ನ್ಯಾಯಾಧೀಶರೊಬ್ಬರ ಸಾವು

Source: sonews | By Staff Correspondent | Published on 1st May 2018, 6:28 PM | State News | National News | Special Report |

 

ನ್ಯಾಯಮೂರ್ತಿ ಲೋಯಾ ಅವರ ಸಾವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿರುವ ತೀರ್ಮಾನವು ಭಾರತದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

 

೨೦೧೪ರ ಡಿಸೆಂಬರ್ ರಂದು ಸಾವಿಗೀಡಾದ ನ್ಯಾಯಮೂರ್ತಿ ಲೋಯಾ ಅವರ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟು ಇದೇ ಏಪ್ರಿಲ್ ೧೯ರಂದು ತನ್ನ ಆದೇಶವನ್ನು ಪ್ರಕಟಿಸಿ ಸೆಷನ್ಸ್ ಕೋರ್ಟಿನ ನ್ಯಾಯಾಧೀಶರಾಗಿದ್ದ ಲೋಯಾ ಅವರ ಸಾವು ಸಹಜವಾಗಿಯೇ ಸಂಭವಿಸಿದೆ ಎಂದು ತೀರ್ಪು ನೀಡಿದೆಆದರೆ ಜಸ್ಟೀಸ್ ಲೋಯಾ ಅವರ ದಿಢೀರ್ ಮರಣದ ಬಗ್ಗೆ ಮಾಧ್ಯಮಗಳಲ್ಲಿನ ವರದಿಗಳನ್ನೂ ಒಳಗೊಂಡಂತೆ ಸಮಾಜದ ಹಲವಾರು ವರ್ಗಗಳು ಹಲವಾರು ಆರೋಪಗಳನ್ನು ಮಾಡುತ್ತಾ ಬಂದಿವೆ. ಅವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ನೋಡುವುದಾದರೆ ತೀರ್ಪು ಇನ್ನೂ ಹೆಚ್ಚಿನ ಪ್ರಶ್ನೆಗಳನ್ನೇ  ಹುಟ್ಟುಹಾಕಿದೆ.

 

೨೦೧೮ರ ಜನವರಿ ೧೨ನೇ ತಾರೀಕಿನಂದು ನ್ಯಾಯಮೂರ್ತಿ ಲೋಯಾ ಅವರ ಸಾವಿನ ವಿಚಾರಣೆಗೆ ಸಂಬಂಧಿಸಿದ ಪ್ರಕರಣವು ಮೊದಲ ಬಾರಿಗೆ ಭಾರತದ ಮುಖ್ಯ ನ್ಯಾಯಮೂರ್ತಿಯವರೆದುರು ಬಂದಿತ್ತು. ಅದೇ ದಿನವೇ ಸುಪ್ರೀಂ ಕೋರ್ಟಿನ  ನಾಲ್ವರು ಅತಿ ಹಿರಿಯ ನ್ಯಾಯಾಧೀಶರುಗಳು ಸುಪ್ರೀಂ ಕೋರ್ಟಿನ  ಮುಖ್ಯ ನ್ಯಾಯಾಧೀಶರ ಕಾರ್ಯ ನಿರ್ವಹಣಾ ರೀತಿ ಮತ್ತು  ಅವರು ಪ್ರಕರಣಗಳನ್ನು ಹಂಚುವ ವಿಧಾನದ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಲು ಬಹಿರಂಗ ಪತ್ರಿಕಾ ಗೊಷ್ಟಿ ಮಾಡುವಂಥಾ ಅಸಾಧಾರಣಾ ಕ್ರಮವನ್ನು ಕೈಗೊಂಡರು. ಇಂಥಾ ಪತ್ರಿಕಾ ಗೊಷ್ಟಿ  ನಡೆಸಲೇ ಬೇಕಾದ ತುರ್ತು ಉದ್ಭವಿಸಿದ್ದು ನ್ಯಾಯಮೂರ್ತಿ ಲೋಯಾ ಅವರ ಪ್ರಕರಣದಿಂದಾಗಿಯೇ ಎಂದು ಪತ್ರಕರ್ತರೊಬ್ಬರು ನಿರ್ದಿಷ್ಟ ಪ್ರಶ್ನೆಯನ್ನು ಕೇಳಿದಾಗ ನಾಲ್ವರು ಹಿರಿಯ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ಜಸ್ಟೀಸ್ ಗೋಗೋಯ್ ಅವರು ಹೌದೆಂದು ಉತ್ತರವಿತ್ತಿದ್ದರು

ಇಂಥಾ ಸನ್ನಿವೇಶದಲ್ಲಿ ನ್ಯಾಯಾಂಗದ ವಸ್ತುನಿಷ್ಟತೆ ಮತ್ತು ಪಾರದರ್ಶಕತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಮುಖ್ಯ ನ್ಯಾಯಾಧೀಶರು ತಮ್ಮ ಕೋರ್ಟಿನಲ್ಲಿ ನ್ಯಾಯಮೂರ್ತಿ ಲೋಯಾ ಅವರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಬಾರದಿತ್ತು. ಆದರೂ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಜಸ್ಟೀಸ್ .ಎಂ. ಕನ್ವಿಲ್ಕರ್ ಮತ್ತು ಜಸ್ಟಿಸ್ ಡಿ.ವೈ. ಚಂದ್ರಚೂಡ್ ಅವರ ತ್ರಿ ಸದಸ್ಯ ಪೀಠವೇ ವಿಚಾರಣೆಗೆ ಕೈಗೆತ್ತಿಕೊಂಡಿತು. ಸುಪ್ರೀಂ ಕೋರ್ಟು ತಾನು ಕೊಟ್ಟ  ತೀರ್ಪಿಗೆ ಪ್ರಕರಣದ ಕೂಲಂಕಷ ತನಿಖೆ ಮಾಡಿದ ಇಂಟೆಲಿಜೆನ್ಸ್ ಬ್ಯೂರೋ ವರದಿಯನ್ನು ಮತ್ತು ಅದರಲ್ಲಿ ದಾಖಲಾಗಿರುವ ಜಸ್ಟೀಸ್ ಲೋಯಾ ಅವರ ಜೊತೆಗೆ ಪ್ರಯಾಣ ಮಾಡಿದ್ದ ನಾಲ್ವರು ನ್ಯಾಯಾಧೀಶರ ಹೇಳಿಕೆಯನ್ನೂ ಆಧರಿಸಿದೆ. ಇಂಟೆಲಿಜೆನ್ಸ್ ಬ್ಯೂರೋ ತನಿಖೆಗೆ ಆದೇಶ ನೀಡಿದ್ದು ಮಹಾರಾಷ್ಟ್ರದ ಮುಖ್ಯಮಂತ್ರಿಗಳೇ ವಿನಃ ಸುಪ್ರೀಂಕೋರ್ಟಲ್ಲ. ಆದರೆ ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ್ದ ಅಹವಾಲುದಾರರು ನ್ಯಾಯಮೂರ್ತಿ ಲೋಯಾ ಅವರ ಸಾವಿನ ಬಗ್ಗೆ ಹೊಸದಾದ ಮತ್ತು ಸ್ವತಂತ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು. ಆದರೆ ಅಹವಾಲುದಾರರ ಬಗ್ಗೆ ಮತ್ತು ಅವರ ವಕೀಲರ ಬಗ್ಗೆ ಸುಪ್ರೀಂ ಕೋರ್ಟು ತೋರಿದ ಧೋರಣೆ ಆಘಾತಕಾರಿಯಾಗಿತ್ತು. ನ್ಯಾಯಾಂಗದ ವ್ಯವಹಾರಗಳಲ್ಲಿ ಆಗಿರಬಹುದಾದ ಅನಗತ್ಯ ಮಧ್ಯಪ್ರವೇಶ ಮತ್ತು ದಾಳಿಗಳ ಬಗ್ಗೆ ಅಹವಾಲುದಾರರು ಬೆಳಕಿಗೆ ತರುತ್ತಿದ್ದ ವಿಷಯಗಳನ್ನು ಸ್ವಾಗತಿಸುವ ಬದಲು ಸುಪ್ರೀಂಕೋರ್ಟು ಅಹವಾಲುದಾರರನ್ನು ನಿಂದಿಸಿತು ಮತ್ತು ಅಂತಿಮವಾಗಿ ಅಹವಾಲುದಾರರು ನ್ಯಾಯಾಂಗ ನಿಂದನೆ ಮಾಡಿದ್ದಾರೆಂದೂ ತೀರ್ಮಾನ ಮಾಡಿತು.

ನ್ಯಾಯಮೂರ್ತಿ ಲೋಯಾ ಅವರ ಪ್ರಕರಣವು ೨೦೦೫ ರಲ್ಲಿ ನಡೆದ ಸೊಹ್ರಬುದ್ದೀನ್ ಮತ್ತು ಕೌಸರ್ ಬೀ ಅವರ ಎನ್ಕೌಂಟರ್ ಸಾವುಗಳೊಂದಿಗೆ ಪ್ರಾರಂಭವಾಗುತ್ತದೆ. ಸೊಹ್ರಾಬುದ್ದೀನ್ ಅವರ ಸಹೋದರ ತಮ್ಮ ಮುಂದಿರಿಸಿದ ಅಹವಾಲನ್ನು ಪುರಸ್ಕರಿಸಿ ಸುಪ್ರೀಂ ಕೋರ್ಟು ಪ್ರಕರಣದ ವಿಚಾರಣೆಯ ಹೊಣೆಯನ್ನು ಸಿಬಿಐಗೆ ವಹಿಸಿತ್ತು. ಪ್ರಕರಣದಲಿ ಗುಜರಾತಿನ ಅಂದಿನ ಗೃಹಮಂತ್ರಿ ಅಮಿತ್ ಶಾ ಅವರ ಬಂಧನವೂ ಆಗಿತ್ತು ಮತ್ತು ಅವರು ಅದರಲ್ಲಿ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇಷ್ಟೆಲ್ಲಾ ಆದ ನಂತರವೂ ಸಹ ಸುಪ್ರೀಂ ಕೋರ್ಟು ಪ್ರಕರಣದ ವಿಚಾರಣೆಯನ್ನು ಗುಜರಾತಿನಿಂದ ಹೊರಗಡೆ ಮುಂಬೈನಲ್ಲಿ ನಡೆಸಬೇಕೆಂದು ಆದೇಶಿಸಿತಲ್ಲದೆ ಪ್ರಕರಣದ ವಿಚಾರಣೆಯನ್ನು ನಡೆಸಲು ಒಬ್ಬರು ಸೆಷನ್ಸ್ ನ್ಯಾಯಾಧೀಶರನ್ನು ನೇಮಕ ಮಾಡಬೇಕೆಂದು ನಿರ್ದೇಶಿಸಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಪ್ರಕರಣದ ವಿಚಾರಣೆಯನ್ನು ಪ್ರಾರಂಭದಿಂದ ಕೊನೆಯತನಕ ಒಬ್ಬರೇ ನ್ಯಾಯಾಧೀಶರು ನಡೆಸಬೇಕೆಂದೂ ಸಹ ಆದೇಶಿಸಿತ್ತು. ಪ್ರಕರಣದ ವಿಚಾರಣೆ ಗುಜರಾತಿನಲ್ಲಿ ನಡೆದರೆ ರಾಜಕೀಯ ಮಧ್ಯಪ್ರವೇಶವಾಗುವ ಸಾಧ್ಯತೆಯನ್ನು ಮನಗಂಡೇ ಸುಪ್ರೀಂಕೊರ್ಟು ವಿಚಾರಣೆಯನ್ನು ಗುಜರಾತಿನ ಹೊರಗಡೆ ನಡೆಸಲು ಆದೇಶಿಸಿತ್ತೆಂಬುದು ಸ್ಪಷ್ಟ. ಎನ್ಕೌಂಟರ್ಗೆ ಸಾಕ್ಷಿಯಾಗಿದ್ದ ತುಳಸೀರಾಮ್ ಪ್ರಜಾಪತಿಯ ಕೊಲೆಯಾದಾಗಲೂ ಸಹ ಸುಪ್ರೀಂ ಕೋರ್ಟು ಸಿಬಿಐ ತನಿಖೆಗೆ ಆದೇಶ ನೀಡಿತ್ತು.

ಅಂತಿಮವಾಗಿ ಎರಡು ಪ್ರಕರಣಗಳ ವಿಚಾರಣೆಯನ್ನು ಜಂಟಿಯಾಗಿ ನಡೆಸಬೇಕೆಂದು ಸುಪ್ರೀಂ ಕೋರ್ಟು ಮುಂಬೈ ಹೈ ಕೋರ್ಟಿಗೆ ಆದೇಶ ನೀಡಿತು. ಹೀಗೆ ಪ್ರಕರಣವು ಅತ್ಯಂತ ಸೂಕ್ಷ್ಮವಾದದ್ದೆಂದೂ, ಇದರ ಮೂಲ ವಿಚಾರಣೆ ಸರಿಯಾಗಿ ನಡೆದಿಲ್ಲವೆಂದು ಕಾಲಕಾಲಕ್ಕೆ ಹಲವಾರು ನ್ಯಾಯಾಧೀಶರು ಗಮನಿಸಿದ್ದಾರೆಂಬುದೂ ಕೂಡಾ ಸ್ಪಷ್ಟ.

ಪ್ರಕರಣದ ವಿಚಾರಣೆಯನ್ನು ಮುಂಬೈನಲ್ಲಿ ನಡೆಸುವ ಸಲುವಾಗಿ ಮೊದಲು ನ್ಯಾಯಮೂರ್ತಿ ಉತ್ಪತ್ ಅವರನ್ನು ನೇಮಿಸಲಾಯಿತು. ಅಮಿತ್ ಶಾ ಅವರು ಖುದ್ದಾಗಿ ವಿಚಾರಣೆಗೆ ಹಾಜರಿರಬೇಕೆಂದು ನ್ಯಾಯಮೂರ್ತಿಗಳು ಹಲವಾರು ಬಾರಿ ಸೂಚನೆ ಕಳಿಸಿದರೂ ಶಾ ಅವರು ವಿನಾಯತಿ ಕೋರಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಒಂದು ಮಿತಿ ಮೀರಿದ ನಂತರ ನ್ಯಾಯಮೂರ್ತಿ ಉತ್ಪತ್ ಅವರು ಶಾ ಅವರಿಗೆ ಖುದ್ದು ಹಾಜರಿಯಿಂದ ವಿನಾಯತಿ ಕೊಡಲು ಸಾಧ್ಯವಿಲ್ಲವೆಂದು ನಿರಾಕರಿಸಿದ್ದಲ್ಲದೆ  ಮುಂದಿನ ವಿಚಾರಣೆಯ ದಿನಾಂಕದಂದು ಖುದ್ದಾಗಿ ಹಾಜರಿರಬೇಕೆಂದು ಆದೇಶಿಸಿದರು. ಆದರೆ ಅದು ಸಂಭವಿಸುವ ಮುನ್ನವೇ ಹೈಕೋರ್ಟಿನ ನ್ಯಾಯಾಧೀಶರುಗಳ ಸಮಿತಿಯು ಉತ್ಪತ್ ಅವರನ್ನು ವರ್ಗಾಯಿಸಿ ಜಾಗದಲ್ಲಿ ನ್ಯಾಯಮೂರ್ತಿ ಲೋಯಾ ಅವರನ್ನು ನೇಮಿಸಿದರು. ಪ್ರಕರಣದ ವಿಚಾರಣೆಯನ್ನು ಪ್ರಾರಂಭದಿಂದ ಕೊನೆಯತನಕ ಒಬ್ಬರೇ ನ್ಯಾಯಾಧೀಶರು ಮಾಡಬೇಕೆಂದು ತಾನು ಸ್ಪಷ್ಟವಾಗಿ ಆದೇಶ ನೀಡಿದ್ದರೂ ನ್ಯಾಯಮೂರ್ತಿ ಉತ್ಪತ್ ಅವರನ್ನು ವರ್ಗಾವಣೆ ಮಾಡುವಾಗ ತನ್ನ ಅನುಮತಿಯನ್ನು ಏಕೆ ಪಡೆದುಕೊಳ್ಳಲಿಲ್ಲವೆಂಬ ಪ್ರಾಥಮಿಕ  ಪ್ರಶ್ನೆಯನ್ನು ಸುಪ್ರೀಂ ಕೋರ್ಟು ಪರಿಶೀಲಿಸಬೇಕಿತ್ತು. ಆದರೆ ಸುಪ್ರೀಂ ಕೋರ್ಟು ಅದನ್ನು ಪ್ರಶ್ನಿಸುವ ಗೋಜಿಗೇ ಹೋಗಲಿಲ್ಲ.

ಒಮ್ಮೆ ನ್ಯಾಯಮೂರ್ತಿ ಲೋಯಾ ಅವರು ಅಧಿಕಾರವನ್ನು ವಹಿಸಿಕೊಂಡ ಕೂಡಲೇ ಶಾ ಅವರ ವಕೀಲರು ತಮ್ಮ ಕಕ್ಷಿದಾರರ ಮೇಲಿನ ಮೊಕದ್ದಮೆಯನ್ನು ರದ್ದು ಮಾಡುವ ಅರ್ಜಿಯ ವಿಲೇವಾರಿಗೆ ಇನ್ನಿಲ್ಲದ ತರಾತುರಿಯನ್ನು ತೋರಿದರು. ಆದರೆ ನ್ಯಾಯಾಧೀಶ ಲೋಯಾ ಅವರು ಒಬ್ಬ ಸ್ವತಂತ್ರ ನ್ಯಾಯಾಧೀಶರು ವರ್ತಿಸಬೇಕಾದ ರೀತಿಯಲ್ಲೇ ತಟಸ್ಥರಾಗಿಯೇ ವಿಚಾರಣೆಯನ್ನು ನಡೆಸಿದರು. ಇಂಥಾ ಸನ್ನಿವೇಶದಲ್ಲೇ ತಮ್ಮ ಸಹೋದ್ಯೋಗಿ ಒಬ್ಬರ ಮದುವೆಗೆಂದು ನಾಗಪುರಕ್ಕೆ ಹೋಗಿದ್ದ ನ್ಯಾಯಮೂರ್ತಿ ಲೋಯಾ ಅವರು ಸಾವಿಗೀಡಾದರು. ನಂತರದಲ್ಲಿ ಸ್ಥಾನಕ್ಕೆ ಬಂದ ನ್ಯಾಯಾಧೀಶ ಗೋಸಾವಿ ಅವರು ಒಂದೇ ತಿಂಗಳಲ್ಲಿ ಶಾ ಅವರನ್ನು ದೋಷಮುಕ್ತಗೊಳಿಸಿದರು. ಸ್ವತಃ ಸಿಬಿಐ ಶಾ ಅವರನ್ನು ಆರೋಪಿಯೆಂದು ಹೆಸರಿಸಿ ಬಂಧಿಸಿತ್ತು. ಆದರೂ ಅದು ಹೈಕೋರ್ಟಿನ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ದಾಖಲಿಸಲಿಲ್ಲ. ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಶೇಖ್ ಅವರ ಸಹೋದರ ನಂತರ ಅದನ್ನು ಹಿಂತೆಗೆದುಕೊಂಡರು. ಅಮಿತ್ ಶಾ ದೋಷಮುಕ್ತರಾದರು

ಪ್ರಕರಣ ಸುತ್ತಾ ಇದ್ದ ವಾದ-ವಿವಾದಗಳು, ವಿವಿಧ ಕಥನಗಳಲ್ಲಿದ್ದ ವ್ಯತಾಸಗಳು, ಪ್ರಕರಣ ಹುಟ್ಟಿಕೊಂಡ ಸಂದರ್ಭ, ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಅತ್ಯಂತ ಸಕ್ರಿಯವಾಗಿ ಮಧ್ಯಪ್ರವೇಶ ಮಾಡಿದ್ದು, ಮತ್ತು ಪ್ರಕರಣದ ಬಹಳಷ್ಟು ಸಾಕ್ಷಿಗಳು ಕಾಲಕಳೆದಂತೆ ಉಲ್ಟಾ ಹೊಡೆಯುತ್ತಾ ಪ್ರತಿಕೂಲ ಸಾಕ್ಷಿಗಳಾಗಲು ಪ್ರಾರಂಭಿಸಿದ್ದು- ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನ್ಯಾಯಾಲಯವೇ ಒಂದು ಸ್ವತಂತ್ರ ತನಿಖೆಗೆ ಆದೇಶಿಸಬೇಕಿತ್ತು. ಅಂಥಾ ಒಂದು ವಿಚಾರಣೆಯನ್ನು ನಡೆಸುವಾಗ ಸಂಬಂಧಿಕರನ್ನು ಗೋಪ್ಯವಾಗಿ ಮಾತನಾಡಿಸಬಹುದಿತ್ತು ಮತ್ತು ಲೋಯಾ ಅವರ ಸಹೋದ್ಯೋಗಿ ನ್ಯಾಯಾಧೀಶರುಗಳನ್ನು ವಿಷಯಗಳನ್ನು ಸ್ಪಷ್ಟಪಡಿಸುವಂತೆ ಕೇಳಬಹುದಿತ್ತು. ಹಾಗೂ ಸ್ವತಂತ್ರ  ಪರಿಣಿತರಿಂದ ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಶೀಲಿಸಬಹುದಿತ್ತು. ಇದೆಲ್ಲದರ ಬದಲಿಗೆ ಸುಪ್ರೀಂ ಕೋರ್ಟು  ಶಾ ಅವರ ಪಕ್ಷದಿಂದ ಆದೇಶಿಸಲಾದ ಇಂಟೆಲಿಜೆನ್ಸ್ ಬ್ಯೂರೋ ವಿಚಾರಣೆಯು ಸಲ್ಲಿಸಿರುವ ವರದಿಯಲ್ಲಿರುವ ಮಾಹಿತಿಯನ್ನು ಮಾತ್ರ ಆಧರಿಸಿ ತನ್ನ ಆದೇಶವನ್ನು ನೀಡಿದೆ. ಅಥವಾ ಸುಪ್ರೀಂ ಕೋರ್ಟೇ ಖುದ್ದು ವಿಚಾರಣೆ ನಡೆಸಬೇಕೆಂದಿದ್ದರೂ ಸಾವಿನ ಬಗ್ಗೆ ಕೂಲಂಕಷವಾದ ತನಿಖಾ ವರದಿಯನ್ನು ನೀಡಿದ್ದ ಪತ್ರಕರ್ತರನ್ನೂ, ನ್ಯಾಯಾಧೀಶ ಲೋಯಾ ಅವರ ಸಂಬಂಧಿಕರನ್ನೂ, ಮತ್ತು ಲೋಯಾ ಅವರ ಜೊತೆಗಿದ್ದ ನಾಲ್ವರು ನ್ಯಾಯಾಧೀಶರುಗಳನ್ನೂ ಕರೆಸಿ ಸ್ವತಂತ್ರ ವಿಚಾರಣೆ ನಡೆಸಬಹುದಿತ್ತು. ಹಾಗೆಯೇ ಬೇರೆಬೇರೆ ಜನಗಳ ಫೋನ್ ಸಂಭಾಷಣೆಗಳ ದಾಖಲೆಗಳನ್ನು ತರಿಸಿ ನೋಡಬಹುದಿತ್ತು ಮತ್ತು ಸ್ವತಂತ್ರ ವ್ಯಕ್ತಿಯೊಬ್ಬರನ್ನು ಅತಿಥಿಗೃಹ ಮತ್ತು ಆಸ್ಪತ್ರೆಗೆ ಕಳಿಸಿ ಸತ್ಯಾಸತ್ಯತೆಗ ಬಗ್ಗೆಯೂ ಸ್ಪಷ್ಟತೆಯನ್ನು ಪಡೆಯಬಹುದಿತ್ತು.

ಆದರೆ ಯಾವ ಪ್ರಕರಣವು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟಂತೆ ಅತ್ಯಂತ ಪ್ರಮುಖವಾಗಿತ್ತೋ, ಯಾವ ಪ್ರಕರಣವು ತನ್ನ ಉಸ್ತುವಾರಿಯಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಸಂಬಂಧಪಟ್ಟ ವಿಷಯದಿಂದ ಉದ್ಭವವಾಯಿತೋ, ಯಾವ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಾಧೀಶರುಗಳು ಅತ್ಯಂತ ಕಳವಳ ವ್ಯಕ್ತಪಡಿಸಿದ್ದರೋ, ಅಂಥ ಒಂದು ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟು ತೋರಿದ ಧೋರಣೆಯು  ಅತ್ಯಂತ ಅನಪೇಕ್ಷಿತವಾಗಿತ್ತು. ಒಂದು ಸ್ವತಂತ್ರ ತನಿಖೆಗೆ ಆದೇಶಿಸಿ ಸೆಷನ್ಸ್ ಕೋರ್ಟಿನ ನ್ಯಾಯಾಧೀಶರ ಪರವಾದ ನಿಲುವು ತೆಗೆದುಕೊಂಡ ಮಾತ್ರಕ್ಕೆ ಸುಪ್ರೀಂ ಕೋರ್ಟು ಪೂರ್ವಗ್ರಹ ಪೀಡಿತವಾಗುತ್ತಿರಲಿಲ್ಲ. ಪ್ರಾಯಶಃ ಅಂಥಾ ಒಂದು ತನಿಖೆಯಿಂದ ಏನೂ ಹೊರಬರುತ್ತಿರಲಿಲ್ಲಆದರೆ ಕನಿಷ್ಟ ಪಕ್ಷ ನ್ಯಾಯಾಂಗದ ಘನತೆಯಾದರೂ ಉಳಿಯುತ್ತಿತ್ತು.

ಕೃಪೆ: Economic and Political Weekly    ಅನು: ಶಿವಸುಂದರ್ 

                                     

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...