ಮುರುಡೇಶ್ವರ ಸಮುದ್ರ ಕಿನಾರೆಯಲ್ಲಿ ಅನಧಿಕೃತ ಗೂಡಂಗಡಿಗಳಿಂದ ಮೀನುಗಾರರಿಗೆ ತೊಂದರೆ

Source: sonews | By Staff Correspondent | Published on 28th January 2019, 10:58 PM | Coastal News | Don't Miss |

•    ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಚಿವ ಆರ್.ವಿ.ಡಿ ಜಿಲ್ಲಾಧಿಕಾರಿಗೆ ಸೂಚನೆ

ಭಟ್ಕಳ: ಮುರ್ಡೇಶ್ವರದ ಸಮುದ್ರ ಕಿನಾರೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪಾತಿ ದೋಣಿ ನಿಲ್ಲಿಸುವ ಜಾಗಾದಲ್ಲಿ ಕೆಲವು ಅನಧೀಕೃತ ಅಂಗಡಿಗಳು ತಲೆ ಎತ್ತಿರುವುದರಿಂದ ಮೀನುಗಾರರಿಗೆ ತೊಂದರೆಯಾಗಿದ್ದು ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡಯವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. 

ಖಾಸಗೀ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಭಟ್ಕಳಕ್ಕೆ ಆಗಮಿಸಿದ್ದ ಸಚಿವ ಆರ್. ವಿ. ದೇಶಪಾಂಡೆಯವರನ್ನು ಮೀನುಗಾರ ಮಹಿಳೆಯರು ಭೇಟಿಯಾಗಿ ತಮ್ಮ ಅಹವಾಲನ್ನು ತೋಡಿಕೊಂಡರು. ಸಮುದ್ರ ಕಿನಾರೆಯಲ್ಲಿ ಅನಧೀಕೃತ ಗೂಡಂಗಡಿಗಳು ಇದ್ದು ಈ ಹಿಂದೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರೂ ಸಹ ಅದು ಹಾಗೆಯೇ ಇದೆ. ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ದೋಣಿಗಳನ್ನು ಇಡುವುದಾಗಲೀ, ಮೇಲೆಗಡೆ ತರುವುದೂ ಕೂಡಾ ಕಷ್ಟವಾಗುತ್ತಿದೆ ಎಂದರು. ತಕ್ಷಣ ಜಿಲ್ಲಾಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು ತಕ್ಷಣ ಒಂದು ಬಾರಿ ಮುರ್ಡೇಶ್ವರಕ್ಕೆ ಭೇಟಿ ನೀಡಿ ಸ್ಥಳೀಯ ಮೀನುಗಾರರಿಗೆ ಬೋಟುಗಳನ್ನು ಇಡಲು ಸ್ಥಳ ತೋರಿಸುವಂತೆ ಕೋರಿದರು. ಅಲ್ಲದೇ ಜಾತ್ರೆಯ ಸಂದರ್ಭದಲ್ಲಿ ಕೆಲವು ದೋಣೀಗಳನ್ನು ಇಲಾಖೆ ವಶಪಡಿಸಿಕೊಂಡಿದ್ದು ಅವರಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಸೀಮೆ ಎಣ್ಣೆಯನ್ನು ಬಂದ್ ಮಾಡಿದ್ದು ತಕ್ಷಣ ಈ ಕುರಿತು ಕ್ರಮ ತೆಗೆದುಕೊಳ್ಳುವಂತೆಯೂ ಕೋರಿದರು. 

ಅಲ್ಲದೇ ಜಾತ್ರೆ ಸಮಯದಲ್ಲಿ ಗ್ರಾಮ ಪಂಚಾಯತ್ ಹರಾಜು ಹಾಕುವಾಗ ಸ್ಥಳೀಯರಿಗೆ ಪ್ರಾಶಸ್ತ್ಯ ನೀಡುತ್ತಿಲ್ಲ ಎಂದೂ ದೂರಿದರು. ಮುಂದಿನ ದಿನಗಳಲ್ಲಿ ಹಾಗಾಗದಂತೆ ನೋಡಿಕೊಳ್ಳಲು ಹಾಗೂ ಸ್ಥಳೀಯರಿಗೆ ಅವಕಾಶ ನೀಡುವಂತೆ ಸೂಚಿಸಿದರು. 

ಭಟ್ಕಳದಲ್ಲಿ 30-40 ವರ್ಷಗಳಿಂದ ಅತಿಕ್ರಮಣ ಮಾಡಿ ಮನೆ ಕಟ್ಟಿ ವಾಸ್ತವ್ಯ ಮಾಡಿದವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಒಕ್ಕಲೆಬ್ಬಿಸುತ್ತಾರೆ.  ನಾವು ಯಾವುದೇ ಹೊಸ ಅತಿಕ್ರಮಣ ಮಾಡಲು ಬಿಡುತ್ತಿಲ್ಲ, ಆದರೆ ಅತಿಕ್ರಮಣ ಮಾಡಿ ಹತ್ತಾರು ವರ್ಷಗಳಿಂದ ಅಲ್ಲಿಯೇ ಉಳಿದು ಬಂದಿರುವವರಿಗೆ ತೊಂದರೆ ಕೊಡುತ್ತಿದ್ದಾರೆ. ರಿಪೇರಿ ಮಾಡಲು ಹೋದರೆ ಸಂಪೂರ್ಣ ಕಟ್ಟಡವನ್ನೇ ಕೆಡವಿ ಹಾಕುತ್ತಾರೆ. ಹೀಗಾದರೆ ನಾವು ಯಾವ ರೀತಿಯಲ್ಲಿ  ಬದುಕು ಸಾಗಿಸಬೇಕು ಎನ್ನುವ ದೂರನ್ನು ಹೇಳಿದ ನಾಗರೀಕರು ಈ ಕುರಿತು ಸೂಕ್ತ ಉತ್ತರ ಬಯಸಿದರು. 

ಈ ಕುರಿತು ದೂರವಾಣಿಯಲ್ಲಿ ಡಿ.ಎಫ್.ಓ. ಅವರೊಂದಿಗೆ ಮಾತನಾಡಿದ ದೇಶಪಾಂಡೆಯವರು ಬಹಳಷ್ಟು ವರ್ಷದಿಂದ ಅತಿಕ್ರಮಣ ಜಾಗಾದಲ್ಲಿ ಇದ್ದ ಮನೆಯನ್ನು ರಿಪೇರಿ ಮಾಡಲೂ ಇಲ್ಲಿನ ಆರ್. ಎಫ್. ಓ. ನೀಡುವುದಿಲ್ಲ ಎಂದರೆ ಹೇಗೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಯಾವುದೇ ಕಾರಣಕ್ಕೂ ಇನ್ನು ಮುಂದೆ ಹಿಂದಿನಿಂದ ಇದ್ದ ಅತಿಕ್ರಮಣ ಜಾಗಾದವರಿಗೆ ತೊಂದರೆ ನೀಡದಂತೆ ತಾಕೀತು ಮಾಡಿದರು. ಸ್ಥಳದಲ್ಲಿಯೇ ಇದ್ದ ವಲಯ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ದೇಶಪಾಂಡೆಯವರು ಯಾವುದೇ ಕಾರಣಕ್ಕೂ ಸ್ಮಗ್ಲಿಂಗ್ ಮಾಡಲಿಕ್ಕೆ, ಹೊಸದಾಗಿ ಅತಿಕ್ರಮಣ ಮಾಡಲಿಕ್ಕೆ ಕೊಡಬೇಡಾ, ಆದರೆ ಬಡವರು ಬಹಳ ವರ್ಷಗಳಿಂದ ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡು ವಾಸ್ತವ್ಯ ಮಾಡಿ ಬಂದಿರುವಾಗ ಮನೆ ರಿಪೇರಿ ಮಾಡಿಕೊಳ್ಳಲು, ಇಲ್ಲವೇ ಕಟ್ಟಿಕೊಳ್ಳಲು ತೊಂದರೆ ಕೊಡಬೇಡಾ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಓರ್ವ ಶಿಕ್ಷಕನ ಮಗನಾದ ನಿನಗೆ ಬಡವರ ಕಷ್ಟವೇನೆಂದು ತಿಳಿದಿರಬೇಕು ಎಂದ ಅವರು ಇನ್ನು ಮುಂದೆ ಬಡವರಿಗೆ ತೊಂದರೆ ಕೊಟ್ಟರೆ ಹುಷಾರ್ ಎಂದು ಎಚ್ಚರಿಸಿದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...