ಹಸಿದ ಮಕ್ಕಳ ಹೊಟ್ಟೆ ತುಂಬಿಸುವ ಬಗೆ

Source: sonews | By Staff Correspondent | Published on 7th May 2018, 5:51 PM | National News | Special Report | Don't Miss |

ಸ್ಥಳೀಯ ಆಹಾರ ಪದ್ಧತಿಯನ್ನು ಆಧರಿಸಿದ ವೈವಿಧ್ಯತೆಯುಳ್ಳ ಆಹಾರವನ್ನು ಒದಗಿಸುವುದು ಮಾತ್ರ ಅಪೌಷ್ಟಿಕತೆಯಿಂದ ನರಳುತ್ತಿರುವ ಕೋಟ್ಯಾಂತರ ಮಕ್ಕಳಿಗೆ ಆಹಾರ ಒದಗಿಸುವ ಪರ್ಯಾಯ ವಿಧಾನವಾಗಿದೆ.

ಅಂಗನವಾಡಿ ಕೇಂದ್ರಗಳಲ್ಲಿ ಕಲಿಯುವ ಪುಟ್ಟ ಮಕ್ಕಳಿಗೆ ಪೂರಕ ಪೌಷ್ಟಿಕಾಂಶವನ್ನು ಹೇಗೆ ಒದಗಿಸಬೇಕೆಂಬ ಪ್ರಶ್ನೆಯ ಬಗ್ಗೆ ನೀತಿ ಅಯೋಗ ಮತ್ತು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಮಂತ್ರಿ ಮನೇಕ ಗಾಂಧಿಯವರ ನಡುವೆ ಮತ್ತೊಮ್ಮೆ ಭಿನ್ನಾಭಿಪ್ರಾಯ ಉದ್ಭವವಾಗಿದೆ. ಮಂತ್ರಿ ಮನೇಕಾ ಗಾಂಧಿಯವರು ಮನೆಗೆ ಕೊಂಡೊಯ್ಯಬಹುದಾದ ಧಾನ್ಯಗಳೆಲ್ಲವನ್ನು ಸಾರಾ ಸಗಟಾಗಿ ನಿಲ್ಲಿಸಿ ಅದರ ಜಾಗದಲ್ಲಿ ಫ್ಯಾಕ್ಟರಿಗಳಲ್ಲಿ ತಯಾರಾಗುವ ಶಕ್ತಿ ಸಾಂದ್ರಿತ ಪೌಷ್ಟಿಕಾಂಶಗಳ ಪ್ಯಾಕೆಟ್ಟುಗಳನ್ನು ನೀಡುವ ಯೋಜನೆಗಾಗಿ ಒತ್ತಾಯಿಸುತ್ತಿದ್ದರೆಂದು ಕಳೆದ ವಾರ ಕೆಲವು ಪತ್ರಿಕೆಗಳು ವರದಿ ಮಾಡಿವೆ. ಕಳೆದ ಒಂದು ದಶಕದಲ್ಲಿ ಇಲಾಖೆಯಲ್ಲಿ ಮಂತ್ರಿಗಳಾಗಿದ್ದವರೂ ಸಹ  ಪೂರಕ ಪೌಷ್ಟಿಕಾಂಶಗಳ ಕೇಂದ್ರೀಕೃತ ಉತ್ಪಾದನೆ ಮತ್ತು ವಿತರಣೆಯನ್ನೇ ಬೆಂಬಲಿಸಿದ್ದರು. ಅದರಿಂದ ವಿತರಿಸಲಾಗುವ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಬಹುದೆಂದು ಅವರು ಅದನ್ನು ಸಮರ್ಥಿಸಿಕೊಂಡಿದ್ದರು. ಇತ್ತಿಚೆಗೆ ನಡೆದ ಭಾರತದ ಪೌಷ್ಟಿಕಾಂಶ ಕೊರತೆಯ ಸವಾಲುಗಳ ರಾಷ್ಟ್ರೀಯ ಪರಿಷತ್ತಿನ ಸಭೆಯಲ್ಲಿ ನೀತಿ ಅಯೋಗವು ಪ್ರಸ್ತಾಪವನ್ನು ತಿರಸ್ಕರಿಸುವ ಮೂಲಕ ಸದ್ಯಕ್ಕೆ ವಿವಾದ ತಣ್ಣಗಾಗಿದೆ. ಬದಲಿಗೆ ಅದು ೨೦೧೩ರ ರಾಷ್ಟ್ರೀಯ ಅಹಾರ ಭದ್ರತಾ ಕಾಯಿದೆಯನ್ನು ಮತ್ತು ೨೦೧೭ರ ಐಸಿಡಿಎಸ್ (ಇಂಟಗ್ರೇಟಡ್ ಚೈಲ್ದ್ ಡೆವಲಪ್ಮೆಂಟ್ ಸರ್ವೀಸ್) ಮೂಲಕ ವಿತರಿಸಲಾಗುವ ಪೂರಕ ಪೌಷ್ಟಿಕಾಂಶಗಳ ನಿಯಮಗಳನ್ನು ಪಾಲಿಸಲು ಒತ್ತು ನೀಡಿದೆ ಮತ್ತು ಆಹಾರದ ತಯಾರಿಕೆಯಲ್ಲಿ ತಾಯಂದಿರನ್ನು ಒಳಗೊಳ್ಳಲು ಸಲಹೆ ಮಾಡಿದೆ. ಆಹಾರ ಭದ್ರತಾ ಕಾಯಿದೆಯು ಆರು ತಿಂಗಳಿಂದ ಆರು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಮತ್ತು ಗರ್ಭಿಣಿ ಹಾಗೂ ಹಾಲುಣಿಸುತ್ತಿರುವ ತಾಯಂದರಿಗೂ  ದಿನನಿತ್ಯ ಒಂದು ಹೊತ್ತಿನ ಆಹಾರವನ್ನು ಅಂಗನವಾಡಿಯ ಮೂಲಕ ನೀಡುವುದಕ್ಕೆ ಅವಕಾಶ ಕಲ್ಪಿಸಿದೆ. ಫಲಾನುಭವಿಗಳು ಯಾವ ವರ್ಗೀಕರಣದೊಳಗಿರುವವವರು ಎಂಬುದನ್ನು ಆಧರಿಸಿ ಅದನ್ನು ಬಿಸಿಯೂಟದ ರೂಪದಲ್ಲಾದರೂ ಅಥವಾ ಮನೆಗೆ  ಕೊಂಡೊಯ್ಯುವ ಧಾನ್ಯಗಳ ರೂಪದಲ್ಲಾದರೂ ಒದಗಿಸುವ ಅವಕಾಶವಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಐಸಿಡಿಎಸ್ ಯೋಜನೆಯ ಮೂಲಕ ವಿತರಿಸುವ ಪೂರಕ ಪೌಷ್ಟಿಕಾಂಶಗಳನ್ನು ಸ್ಥಳೀಯ ಸ್ವ ಸಹಾಯ ಗುಂಪುಗಳ ಮೂಲ  ವಿತರಣೆ ಮಾಡುವುದಕ್ಕೂ ಅವಕಾಶವಿದೆ.

ಬಹಳ ಕಾಲದಿಂದ ಐಸಿಡಿಎಸ್ನಡಿ ದೊರಕುವಮನೆಗೆ ಕೊಂಡೊಯ್ಯುವ ಧಾನ್ಯಗಳನ್ನುಹಲವಾರು ರಾಜ್ಯಗಳಲ್ಲಿ ದೊಡ್ಡ ದೊಡ್ಡ ಖಾಸಗಿ ಕಾಂಟ್ರಾಕ್ಟರುಗಳು ಸರಬರಾಜು ಮಾಡುತ್ತಿದ್ದರು. ವ್ಯವಸ್ಥೆಯಲ್ಲಿ ಸಾಕಷ್ಟು ಸೋರಿಕೆ ಮತ್ತು ಭ್ರಷ್ಟಾಚಾರಗಳಿದ್ದವು. ಇದನ್ನು ಗಣನೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟು ೨೦೦೪ರಲ್ಲಿ ಒಂದು ಆದೇಶವನ್ನು ನೀಡಿ ಐಸಿಡಿಎಸ್ ಯೋಜನಗೆ ಖಾಸಗಿ ಸಬರರಾಜುದಾರರನ್ನು ನಿಷೇಧಿಸಿತಲ್ಲದೆ ಅದರ ಬದಲಿಗೆ ಗ್ರಾಮದ ಸ್ಥಳೀಯ ಸಂಘಟನೆಗಳನ್ನೂ, ಮಹಿಳಾ ಮಂಡಳಿಗಳನ್ನೂ ಅಥವಾ ಸ್ವಸಹಾಂi ಗುಂಪುಗಳನ್ನು ಉತ್ತೇಜಿಸಬೇಕೆಂದು ಆದೇಶಿಸಿತು. ಇಷ್ಟಾದರೂ ಕಾನೂನುಗಳಲ್ಲಿರುವ ಲೋಪದೋಷಗಳನ್ನು ಬಳಸಿಕೊಂಡು ಬಹಳಷ್ಟು ರಾಜ್ಯಗಳು ಈಗಲೂ ಕೇಂದ್ರೀಕೃತ ಗುತ್ತಿಗೆ ಪದ್ಧತಿಯನ್ನೇ ಮುಂದುವರೆಸಿದ್ದಾರೆ. ಮತ್ತು ಕಾಂಟ್ರಾಕ್ಟರುಗಳು ಈಗ ಮೂಲ ಉತ್ಪಾದಕರ ಹೆಸರಿನಲ್ಲಿ ಮತ್ತು ಕೆಲೆವೊಮ್ಮೆ ಮಹಿಳಾ ಮಂಡಲಗಳ ಹೆಸರಿನಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಹಾರ ಹಕ್ಕಿನ ಕಾಯಿದೆಯ ಬಗ್ಗೆ ಸುಪ್ರೀಂ ಕೋರ್ಟು ನೇಮಕ ಮಾಡಿರುವ ಕಮಿಷನರುಗಳು ವ್ಯವಸ್ಥೆಯಲ್ಲಿ ರಾಜಕಾರಣಿ, ಅಧಿಕಾರಿ ಮತ್ತು ಧಾನ್ಯ ಸರಬರಾಜು ಮಾಡುವ ಕಾಂಟ್ರಾಕ್ಟರುಗಳ ನಡುವೆ ಇರುವ ಒಳ ಸಂಬಂಧಗಳ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಬಲವಾದ ವರದಿಗಳನ್ನು ಸಲ್ಲಿಸಿದ್ದಾರೆ. ಅವರು ಮಹಾರಾಷ್ಟ್ರದಲ್ಲಿ ಐಸಿಡಿಎಸ್ ಯೋಜನೆಯಡಿ ಆಹಾರ ಸರಬರಾಜು ಮಾಡುತ್ತಿರುವ ಮಹಿಳಾ ಮಂಡಲಗಳು ಸುಳ್ಳು ಸಂಘಟನೆಗಳಾಗಿದ್ದು  ಹಿಂದೆ ಸರಬರಾಜು ಮಾಡುತ್ತಿದ್ದ ಕಾಂಟ್ರಾಕ್ಟರುಗಳು ಹುಟ್ಟುಹಾಕಿರುವ ಸಂಸ್ಥೆUಳಾಆಗಿವೆಯೆಂದೂಅವುಗಳ ಬಗ್ಗೆ ವಿಶೇಷ ತನಿಖೆಯಾಗಬೇಕೆಂದು ಒತ್ತಾಯಿಸಿದ್ದರು. ನಂತರ ಮಹಾರಾಷ್ಟ್ರ ಸರ್ಕಾರವು ಸಣ್ಣ ಮತ್ತು ಸ್ಥಳೀಯ ಮಹಿಳ ಮಂಡಲಗಳನ್ನು ಒಳಗೊಳ್ಳುವ ವಿಕೇಂದ್ರೀಕೃತ ಪದ್ಧತಿಯನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿತು. ಆದರೆ ಅವೆಷ್ಟು ದುರ್ಬಲವಾಗಿದ್ದವೆಂದರೆ ಅದನ್ನು ಪ್ರಾರಂಭಿಸಿದ ಮೊದಲ ದಿನದಿಂದಲೇ ಹಳೆಯ ಸರಬರಾಜುದಾರರನ್ನು ಶತಾಯಗತಾಯ ವಾಪಸ್ ತರಲು ಪ್ರಯತ್ನಗಳನ್ನು ಸರ್ಕಾರಗಳು ಪ್ರಾರಂಭಿಸಿದ್ದವು. ವಿಷಯದ ಬಗ್ಗೆ ಇನ್ನೂ ಹಲವಾರು ಪ್ರಕರಣಗಳು ಸುಪ್ರೀಂ ಕೋರ್ಟಿನೆದುರು ವಿಚಾರಣೆಗಿವೆ. ಇತ್ತೀಚೆಗೆ ಮಧ್ಯಪ್ರದೇಶ ಸರ್ಕಾರವೂ ಸಹ ಕಾಂಟ್ರಾಕ್ಟರುಗಳು ಮಾಡುತ್ತಿದ್ದ ಧಾನ್ಯಗಳ ಸರಬರಾಜು ಪದ್ಧತಿಯನ್ನು ರದ್ದು ಮಾಡಿ ವಿಕೇಂದ್ರೀಕೃತ ಸರಬರಾಜು ಪದ್ಧತಿಯನ್ನು ಜಾರಿಗೊಳಿತು. ಆದರೆ ಅದೂ ಈಗಾಗಲೇ ಹಲವಾರು ಕಾನೂನು ಸಿಕ್ಕುಗಳಲ್ಲಿ ಮತ್ತು ದಾವೆಗಳಲ್ಲಿ ಸಿಲುಕಿಕೊಂಡಿದೆ.

ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಪಾಲುಗಳೆರಡನ್ನೂ ಸೇರಿಸಿದರೆ ಪ್ರತಿವರ್ಷ ಐಸಿಡಿಎಸ್ ಯೋಜನೆಯಡಿಯಪೂರಕ ಪೌಷ್ಟಿಕಾಂಶ ಯೋಜನೆಗಾಗಿ ೧೫,೦೦೦ ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತಿದೆಯೆಂದು ಅಂದಾಜು ಮಾಡಲಾಗಿದೆ. ಇದು ಬಹು ದೊಡ್ಡ ಮೊತ್ತವಾಗಿದ್ದು, ಅದರಲ್ಲಿ ಪಾಲು ಪಡೆಯಲು ಎಲ್ಲಾ ಬಗೆಯ ವಾಣಿಜ್ಯ ಹಿತಾಸಕ್ತಿಗಳು ಉತ್ಸುಕವಾಗಿರುತ್ತವೆ. ಆದರೆ ಅದೇ ಹಣವನ್ನು ಸರಬರಾಜಿನ ವಿಕೇಂದ್ರೀಕರಣಕ್ಕೂ ಉತ್ತಮವಾಗಿ ವ್ಯಯಿಸಬಹುದು. ಇದರಿಂದಾಗಿ ಸ್ಥಳೀಯ ಬೆಳೆಗಳಿಗೆ ಬೇಡಿಕೆಯೂ ಸೃಷ್ಟಿಯಾಗುತ್ತದಲ್ಲದೆ ಆಹಾರ ತಯಾರಿ ಮಾಡುವ ಮಹಿಳೆಯರಿಗೆ ಸ್ಥಳೀಯವಾಗಿ ಉದ್ಯೋಗವೂ ಸೃಷ್ಟಿಯಾಗುತ್ತದೆ. ಇದರ ಜೊತೆಗೆ ಅಂಗನವಾಡಿಯ ಮೂಲಕ ಸ್ಥಳಿಯ ಮತ್ತು ವೈವಿಧ್ಯತೆಯುಳ್ಳ ಆಹಾರವನ್ನು ಸರಬರಾಜು ಮಾಡುವುದರಿಂದ ಸಮುದಾಯವು ಅದನ್ನು ಸುಲಭವಾಗಿ ಸ್ವೀಕರಿಸುತ್ತದೆ ಮತ್ತು ಎಳೆಯ ಹಾಗೂ ಚಿಕ್ಕಮಕ್ಕಳ ಆಹಾರ ಊಡಿಕೆಯಲ್ಲೂ ಸುಧಾರಣೆ ಕಂಡುಬರುತ್ತದೆ. ಇತ್ತೀಚಿನ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸರ್ವೇ ವರದಿಯ ಪ್ರಕಾರ ಎರಡು ವರ್ಷದೊಳಗಿನ ಮಕ್ಕಳಲ್ಲಿ ಕೇವಲ ಶೇ..೬ರಷ್ಟು ಮಕ್ಕಳಿಗೆ ಮಾತ್ರ ಅಗತ್ಯವಿರುವಷ್ಟು ಆಹಾರ-ಪೌಷ್ಟಿಕಾಂಶವು ದಕ್ಕುತ್ತಿದೆ. ಹೀಗಾಗಿ ಗುಣಮಟ್ಟದ ಆಹಾರವನ್ನು ಎಟುಕುವ ರೀತಿ ಲಭ್ಯಗೊಳಿಸುವುದು, ಮಕ್ಕಳಿಗೆ ಆಹಾರ ಉಣಿಸುವುದರ ಬಗ್ಗೆ ತಿಳವಳಿಕೆ ಮತ್ತು ಅರಿವನ್ನು ಹೆಚ್ಚಿಸುವುದು, ಮತ್ತು ತಾಯ್ತನ ಹಾಗು ಮಗುವಿನ ಆರೈಕೆಗೆ ಸಂಬಂಧಪಟ್ಟಂತೆ ಲಭ್ಯವಿರುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಾಯ ಮಾಡುವುದು ಅತ್ಯಗತ್ಯವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ

ಸಂಸ್ಕರಿತ ಪ್ಯಾಕೇಜೀಕೃತ ಆಹಾರವೋ ಅಥವಾ ತಾಜಾ ಆಹಾರವೋ ಎಂಬ ವಾದಗಳಿಗೆ ಕೊನೆಹಾಡಿ ಸ್ಥಳೀಯ ಅಹಾರವನ್ನು ಆಧರಿಸಿದ ವೈವಿಧ್ಯತೆಯುಳ್ಳ ಅಹಾರಕ್ರಮದೆಡೆಗೆ ಸಾಗುವ ಸಮಯ ಬಂದಾಗಿದೆ. ಸಮುದಾಂiವೇ ಯೋಜನೆಯ ಉಸ್ತುವಾರಿ ಮಾಡುವುದಕ್ಕೆ ವಿಕೇಂದ್ರೀಕರಣವು ಸಹಾಯ ಮಾಡುತ್ತದೆ. ಮತ್ತು ತಾಯಂದಿರ ಸಮಿತಿಗಳೇ ಸರಬರಾಜಾಗುವ ಅಹಾರದ ಗುಣಮಟ್ಟದ ಮೇಲೆ ನಿಗಾ ವಹಿಸಲು ಅನುವು ಮಾಡಿಕೊಡುತ್ತದೆ. ಹೀಗಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯನ್ನು ಸ್ಥಳೀಯ ಸಮಿತಿಗಳನ್ನು ಮತ್ತಷ್ಟು ಸಬಲೀಕರಿಸುವ ರೀತಿಯಲ್ಲಿ ಮತ್ತು ಚಿಕ್ಕಮಕ್ಕಳಿಗೆ ಅಗತ್ಯವಿರುವ ಆಹಾರ-ಪೌಷ್ಟಿಕಾಂಶಗಳನ್ನು ಒದಗಿಸುವ ರೀತಿಯಲ್ಲಿ ಸಂಪೂರ್ಣವಾಗಿ ಜಾರಿ ಮಾಡುವ ಅಗತ್ಯವಿದೆ.

ಇದಲ್ಲದೆ ಐಸಿಡಿಎಸ್ ಅಡಿ ನೀಡಲಾಗುತ್ತಿದ್ದ ಪೂರಕ ಪೌಷ್ಟಿಕಾಂಶಗಳ ಯೋಜನೆಗೆ ಇನ್ನೂ ಹಲವು ಅಡ್ಡಿಗಳನ್ನುಂಟು ಮಾಡುವ ಪ್ರಯತ್ನಗಳು ನಡೆಯುತ್ತಿರುವಂತೆ ಕಂಡುಬರುತ್ತಿದೆ. ಒಂದೆಡೆ ನೀತಿ ಅಯೋಗವು ಇಡೀ ಪೂರಕ ಪೌಷ್ಟಿಕಾಂಶ ಸರಬರಾಜು ಯೋಜನೆಯನ್ನು ವಾಣಿಜ್ಯ ಹಿತಾಸಕ್ತಿಗಳೆ ಸಂಪೂರ್ಣವಾಗಿ ಲಪಟಾಯಿಸಲು ಮಾಡುತ್ತಿದ್ದ ಪ್ರಯತ್ನವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದರೂ, ಅಹಾರ ಸರಬರಾಜಿನ ಬದಲಿಗೆ ಇಡೀ ವ್ಯವಸ್ಥೆಯನ್ನು ಹಣಕಾಸು ವರ್ಗಾವಣೆ ವ್ಯವಸ್ಥೆಯಾಗಿ ಬದಲಿಸುವ ಉದ್ದೇಶವನ್ನು ಹೊಂದಿದೆ. ಇತ್ತೀಚಿನ ಪೌಷ್ಟಿಕಾಂಶ ಸಮಿತಿಯ ಸಭೆಯಲ್ಲಿ ಧಾನ್ಯ ಸರಬರಾಜಿನ ಬದಲಿಗೆ ಹಣಕಾಸು ವರ್ಗಾವಣೆ ಪದ್ಧತಿಯನ್ನು ದೇಶದ ಹತ್ತು ಜಿಲ್ಲೆಗಳಲ್ಲಿ ಶರತ್ತುಬದ್ಧವಾಗಿ ಪ್ರಯೋಗಾತ್ಮಕವಾಗಿ ಜಾರಿ ಮಾಡಲು ಅನುಮೋದನೆ ನೀಡಿದೆ. ಪ್ರಯೋಗದ ಬಗ್ಗೆ ಹಲವಾರು ಆತಂಕಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಹಲವಾರು ಕಡೆಗಳಲ್ಲಿ ಇದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಗಲೀ, ಬ್ಯಾಂಕುಗಳ ಸೌಲಭ್ಯಗಳಾಗಲೀ ಇರುವುದಿಲ್ಲ. ಆಹಾರವು ಯಾವ ಉದ್ದೇಶವನ್ನು ಈಡೇರಿಸುತ್ತಿತ್ತೋ ಅದೇ ಉದ್ದೇಶವನ್ನು ಹಣಕಾಸು ವರ್ಗಾವಣೆ ಈಡೇರಿಸುವುದಿಲ್ಲ. ಅಷ್ಟುಮಾತ್ರವಲ್ಲ. ಆಹಾರ ಭದ್ರತಾ ಕಾಯಿದೆಯ ಒಂದು ಹೊತ್ತಿನ ಕಡ್ಡಾಯ ಊಟದ ಹಕ್ಕಿನ ರೂಪದಲ್ಲಿ ಮಾತ್ರ  ಜನತೆಯ ಆಹಾರದ ಹಕ್ಕನ್ನು ಖಾತರಿಗೊಳಿಸಬೇಕೆಂದು ಕಡ್ಡಾಯ ಮಾಡುತ್ತದೆ. ಹಾಗೆ ನೋಡಿದಾಗ ಹಣಕಾಸು ವರ್ಗಾವಣೆ ಯೋಜನೆಯು ಆಹಾರ ಹಕ್ಕಿನ ಕಾಯಿದೆಯ ಉಲ್ಲಂಘನೆಯೂ ಆಗುತ್ತದೆ. ಮತ್ತು ಅಂತಿಮವಾಗಿ ಒಂದು ವೇಳೆ ಹಣಕಾಸು ವರ್ಗಾವಣೆ ಪದ್ಧತಿಯನ್ನು ಜಾರಿಗೊಳಿಸುವುದು ಅಷ್ಟೊಂದು ತುರ್ತಿನ ವಿಷಯವೇ ಆಗಿದ್ದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಲ್ಲೇ ಇರುವ ಮತ್ತೊಂದು ಅಂಶವಾದ ಮತ್ತು ಒಂದು ವರ್ಷದ ಕೆಳಗೆ ಪ್ರಧಾನ ಮಂತ್ರಿಗಳು ಘೋಷಿಸಿದ್ದ ೬೦೦೦ರೂ.ಗಳ ಸಾರ್ವತ್ರಿಕ ತಾಯ್ತನ ಸೌಲಭ್ಯವನ್ನು ಏಕೆ ಜಾರಿಗೊಳಿಸಬಾರದು?

ಕೃಪೆ: Economic and Political Weekly  ಅನು: ಶಿವಸುಂದರ್ 

                                    

               

 

Read These Next

ಜಮ್ಮು ಮತ್ತು ಕಾಶ್ಮೀರವನ್ನು ಕಳಚಿ ಹಾಕಿರುವ ನಡೆ: ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲೆ ಸರ್ವಾಧಿಕಾರಶಾಹಿ ಪ್ರಹಾರ : ಪ್ರಕಾಶ್ ಕಾರಟ್

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ವಿಲೀನಗೊಳಿಸುವ ಬಿಜೆಪಿ ಸರಕಾರದ ಕ್ರಮಕ್ಕೆ ವಿವಿಧ ಜನ ...

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಜಮ್ಮು ಮತ್ತು ಕಾಶ್ಮೀರವನ್ನು ಕಳಚಿ ಹಾಕಿರುವ ನಡೆ: ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲೆ ಸರ್ವಾಧಿಕಾರಶಾಹಿ ಪ್ರಹಾರ : ಪ್ರಕಾಶ್ ಕಾರಟ್

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ವಿಲೀನಗೊಳಿಸುವ ಬಿಜೆಪಿ ಸರಕಾರದ ಕ್ರಮಕ್ಕೆ ವಿವಿಧ ಜನ ...

ನಾಲ್ಕು ತಿಂಗಳಿಂದ ವೇತನವಿಲ್ಲದ ಶಿಕ್ಷಕರು ಕಂಗಾಲು; ಡಿಡಿಪಿಐ ಕಚೇರಿ ಮುಂದೆ ಧರಣಿ-ವೇತನ ಬಿಡುಗಡೆಗೆ ಆಗ್ರಹ

ಕೋಲಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ,ಕುಟುಂಬ ನಿರ್ವಹಣೆಗೆ ...