಗ್ಗ ಅಥವಾ ಇತರ ಯಾವುದೇ ಸಾಧನವನ್ನು ಬಳಸಿಕೊಂಡು ದೈಹಿಕವಾಗಿ ಕತ್ತುಹಿಸುಕಿರುವ ಅಥವಾ ದಾರದಿಂದ ಕತ್ತುಹಿಸುಕಿರುವ ಯಾವುದೇ ಪುರಾವೆಗಳಿಲ್ಲ. ಕೊರಳಲ್ಲಿ ಉಂಟಾಗಿರುವ ರಕ್ತರಹಿತ ತುಂಡರಿಕೆಯು ಯಾವುದೇ ಮಹತ್ವದ ವಿಷಯಗಳನ್ನು ಹೊರಗೆಡಹುವುದಿಲ್ಲ. ಕೊರಳಿನ ಸ್ನಾಯುವನ್ನು ಹಿಸ್ಟೋಪ್ಯಾಥೆಲೊಜಿಕಲ್ ಪರೀಕ್ಷೆಗಾಗಿ ಸಂರಕ್ಷಿಸಿಡಲಾಗಿದೆ.

ಪ್ರ.17: ಮೃತನ ಪೃಷ್ಠಗಳು ಹಾಗೂ ಗುದದ್ವಾರದ ಮೇಲೆ ದಾಳಿ ನಡೆದಿರುವ ಯಾವುದೇ ಸಾಕ್ಷಗಳಿವೆಯೇ?

ಉತ್ತರ: ಮೃತನ ಪೃಷ್ಠಗಳು ಹಾಗೂ ಗುದದ್ವಾರದ ಮೇಲೆ ದಾಳಿ ನಡೆದಿರುವುದನ್ನು ಸೂಚಿಸುವ ಯಾವುದೇ ಸಾಕ್ಷಗಳಿಲ್ಲ.

ಪ್ರ.18: ಮೃತನ ಕೈಬೆರಳುಗಳು ಹಾಗೂ ಕಾಲ್ಬೆರಳುಗಳು ಸಹಜ ಸ್ಥಿತಿಯಲ್ಲಿದ್ದವೇ? ಅಥವಾ ದಾಳಿಗಳು ನಡೆದಿರುವ ಯಾವುದೇ ಸಾಕ್ಷಗಳಿವೆಯೇ?.

ಉತ್ತರ: ಮೃತರ ಕೈಬೆರಳುಗಳು ಹಾಗೂ ಕಾಲ್ಬೆರಳುಗಳು ಸಹಜ ಸ್ಥಿತಿಯಲ್ಲಿವೆ. ದಾಳಿಗಳು ನಡೆದಿರುವುದನ್ನು ಸೂಚಿಸುವ ಯಾವುದೇ ಪುರಾವೆಗಳಿಲ್ಲ.

ಪ್ರ.19: ಉದರದ ಪರೀಕ್ಷೆಯನ್ನು ಆಧರಿಸಿ, ಮೃತನು ದೀರ್ಘಾವಧಿಯ ಹಸಿವಿನಿಂದಾಗಿ ಸಾವನ್ನಪ್ಪಿದ್ದಾನೆಂದು ಸೂಚಿಸುವ ಯಾವುದೇ ಪುರಾವೆಗಳಿವೆಯೇ?.

ಉತ್ತರ: ಉದರದ ಪರೀಕ್ಷೆಯನ್ನು ಆಧರಿಸಿ, ಮೃತನು ದೀರ್ಘಾವಧಿಯ ಹಸಿವಿನಿಂದ ಮೃತಪಟ್ಟಿದ್ದಾನೆಂದು ಸೂಚಿಸುವ ಯಾವುದೇ ಪುರಾವೆಗಳಿಲ್ಲ.

ಕೃಪೆ:vbnewsonline

Read These Next

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ಕೇರಳದ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಕಲ್ಲೆಸೆತ:ಬದಿಯಡ್ಕ ಪೊಲೀಸರಿಂದ  ಆರು ಮಂದಿ ವಿರುದ್ಧ ಕೇಸು ದಾಖಲು

ಕೇರಳದ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಕಲ್ಲೆಸೆತ:ಬದಿಯಡ್ಕ ಪೊಲೀಸರಿಂದ  ಆರು ಮಂದಿ ವಿರುದ್ಧ ಕೇಸು ದಾಖಲು