ಬಕ್ರೀದ್: ಇತಿಹಾಸ, ಆಚರಣೆ ಮತ್ತು ಸಂದೇಶ

Source: sonews | By Staff Correspondent | Published on 1st September 2017, 12:51 AM | National News | Global News | Special Report | Don't Miss |

* ಬಿ.ಎಸ್.ಶರ್ಫುದ್ದೀನ್, ಕುವೈತ್

ಬಕ್ರೀದ್ ಮತ್ತು ಹಜ್ ಕರ್ಮದಲ್ಲಿ ಇಡೀ ಮನುಕುಲಕ್ಕೆ ಹಲವು ಪ್ರಗತಿಪರ ಮತ್ತು ಉದಾತ್ತವಾದ ಸಂದೇಶವಿದೆ, ಎಲ್ಲಾ ಪ್ರವಾದಿಗಳು ಸಾರಿರುವ ಮತ್ತು ಎಲ್ಲಾ ಧರ್ಮಗ್ರಂಥಗಳು ಮೂಲಭೂತವಾಗಿ ಬೋಧಿಸಿರುವ ಏಕದೇವತ್ವದ ಸಂದೇಶಕ್ಕೆ ಬದ್ಧತೆ, ವಿಶ್ವ ಮಾನವತ್ವ ಮತ್ತು ಮಾನವೀಯ ಸಹೋದರತೆಯನ್ನು ಬೆಳೆಸಿಕೊಳ್ಳುವುದು, ಉನ್ನತ ಧ್ಯೇಯಗಳಿಗಾಗಿ ತ್ಯಾಗ ಬಲಿದಾನಕ್ಕೆ ಸನ್ನದ್ಧನಾಗುವುದು, ಜೀವನ ಪರ್ಯಂತ ಸದುದ್ದೇಶಕ್ಕಾಗಿ ಹೋರಾಟ ಮಾಡುವ ಕೆಚ್ಚು ಬೆಳೆಸಿಕೊಳ್ಳುವುದು ಹಾಗೂ ದೇವನ ಆದೇಶಗಳನ್ನು ಸಮರ್ಪಣಾ ಮನೋಭಾವದೊಂದಿಗೆ ಪಾಲಿಸುವುದು ಮುಂತಾದವುಗಳೇ ಈ ಹಬ್ಬದಲ್ಲಿ ಅಡಕವಾಗಿರುವ ಚಿರಂತನ ಮತ್ತು ವಿಶ್ವವ್ಯಾಪಿ ಸಂದೇಶ.

 


ಭಾರತ ಉಪಖಂಡದಲ್ಲಿ ವ್ಯಾಪಕವಾಗಿ ‘ಬಕ್ರೀದ್’ ಎಂದು ಕರೆಯಲ್ಪಡುವ ‘ತ್ಯಾಗ ಬಲಿದಾನಗಳ ಹಬ್ಬ’ ಈದುಲ್ ಅಝ್‌ಹಾ ಮತ್ತೆ ಬಂದಿದೆ. ವಿಶ್ವದಾದ್ಯಂತ ಮುಸ್ಲಿಮರು ಆಯಾ ದೇಶಗಳ ಸಂಸ್ಕೃತಿಯನ್ನು ಬೆರೆಸಿ ಸಡಗರ ಸಂಭ್ರಮದೊಂದಿಗೆ ಈ ಹಬ್ಬವನ್ನು ಆಚರಿಸುತ್ತಾರೆ. ಇಸ್ಲಾಮ್ ಪ್ರಾದೇಶಿಕ ಸಂಸ್ಕೃತಿಯ ಛಾಪು ಉಳಿಸಿಕೊಂಡಿರುವುದನ್ನು ಇತರ ಎಲ್ಲ ಆಚರಣೆಗಳಂತೆ ಬಕ್ರೀದ್‌ನಲ್ಲಿಯೂ ನಾವು ಕಾಣುತ್ತೇವೆ. ಆದ್ದರಿಂದಲೇ ಇದರ ಹೆಸರಿನಲ್ಲೂ ಪ್ರಾದೇಶಿಕ ಸಂಸ್ಕೃತಿಯ ಕಂಪು ಕಂಡುಬರುತ್ತದೆ.

ಭಾರತ ಉಪಖಂಡದಲ್ಲಿ ಇದನ್ನು ‘ಬಕರ್-ಈದ್’ ಅಥವಾ ಜಾನುವಾರುಗಳನ್ನು ಬಲಿ ಅರ್ಪಿಸುವ ಹಬ್ಬ ಎಂದು ಕರೆಯುತ್ತಾರೆ. ಅರಬ್ ದೇಶಗಳಲ್ಲಿ ‘ಈದ್ ಅಲ್ ಅಝ್‌ಹಾ’ ಅಥವಾ ತ್ಯಾಗ ಬಲಿದಾನಗಳ ಹಬ್ಬ ಎನ್ನುತ್ತಾರೆ. ಇಂಡೋನೇಶ್ಯಾ, ಮಲೇಶ್ಯಾ ಮುಂತಾದ ‘ಮಲೆ’ ಸಮುದಾಯ ಹೆಚ್ಚಾಗಿರುವ ಪ್ರದೇಶಗಳಲ್ಲಿ ‘ಹರಿರಾಯ ಹಾಜಿ’ ಅಥವಾ ‘ಹರಿರಾಯ ಕೊರ್ಬಾನ್’ ಎಂದು ಕರೆಯುತ್ತಾರೆ. ‘ಹರಿರಾಯ’ ಎಂದರೆ ಸಂಭ್ರಮದ ದಿನ. ಅಂದರೆ ಹಜ್‌ನೊಂದಿಗೆ ಸಂಬಂಧ ಹೊಂದಿರುವ ಸಂಭ್ರಮದ ದಿನ ಅಥವಾ ಪ್ರಾಣಿ ಬಲಿಯರ್ಪಿಸುವ ಸಂಭ್ರಮದ ದಿನ ಎಂದು ಅವರು ಈ ಹಬ್ಬವನ್ನು ಕರೆಯುತ್ತಾರೆ. ಆದರೆ ಹಬ್ಬದ ಮೂಲಭೂತ ಆಚರಣೆಗಳು ವಿಶ್ವದಾದ್ಯಂತ ಸಮಾನವಾಗಿರುತ್ತವೆ.

ಹಬ್ಬದ ಆಚರಣೆಗಳು:
ಈದುಲ್ ಅಝ್‌ಹಾದ ದಿನ ಲೋಕದಾದ್ಯಂತ ಮುಸ್ಲಿಮರು ಮಾಡುವ ಕೆಲವು ಸಮಾನ ಆಚರಣೆಗಳಾವು ದೆಂದರೆ, ಪ್ರಭಾತದ ವೇಳೆ ಮಾಡುವ ‘ನಮಾಝ್’ ಅಥವಾ ‘ಹೆಚ್ಚುವರಿ ಪ್ರಾರ್ಥನೆ’, ತಕ್ಬೀರ್ ಎಂದು ಕರೆಯ ಲ್ಪಡುವ ‘ಪ್ರಕೀರ್ತನೆ’, ಜಾನುವಾರು ಬಲಿ ನೀಡಿ ಅದರ ಮಾಂಸದ ವಿತರಣೆ, ಹೊಸ ಉಡುಗೆ, ಹಬ್ಬದೂಟ ಮುಂತಾದ ಸಂಭ್ರಮಗಳ ಆಚರಣೆ, ಬಂಧು ಬಳಗ ಹಾಗೂ ಮಿತ್ರರೊಡನೆ ಸಂಬಂಧ ಸ್ಥಾಪನೆ- ಇತ್ಯಾದಿಗಳು.

ಹಬ್ಬದ ಪ್ರಾಮುಖ್ಯತೆ:
ಭಾರತ ದೇಶ ಹಬ್ಬಗಳ ದೇಶ. ಭಾರತದಲ್ಲಿರುವಷ್ಟು ಧರ್ಮಗಳು, ಆಚರಣೆಗಳು, ಸಾಂಸ್ಕೃತಿಕ ವೈವಿಧ್ಯ ಪ್ರಾಯಶಃ ಜಗತ್ತಿನಲ್ಲಿ ಎಲ್ಲೂ ಇರಲಿಕ್ಕಿಲ್ಲ. ಅದೇ ರೀತಿಯಲ್ಲಿ ವಿವಿಧ ಹಬ್ಬಗಳು ಈ ದೇಶದ ಸಾಮಾಜಿಕ,ಆರ್ಥಿಕ ಜೀವನದ ಮೇಲೆ ಅತ್ಯಂತ ಆಳವಾದ ಪ್ರಭಾವವನ್ನು ಬೀರಿದೆ. ಬದುಕಿನ ನೀರಸತೆಯನ್ನು ಹೊಡೆದೋಡಿಸಿ ಜನ ಜೀವನದಲ್ಲಿ ಹುರುಪು ಮತ್ತು ಉತ್ಸಾಹವನ್ನು ತುಂಬಿದೆ. ಇತರೆಲ್ಲ ಹಬ್ಬಗಳಂತೆ ಬಕ್ರೀದ್ ಕೂಡಾ ಭಾರತೀಯ ಸಮಾಜದಲ್ಲಿ ಎಲ್ಲೆಡೆಯೂ ಹೊಸ ಸಂಚಲನವನ್ನು ಮೂಡಿಸುತ್ತದೆ. ಹಲವು ಕೋಟಿಯ ಸಂಖ್ಯೆಯಲ್ಲಿರುವ ಮುಸ್ಲಿಮರ ನವಪೀಳಿಗೆ ಹೊಸ ಬಟ್ಟೆ, ಹಬ್ಬದುಡುಗೊರೆ, ಇತ್ಯಾದಿಗಳನ್ನು ಪಡೆದ ಸಂತೋಷದಲ್ಲಿ ಬೀಗುತ್ತಾರೆ. ಇದು ಎಳೆಯ ಪೀಳಿಗೆಯಲ್ಲಿ ನವೋತ್ಸಾಹವನ್ನು ತುಂಬುತ್ತದೆ ಮತ್ತು ಜೀವನದ ಬಗ್ಗೆ ಸಕಾರಾತ್ಮಕ ಧೋರಣೆಯನ್ನು ತಳೆದು ಸಂತೋಷಮಯ, ಸೌಹಾರ್ದಯುತ ಜೀವನ ಸಾಗಿಸಲು ಅವರನ್ನು ಹುರಿದುಂಬಿಸುತ್ತದೆ.

ಎಷ್ಟೋ ಮಂದಿ ಬಡವರು ಹಬ್ಬದ ಸಂದರ್ಭದಲ್ಲಿ ವಿತರಿಸಲ್ಪಡುವ ಮಾಂಸ, ಹಣ ಇತ್ಯಾದಿಗಳಿಂದ ಪ್ರಯೋಜನ ಪಡೆಯುತ್ತಾರೆ. ಇದರಿಂದ ಉಳ್ಳವರ ಮತ್ತು ಇಲ್ಲದವರ ನಡುವೆ ನಂಬಿಕೆಯ, ವಿಶ್ವಾಸದ ಸೌಹಾರ್ದಮಯ ಸಂಬಂಧ ಮೂಡಲು ಸಾಧ್ಯವಾಗುತ್ತದೆ. ಹಬ್ಬದ ಹಿನ್ನೆಲೆಯಲ್ಲಿ ನಡೆಯುವ ವಿವಿಧ ಧರ್ಮೀಯರ ನಡುವಿನ ಶುಭಾಶಯಗಳ ವಿನಿಮಯ ಮತ್ತು ಸೌಹಾರ್ದಯುತ ಸಮಾಗಮ ನಮ್ಮ ಸಾಮಾಜಿಕ ನಂಟನ್ನು ಭದ್ರಪಡಿಸುತ್ತದೆ. ಹಬ್ಬದ ಸೀಸನ್ ಹಲವು ರೀತಿಯ ವ್ಯಾಪಾರಗಳಿಗೆ ಚುರುಕು ಮುಟ್ಟಿಸಿ ಕೋಟಿಗಟ್ಟಲೆ ರೂಪಾಯಿಗಳ ವಿನಿಮಯ ನಡೆದು ಆರ್ಥಿಕತೆಯ ಮೇಲೂ ಅತ್ಯುತ್ತಮವಾದ ಸಕಾರಾತ್ಮಕ ಪರಿಣಾಮ ಬೀರುತ್ತವೆ.

ಪೂರ್ವ ಪ್ರವಾದಿ ಇಬ್ರಾಹೀಮ್ (ಅ) ಅವರ ಸ್ಮರಣೆ:
ಈದುಲ್ ಅಝ್‌ಹಾವನ್ನು ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹೀಮ್ (ಅ)ರ (ಅ ಅಂದರೆ ಅಲೈಹಿಸ್ಸಲಾಮ್ ಅರ್ಥಾತ್ ಅವರ ಮೇಲೆ ಶಾಂತಿ ಇರಲಿ) ತ್ಯಾಗ ಬಲಿದಾನಗಳ ನೆನಪಿನಲ್ಲಿ ಆಚರಿಸಲಾಗುತ್ತದೆ. ಅಂದರೆ ಅವರು ಪ್ರವಾದಿ ಮುಹಮ್ಮದ್ (ಸ) (ಸ ಅಂದರೆ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಅರ್ಥಾತ್ ಪ್ರವಾದಿ ಮುಹಮ್ಮದರ ಮೇಲೆ ಸ್ವಸ್ತಿ ವಚನಗಳಿರಲಿ)ರಿಗಿಂತಲೂ ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ ಪ್ರವಾದಿ. ಇವರಿಗೂ ಇಸ್ಲಾಮಿಗೂ ಯಾವ ನಂಟು ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಇಸ್ಲಾಮಿನ ಪ್ರಕಾರ ಮೊದಲ ಮಾನವ ಮತ್ತು ಮೊದಲ ಪ್ರವಾದಿಯಾಗಿದ್ದ ಆದಮ್ (ಅ)ರಿಂದ ಕೊನೆಯ ಪ್ರವಾದಿಯಾದ ಮುಹಮ್ಮದ್‌ರವರ ತನಕ ಎಲ್ಲರೂ ಒಂದೇ ಸಂದೇಶವನ್ನು ಸಾರಿದರು.

ಏಕ ದೇವತ್ವ, ಏಕ ಮಾನವಕುಲ ಮತ್ತು ಜೀವನದ ಎಲ್ಲಾ ರಂಗಗಳಲ್ಲಿ ದೇವನ ಆದೇಶಗಳ ಅನುಕರಣೆಯೇ ಈ ಎಲ್ಲಾ ಪ್ರವಾದಿಗಳು ಸಾರಿದ ಸಂದೇಶ. ಪ್ರವಾದಿ ಇಬ್ರಾಹೀಮ್ (ಅ)ರು ಸುಮಾರು ಮಧ್ಯಕಾಲದಲ್ಲಿ ಹುಟ್ಟಿದ ಪ್ರವಾದಿ. ಅವರಿಗೂ ಪ್ರವಾದಿ ಮುಹಮ್ಮದ್(ಸ)ಅವರಿಗೂ ಇರುವ ಮತ್ತೊಂದು ಪ್ರಮುಖ ಸಂಬಂಧವೇನೆಂದರೆ ಅವರು ಪ್ರವಾದಿ ಮುಹಮ್ಮದ್(ಸ)ರ ವಂಶದವರೇ ಆದ ಪೂರ್ವಪಿತನಾಗಿದ್ದರು. ಪ್ರವಾದಿ ಇಬ್ರಾಹೀಮ್‌ರಿಗೆ ಇಬ್ಬರು ಪುತ್ರರಿದ್ದರು. ಒಬ್ಬರ ಹೆಸರು ಇಸ್ಮಾಯೀಲ್ (ಅ), ಕಿರಿಯ ಮಗನ ಹೆಸರು ಇಸ್ಹಾಕ್ (ಅ). ಪ್ರವಾದಿ ಇಬ್ರಾಹೀಮ್‌ರ ನಂತರ ಇಸ್ಹಾಕ್‌ರ ಸಂತಾನದಲ್ಲಿ ಪ್ರವಾದಿತ್ವ ಮುಂದುವರಿಯಿತು.

ಉದಾಹರಣೆಗೆ ಪ್ರವಾದಿ ಮೂಸಾ (ಅ) ಮತ್ತು ಆನಂತರ ಬಂದ ಪ್ರವಾದಿ ಏಸುಕ್ರಿಸ್ತ (ಅ)ರು ಇಸ್ಹಾಕ್(ಅ)ರ ಸಂತತಿಯಲ್ಲಿ ಹುಟ್ಟಿದ ಪ್ರವಾದಿಗಳು. ಏಸುಕ್ರಿಸ್ತರು ಪ್ರವಾದಿ ಇಸ್ಹಾಕ್(ಅ)ರ ಸಂತತಿಯಲ್ಲಿ ಹುಟ್ಟಿದ ಕೊನೆಯ ಪ್ರವಾದಿ. ಆನಂತರ ಅಗ್ರಜರಾದ ಪ್ರವಾದಿ ಇಸ್ಮಾಯೀಲ್‌ರು ನೆಲೆಯೂರಿದ್ದ ಮಕ್ಕಾಪಟ್ಟಣದಲ್ಲಿ ಅವರ ಸಂತತಿಯಲ್ಲಿಯೇ ಕೊನೆಯ ಪ್ರವಾದಿಯಾಗಿ ಮುಹಮ್ಮದ್ (ಸ)ರು ನಿಯುಕ್ತರಾದರು. ಇದುವೇ ಪ್ರವಾದಿ ಮುಹಮ್ಮದ್ (ಸ) ಮತ್ತು ಪ್ರವಾದಿ ಇಬ್ರಾಹೀಮ್(ಅ) ಅವರಿಗಿರುವ ಸಂಬಂಧ.

ಕುರ್‌ಆನ್‌ನಲ್ಲಿ ಪ್ರವಾದಿ ಇಬ್ರಾಹೀಮ್‌ರನ್ನು ಅನುಸರಿಸುವಂತೆ ಪ್ರವಾದಿ ಮುಹಮ್ಮದ್ (ಸ)ರಿಗೂ ಆದೇಶಿಸಲಾಗಿದೆ. ಅಂತೆಯೇ ಮುಸ್ಲಿಮ್ ಸಮುದಾಯಕ್ಕೂ ನಿರ್ದೇಶನ ಕೊಡಲಾಗಿದೆ. ಉದಾಹರಣೆಗೆ ಕುರ್‌ಆನ್ ಒಂದೆಡೆ ಹೀಗೆ ಹೇಳುತ್ತದೆ. ‘‘ಅನಂತರ ನಾವು, ಏಕಾಗ್ರಚಿತ್ತರಾಗಿ ಇಬ್ರಾಹೀಮ್ (ಅ)ರ ಪಥವನ್ನು ಅನುಸರಿಸುವಂತೆ, ನಿಮ್ಮೆಡೆಗೆ ದೇವವಾಣಿ ಕಳುಹಿಸಿದ್ದೇವೆ. ಅವರು (ಪ್ರವಾದಿ ಇಬ್ರಾಹೀಮ್‌ರು) ಬಹುದೇವ ವಿಶ್ವಾಸಿಗಳ ಕೂಟಕ್ಕೆ ಸೇರಿದವರಾಗಿರಲಿಲ್ಲ. (ಕುರ್‌ಆನ್ 16:123 )’’ ಅದೇ ರೀತಿ ಮುಸ್ಲಿಮ್ ಸಮುದಾಯದ ಸಂಬಂಧವನ್ನೂ ಪ್ರವಾದಿ ಇಬ್ರಾಹೀಮ್ (ಅ)ರೊಂದಿಗೆ ಜೋಡಿಸುತ್ತಾ ಕುರ್‌ಆನ್ ಹೀಗೆ ಹೇಳುತ್ತದೆ. ‘‘ನಿಮ್ಮ ಪಿತಾಮಹರಾದ ಇಬ್ರಾಹೀಮ್ (ಅ)ರ ಸಮುದಾಯದಲ್ಲಿ ಸ್ಥಿರವಾಗಿರಿ. ಅಲ್ಲಾಹನು ಮೊದಲು ನಿಮಗೆ ‘ಮುಸ್ಲಿಮ್’ (ಅರಬ್ಬಿ ಭಾಷೆಯಲ್ಲಿ ‘ಮುಸ್ಲಿಮ್’ ಎಂದರೆ ಅನುಸರಣಶೀಲ ಅಥವಾ ಶರಣ ಎಂದರ್ಥ) ಈ ಕುರ್‌ಆನ್‌ನಲ್ಲೂ ನಿಮ್ಮ ಹೆಸರು ಅದುವೇ ಆಗಿದೆ. ( ಕುರ್‌ಆನ್ 22:78)’’

ಜಾನುವಾರು ಬಲಿ ಯಾಕೆ?: ಇನ್ನು ಹಬ್ಬದಂದು ಜಾನುವಾರನ್ನು ಯಾಕೆ ಬಲಿಯರ್ಪಿಸಲಾಗುತ್ತದೆ ಎಂಬ ಕುತೂಹಲವೂ ಕೆಲವರಲ್ಲಿರಬಹುದು. ಆರ್ಥಿಕ ಸುಸ್ಥಿರತೆ ಇರುವ ಪ್ರತಿಯೊಬ್ಬರೂ ಹಬ್ಬದಂದು ಜಾನುವಾರು ಬಲಿಯರ್ಪಿಸಿ ಅದರ ಮಾಂಸವನ್ನು ನೆಂಟರಿಷ್ಟರಲ್ಲಿ, ಬಡ ಬಗ್ಗರಲ್ಲಿ ವಿತರಿಸಬೇಕೆಂದು ಇಸ್ಲಾಮ್ ಆದೇಶಿಸುತ್ತದೆ. ಮೂರನೆ ಒಂದಂಶ ಮಾಂಸವನ್ನು ಸ್ವಂತಕ್ಕೂ ಇಟ್ಟುಕೊಳ್ಳಬಹುದು, ಇದನ್ನು ಪ್ರವಾದಿ ಇಬ್ರಾಹೀಮ್ (ಅ) ರ ಜೀವನದಲ್ಲಿ ನಡೆದ ಮಹಾ ಘಟನೆಯೊಂದರ ನೆನಪಿನಲ್ಲಿ ಆಚರಿಸಲಾಗುತ್ತದೆ. ಪ್ರವಾದಿ ಇಬ್ರಾಹೀಮ್(ಅ) ರನ್ನು ಲೋಕನಾಯಕನಾಗಿ ನೇಮಿಸುವ ಮೊದಲು ಅಲ್ಲಾಹನು ಅವರನ್ನು ಹಲವು ರೀತಿಯಲ್ಲಿ ಪರೀಕ್ಷಿಸುತ್ತಾನೆ. ಅವರ ಕುಟುಂಬವನ್ನು ಮಕ್ಕಾ ಪಟ್ಟಣದ ಮರುಭೂಮಿಯಲ್ಲಿ ಬಿಟ್ಟು ಬರಲು ದೇವಾದೇಶವಾಗುತ್ತದೆ. ಇದಕ್ಕೆ ಇಬ್ರಾಹೀಮ್ (ಅ) ಮತ್ತವರ ಪತ್ನಿ ಹಾಜಿರಾ (ರ) ಸನ್ನದ್ಧರಾಗುತ್ತಾರೆ.

ಮರುಭೂಮಿಯಲ್ಲಿದ್ದ ಹಾಜಿರಾ(ರ) ತನ್ನ ಚಿಕ್ಕ ಕಂದ ಇಸ್ಮಾಯೀಲ್(ರ)ರು ಹಸಿವೆಯಿಂದ ಅಳ ತೊಡಗಿದಾಗ ಅನ್ನ -ನೀರಿನ ಹುಡುಕಾಟದಲ್ಲಿ ಹತ್ತಿರದಲ್ಲಿದ್ದ ಸಫಾ ಮತ್ತು ಮರ್ವಾ ಬೆಟ್ಟಗಳ ನಡುವೆ ಓಡುತ್ತಾರೆ. ಅದೇ ಸಂದರ್ಭದಲ್ಲಿ ಈ ಬೆಟ್ಟಗಳ ನಡುವೆ ನೀರಿನ ಚಿಲುಮೆಯೊಂದು ಹರಿಯ ತೊಡಗುತ್ತದೆ. ಆ ಚಿಲುಮೆಯೇ ‘ಝಮ್‌ಝಮ್’ ಎಂಬ ನೀರಿನ ಬಾವಿ. ನಾಲ್ಕೂ ಕಡೆಗಳಿಂದ ಕಲ್ಲುಗಳಿಂದ ಆವೃತ್ತವಾದ ಈ ಬೆಟ್ಟ ಪ್ರದೇಶದ ನಡುವೆ ಎಷ್ಟು ತೆಗೆದರೂ ಮುಗಿಯದಷ್ಟು ಅತ್ಯಂತ ಶುದ್ಧವಾದ ನೀರನ್ನು ಒದಗಿಸುವ ಈ ‘ಝಮ್ ಝಮ್’ ಕೊಳ ಕಳೆದ ನಾಲ್ಕು ಸಾವಿರ ವರ್ಷಗಳಿಂದ ಯಾತ್ರಿಗಳಿಗೆ ಯಥೇಚ್ಛ ನೀರನ್ನು ಒದಗಿಸುತ್ತಾ ಬಂದಿದೆ. ಈ ಸಣ್ಣ ಕಂದ ಬಾಲಕನಾಗಿ ಬೆಳೆದಾಗ ವಯೋವೃದ್ಧರಾದ ಇಬ್ರಾಹೀಮ್ (ಅ)ರಿಗೆ ಪುತ್ರನೊಂದಿಗೆ ಅತ್ಯಂತ ವಾತ್ಸಲ್ಯಮಯವಾದ ಸಂಬಂಧ ಬೆಳೆಯುತ್ತದೆ.

ಜೀವನದ ಈ ಹಂತದಲ್ಲಿ ಆಗಲೇ ಇಬ್ರಾಹೀಮ್ (ಅ) ಹಲವು ಪರೀಕ್ಷೆಗಳನ್ನು ದೇವನ ಮೂಲಕ ಎದುರಿಸಿದ್ದರು. ಬಹುದೇವಾರಾಧಕರ ಸಮಾಜ ಮತ್ತು ಮನೆತನದಲ್ಲಿ ಹುಟ್ಟಿ ಏಕದೇವತ್ವದ ಬಗ್ಗೆ ಮಾತನಾಡುವುದನ್ನು ಅವರ ಮನೆಯವರು, ಸಮಾಜ ಮತ್ತು ಆ ಕಾಲದ ರಾಜ ದೊಡ್ಡ ಬಂಡಾಯವೆಂದು ಭಾವಿಸಿದರು. ಆ ಕಾರಣಕ್ಕಾಗಿ ಅವರನ್ನು ಮನೆಯಿಂದ ಹೊರಹಾಕಲಾಯಿತು. ಅಗ್ನಿ ಕುಂಡಕ್ಕೆ ಎಸೆಯಲಾಯಿತು. ಆದರೆ ಅಗ್ನಿಕುಂಡದಿಂದ ಅವರು ಪವಾಡ ಸದೃಶವಾಗಿ ಪಾರಾಗಿ ಬಂದರು. ಕೊನೆಗೆ ನಾಡಿನಿಂದಲೇ ಅವರನ್ನು ಗಡಿಪಾರು ಮಾಡಲಾಯಿತು. ತಮ್ಮ ಹುಟ್ಟೂರಾದ ಇರಾಕ್ ಅನ್ನು ಬಿಟ್ಟು ಅವರು ಈಜಿಪ್ಟ್, ಸಿರಿಯಾ ಮುಂತಾದ ದೇಶಗಳಲ್ಲಿ ಸಂಚರಿಸಿದರು. ಆದರೆ ಬಹುದೇವಾರಾಧನೆ ಮತ್ತು ಮೂರ್ತಿಪೂಜೆ ವ್ಯಾಪಕವಾಗಿದ್ದ ಆ ಕಾಲದಲ್ಲಿ ಏಕದೇವತ್ವದ ಬಗ್ಗೆ ಮಾತನಾಡುವುದು ಸಹಿಸಲಾಗದ ಬಂಡಾಯವೆಂದು ಪರಿಗಣಿಸಲ್ಪಡುತ್ತಿತ್ತು.

ಕೊನೆಗೆ ಅವರು ಈ ಏಕದೇವತ್ವದ ಸಂದೇಶ ಹೊತ್ತು ಇಂದಿನ ಸೌದಿ ಅರೇಬಿಯಾದ ಮಕ್ಕಾ ಪಟ್ಟಣಕ್ಕೆ ಬಂದರು. ತನ್ನ ಪುತ್ರ ಇಸ್ಮಾಯೀಲ್ (ಅ)ರ ಜತೆ ಬಹಳ ನಿರೀಕ್ಷೆಗಳನ್ನಿಟ್ಟುಕೊಂಡು ಅವರು ಈ ಕಾರ್ಯವನ್ನು ಮುಂದುವರಿಸ ಬಯಸಿದ್ದರು. ಅದೇ ಸಂದರ್ಭದಲ್ಲಿ ದೇವನು ಅವರನ್ನು ಕೊನೆಯ ಕಠಿಣ ಪರೀಕ್ಷೆಯೊಂದರ ಮೂಲಕ ಪರೀಕ್ಷಿಸಬಯಸಿದ್ದನು.
ಅಂತೆಯೇ ಪುತ್ರನನ್ನೇ ದೇವನ ಮಾರ್ಗದಲ್ಲಿ ಬಲಿಯರ್ಪಿಸಲು ಆದೇಶವಾಯಿತು. ಈ ಪರೀಕ್ಷೆಯನ್ನು ಎದುರಿಸಲು ತಂದೆ ಮಗ ಇಬ್ಬರೂ ಹೃತ್ಪೂರ್ವಕವಾಗಿ ಸನ್ನದ್ಧರಾದರು.

ಇಬ್ರಾಹೀಮ್ (ಅ) ತನ್ನ ಪುತ್ರ ಇಸ್ಮಾಯೀಲ್(ಅ)ರನ್ನು ಮಲಗಿಸಿ ಅವರ ಕತ್ತಿನ ಮೇಲೆ ಕತ್ತಿ ಚಲಾಯಿಸಿದರು. ಅದೇ ಸಂದರ್ಭದಲ್ಲಿ ದಿವ್ಯವಾಣಿಯೊಂದು ಮೊಳಗಿತು. ‘‘ನಿಲ್ಲಿಸಿ, ನೀವು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದೀರಿ’’. ಆನಂತರ ಒಂದು ಟಗರನ್ನು ಬಲಿಯರ್ಪಿಸಲಿಕ್ಕಾಗಿ ಅವರಿಗೆ ನೀಡಲಾಯಿತು. ಪ್ರವಾದಿ ಇಬ್ರಾಹೀಮ್(ಅ) ಎದುರಿಸಿದ ಪರೀಕ್ಷೆಗಳ ಪೈಕಿ ಇದು ಕೊನೆಯ ಪರೀಕ್ಷೆಯಾಗಿತ್ತು. ಆನಂತರ ಅವರಿಗೆ ವಿಶ್ವ ನಾಯಕತ್ವದ ಪಟ್ಟ ನೀಡಲಾಯಿತು. ಇದನ್ನು ಪವಿತ್ರ ಕುರ್‌ಆನ್ ಹೀಗೆ ವಿವರಿಸುತ್ತದೆ, ‘‘ಇಬ್ರಾಹೀಮ್ (ಅ) ರನ್ನು ಅವರ ಪ್ರಭು ಕೆಲವು ವಿಷಯಗಳಲ್ಲಿ ಪರೀಕ್ಷಿಸಿದ ಸಂದರ್ಭವನ್ನು ಸ್ಮರಿಸಿರಿ, ಅವರು ಅವುಗಳಲ್ಲೆಲ್ಲಾ ಸಫಲರಾದರು.’’ ಆಗ ಅಲ್ಲಾಹನು ‘‘ನಾನು ನಿಮ್ಮನ್ನೂ ಸರ್ವಜನರ ನಾಯಕನನ್ನಾಗಿ ಮಾಡುವವನಿದ್ದೇನೆ’’ ಎಂದರು( ಕುರ್‌ಆನ್ 2:124).

ಪ್ರವಾದಿ ಇಬ್ರಾಹೀಮ್(ಅ)ರ ಈ ತ್ಯಾಗವನ್ನು ನೆನಪಿಸಿ ಉನ್ನತ ಧ್ಯೇಯಗಳಿಗಾಗಿ ಸಮರ್ಪಣಾ ಮನೋಭಾವ ಮತ್ತು ತ್ಯಾಗ ಸನ್ನಡತೆ ಬೆಳೆಸಿಕೊಳ್ಳುವ ಸಂಕಲ್ಪವನ್ನು ಸಜೀವಗೊಳಿಸಲಿಕ್ಕಾಗಿ ಇಂದಿಗೂ ಹಬ್ಬದಂದು, ಅಥವಾ ಹಬ್ಬದ ದಿನದ ನಂತರ ಮೂರುದಿನಗಳ ಅವಧಿಯಲ್ಲಿ ಮುಸ್ಲಿಮರು ಜಾನುವಾರು ಬಲಿ ಅರ್ಪಿಸುತ್ತಾರೆ. ಪರೋಕ್ಷವಾಗಿ ಇದರಿಂದ ಬಡಬಗ್ಗರಿಗೂ ಹಬ್ಬದೂಟದ ಸವಿ ಉಣ್ಣುವ ಅವಕಾಶ ಎಲ್ಲೆಡೆಯೂ ದೊರೆಯುತ್ತದೆ. ಜಾನುವಾರು ಬಲಿಯ ಉದ್ದೇಶ ರಕ್ತ ಮಾಂಸವನ್ನು ದೇವನಿಗೆ ಅರ್ಪಿಸುವುದಲ್ಲ, ಅದು ತ್ಯಾಗ ಸನ್ನಡತೆಯ ಸಂಕೇತ ಮಾತ್ರ. ಕುರ್‌ಆನ್ ಹೇಳುವಂತೆ, ‘‘ಜಾನುವಾರಿನ ಮಾಂಸವಾಗಲಿ, ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ, ಆದರೆ ಅವನಿಗೆ ನಿಮ್ಮ ಧರ್ಮನಿಷ್ಠೆ ತಲುಪುತ್ತದೆ ’’ (ಕುರ್‌ಆನ್ 22 : 37)

ಲೋಕದಾದ್ಯಂತ ಮುಸ್ಲಿಮರು ಬಕ್ರೀದ್ ಆಚರಿಸುತ್ತಿರುವ ಸಂದರ್ಭದಲ್ಲೇ ಹಜ್ ಯಾತ್ರೆಗೆ ಹೋಗಿರುವ ಯಾತ್ರಿಕರು ಹಜ್‌ಕರ್ಮ ನಿಭಾಯಿಸುತ್ತಾರೆ. ಅಲ್ಲಿಯೂ ಪ್ರವಾದಿ ಇಬ್ರಾಹೀಮ್‌ರ ವಿವಿಧ ಚರ್ಯೆಗಳನ್ನು ಮೆಲುಕು ಹಾಕಲಾಗುತ್ತದೆ.

ಹಬ್ಬದ ಸಂದೇಶ:
ಒಟ್ಟಿನಲ್ಲಿ ಬಕ್ರೀದ್ ಮತ್ತು ಹಜ್ ಕರ್ಮದಲ್ಲಿ ಇಡೀ ಮನುಕುಲಕ್ಕೆ ಹಲವು ಪ್ರಗತಿಪರ ಮತ್ತು ಉದಾತ್ತವಾದ ಸಂದೇಶವಿದೆ, ಎಲ್ಲಾ ಪ್ರವಾದಿ ಗಳು ಸಾರಿರುವ ಮತ್ತು ಎಲ್ಲಾ ಧರ್ಮಗ್ರಂಥಗಳು ಮೂಲಭೂತವಾಗಿ ಬೋಧಿಸಿರುವ ಏಕದೇವತ್ವದ ಸಂದೇಶಕ್ಕೆ ಬದ್ಧತೆ, ವಿಶ್ವ ಮಾನವತ್ವ ಮತ್ತು ಮಾನವೀಯ ಸಹೋದರತೆಯನ್ನು ಬೆಳೆಸಿಕೊಳ್ಳುವುದು, ಉನ್ನತ ಧ್ಯೇಯಗಳಿಗಾಗಿ ತ್ಯಾಗ ಬಲಿದಾನಕ್ಕೆ ಸನ್ನದ್ಧನಾಗುವುದು, ಜೀವನ ಪರ್ಯಂತ ಸದುದ್ದೇಶಕ್ಕಾಗಿ ಹೋರಾಟ ಮಾಡುವ ಕೆಚ್ಚು ಬೆಳೆಸಿಕೊಳ್ಳುವುದು ಹಾಗೂ ದೇವನ ಆದೇಶಗಳನ್ನು ಸಮರ್ಪಣಾ ಮನೋಭಾವದೊಂದಿಗೆ ಪಾಲಿಸುವುದು ಮುಂತಾದವುಗಳೇ ಈ ಹಬ್ಬದಲ್ಲಿ ಅಡಕವಾಗಿರುವ ಚಿರಂತನ ಮತ್ತು ವಿಶ್ವವ್ಯಾಪಿ ಸಂದೇಶ.

ಕೃಪೆ: ವಾರ್ತಾಭಾರತಿ

Read These Next

ಕೇರಳದ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಕಲ್ಲೆಸೆತ:ಬದಿಯಡ್ಕ ಪೊಲೀಸರಿಂದ  ಆರು ಮಂದಿ ವಿರುದ್ಧ ಕೇಸು ದಾಖಲು

ಕೇರಳದ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಕಲ್ಲೆಸೆತ:ಬದಿಯಡ್ಕ ಪೊಲೀಸರಿಂದ  ಆರು ಮಂದಿ ವಿರುದ್ಧ ಕೇಸು ದಾಖಲು

ಮೋದಿ ಸಂಪುಟದಲ್ಲಿ ರಾಜ್ಯಕ್ಕೆ ಮೂವರು ಸಚಿವ ಖಾತೆ, ಜೋಷಿ, ಡಿವಿಎಸ್, ಸುರೇಶ್ ಅಂಗಡಿಗೆ ಖಾತೆ ಹಂಚಿಕೆ

ಪ್ರಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ  ಸಚಿವ ಸಂಪುಟದ ಖಾತೆ ಹಂಚಿಕೆ ತೀರ್ಮಾನವಾಗಿದ್ದು ರಾಜ್ಯದ ಮೂವರು ...

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...