ಶಾಲೆಗಳಿಗೂ ಕಿಚನ್‍ಕಿಟ್ ವಿಸ್ತರಿಸಿ: ಸಿಇಒ ಎಂ.ರೋಷನ್

Source: sonews | By Staff Correspondent | Published on 11th October 2018, 11:15 PM | Coastal News | Don't Miss |

ಕಾರವಾರ ಮಧ್ಯಾಹ್ನದ ಬಿಸಿಯೂಟ ಯೋಜನೆಯಿರುವ ಸರ್ಕಾರಿ ಶಾಲೆಗಳಿಗೂ ತೋಟಗಾರಿಕೆ ಇಲಾಖೆಯ ಕಿಚನ್‍ಕಿಟ್ ಯೋಜನೆ ವಿಸ್ತರಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ,.ರೋಷನ್ ಸಲಹೆ ನೀಡಿದ್ದಾರೆ.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು, ತೋಟಗಾರಿಕೆ ಇಲಾಖೆಯಿಂದ ಕಿಚನ್ ಕಿಟ್ ವಿತರಿಸುವ ಯೋಜನೆಯಿದ್ದು ಸರ್ಕಾರಿ ಶಾಲೆಗಳಿಗೂ ಕಿಚನ್ ಕಿಟ್ ವಿತರಿಸುವುದರಿಂದ ಶಾಲಾ ಆವರಣದಲ್ಲೇ ತಾಜಾ ತರಕಾರಿಗಳನ್ನು ವಿದ್ಯಾರ್ಥಿಗಳು ಬೆಳೆದು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಬಹುದು ಎಂದು ಸಲಹೆ ನೀಡಿದರು.

ಈಗಾಗಲೇ ತಾರಸಿ ತೋಟ, ಕೈತೋಟಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈ ಉದ್ದೇಶ ದಿಂದಲೇ ಜಾರಿಗೆ ತರಲಾಗಿರುವ ಕಿಚನ್ ಕಿಟ್ ಅನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆಯಿರುವ ಶಾಲೆಗಳಿಗೆ ವಿಸ್ತರಿಸುವುದರಿಂದ ಅನುಕೂಲವಾಗಲಿದೆ. ಅಲ್ಲದೆ ಶಾಲೆಗಳಲ್ಲಿ ಕಿಚನ್ ಗಾರ್ಡನ್‍ಗಳನ್ನು ಕಡ್ಡಾಯವಾಗಿ ಮಾಡುವ ಆದೇಶವಿರುವುದರಿಂದ ತೋಟಗಾರಿಕೆ ಇಲಾಖೆಯಿಂದ ಕಿಚನ್‍ಕಿಟ್ ಯೋಜನೆ ವಿಸ್ತರಿಸುವುದು ಅನುಕೂಲವಾಗಲಿದೆ ಎಂದರು.
    
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗರ್ಭಿಣಿ ಸ್ತ್ರೀಯರಿಗೆ ಬಿಸಿಯೂಟ, ಹಾಲು, ಮೊಟ್ಟೆ ಹಾಗೂ ಚಿಕ್ಕಿ ಕೊಡುವ ಯೋಜನೆ ಬದಲಾಗಿದೆ ನೇರವಾಗಿ ಗರ್ಭಿಣಿಯವರ ಖಾತೆಗೆ ಹಣ ತುಂಬುವುದು ಸೂಕ್ತವಾಗಿದ್ದು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಸೂಚಿಸಲಾಯಿತು.
    
ಈ ಯೋಜನೆಯಡಿ ತುಂಬು ಗರ್ಭಿಣಿಯರು ಅಂಗವಾಡಿಗೆ ಬಂದು ಆಹಾರ ಪಡೆಯಲು ಸಾಧ್ಯವಾಗುವುದಿಲ್ಲ. ಅದರಿಂದ ಯೋಜನೆ ಉದ್ದೇಶ ಈಡೇರದ ಕಾರಣ ಸರ್ಕಾರದ ಗಮನ ಸೇಳೆಯುವುದು ಸೂಕ್ತ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ ಅಭಿಪ್ರಾಯಪಟ್ಟರು.
    
ಉಳಿದಂತೆ ಕೃಷಿ, ತೋಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ, ನಿಗಮಗಳ ಪ್ರಗತಿ ಪರಶೀಲನೆ ಮಾಡಲಾಯಿತು.
    
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ರೇಣಕೆ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜಯ ಮಾರುತಿ ಹಣಬರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯಕ್ ಉಪಸ್ಥಿತರಿದ್ದರು.
 

Read These Next