ಭಟ್ಕಳ ತಾಲೂಕು ಆಸ್ಪತ್ರೆ ಸಮಸ್ಯೆಗೆ ಸ್ಪಂಧಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ ಕುಮಾರ್

Source: sonews | By Staff Correspondent | Published on 10th January 2019, 11:21 PM | Coastal News | Don't Miss |

•    ತಕ್ಷಣವೇ ಎಲ್ಲ ವ್ಯವಸ್ಥೆ ಮಾಡುವ ಭರವಸೆ

ಭಟ್ಕಳ: ತಾಲೂಕಾ ಆಸ್ಪತ್ರೆಯ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಶೋಕ ಕುಮಾರ್ ಭರವಸೆಯನ್ನು ನೀಡಿದರು. 

ಅವರು ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರ ಕೋರಿಕೆಯ ಮೇರೆಗೆ ಭಟ್ಕಳ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ ನಾಗರೀಕರು ಹಾಗೂ ವೈದ್ಯರುಗಳೊಂದಿಗೆ ಮಾತನಾಡುತ್ತಿದ್ದರು. 

ಪ್ರಥಮವಾಗಿ ಆಸ್ಪತ್ರೆಯಲ್ಲಿ ತುರ್ತು ಅಗತ್ಯವಿರುವ ಡಿ ಗ್ರೂಪ್ ನೌಕರರನ್ನು ಓಟ್ ಸೋರ್ಸನಲ್ಲಿ ತೆಗೆದುಕೊಳ್ಳುವಂತೆ ಹಾಗೂ ಆ ಕುರಿತು ತಕ್ಷಣ ಪತ್ರ ಬರೆಯುವಂತೆ ತಿಳಿಸಿದ ಅವರು ಒಟ್ಟೂ 29 ಜನರನ್ನು ತೆಗೆದುಕೊಳ್ಳಲು ಅವಕಾಶವಿದ್ದು ಮಂಜೂರಿ ನೀಡುವುದಾಗಿಯೂ ತಿಳಿಸಿದರು. ಅಗತ್ಯವಿರುವ ಸ್ಟಾಫ್ ನರ್ಸಗಳನ್ನು ತಕ್ಷಣ ಮಂಜೂರಿ ನೀಡುವ ಬಗ್ಗೆ ಹೇಳಿದ ಅವರು ಒಟ್ಟಾರೆ 21 ಜನ ಸ್ಟಾಫ್ ನರ್ಸಗಳ ಮಂಜೂರಿಯಿದ್ದು ಕೇವಲ 13 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಓರ್ವರು ಹೆಚ್ಚಿನ ವಿದ್ಯಾಭ್ಯಾಸದ ಕುರಿತು ಹೋಗಿದ್ದಾರೆ ಎಂದರು. ಎರಡು ಜನರು ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತುರ್ತು ಅಗತ್ಯವಿರುವ ಎರಡು ಸ್ಟಾಫ್ ನರ್ಸಗಳನ್ನು ಎರಡು ಮೂರು ದಿನಗಳಲ್ಲಿ ಬೇರೆಡೆಯಿಂದ ಕಳಿಸುತ್ತೇನೆ. ಐ.ಸಿ.ಯು. ಭಟ್ಕಳದಲ್ಲಿ ಆರಂಭ ಮಾಡಲಾಗಿದೆ. ಆದರೆ ಇಲ್ಲಿಗೆ ಎರಡು ನರ್ಸಗಳ ಅಗತ್ಯವಿದೆ ಎಂದು ಜನರು ಹೇಳಿದಾಗ ಅಗತ್ಯವಿರುವ ಎರಡು ತರಬೇತಿ ಪಡೆದ ನರ್ಸಗಳನ್ನು ತಕ್ಷಣ ಕಳಿಸುವ ಕುರಿತು ಭರವಸೆ ನೀಡಿದರು. ಎನ್.ಆರ್.ಎಚ್.ಎಮ್. ಸ್ಟಾಫ್ ನರ್ಸಗಳಿಗೆ ಮೂರು ತಿಂಗಳಿನಿಂದ ಸಂಬಳ ಇಲ್ಲ ಎಂದು ಹೇಳಿದಾಗ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. 

ತಾಲೂಕಾ ಆಸ್ಪತ್ರೆ ಅಭಿವೃದ್ಧಿಗೆ ಎಲ್ಲಾ ಸಂಘ ಸಂಸ್ಥೆಗಳು ಸಹಕಾರ ನೀಡಲು ಸಿದ್ಧ ಎಂದು ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಭರವಸೆ ನೀಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ಡಿ.ಎಚ್.ಓ. ತಾಲೂಕಾ ಆಸ್ಪತ್ರೆಯ ಅಭಿವೃದ್ಧಿಯಾಗಬೇಕಾಗಿರುವುದು ನಿಜ.  ಆದರೆ ಜಿಲ್ಲೆಯ ಎಲ್ಲಾ ಆಸ್ಪತ್ರಗಳನ್ನು ನೊಡಿದಾಗ ಇಲ್ಲಿಯೇ ಕಡಿಮೆ ಪೇಶೆಂಟ್ ಇರುವುದು ಕಂಡು ಬರುತ್ತದೆ. ಎಲ್ಲಾ ವೈದ್ಯರು, ಸಿಬ್ಬಂದಿಗಳು ಉತ್ತಮವಾಗಿ ಸ್ಪಂಧಿಸುವಂತಾಗಬೇಕು ಎಂದರು. ಭಟ್ಕಳಕ್ಕೆ ಒಂದು ಹೆಚ್ಚುವರಿ ಡಯಾಲಿಸಿಸ್ ಯಂತ್ರವನ್ನು ಸಧ್ಯದಲ್ಲಿಯೇ ನೀಡಲಾಗುವುದು. ಇಲ್ಲಿಗೆ ಅಗತ್ಯವಿರುವ ಮಕ್ಕಳ ತಜ್ಞರು, ಸರ್ಜನ್ ವೈದ್ಯರು ಯಾರೇ ಇದ್ದರೂ ತಿಳಿಸಿ ಅವರನ್ನು ಗುತ್ತಿಗೆ ಆಧಾರದ ಮೇಲೆ ತಕ್ಷಣ ನೇಮಕ ಮಾಡಿಕೊಳ್ಳುವೆ ಎಂದ ಅವರು ಚರ್ಮರೋಗ ತಜ್ಞರು, ಲೇಡಿ ಗೈಜಾಕಾಲಜಿಸ್ಟ್ ಕುರಿತು ಸರಕಾರಕ್ಕೆ ಬರೆಯುವುದಾಗಿ ತಿಳಿಸಿದರು.

ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಡಾ. ಸತೀಶ್, ಡಾ. ಲಕ್ಷ್ಮೀಶ, ಡಾ. ಜನಾರ್ಧನ, ಡಾ. ಕಮಲಾ ಮುಂತಾದವರು ಉಪಸ್ಥಿತರಿದ್ದರು.  
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ಮಜ್ಲಿಸೆ ಇಸ್ಲಾಹ-ವ-ತಂಝೀಮ್ ಪ್ರಧಾನ  ಕಾರ್ಯದರ್ಶಿ ಅಲ್ತಾಫ್ ಖರೂರಿ, ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಕನ್ನಡ ಸಂಘಟನೆಯ ಸುಧಾಕರ ನಾಯ್ಕ, ವೆಂಕಟೇಶ ನಾಯ್ಕ, ಟಾಪ್ ಎಮರ್ಜನ್ಸಿಯ ನಿಸಾರ್ ಅಹಮ್ಮದ್ ರುಕ್ನುದ್ದೀನ್, ಅಬ್ದುಲ್ ಸಮಿ ಕೋಲಾ, ನಜೀರ್ ಅಹಮ್ಮದ್ ಕಾಶಿಮಜಿ, ನಾರಾಯಣ ಬಿ. ನಾಯ್ಕ ಮುಂಡಳ್ಳಿ ಮುಂತಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. 

Read These Next