ಕೈ ಬಿಟ್ಟ ಉತ್ತರಕನ್ನಡದಲ್ಲಿ ತೆನೆ ಹೊತ್ತು ಜಯ ಕಾಣಬಹುದೇ?

Source: Vasanth Devadiga/S O News Service | Published on 19th March 2019, 3:07 PM | Coastal News | State News | Special Report |

ಭಟ್ಕಳ: ಉತ್ತರಕನ್ನಡ ಕಾಂಗ್ರೆಸ್ ಮುಖಂಡರು ಸದ್ಯ ವೇಷಭೂಷಣವಿಲ್ಲದ ಪಾತ್ರಧಾರಿಗಳಂತೆ ಗೋಚರಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆಗೆ ಒಂದೆರಡು ದಿನ ಬಾಕಿ ಇರುವಾಗಲೂ ತಮಗೂ ಚುನಾವಣೆಗೂ ಸಂಬಂಧ ಇಲ್ಲದಂತೆ ಅವರವರ ಪಾಲಿಗೆ ಮೂರು ಗುಂಪುಗಳಾಗಿ ಓಡಾಡಿಕೊಂಡಿದ್ದ ಕಾಂಗ್ರೆಸ್ ನಾಯಕರು, ಇದೀಗ ಎದ್ದು ಬಿದ್ದು ಓಡಾಡುತ್ತಿರುವುದನ್ನು ಕಂಡರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಸಂಘಟನೆ ಯಾವ ಮಟ್ಟವನ್ನು ತಲುಪಿತ್ತು ಎಂದು ಅರ್ಥೈಸಿಕೊಳ್ಳಬಹುದು. ಅದರ ಪ್ರತಿಫಲವಾಗಿಯೇ ಕೈ ಮನೆಯಲ್ಲಿ ತೆನೆ ಹೊತ್ತವರಿಗೆ ಜಾಗ ನೀಡುವ ಪ್ರಸ್ತಾವನೆ ಚಲಾವಣೆಗೆ ಬಂದಿದೆ.

ಕಳೆದ 2 ದಶಕಗಳಲ್ಲಿ ಉತ್ತರಕನ್ನಡದ ಕಾಂಗ್ರೆಸ್‍ನಲ್ಲಿ ಸಚಿವ ಆರ್.ವಿ.ದೇಶಪಾಂಡೆಯವರದ್ದೇ ರಾಜ್ಯಭಾರ! ಯಾವ ವಿಧಾನಸಭಾ ಕ್ಷೇತ್ರದಲ್ಲಿ ಯಾವಾಗ, ಯಾರನ್ನು ಶಾಸಕರನ್ನಾಗಿ ಮಾಡಬೇಕು ಎನ್ನುವುದನ್ನು ನಿರ್ಧರಿಸುವವರಿಗೆ ದೇಶಪಾಂಡೆ ಇಲ್ಲಿಯವರೆಗೂ ತನ್ನ ಖದರನ್ನು ಉಳಿಸಿಕೊಂಡು ಬಂದಿದ್ದರು! ಪಕ್ಷದ ಕಾರ್ಯಕ್ಕೂ ದೇಣಿಗೆ ಸಂಗ್ರಹಿಸಿ ನೀಡುವಲ್ಲಿ ಸೈ ಎನ್ನಿಸಿಕೊಂಡು ಇತ್ತ ಪಕ್ಷದ ಹೈಕಮಾಂಡ ಮಟ್ಟದಲ್ಲಿಯೂ ನಾಯಕರುಗಳಿಂದ ನಮಸ್ಕಾರವನ್ನು ಪಡೆಯುತ್ತಿದ್ದರು. ಪರಿಣಾಮವಾಗಿ ಹೈಕಮಾಂಡ ಮಟ್ಟದಲ್ಲಿ ಪ್ರಭಾವಿಯಾಗಿದ್ದರೂ ಮಾರ್ಗರೇಟ್ ಆಳ್ವಾರಂತವರೂ ದೇಶಪಾಂಡೆಯವರ ಮುಂದೆ ಕಮಕ್‍ಕಿಮಕ್ ಎನ್ನಲು ಸಾಧ್ಯವಾಗಲಿಲ್ಲ. ಇವೆಲ್ಲ ಆಟಗಳನ್ನು ನೋಡಿಕೊಳ್ಳುತ್ತಲೇ ಶರಾವತಿ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ದೇಶಪಾಂಡೆಯವರಿಗೂ ವಯಸ್ಸಾಗುತ್ತ ಬಂದಿದೆ. ಅವರು ಸ್ಪರ್ಧಿಸುವ ಹಳಿಯಾಳ ಕ್ಷೇತ್ರದಲ್ಲಿಯೇ ಅವರ ವಿರುದ್ಧ ಪಕ್ಷದೊಳಗೆ ಪ್ರತಿಸ್ಪರ್ಧಿಗಳು ತಲೆ ಎತ್ತಿ ನಿಲ್ಲಲು ಹವಣಿಸುತ್ತಿದ್ದಾರೆ. ಅದರಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿಯೂ ದೇಶಪಾಂಡೆಯವರಿಗೆ ಹುಜೂರ್ ಎನ್ನುತ್ತಲೇ ಕಾಲ ಕಾಲಕ್ಕೆ ನಮಗೆಲ್ಲ ಚೆಳ್ಳೆಹಣ್ಣು ತಿನ್ನಿಸುವ ದೇಶಪಾಂಡೆಯವರನ್ನು ಕಾಲ ನೋಡಿಕೊಂಡು ಧಿಕ್ಕರಿಸಿ ಮುನ್ನಡೆಯುವ ಉತ್ಸಾಹ ಅವರ ಬೆಂಬಲಿಗರೆನ್ನಿಸಿಕೊಳ್ಳುವ ನಾಯಕರಲ್ಲಿಯೂ ಬಂದು ಬಿಟ್ಟಿದೆ. ಇವೆಲ್ಲ ಒಳ ರಾಜಕೀಯದ ಫಲವಾಗಿ ದೇಶಪಾಂಡೆ ಎಲ್ಲರೊಂದಿಗಿದ್ದೂ ಏಕಾಂಗಿಯಾಗಿ ಹೋಗಿದ್ದಾರೆ! ಅದಕ್ಕಾಗಿಯೇ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದರೂ ದೇಶಪಾಂಡೆ ಚುನಾವಣೆಯ ಉಸಾಬರಿಯಿಂದ ದೂರ ಇರಲು ಮನಸ್ಸು ಮಾಡಿದ್ದರಾ? ಉತ್ತರ ಸ್ಪಷ್ಟ ಇಲ್ಲ. ಸಾಲದೆಂಬಂತೆ ಉತ್ತರಕನ್ನಡದ ರಾಜಕೀಯ ಹಿಡಿತಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ನುಗ್ಗಿ ಬರುವ ಉತ್ಸಾಹ ತೋರಿದಾಗ ದೇಶಪಾಂಡೆ ಇನ್ನಷ್ಟು ಕನಲಿ ಹೋಗಿದ್ದರು ಎನ್ನುವುದನ್ನು ನೋಡಲು ದುರ್ಬೀನು ಬೇಕಿಲ್ಲ. ಇವೆಲ್ಲದರ ಕಿರಿಕಿರಿಯಿಂದಾಗಿ ದೇಶಪಾಂಡೆ ಜೆಡಿಎಸ್‍ಗೆ ಟಿಕೇಟ್ ಬಿಟ್ಟು ಕೊಡುವ ಮನಸ್ಸು ಮಾಡಿದ್ದರು ಎನ್ನುತ್ತವೆ ಮೂಲಗಳು. ಇದಕ್ಕೆ ಪುಷ್ಠಿ ನೀಡುವಂತೆ ಜೆಡಿಎಸ್ ಮುಖಂಡ ವಾಯ್.ಎಸ್.ವಿ. ದತ್ತರಂತವರು, ಉತ್ತರಕನ್ನಡ ಕಾಂಗ್ರೆಸ್ಸಿಗೇ ಬೇಕು ಎಂದು ದೇಶಪಾಂಡೆ ಹಠ ಹಿಡಿದು ಕುಳಿತರೆ ನಾವೇನೂ ಮಾಡಲಾಗುತ್ತಿರಲಿಲ್ಲ ಎಂದಿದ್ದಾರೆ. ಅಲ್ಲಿಗೆ ಜಿಲ್ಲೆಯ ಕಾಂಗ್ರೆಸ್ ಕಥೆ ಎಂತವರಿಗಾದರೂ ಅರ್ಥವಾದೀತು.

ಬಿಡಿ, ದೇಶಪಾಂಡೆ ಈಗ ಕಾಂಗ್ರೆಸ್‍ಗೆ ಉತ್ತರಕನ್ನಡ ಬೇಕು ಎನ್ನುತ್ತಿದ್ದಾರಲ್ಲ, ಯಾರಿಗೆ ಟಿಕೇಟ್ ಕೊಡಿಸುವ ಆಸಕ್ತಿಯಲ್ಲಿದ್ದಾರೆ ಎಂದು ಭಾವಿಸೋಣ? ಸದ್ಯ ಅವರ ಸುತ್ತಮುತ್ತ ಕೇಳಿ ಬರುತ್ತಿರುವ ಹೆಸರು ಭೀಮಣ್ಣ ನಾಯ್ಕ, ಎಸ್.ಎಲ್.ಘೋಟ್ನೇಕರ್ !? ಬಿಜೆಪಿಯ ಅಭ್ಯರ್ಥಿ ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾಡುವ ಮಾತನಾಡಿದಾಗ, ಅಂದಿನ ಮುಖ್ಯಮಂತ್ರಿಗಳಿಗೆ ಬೂಟ್ ನೆಕ್ಕು ಎಂದಾಗ, ಡಾಕ್ಟರ್‍ಗೆ ಹೊಡೆದಾಗ..... ಒಂದೇ ಎರಡೇ... ಏನೆಲ್ಲ ಹೇಳಿದರೂ ಒಂದೇ ಒಂದು ಗಟ್ಟಿಯಾದ ಪ್ರತಿಭಟನೆ, ಹೋರಾಟಕ್ಕೆ ಅಣಿಯಾಗದ ಜಿಲ್ಲಾ ಕಾಂಗ್ರೆಸ್, ಅದರ ಅಡಿಯಲ್ಲಿರುವ ಬ್ಲಾಕ್ ಕಾಂಗ್ರೆಸ್‍ಗಳೆಲ್ಲ ಇದೀಗ ಸುನಿಲ್ ಹೆಗಡೆ ದೇಶಪಾಂಡೆಯವರಿಗೆ ಕಮಿಷನ್ ಪಾಂಡೆ ಎಂದಾಗ ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದವರಂತೆ ಪ್ರತಿಭಟನೆಯ ಮಾತನಾಡುತ್ತಿವೆಯಲ್ಲ, ಇದರ ನೇತೃತ್ವ ವಹಿಸುವ ಭೀಮಣ್ಣ ನಾಯ್ಕರಿಗೆ ಟಿಕೇಟ್ ಕೊಟ್ಟರೆ ಜನರ ಮುಂದೆ ಏನನ್ನು ಹೇಳಿಕೊಂಡು ಬಿಜೆಪಿಯನ್ನು ಮಣಿಸಬಹುದು? ಇನ್ನು ಘೋಟ್ನೇಕರ್ ಯಾಕೆ, ಏನು ಎನ್ನುವುದನ್ನು ಬಾಯಿ ಬಿಟ್ಟು ಹೇಳಬೇಕಾದ ಅಗತ್ಯ ಇಲ್ಲ. ಜಿಲ್ಲೆಯ ಈ ಎಲ್ಲ ಆಟವನ್ನು ಕಂಡು ಕಂಡು ಬೇಸತ್ತಿರುವ ಸಿದ್ದರಾಮಯ್ಯನಂತಹ ನಾಯಕರು, ಸಾಕಪ್ಪ ಉತ್ತರಕನ್ನಡ ಕಾಂಗ್ರೆಸ್ ಸಹವಾಸ, ಆ ಜೆಡಿಎಸ್‍ಗೆ ಒಂದು ಅವಕಾಶ ಕೊಟ್ಟು ನೋಡೋಣ ಎಂದು ಬಿಟ್ಟರೆ? ವಿಷಯ ಸತ್ಯವಾಗಿರಲೂ ಬಹುದು.

ಇನ್ನು ಪ್ರಶ್ನೆ ಇರುವುದು ಕೈ ಬಿಟ್ಟ ಉತ್ತರಕನ್ನಡದಲ್ಲಿ ತೆನೆ ಹೊತ್ತು ಜಯ ಕಾಣಬಹುದೇ? ಎನ್ನುವುದು. ಅನಂತಕುಮಾರ ವಿರುದ್ಧ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಆನಂದ ಆಸ್ನೋಟಿಕರ್ ಗೆಲುವು ಕಾಣುತ್ತಾರೋ, ಇಲ್ಲವೋ, ಆದರೆ ಚುನಾವಣೆಯುದ್ಧಕ್ಕೂ ಅನಂತಕುಮಾರ್‍ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಅನಂತಕುಮಾರ ಹೆಗಡೆಯವರನ್ನು ಆಸ್ನೋಟಿಕರ್ ಬೈದಾಡಿ ತಡವಿಕೊಳ್ಳುವುದು ಮಾತ್ರ ನಿಶ್ಚಿತ. ( ಅದನ್ನು ಈಗಾಗಲೇ ಅನಂತ ಸುರುವಿಟ್ಟುಕೊಂಡಿದ್ದಾರೆ!) ಜಿಲ್ಲೆಯಲ್ಲಿ ಮತ್ತೊಂದು ಕೂಗು ಮಾರಿ ಎಂದು ನೀವು ಅಂದುಕೊಂಡರೂ ನಾವೇನೂ ಹೇಳಲು ಸಾಧ್ಯವಿಲ್ಲ. ಹಿಂದೊಮ್ಮೆ ಬಿಜೆಪಿಗೆ ಹೋಗಿ ಬಂದು ಸೈದ್ಧಾಂತಿಕವಾಗಿ ಆನಂದ ಸಡಿಲವಾಗಿದ್ದರೂ, ಇದೀಗ ಅನಂತ ವಿರುದ್ಧ ಸ್ಪರ್ಧಿಸಿ ಜಿಲ್ಲೆಯಲ್ಲಿ ಅನಂತರನ್ನು ಸೈದ್ಧಾಂತಿಕವಾಗಿ ವಿರೋಧಿಸುವವರನ್ನು ಒಟ್ಟುಗೂಡಿಸುವ ಪ್ರಯತ್ನವಂತೂ ಮಾಡುತ್ತಾರೆ ಎನ್ನುವ ಮಾತುಗಳಿವೆ. ಇದು ಮುಂದೊಂದು ದಿನ ಕಾಂಗ್ರೆಸ್ಸಿಗೂ ನೆರವಾಗಬಹುದು. ಈ ನಡುವೆ ಆಸ್ನೋಟಿಕರ್‍ರನ್ನು ಮುಂದೆ ಕುಳ್ಳಿರಿಸಿಕೊಂಡು ಪ್ರಚಾರಕ್ಕೆ ಹೋಗಲು ಒಲ್ಲದ ದೇಶಪಾಂಡೆ ( ಆನಂದರೊಂದಿಗೆ ದೇಶಪಾಂಡೆ ಸಂಬಂಧ ಹಳಸಿ ಅದಾಗಲೇ 7-8 ವರ್ಷ ಕಳೆದು ಹೋಗಿದೆ!) ಉತ್ತರಕನ್ನಡವನ್ನು ನಮಗೆ ಕೊಡಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಆದರೆ ಅವರ ದನಿಯಲ್ಲಿ ಮೊದಲಿನ ಗಡಸುತ ಇಲ್ಲ. ಆದರೆ ಮಾರ್ಗರೇಟ್ ಆಳ್ವಾ ಎದ್ದು ಕುಳಿತಿದ್ದಾರೆ ಎಂಬ ಮಾಹಿತಿ ಇದೆ. ಕಾಂಗ್ರೆಸ್‍ಗೆ ಏನಾದರೂ ಲಾಭ ಆಗುವುದಾದರೆ ಅದು ಆಳ್ವಾರ ಹಳೆಯ ಓಡಾಟದ ದಾರಿಯಿಂದ ಮಾತ್ರ. ನಾಳೆ ಮಂಗಳವಾರ ಬೆಳಕು ಹರಿಯುವುದರೊಳಗೆ ಇದೂ ಇತ್ಯರ್ಥವಾಗಿ ಹೋಗುತ್ತದೆ! 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...