ಮಳೆಗಾಲದಿಂದ ಮುರುಡೇಶ್ವರದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ

Source: S.O. News Service | By Mohammed Ismail | Published on 30th May 2018, 6:43 PM | Coastal News | Special Report | Don't Miss |

ಭಟ್ಕಳ: ಮಳೆಗಾಲ ಆರಂಭವಾಗಿದೆ. ಕಡಲು ಉಕ್ಕೇರಲಾರಂಭಿಸಿದ್ದು, ತೀರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದೆ. ಸಾವಿರಾರು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮುರುಡೇಶ್ವರ ಕಡಲತೀರ ಇದೀಗ ಬಿಕೋ ಎನ್ನುತ್ತಿದೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮುರುಡೇಶ್ವರದ ಕೊಡುಗೆ ದೊಡ್ಡದಿದೆ.

ಶಿವನ ಮೇಲಿನ ಭಕ್ತಿ ಮಾತ್ರವಲ್ಲ, ಕಡಲ ಕಿನಾರೆಗೆ ಮೈಯೊಡ್ಡಿ ಸಂಭ್ರಮಿಸುವ ಪ್ರವಾಸಿಗರು ಸಹಸ್ರಾರು ಸಂಖ್ಯೆಯಲ್ಲಿ ಇದ್ದಾರೆ.

ಏನಿಲ್ಲವೆಂದರೂ ಪ್ರವಾಸಿಗರ ಆಗಮನದ ದಿನದ ಸರಾಸರಿ 30-35 ಸಾವಿರ! ಇತ್ತೀಚಿನ ದಿನಗಳಲ್ಲಿ ಮುರುಡೇಶ್ವರವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವೇ ಹೆಚ್ಚಿನ ಆಸಕ್ತಿಯನ್ನು ತೋರಿದೆ. ಈ ಪ್ರವಾಸಿಗರನ್ನು ಅವಲಂಬಿಸಿಕೊಂಡು ದುಡಿಮೆಯಲ್ಲಿ ತೊಡಗಿಸಿಕೊಂಡವರು ನೂರಾರು ಮಂದಿ.

ಸಮುದ್ರ ಕಿನಾರೆಯ ಗೂಡಾ ಅಂಗಡಿಗಳು, ಕಂಡ ಕಂಡಲ್ಲಿ ತಲೆ ಎತ್ತಿ ನಿಂತಿರುವ ವಸತಿಗೃಹಗಳು ಪ್ರವಾಸೋದ್ಯಮದ ವಿಸ್ತಾರದ ಕಥೆಯನ್ನು ಬಿಚ್ಚಿಡುತ್ತವೆ. ಸಮುದ್ರ ತೀರದ ಮೋಜಿನ ಆಟ ಕೇವಲ ಆಟವಾಗಿ ಉಳಿದಿಲ್ಲ. ಅದು ಕೋಟಿ ಮೀರಿದ ಸಂಪಾದನೆಯನ್ನು ಒಳಗೊಂಡಿರುವ ಉದ್ಯಮ.

ಸಂಕ್ಷಿಪ್ತವಾಗಿ ಹೇಳಬಹುದಾದರೆ ಇಡೀ ಮುರುಡೇಶ್ವರ ಪ್ರವಾಸೋದ್ಯಮದ ಕಾರಣಕ್ಕೆ ಉಸಿರಾಡುತ್ತಿದೆ! ಮುರುಡೇಶ್ವರ ಇಂದು ಮುರುಡೇಶ್ವರವಾಗಿ ವಿಶ್ವ ಪ್ರಸಿದ್ಧಿಯನ್ನು ಪಡೆಯಲು ಇದೇ ಪ್ರವಾಸೋದ್ಯಮವೇ ಕಾರಣ

. ಆದರೆ ಮಳೆಗಾಲ ಎನ್ನುವುದು ಮುರುಡೇಶ್ವರದ ಜನರಿಗೆ ಒಂದು ರೀತಿಯಲ್ಲಿ ರಜೆಯ ಕಾಲ. ಮಳೆ ಬೀಳುತ್ತಿದ್ದಂತೆಯೇ ಪ್ರವಾಸಿಗರ ಸಂಖ್ಯೆ ಧುತ್ತೆಂದು 2-3 ಸಾವಿರಕ್ಕೆ ಇಳಿದು ಬಿಟ್ಟಿದೆ. ಪ್ರವಾಸಿಗರಿಗೆ ಮುದ ನೀಡುತ್ತಿದ್ದ ಮೋಜಿನ ಬೋಟುಗಳು ದಡ ಸೇರಿವೆ.

ಅಲ್ಲೀಗ ಗೂಡಾಅಂಗಡಿಗಳ ಬಾಗಿಲುಗಳು ಹೋಗಲೋ, ಬೇಡವೋ ಎಂಬಂತೆ ತೆರೆ ತೆರದು ಮುಚ್ಚಿಕೊಳ್ಳಲಾರಂಭಿಸಿವೆ. ಬೀದಿ ವ್ಯಾಪಾರಿಗಳಿಗೆ ಮಳೆಗಾಲ ರಜೆಯ ಕಾಲವಲ್ಲ.

ಒಂದು ರೀತಿಯಲ್ಲಿ ಸಜೆಯ ಕಾಲ! ಅಲ್ಲಿಯೇ ಇನ್ನೊಂದು ಮಗ್ಗುಲಿನಲ್ಲಿ ನಡೆಯುತ್ತಿದ್ದ ಮೀನುಗಾರಿಕಾ ಚಟುವಟಿಕೆಗಳಿಗೂ ಬಿಡುವು ಸಿಕ್ಕಿದೆ. ಒಟ್ಟಿನಲ್ಲಿ ಮುರುಡೇಶ್ವರದ ವ್ಯಾಪಾರ ವಹಿವಾಟು ಮಳೆಗಾಲದಿಂದಾಗಿ ಅಷ್ಟರಮಟ್ಟಿಗೆ ಸ್ತಬ್ದಗೊಂಡಿದೆ!

ಕಣ್ಮರೆಯಾಗದ ಕಡಲ ಭಯ: ಮಳೆಗಾಲ ಆರಂಭವಾಗಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡರೂ ಕಡಲ ಭಯ ಇನ್ನೂ ಕಣ್ಮರೆಯಾಗಿಲ್ಲ. ತೆರೆಗಳ ಅಬ್ಬರ ತೀರವಾಸಿಗಳಲ್ಲಿ ಎದೆಯಲ್ಲಿ ಬಿಸಿ ನೀರು ಚೆಲ್ಲುತ್ತಲೇ ಇರುತ್ತದೆ! ಇದೂ ಸಾಲದೆಂಬಂತೆ ಮಳೆಗಾಲದಲ್ಲಿಯೇ ಮುರುಡೇಶ್ವರವನ್ನು ಕಾಣಲು ಕೆಲವು ಪ್ರವಾಸಿಗರು ನೀರಿಗೆ ಇಳಿಯುತ್ತಲೇ ಇರುತ್ತಾರೆ. ಅವರನ್ನು ನೀರಿಗಿಳಿಯದಂತೆ ತಡೆಯುವ ಕೆಲಸ ಮಾತ್ರ ತೀರದಲ್ಲಿ ಹಾಗೆಯೇ ಉಳಿದುಕೊಂಡಿದೆ

ಕಳೆದ 2 ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ವ್ಯಾಪಾರ ವಹಿವಾಟು ಎಂದಿನಂತಿಲ್ಲ. ಆದರೆ ಮಳೆಗಾಲ ಎಂದು ನಾಔಉ ಸುಮ್ಮನೆ ಕುಳಿತುಕೊಳ್ಳುವ ಹಾಗಿಲ್ಲ. ಮಳೆಗಾಲದಲ್ಲಿಯೂ ಕೆಲವು ಪ್ರವಾಸಿಗರು ಇಲ್ಲಿಗೆ ಬಂದು ನೀರಿಗೆ ಇಳಿಯಲು ಮುಂದಾಗುತ್ತಾರೆ. ಆ ಬಗ್ಗೆ ನಾವು ಎಚ್ಚರದಿಂದ ಇದ್ದೇವೆ.
                                 - ನರಸಿಂಹ ಮೊಗೇರ, ಮುರುಡೇಶ್ವರ ಬೀಚ್ ಸೂಪರ್‍ವೈಸರ್

Read These Next

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...