ಗೋಕರ್ಣ:ಜಮೀನಿಗೆ ನುಗ್ಗಿದ ಸಮುದ್ರ ನೀರು

Source: so english | By Arshad Koppa | Published on 18th November 2016, 12:13 PM | Coastal News | Incidents |

ಗೋಕರ್ಣ, ನ ೧೭: ಗೋಕರ್ಣದಲ್ಲಿ ಕೃಷಿ ಭೂಮಿಗೆ ಸಮುದ್ರದ ನೀರು ಉಕ್ಕಿ ಬಂದು ನಾಡುಮಾಸ್ಕೇರಿ ಹಾಗೂ ಗೋಕರ್ಣ ಗ್ರಾಪಂ ವ್ಯಾಪ್ತಿಯ ನೂರಾರು ಎಕರೆ ಬೆಳೆ ನಾಶವಾಗಿ ಅಪಾರ ಹಾನಿ ಸಂಭವಿಸಿದ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಹಠಾತ್‌ ಉಕ್ಕಿ ಬಂದ ಸಮುದ್ರ ನೀರು ಹಾಲಕ್ಕಿ ರೈತರು ಬೆಳೆದ ತರಕಾರಿ, ಗೆಣಸು ಉಳ್ಳಾಗಡ್ಡೆ, ಕಬ್ಬು ಇತರ ಬೆಳೆಗಳು ಉಪ್ಪು ನೀರಿನಲ್ಲಿ ಮುಳುಗಿ ಹೋಗಿದೆ. 2ಕಿಮೀ ವ್ಯಾಪ್ತಿಯಲ್ಲಿ ನೀರು ಒಳ ನುಗ್ಗಿದ್ದು 50 ಲಕ್ಷ ರೂ. ಹೆಚ್ಚಿನ ಹಾನಿ ಸಂಭವಿಸಿದೆ. ಅನೇಕ ರೈತರು ಚಿಂತಾಕ್ರಾಂತರಾಗಿ ನಷ್ಟ ಅನುಭವಿಸಿದ್ದಾರೆ. ಸುದ್ದಿ ತಿಳಿದ ಈ ಭಾಗದ ಶಾಸಕಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ ಶಾರದಾ ಶೆಟ್ಟಿ ಸ್ಥಳಕ್ಕೆ ಭೇಟಿಯಿತ್ತು ವೀಕ್ಷ ಣೆ ನಡೆಸಿದ್ದಾರೆ.


ಹಠಾತ್‌ ಸಮುದ್ರಕ್ಕೆ ನೆರೆ ಬಂದಿದ್ದು ವಾತಾವರಣದ ಪರಿಣಾಮ ಎಂದು ಸಂಶಯ ವ್ಯಕ್ತವಾಗಿದೆ. ಹಳ್ಳಿ ಹೋಬಳಿಯ ಸಿಹಿನೀರು ಹರಿಯಲು ಇದ್ದ ಕಾಲುವೆಯೊಳಗಿಂದ ಸಮುದ್ರ ನೀರು ನುಗ್ಗಿದೆ. ಜತೆಗೆ ಅಬ್ಬರದ ಸಮುದ್ರದಲೆಯೂ ಉಕ್ಕೇರಿ ಗದ್ದೆಗೆ ಸೇರಿದೆ. ನೂರಕ್ಕೂ ಹೆಚ್ಚಿನ ಹಾಲಕ್ಕಿಗಳು ವಾಸಿಸುವ ಪ್ರದೇಶ ನೀರು ನುಗ್ಗಿ ಅನೇಕ ಮನೆಗಳನ್ನು ಪ್ರವೇಶಿಸುವ ಸಂದರ್ಭ ಬಂದಿದೆ. ಕಡಲ ಕಿನಾರೆಗೆ ಕೆಲ ದಿನಗಳ ವಾಸ್ತವ್ಯಕ್ಕೆ ಬಂದ ಅನೇಕ ವಿದೇಶಿಯರು ಎಲ್ಲೆಲ್ಲೂ ಉಪ್ಪು ನೀರು ಕಂಡು ಹೌಹಾರಿದ್ದಾರೆ. ಕೆಲ ಕುಡಿಯುವ ನೀರಿನ ಬಾವಿಗಳಲ್ಲೂ ಉಪ್ಪುನೀರು ತುಂಬಿ ಕುಡಿಯಲಾರದಾಗಿದೆ.
ಶಾಸಕರು ಸ್ಥಳದಲ್ಲೇ ನೆರೆ ಕುರಿತು ಶೀಘ್ರ ಪರಿಹಾರಕ್ಕೆ ರೈತರ ಮನವಿ ಸ್ವೀಕರಿಸಿದ್ದು ಕೂಡಲೇ ಫ್ಲಡ್‌ ಇಲಾಖೆ ( ನೆರೆ ಸಂತ್ರಸ್ತ ಪರಿಹಾರ ಇಲಾಖೆ ) ಹಾಗೂ ಜಿಲ್ಲಾಧಿಕಾರಿ, ತಾಲೂಕು ದಂಡಾಧಿಕಾರಿ ಹಾಗು ಉಪವಿಭಾಗಾಧಿಕಾರಿಗಳನ್ನು ಸಂಪರ್ಕಿಸಿ ತುರ್ತು ತುಂಬಿದ ನೀರು ಹೊರಸಾಗಿಸಲು ಯೋಜನೆ ರೂಪಿಸಿ ಎಂದಿದ್ದಾರೆ. ಈ ಬಗ್ಗೆ ಕ್ರಮ ಕೈಕೊಳ್ಳಲು ಸರಕಾರದ ಮಟ್ಟದಲ್ಲಿ ಶೀಘ್ರ ಪ್ರಯತ್ನಿಸುವ ಭರವಸೆ ನೀಡಿದ್ದಾರೆ.
ಗೋಕರ್ಣ ಕೇಂದ್ರದ ಕೃಷಿ ಅಧಿಕಾರಿ, ಕಂದಾಯ ಅಧಿಕಾರಿ, ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ, ಎರಡು ಗ್ರಾಪಂ ಪಿಡಿಒ, ಕಾರ್ಯದರ್ಶಿಗಳು ಹಾಗೂ ಗ್ರಾಪಂ ಅಧ್ಯಕ್ಷ ರಾದ ಹನೀಫ್‌ ಸಾಬ್‌,ಮಹಾಲಕ್ಷ್ಮಿ ಭಡ್ತಿ, ನಾಗರಾಜ ಮೊದಲಾದವರು ಗದ್ದೆಯನ್ನು ಸಂದರ್ಶಿಸಿದ್ದಾರೆ.

Read These Next