ಮುಂಬೈನಲ್ಲಿ ನಡೆಯುತ್ತಿರುವ ಬಲವಂತದ ಪುನರ್ವಸತಿ

Source: sonews | By Staff Correspondent | Published on 10th December 2018, 5:40 PM | National News | Special Report | Don't Miss |

ಪುನರ್ವಸತಿಗೆಗುರಿಯಾದ ನಿವಾಸಿಗಳು ನಮ್ಮನ್ನು ಉಳಿಸಿ ಎಂಬ ಆಂದೋಲನ ಮಾಡುತ್ತಿದ್ದಾರೆ. ಆದರೆ ಸರ್ಕಾರ ಅವರ ಅಸ್ಥಿತ್ವವನ್ನೂ ಪರಿಗಣಿಸುತ್ತಿಲ್ಲ.

ಮುಂಬೈನ ತಾನ್ಸ ಲೇಕ್ ಪೈಪ್ಲೈನಿನ ಆಸುಪಾಸಿನಲ್ಲಿ ವಾಸವಿದ್ದ ೫೭೦೦ ಕುಟುಂಬಗಳನ್ನು ಅನಾಮತ್ತು ಮಾಹುಲ್ ಪ್ರದೇಶಕ್ಕೆ ಸ್ಥಳಾಂತರಿಸಿರುವ ರೀತಿ ಸರ್ಕಾರಗಳು ಬಡವರ ಅಸ್ಥಿತ್ವದ ಬಗ್ಗೆ ತೋರುತ್ತಿರುವ ಕ್ರೌರ್ಯ ಮತ್ತು ಉದ್ದೇಶಪೂರ್ವಕ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿರುವುದು ಮಾತ್ರವಲ್ಲದೆ ನಾಗರಿಕರ ಬಗ್ಗೆ ತಮಗಿರುವ ಹೊಣೆಗಾರಿಕೆಯನ್ನು ಸರ್ಕಾರಗಳು ಹೇಗೆ ಪರಿಭಾವಿಸುತ್ತಿವೆ ಎಂಬುದನ್ನು ಸಹ ತೋರಿಸುತ್ತದೆ. ಸುಮಾರು ಮೂವತ್ತು ಸಾವಿರ ಜನರನ್ನು ಪ್ರದೇಶದಿಂದ ಗ್ಯಾಸ್ ಚೇಂಬರ್ ಎಂತಲೂ, ವಿಷ ತುಂಬಿದ ನರಕ ಎಂದೇ ಕುಖ್ಯಾತವಾಗಿರುವ ಪ್ರದೇಶಕ್ಕೆ ಎತ್ತಂಗಡಿ ಮಾಡುವ ಯೋಜನೆಯು ಕಳೆದ ಒಂದು ದಶಕದಿಂದ ಸಾಗುತ್ತಿದೆ. ಅದರ ಯೋಜನೆಯ ಪ್ರತಿ ಹಂತದಲ್ಲೂ ರಾಜಕೀಯ ಹಿತಾಸಕ್ತಿಗಳ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ನಾಗರಿಕರ ಸ್ಥಳಾಂತರ ಮತ್ತು ಪುನರ್ವಸತಿ ಬಲಪ್ರಯೋಗದ ಮೂಲಕ ನಡೆಯುತ್ತಿದೆ. ಅವರನ್ನು ಸ್ಥಳಾಂತರ ಮಾಡಲಾಗಿರುವ ಪ್ರದೇಶದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳೂ ಇಲ್ಲ ಮತ್ತು ಈಗಾಗಲೇ ಅಭದ್ರವಾಗಿದ್ದ ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಬೇಕಾದ ಜೀವನೋಪಾಯಗಳು ದೊರಕುವಂತೆಯೂ ಇಲ್ಲ. ಆದರೆ ಕುಟುಂಬಗಳು ತಮ್ಮ ಮೇಲೆ ಹೇರಲಾಗಿರುವ ವಿಧಿಯನ್ನು ತಲೆತಗ್ಗಿಸಿ ಒಪ್ಪಿಕೊಳ್ಳುತ್ತಿಲ್ಲ ಎಂಬುದು ಅತ್ಯಂತ ಗಮನಾರ್ಹವಾದ ಸಂಗತಿಯಾಗಿದೆ. ತಮ್ಮ ಪರಿಸ್ಥಿತಿಯನ್ನು ಸಾರ್ವಜನಿಕರ ಗಮನಕ್ಕೆ ತರಲು ಮತ್ತು ಅಧಿಕಾರಿಗಳ ಮೇಲೆ ಒತ್ತಡ ತರಲು ಅವರು ಹತ್ತಾರು ವಿಧಾನಗಳನ್ನು ಅನುಸರಿಸುತ್ತಿದ್ದಾರೆ.

ಒಂದು ಅಂದಾಜಿನ ಪ್ರಕಾರ ಮಹಾರಾಷ್ಟ್ರದಲ್ಲಿ ವಿವಿಧ ಯೋಜನೆಗಳಿಂದ ಸಂತ್ರಸ್ತರಾಗಿ ಈವರೆಗೆ ಪುನರ್ವಸತಿ  ಸಿಗದ ೩೦ ಲಕ್ಷ ಜನರಿದ್ದಾರೆ. ಮಾಹುಲ್ ಪ್ರಕರಣದಲ್ಲಿ ತಾನ್ಸ ಲೇಕ್ ಪೈಪ್ಲೈನ್ ೧೦ ಮೀಟರಿನಷ್ಟು ಆಸುಪಾಸಿನಲ್ಲಿದ್ದ ಕೊಳೆಗೇರಿ ಮತ್ತು ಗುಡಿಸಲುಗಳನ್ನು ಭದ್ರತಾ ಕಾರಣಗಳಿಗಾಗಿ ತೆರವುಗೊಳಿಸಬೇಕೆಂದು ೨೦೦೯ರಲ್ಲಿ ಬಾಂಬೆ ಹೈಕೋರ್ಟು ನಿರ್ದೇಶನ ನೀಡಿತ್ತು. ಅಲ್ಲಿದ್ದ ೧೬,೭೧೭ ಗುಡಿಸಲುಗಳಲ್ಲಿ ೭೬೭೪ ಗುಡಿಸಲುಗಳನ್ನು ಪುನರ್ವಸತಿಗೆ ಅರ್ಹವೆಂದು ಗುರುತಿಸಲಾಯಿತು. ತಮ್ಮ ಸ್ಥಳಾಂತರದ ವಿರುದ್ಧ ಅಲ್ಲಿನ ನಿವಾಸಿಗಳು ಹೋರಾಟ ಮತ್ತು ಪ್ರತಿಭಟನೆಗಳನ್ನು ಪ್ರಾರಂಭಿಸುತ್ತಿದ್ದಂತೆ ಈಗ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಮಂತ್ರಿಯಾಗಿರುವ ರಾಜಕಾರಣಿಯನ್ನು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಅವರ ಆತಂಕಗಳನ್ನು ಪರಿಗಣಿಸುವ ಭರವಸೆಗಳನ್ನು ನೀಡಿದ್ದರು. ಆದರೆ ಅವರ ಗುಡಿಸಲುಗಳನ್ನು ಬಲಪ್ರಯೋಗದ ಮೂಲಕ ಕೆಡವಿ ಹಾಕಿ ಜನರನ್ನು ನಿರ್ವಸಿತಗೊಳಿಸಿದ ಮೇಲೆ ಅಲ್ಲಿ ವಾಸವಾಗಿದ್ದ ಬಹುಪಾಲು ಜನರು ಬೇರೆ ಪರ್ಯಾಯವಿಲ್ಲದೆ ಮಾಹುಲ್ಗೆ ಹೋಗಲೇ ಬೇಕಾಯಿತು. ನಿರ್ವಸಿತರಿಗಾಗಿ ಮಾಹುಲ್ನಲ್ಲಿ ತಲಾ ಏಳು ಅಂತಸ್ತುಗಳಿರುವ ೭೨ ಕಟ್ಟಡಗಳ ಸಮುಚ್ಚಯವೊಂದನ್ನು ನಿರ್ಮಿಸಲಾಗಿದ್ದು ಅಲ್ಲಿನ ಪರಿಸ್ಥಿತಿಯನ್ನು ನೋಡಿದ ಹೊರತು ನಂಬಲಾಗದು. ಪ್ರದೇಶವನ್ನು ತಲುಪಲು ಬೇಕಾದ ಯಾವುದೇ ಮೂಲಭೂತ ಸಂಪರ್ಕವೂ ಇಲ್ಲ. ಮತ್ತು ಇಂಥ ಕಟ್ಟಡಗಳ ಸಮುಚ್ಚಯಗಳನ್ನು ಕಟ್ಟಿದಾಗ ಎಷ್ಟೆ ಕೆಟ್ಟದಾಗಿದ್ದರೂ ಒದಗಿಸಲಾಗುವ ಕೆಲವು ನಾಗರಿಕ ಸೌಲಭ್ಯಗಳೂ ಸಹ ಅಲ್ಲಿಲ್ಲ. ಬದಲಿಗೆ ಕಟ್ಟಡ ಸಮುಚ್ಚಯವನ್ನು ಎರಡು ಬೃಹತ್ ತೈಲ ಸಂಸ್ಕರಣಾ ಘಟಕಗಳು, ಒಂದು ಬೃಹತ್ ವಿದ್ಯುತ್ ಸ್ಥಾವರ, ಒಂದು ದೊಡ್ಡ ರಾಸಾಯನಿಕ ಮತ್ತು ಗೊಬ್ಬರ ಉತ್ಪಾದಕ ಘಟಕ ಹಾಗೂ ಇನ್ನಿತರ ದೈತ್ಯ ಕೈಗಾರಿಕಾ ಘಟಕಗಳ ನಡುವೆ ಕಟ್ಟಲಾಗಿದೆ.

ಮಾಧ್ಯಮಗಳ ವರದಿಗಳ ಪ್ರಕಾರ, ಮಹಾರಾಷ್ಟ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಮಾಹುಲ್ ಪ್ರದೇಶವನ್ನು ಅತ್ಯಂತ ಪರಿಸರ ಮಾಲಿನ್ಯದಿಂದ ಕೂಡಿದ ಪ್ರದೇಶವೆಂದು ಘೊಷಿಸಿದೆಯಲ್ಲದೆ ೨೦೧೫ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್ಜಿಟಿ) ಮಾಹುಲ್ ಪ್ರದೇಶವು ಮಾನವ ವಾಸಕ್ಕೆ ಅಯೋಗ್ಯವೆಂದು ಘೋಷಿಸಿದೆ. ಹೀಗಾಗಿ, ಮಾಹುಲ್ ಕೆಲವು ನಿವಾಸಿಗಳು ಮತ್ತು ತಾನ್ಸಾ ಪೈಪ್ಲೈನ್ ಸಂತ್ರಸ್ತರು ೨೦೧೮ರ ಆಗಸ್ಟ್ನಲ್ಲಿ ದಾಖಲಿಸಿದ್ದ ಅಹವಾಲನು ಪುರಸ್ಕರಿಸಿರುವ ಬಾಂಬೆ ಹೈಕೋರ್ಟು ಒಂದು ತಿಂಗಳೊಳಗಾಗಿ ಅಲ್ಲಿನ ನಿವಾಸಿಗಳನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ನಿರ್ದೇಶನ ನೀಡಿದೆ. ಆದರೆ ಒಂದೆಡೆ ಮಹಾರಾಷ್ಟ್ರದ ವಸತಿ ಮಂತ್ರಿಗಳು ಮಾಹುಲ್ ನಿವಾಸಿಗಳನ್ನು ಕುರ್ಲಾಗೆ ಸ್ಥಳಾಂತರಿಸಲಾಗುವುದೆಂಬ ಭರವಸೆಯನ್ನು ನೀಡಿದರೆ ೨೦೧೮ರ ನವಂಬರ್ನಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ತಮ್ಮ ಸರ್ಕಾರ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲವೆಂದು ಹೇಳುತ್ತಾ ಎರಡೆರಡು ನಾಲಗೆಯಲ್ಲಿ ಮಾತನಾಡುತ್ತಿದ್ದಾರೆ.

ಆರೋಗ್ಯ ಮತ್ತು ಶಿಕ್ಷಣ ಸೌಕರ್ಯಗಳು ಅಲ್ಲಿಂದ ತುಂಬಾ ದೂರದಲ್ಲಿವೆ ಮಾತ್ರವಲ್ಲದೆ ದುಬಾರಿಯಾಗಿದೆ. ಅವೆಲ್ಲಕ್ಕಿಂತ ಮುಖ್ಯವಾದುದು ಅಲ್ಲಿನ ನಿವಾಸಿಗಳ ಮೇಲೆ ದಾಳಿ ಮಾಡಿರುವ ಖಾಯಿಲೆ ಮತ್ತು ಅನಾರೋಗ್ಯಗಳು; ಚರ್ಮದ ಖಾಯಿಲೆಗಳು, ಉಸಿರಾಟದ ಸಮಸ್ಯೆಗಳು, ಕ್ಷಯ ಮತ್ತು ಒಟ್ಟಾರೆಯಾಗಿ ಕುಸಿಯುತ್ತಿರುವ ಆರೋಗ್ಯ ಪರಿಸ್ಥಿತಿಗಳು ಅಲ್ಲಿನ ಜನರನ್ನು ಕಂಗೆಡಿಸುತ್ತಿವೆ. ರಾಜ್ಯದ ಪ್ರಮುಖ ಸಾರ್ವಜನಿಕ ಆರೋಗ್ಯ ಸಂಸ್ಥೆಯು ನಡೆಸಿದ ಸರ್ವೆಯ ವರದಿಯಲ್ಲಿ ಇಲ್ಲಿನ ನಿವಾಸಿಗಳ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಅವರು ವಾಸಿಸುತ್ತಿರುವ ಪ್ರದೇಶದ ಪರಿಸರವೂ ಕಾರಣವೆಂದು ಗುರುತಿಸಿರುವುದನ್ನು ಮಾಹುಲ್ ನಿವಾಸಿಗಳು ಹೈಕೋರ್ಟಿನಲ್ಲಿ ಹೂಡಿರುವ ದಾವೆಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲಿ ಸರಬರಾಜಾಗುತ್ತಿರುವ ಕಲುಷಿತ ಕುಡಿಯುವ ನೀರು, ಮತ್ತು ಹದಗೆಟ್ಟ ಚರಂಡಿ ವ್ಯವಸ್ಥೆಗಳು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿವೆ. ಅಷ್ಟು ಮಾತ್ರವಲ್ಲದೆ ಇಲ್ಲಿಗೆ ಸ್ಥಳಾಂತರಗೊಂಡ ನಂತರ ಹತ್ತಿಕೊಂಡ ಖಾಯಿಲೆಗಳಿಂದಾಗಿ ಹಲವು ಸಾವುಗಳಾಗಿವೆ ಎಂಬುದನ್ನು ಮಾಹಿತಿ ಹಕ್ಕು ಕಾಯಿದೆಯಡಿ ಪಡೆದುಕೊಂಡ ಮಾಹಿತಿಗಳು ಸೂಚಿಸುತ್ತಿರುವುದನ್ನು ಸಹ ಮಾಧ್ಯಮಗಳು ವರದಿ ಮಾಡಿವೆ

ಹೀಗಾಗಿಯೇ ಅಲ್ಲಿನ ನಿವಾಸಿಗಳು ಮಾಧ್ಯಮದ ಜೊತೆಗೋ ಅಥವಾ ಅಧಿಕಾರಿಗಳ ಜೊತೆಗೋ ಮಾತನಾಡುವಾಗ ಸಾವಿನ ರೂಪಕಗಳಿಲ್ಲದೆ ಮಾತೇ ಆಡುವುದಿಲ್ಲ. ತಮ್ಮ ಆಂದೋಲನದ ಹೆಸರು ಜೀವನ್ ಬಚಾವೋ ಆಂದೋಲನ್ಎಂದಿದ್ದರೂ ಸರ್ಕಾರವು ಮಾತ್ರ ತಮ್ಮನ್ನು ಇಲ್ಲಿಗೆ  ಸ್ಥಳಾಂತರಿಸಿರುವುದು ಸಾಯುವುದಕ್ಕೆ ಹೊರತು ಬದುಕಲು ಅಲ್ಲವೆಂದು ಅವರು ಖಚಿತವಾಗಿ ಭಾವಿಸಿದ್ದಾರೆ. ಸರ್ಕಾರವಂತೂ ಇವರ ಅಸ್ಥಿತ್ವನ್ನೇ ನಿರಾಕರಿಸುವ ರೀತಿಯಲ್ಲಿ ವರ್ತಿಸುತ್ತಿದೆ.

ಅಧಿಕಾರಕ್ಕೆ ಬಂದ ಪ್ರತಿಯೊಂದು ಸರ್ಕಾರವೂ ಮುಂಬೈಯನ್ನು ವಿಶ್ವ ದರ್ಜೆ ನಗರವನ್ನಾಗಿ ಬದಲಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನೂ ಮತ್ತು ಪ್ರಸ್ತಾಪಗಳನ್ನೂ ಹೆಮ್ಮೆಯಿಂದ ಘೋಷಿಸುತ್ತಲೇ ಬಂದಿವೆ. ಆದರೆ ಕಾಲ್ಪನಿಕ ಬದಲಾವಣೆಯುi ದುಷ್ಟ ಶಕ್ತಿಗಳ ಕ್ರಿಯಾಶೀಲತೆಗೂ ಕೀಲಿ ಕೊಡುತ್ತಿದೆಯೇನೋ ಎಂಬಂತೆ  ಭಾಸವಾಗುತ್ತದೆ. ಮುಂಬೈ ನಗರವು ತನ್ನ ಕಾರ್ಮಿಕರ ಹೆಮ್ಮೆಯ ಕೊಡುಗೆಗಳಿಂದಾಗಿ  ಒಂದು ರಾಜಕೀಯ ಪ್ರಜ್ನಾವಂತರ ನಗರವೆಂಬ ಹೆಗ್ಗಳಿಕೆಗೆ ಕಾರಣವಾದ ಅಂಶಗಳು ನಿರಂತರವಾಗಿ ಮತ್ತು ವೇಗವಾಗಿ ಕ್ಷೀಣವಾಗುತ್ತಿರುವುದನ್ನು ಹೊರತೋರಿಕೆಗೆ ಕಾಣುವ ಮೂಲಭೂತ ಸೌಕರ್ಯಗಳ ಯೋಜನೆಗಳು ಮರೆಮಾಚುತ್ತಿವೆ. ನಗರದ ಪ್ರಖ್ಯಾತ ಸಾರ್ವಜನಿಕ ಸಾರಿಗೆ ಸೌಕರ್ಯಗಳನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸುತ್ತಾ ಮತ್ತು ಅದರ ದುಡಿಯುವ ವರ್ಗದ ನಿವಾಸಿಗಳನ್ನು ದೂರದ ಹೊರವಲಯಕ್ಕೆ ಸ್ಥಳಾಂತರಿಸುವ ಮೂಲಕ ಸಂದೇಶವೊದನ್ನು ಸ್ಪಷ್ಟವಾಗಿ ರವಾನಿಸಲಾಗುತ್ತಿದೆ: ಬದಲಾವಣೆಯನ್ನು ನಿಮಗೆ ತಾಳಿಕೊಳ್ಳಲಾಗದಿದ್ದರೆ ಇಲ್ಲಿಂದ ತೊಲಗಿರಿ ಅಥವಾ ಸದ್ದು ಮಾಡದೆ ಸಾಯಿರಿ. ದುರದೃಷ್ಟವಶಾತ್ ಇಂಥ ಏಕಪಕ್ಷೀಯ ಬದಲಾವಣೆಗಳ ವಿರುದ್ಧ ಮಾಹುಲ್ ಅನ್ನು ಹೊರತುಪಡಿಸಿದಂತೆ ಬೇರೆಲ್ಲೂ ನಿರಂತರ ಹೋರಾಟ ನಡೆಯುತ್ತಿದ್ದಂತಿಲ್ಲ.

ನಗರದ ಬಡವರ ಮತ್ತು ಕಡಿಮೆ ಆದಾಯ ವರ್ಗದ ಜನರ ವಸತಿ ಸೌಕರ್ಯದ ಯೋಜನೆಗಳಲ್ಲಿ ಎಷ್ಟೊಂದು ಕೊರತೆಗಳಿವೆ ಎಂಬುದನ್ನು ಮಾಹುಲ್ ಪುನರ್ವಸತಿ ಪ್ರಕರಣವು ಬಯಲುಮಾಡಿದೆ. ನಗರದ ನಿರ್ಮಾಣದಲ್ಲಿ ಮತ್ತು ಅದರ ಆರ್ಥಿಕತೆಯ ನಿರ್ವಹಣೆಯಲ್ಲಿ ನಗರದ ಬಹುಸಂಖ್ಯಾತರ ಕೊಡುಗೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆಯೆಂಬುದು ಸ್ಪಷ್ಟ. ಕಾರಣಕ್ಕಾಗಿಯೇ ಮಾಹುಲ್ ನಿವಾಸಿಗಳ ಹೋರಾಟದ ಸ್ಪೂರ್ತಿಗೆ ಒಂದು ದೊಡ್ಡ ಸಲಾಂ ಹೇಳಲೇಬೇಕು.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...