ಹೊನ್ನಾವರ ತಾಲೂಕು ಮಾಗೋಡಿನಲ್ಲಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ; ಉದ್ವಿಘ್ನ ವಾತವರಣ; ಸೆ.೧೪೪ ಜಾರಿ

Source: sonews | By sub editor | Published on 14th December 2017, 6:18 PM | Coastal News | State News | Special Report | Don't Miss |

ಹೊನ್ನಾವರ: ತಾಲೂಕಿನ  ಮಾಗೋಡದ ಕೊಡ್ಲಗದ್ದೆ ಸಮೀಪ  ಶಾಲೆಗೆ ತೆರಳಿದಿದ್ದ ವಿದ್ಯಾರ್ಥಿನಿಯೊಬ್ಬಳ ಮೇಲೆ ದುಷ್ಕರ್ಮಿಗಳು ಗುರುವಾರ  ಹಲ್ಲೆ  ನಡೆಸಿದ್ದು, ಹೊನ್ನಾವರದಲ್ಲಿ ಭಯದ ಸ್ಥಿತಿ ಮರುಕಳಿಸಿದೆ.

ಕೊಡ್ಲಗದ್ದೆಯ ಕಾವ್ಯಾ ಚಂದ್ರಶೇಖರ ನಾಯ್ಕ (14) ಮಾಗೋಡದ ಶಾಲೆಗೆ ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಂಗಡಿ ಮುಂಗಟ್ಟುಗಳು ದಿಢೀರ್ ಬಾಗಿಲು ಮುಚ್ಚಿದ್ದು, 144 ಸೆಕ್ಷನ್ ಜಾರಿಯಲ್ಲಿದೆ ಎಂದು ಪೊಲೀಸರು ಘೋಷಿಸಿದ್ದಾರೆ. ಚೂರಿ ಇರಿತಕ್ಕೆ ಸಂಬಂಧಿಸಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹೊನ್ನಾವರದ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮುಸ್ಲಿಮರ ಮಸೀದಿ,ಮನೆಗಳ ಮೇಲೆ ಕಲ್ಲು ತೂರಾಟ ಕೆಲವಡೆ ಬೆಂಕಿ; ಮಾಗೋಡಿನಲ್ಲಿ ಬುರ್ಖಾಧಾರಿಗಳಿಬ್ಬರು ವಿದ್ಯಾರ್ಥಿನಿಯೊಬ್ಬಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ವದಂತಿ ಹರಡುತ್ತಿದ್ದಂತೆ ಕಿಡಿಗೇಡಿಗಳು ಕೆಲವೆಡೆ ಹಿಂಸಾಚಾರಕ್ಕೆ ಇಳಿದಿದ್ದಾರೆ ಎಂದು ವರದಿಯಾಗಿದೆ.

ಕುಚ್ಚೋಡಿ ಎಂಬಲ್ಲಿ ಮಸೀದಿಯೊಂದರ ಹೊರಗೆ ಇಡಲಾಗಿದ್ದ ನಮಾಝ್ ನಿರ್ವಹಿಸಲು ಬಳಸುವ ಮುಸಲ್ಲಾಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆಂದು ಆರೋಪಿಸಲಾಗಿದೆ. ಇನ್ನೊಂದು ಘಟನೆಯಲ್ಲಿ ಮಾಗೋಡಿನ ಬಾಷಾ ಎಂಬವರ ಮನೆಗೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ಅಲ್ಲದೆ ಅವರ ಮನೆಯ ಎದುರು ನಿಲ್ಲಿಸಿದ್ದ ಬೈಕನ್ನು ಹಾನಿಗೊಳಿಸಿದ್ದಾರೆ ಎಂದು ಬಾಷಾ ಆರೋಪಿಸಿದ್ದಾರೆ.

ಹೊನ್ನಾವರ ಮತ್ತಿತರ ಕಡೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿ ಅಂಗಡಿಯ ಮಾಲಕರು ಕೆಲವೆಡೆ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ. ಇನ್ನೂ ಕೆಲವಡೆ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಶಾಲೆಗಳಿಗೆ ರಜೆ: ವಿದ್ಯಾರ್ಥಿನಿಯೊಬ್ಬಳಿಗೆ ಬುರ್ಖಾಧಾರಿಗಳು ಹಲ್ಲೆ ನಡೆಸಿದ್ದಾರೆಂಬ ವದಂತಿ ಹರಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೊನ್ನಾವರದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸೆಕ್ಷನ್ 144 ಜಾರಿಗೊಳಿಸಿದ್ದು, ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಹಲ್ಲೆ ಮಾಡಿದವರು ಬುರ್ಖಾಧಾರಿಗಳಲ್ಲ : ಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ ಇಬ್ಬರು ಬುರ್ಖಾಧಾರಿಗಳು ಚೂರಿಯಿಂದ ಇರಿದಿದ್ದಾರೆ ಎನ್ನುವುದು ಸುಳ್ಳು ಸುದ್ದಿಯಾಗಿದೆ ಎಂದು ಉತ್ತರ ಕನ್ನಡ ಎಸ್ಪಿ ವಿನಾಯಕ ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿದ್ಯಾರ್ಥಿನಿ ಶಾಲೆಗೆ ತೆರಳುತ್ತಿದ್ದ ಸಂದರ್ಭ ಇಬ್ಬರು ಬುರ್ಖಾಧಾರಿಗಳು ಆಗಮಿಸಿ  ಬೆದರಿಕೆಯೊಡ್ಡಿ ಚೂರಿಯಿಂದ ಇರಿದಿದ್ದಾರೆ ಎಂದು ವಿದ್ಯಾರ್ಥಿನಿಯದ್ದೆನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬೆಳಗ್ಗೆಯಿಂದ ವೈರಲ್ ಆಗುತ್ತಿದೆ. ಈ ಬಗ್ಗೆ ಮಾಧ್ಯಮಗಳು ಜಿಲ್ಲಾ ವರಿಷ್ಠಾಧಿಕಾರಿಯವರನ್ನು ಸಂಪರ್ಕಿಸಿದಾಗ ವಿದ್ಯಾರ್ಥಿನಿಗೆ ಬುರ್ಖಾಧಾರಿಗಳಿಬ್ಬರು ಚೂರಿಯಿಂದ ಇರಿದಿದ್ದಾರೆ ಎಂಬುದು ಸುಳ್ಳು ಸುದ್ದಿ. ಇಬ್ಬರು ಅಪರಿಚಿತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ. ಅದರಂತೆ ನಾವು ದೂರನ್ನು ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದರು.

"ಅಪರಿಚಿತ ಇಬ್ಬರು ಆಕೆಯನ್ನು ಚೂರಿಯಿಂದ ಇರಿದಿದ್ದಾರೆಯೇ" ಎಂಬ ಪ್ರಶ್ನೆಗೆ ಹಲ್ಲೆ ನಡೆಸಿದ್ದಾರೆ ಎಂದು ಮಾತ್ರ ಆಕೆ ದೂರಿನಲ್ಲಿ ತಿಳಿಸಿದ್ದಾಳೆ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.

ವದಂತಿಗಳನ್ನು ನಂಬದಂತೆ ಮನವಿ: ಉತ್ತರಕನ್ನಡ ಜಿಲ್ಲಾದ್ಯಂತ ವಿವಿಧ ಸಾಮಾಜಿಕ ಜಾಲಾತಾಣಗಳಲ್ಲಿ ಘಟನೆಗಳನ್ನು ವೈಭವೀಕರಿಸಿ ಸುಳ್ಳು ವದಂತಿಗಳನ್ನು ಹರಡಲಾಗುತ್ತಿದ್ದು  ಸಾರ್ವಜನಿಕರು ಯಾವುದೇ ಕಾರಣಕ್ಕೂ ಕಿವಿಗೊಡಬಾರದೆಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳ ಕುರಿತಂತೆ ಪೊಲೀಸರು ಈಗಾಗಲೆ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಅವರು ತಿಳೀಸಿದ್ದಾರೆ. 

Read These Next

ಲಕ್ಷ್ಮಿಮಂಟಪಕ್ಕೆ ಮಹಿಳಾ ಅಧಿಕಾರಿ ಪ್ರವೇಶ: ಕೊಲ್ಲೂರಿನಲ್ಲಿ ಮತ್ತೊಂದು ವಿವಾದ!

ಮಂಗಳೂರು:  ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಕ್ಷೇತ್ರದಲ್ಲಿ ದೇವಾಲಯದ ಮಾಜಿ ಕಾರ್ಯ ನಿರ್ವಹಣಾಧಿಕಾರಿ ಟಿ.ಆರ್‌.ಉಮಾ ಅವರು ಅನುಮತಿ ...

ನಾಪತ್ತೆಯಾಗಿದ್ದ ಕುಮಟಾ ಕುಂಭೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ಟರು ಶವವಾಗಿ ಪತ್ತೆ.

ಕುಮಟಾ : ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಪಟ್ಟಣದ ಕುಂಭೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವೇಶ್ವರ ಭಟ್ಟ ಅವರು ಕೊಲೆಯಾದ ...

ಗದ್ದೆಗಳಿಗೆ ಹಂದಿಗಳ ಕಾಟ  

ಹೊನ್ನಾವರ: ತಾಲೂಕಿನ ವಿವಿಧ ಭಾಗಗಳಲ್ಲಿನ ಭತ್ತದ ಗದ್ದೆಗಳಿಗೆ ಕಾಡು ಹಂದಿಗಳ ಹಾವಳಿ ವಿಪರೀತವಿದ್ದು, ತಂಡೋಪತಂಡವಾಗಿ ಬರುವ ಹಂದಿಗಳ ...

ಗದ್ದೆಗಳಿಗೆ ಹಂದಿಗಳ ಕಾಟ  

ಹೊನ್ನಾವರ: ತಾಲೂಕಿನ ವಿವಿಧ ಭಾಗಗಳಲ್ಲಿನ ಭತ್ತದ ಗದ್ದೆಗಳಿಗೆ ಕಾಡು ಹಂದಿಗಳ ಹಾವಳಿ ವಿಪರೀತವಿದ್ದು, ತಂಡೋಪತಂಡವಾಗಿ ಬರುವ ಹಂದಿಗಳ ...