ದುಬೈ: ಸಮಾನ ನಾಗರಿಕ ಸಂಹಿತೆ: ಕಾನೂನು ಆಯೋಗದ ಕ್ರಮಕ್ಕೆ ಕೆಸಿಎಫ್ ಖಂಡನೆ

Source: kcf | By Arshad Koppa | Published on 25th October 2016, 8:14 AM | Gulf News |

ದುಬೈ, ಅ ೨೪: ಏಕ ರೂಪ ನಾಗರಿಕ ಸಂಹಿತೆ ಎಂಬ ನೂತನ ಕಾನೂನನ್ನು ಜಾರಿಗೆ ತರಲು ಕೇಂದ್ರ ಕಾನೂನು ಆಯೋಗ ಹೊರಡಿಸಿರುವ ಸಮೀಕ್ಷಾ ಕ್ರಮ ಸಂವಿಧಾನ ವಿರುದ್ಧ ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಣ್ಣಿಸಿದೆ. ಈ ಬಗ್ಗೆ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯು ದುಬೈಯ PEARL CREEK HOTEL ನಲ್ಲಿ ಹಮ್ಮಿಕೊಂಡ “ತಲಾಕ್ ಹಾಗೂ ಏಕರೂಪ ನಾಗರಿಕ ಸಂಹಿತೆ ಚರ್ಚಾಗೋಷ್ಠಿ” ಯಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ನಾಯಕರು ಹಾಗೂ ಸಮಾಜದ ವಿವಿಧ ಕ್ಷೇತ್ರದ ಪ್ರಮುಖರು ಒಕ್ಕೊರಳಿನಿಂದ ಖಂಡಿಸಿದರು.


ವಿವಿಧತೆಯಲ್ಲಿ ಏಕತೆಯನ್ನು ಸಾರುವ ಪ್ರಜಾಪ್ರಭುತ್ವ ಜಾತ್ಯಾತೀತ ರಾಷ್ಟ್ರ ಭಾರತದ ಸಂವಿಧಾನ ನಾಚುವಂಥಹ ಕಾಯಕಕ್ಕೆ ಕೇಂದ್ರ ಸರ್ಕಾರ ಕೈ ಹಾಕಿರುವುದು ಖಂಡನೀಯ ಹಾಗೂ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದು ಎಸ್ಎಸ್ಎಫ್ ರಾಜ್ಯಾಧ್ಯಕ್ಷ ಮೌಲಾನಾ ಎನ್ ಕೆ ಎಂ ಶಾಫಿ ಸಅದಿ ಚರ್ಚಾಗೋಷ್ಠಿಯಲ್ಲಿ ವಿಷಯ ಮಂಡಿಸಿ ಮಾತನಾಡಿದರು.


ಭಾರತದ ಸಂವಿಧಾನವನ್ನು ಮನ ಬಂದಂತೆ ತಿರುಚಲು ಯತ್ನಿಸುತ್ತಿರುವ ನಿಗೂಢ ಶಕ್ತಿಗಳ ಷಡ್ಯಂತ್ರ ವಿಷಾದನೀಯ ಹಾಗೂ ಖಂಡನೀಯ. ಯಾವುದೇ ಧರ್ಮದ ಧಾರ್ಮಿಕ ವಿಷಯಗಳಿಗೆ ಕೇಂದ್ರ ಸರ್ಕಾರ ಮೂಗು ತೂರಿಸುವುದು ಸಂವಿಧಾನ ವಿರುದ್ಧವಾಗಿದೆ. ತ್ರಿವಳಿ ತಲಾಕ್, ಬಹು ಪತ್ನಿತ್ವ ಮೊದಲಾದ ಧಾರ್ಮಿಕ ವಿಷಯಗಳಲ್ಲಿ ಈ ಹಿಂದಿನ ನಿಲುವನ್ನೇ ಕಾಪಾಡಿಕೊಂಡು ಬರಲು ಸರ್ಕಾರಕ್ಕೆ ಅವರು ಸೂಚಿಸಿದರು. ಸುಪ್ರೀಂ ಕೋರ್ಟಿನಲ್ಲಿ ಮೋದಿ ಸರ್ಕಾರವು ಅಫಿದಾವಿತ್ ಸಲ್ಲಿಸಿರುವುದು ಅನಾವಶ್ಯಕ ಗಲಭೆಗಳಿಗೆ ಹೇತು ಎಂದು ಅವರು ನುಡಿದರು.
ಇಸ್ಲಾಮಿನ ಬಗ್ಗೆ ಮೂಲಭೂತ ಅರಿವಿಲ್ಲದೆ ಇಸ್ಲಾಮಿನ ಧಾರ್ಮಿಕ ವಿಷಯಗಳಿಗೆ ಮೂಗು ತೂರಿಸಿ ದೇಶಾದ್ಯಂತ ಕೋಲಾಹಲ ಸೃಷ್ಟಿಸುವುದು ಕೇಂದ್ರ ಸರ್ಕಾರಕ್ಕೆ ಅಪಮಾನ. ಭಾರತದಲ್ಲಿ ಪ್ರತಿಯೊಂದು ಧರ್ಮಗಳಿಗೂ ಆಯಾ ಧರ್ಮಗಳ ಆಚಾರ ವಿಚಾರಗಳನ್ನು ಧರ್ಮಾನುಸಾರ ಆಚರಿಸಲು ಭಾರತದ ಲಿಖಿತ ಸಂವಿಧಾನವು ಅನುಮೋದನೆ ನೀಡಿರುವಾಗ ಸಂವಿಧಾನವನ್ನು ತಿರುಚುವ ಕಾಯಕಕ್ಕೆ ಕೇಂದ್ರ ಸರ್ಕಾರ ಮುಂದಾದರೆ ಭಾರತದ ನಿಷ್ಪಕ್ಷ ಪ್ರಜೆಗಳ ಕ್ರೋಧಕ್ಕೆ ಸರಕಾರ ಬಲಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದು ವಿಚಾರಗೋಷ್ಠಿಯನ್ನು ಉದ್ಘಾಟಿಸುತ್ತಾ ಕೆಸಿಎಫ್ ಐ ಎನ್ ಸಿ ಪ್ರಧಾನ ಕಾರ್ಯದರ್ಶಿ ಹಾಜಿ ಶೇಖ್ ಭಾವ ಮಂಗಳೂರು ನುಡಿದರು.
ಕೇಂದ್ರ ಸರಕಾರದ ಏಕ ರೂಪ ನಾಗರಿಕ ಸಂಹಿತೆಯನ್ನು ಪ್ರತಿ ಪ್ರಜೆಯು ನಖಶಿಖಾಂತ ವಿರೋಧಿಸಬೇಕು ಮಾತ್ರವಲ್ಲ ಮತೀಯ ಸಂಘರ್ಷಕ್ಕೆ ಎಡೆಮಾಡಿಕೊಡುವ ಪ್ರಸ್ತುತ ಆದೇಶವು ದೇಶದ ಅಭಿವೃದ್ಧಿಗೆ ಮಾರಕ ಎಂದು ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಕೆಸಿಎಫ್ ಯುಎಇ ನಾಲೆಜ್ ಡಿವಿಷನ್ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ನುಡಿದರು.
ಚರ್ಚಾವೇಳೆ ಬ್ಯಾರೀಸ್ ವೆಲ್ಫೇರ್ ಅಸೋಶಿಯೇಷನ್ ದುಬೈ ಉಪಾಧ್ಯಕ್ಷ ಎಂ ಇ ಮೂಳೂರು, ಅಲ್ ಖಾದಿಸ ದುಬೈ ಸಮಿತಿಯ ಅಧ್ಯಕ್ಷ ಬಶೀರ್ ಬೊಳುವಾರ್, ರಫೀಕ್ ಮುಲ್ಕಿ, ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ಉಪಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಮೊದಲಾದವರು ಪಾಲ್ಗೊಂಡಿದ್ದರು.
ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ಝೈತ್ ಸ್ವಾಗತಿಸಿ, ಕೆಸಿಎಫ್ ದುಬೈ ಝೋನ್ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಕಾರ್ಯಕ್ರಮ ನಿರೂಪಿಸಿ, ಕೆಸಿಎಫ್ ಯುಎಇ ಸಾಂತ್ವನ ಸಮಿತಿ ಕನ್ವೀನರ್ ಇಕ್ಬಾಲ್ ಕಾಜೂರು ಧನ್ಯವಾದವಿತ್ತರು.

Read These Next