ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಅಧ್ಯಕ್ಷ ಸಂಜೀವ ಪೂಜಾರಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

Source: sonews | By Staff Correspondent | Published on 11th May 2018, 5:49 PM | Coastal News | Don't Miss |

ಬಂಟ್ವಾಳ: ಬಂಟ್ವಾಳ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ, ರೈ ಆಪ್ತ ಹಾಗೂ ಬಿಲ್ಲವ ಮುಖಂಡ ಸಂಜೀವ ಪೂಜಾರಿ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮೆಲ್ಕಾರ್ ಸಮೀಪದ ಮಾರ್ನಬೈಲ್ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. 

 

ಇಲ್ಲಿನ ಮೆಲ್ಕಾರ್ ಸಮೀಪದ ಮಾರ್ನಬೈಲ್ ನಿವಾಸಿ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ, ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಅಧ್ಯಕ್ಷ, ಬಂಟ್ವಾಳ ತಾಪಂ ಸದಸ್ಯ, ಸಜಿಪಮೂಡ ಗ್ರಾಮದ ಮಿತ್ತಮಜಲು ಸಮೀಪದ ಕುಚ್ಚಿಗುಡ್ಡೆಯ ಬಿಲ್ಲವ ಮುಖಂಡರೂ ಆಗಿರುವ ಕೆ. ಸಂಜೀವ ಪೂಜಾರಿ ಬೊಳ್ಳಾಯಿ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡ ಪೂಜಾರಿ, ಅವರ ಪತ್ನಿ ಸಹಿತ ಸಂಸ್ಥೆಯ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಅವರ ಕಾರಿಗೂ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪೂಜಾರಿ ಅವರು ತಮ್ಮ ಕಾರ್ಯ ನಿರ್ವಹಣೆಯ ಬಳಿಕ ಗುರುವಾರ ಮಧ್ಯರಾತ್ರಿ ಮಾರ್ನಬೈಲಿನಲ್ಲಿರುವ ಮನೆಗೆ ಬಂದಿದ್ದು, ಅವರ ಸಿಬ್ಬಂದಿ ಇವರನ್ನು ಮನೆಯಲ್ಲಿ ಬಿಟ್ಟು ಬಳಿಕ ವಾಪಸು ಹೋಗುತ್ತಿದ್ದ ವೇಳೆ ಕಾರನ್ನು ತಡೆದ ದುಷ್ಕರ್ಮಿಗಳ ತಂಡ, ಕಾರಿನಲ್ಲಿದ್ದವರನ್ನು ಎಳೆದು ಹಾಕಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಬಳಿಕ ಮೆನಗೂ ನುಗ್ಗಿ ಸಂಜೀವ ಪೂಜಾರಿ ಹಾಗೂ ಅವರ ಪತ್ನಿ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ. ಘಟನೆಯಿಂದ ಪೂಜಾರಿ ಅವರ ಸಿಬ್ಬಂದಿ ಶಂಕರ, ಅಮ್ಮಿ, ಇಕ್ಬಾಲ್ ಮೊದಲಾದವರು ಗಾಯಗೊಂಡಿದ್ದಾರೆ. 

ಈ ಬಗ್ಗೆ ಮಾಹಿತಿ ಅರಿತ ಸಚಿವ ರಮಾನಾಥ ರೈ ಸಹಿತ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಸ್ಥಳಕ್ಕಾಗಮಿಸಿ, ಗಾಯಾಳುಗಳನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ಎಡಿಶನಲ್ ಎಸ್ಪಿ ಸುಜಿತ್, ಬಂಟ್ವಾಳ ಗ್ರಾಮಾಂತರ ಠಾಣೆ ಐಪಿಎಸ್ ಅಧಿಕಾರಿ ಅಕ್ಷಯ್, ವೃತ್ತ ನಿರೀಕ್ಷಕ ಪ್ರಕಾಶ್, ಪಿಎಸ್ಸೈಗಳಾದ ಚಂದ್ರಶೇಖರ ಹಾಗೂ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಕಾಂಗ್ರೆಸ್ ನಾಯಕರು ಪೊಲೀಸರಿಗೆ ನಾಲ್ಕು ಪ್ರತ್ಯೇಕ ದೂರು ನೀಡಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಇನ್ನಷ್ಟೆ ವಿವರ ದೊರೆಯಬೇಕಾಗಿದೆ. 

ಪೊಲೀಸ್ ಇಲಾಖೆ ಅತಿ ಸೂಕ್ಷ್ಮ ಕೋಮು ಪ್ರದೇಶ ಎಂದು ಈಗಾಗಲೇ ಗುರುತಿಸಿಕೊಂಡಿರುವ ಬಂಟ್ವಾಳದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರೀ ಭದ್ರತಾ ವ್ಯವಸ್ಥೆ ಕೈಗೊಂಡು ಕ್ಷೇತ್ರದಾದ್ಯಂತ ವಿಶೇಷ ಕಣ್ಗಾವಲು ಹಾಕಿರುವುದಲ್ಲದೆ, ಕೇಂದ್ರ ಸಶಸ್ತ್ರ ಪಡೆಗಳನ್ನೂ ನಿಯೋಜಿಸಿರುವ ಮಧ್ಯೆಯೇ ಚುನಾವಣಾ ಪೂರ್ವ ಹಿಂಸಾಚಾರ ಪ್ರಾರಂಭವಾಗಿದ್ದು, ನಾಗರಿಕ ಸಮಾಜದಲ್ಲಿ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...