ಭಾರತ ವಿಭಿನ್ನ ಆಚಾರ-ವಿಚಾರ, ಸಂಸ್ಕೃತಿ-ಧರ್ಮಗಳ ದೇಶ-ಮೌಲಾನ ರಾಬೆಅ ನದ್ವಿ

Source: sonews | By sub editor | Published on 4th February 2018, 11:10 PM | Coastal News | State News | Special Report | Don't Miss |

ಭಟ್ಕಳ: ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ವಿಭಿನ್ನ ಆಚಾರ-ವಿಚಾರ, ಧರ್ಮ,ಸಂಸ್ಕೃತಿಯ ದೇಶವಾಗಿದ್ದು ಮನುಷ್ಯರೆಂಬ ನೆಲೆಯಲ್ಲಿ ಇಲ್ಲಿನ ಹಿಂದೂ-ಮುಸ್ಲಿಮರು ಏಕತೆಯನ್ನು ಪ್ರದರ್ಶಿಸುವುದು ಕಾಲದ ಬೇಡಿಕೆಯಾಗಿದೆ ಎಂದು ಅಖಿಲಾ ಭಾರತ ಮಾನವೀಯತೆ ಸಂದೇಶ ವೇದಿಕೆ ಹಾಗೂ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಮುಹಮ್ಮದ್ ರಾಬೆಅ ಹಸನಿ ನದ್ವಿ ಹೇಳಿದರು. 

ಅವರು ಭಾನುವಾರ ಹೆಬಳೆ ಗ್ರಾ.ಪಂ.ವ್ಯಾಪ್ತಿಯ ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಮೆಸೇಜ್ ಆಫ್ ಹ್ಯುಮ್ಯಾನಿಟಿಯ ಸೌಹಾರ್ಧ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. 

ಹಿಂದೂ ಮುಸ್ಲಿಮರು ಪರಸ್ಪರ ಸಹಬಾಳ್ವೆ ನಡೆಸಿದ ಇತಿಹಾಸವುಳ್ಳ ಭಾರತ ಇಂದು ರಾಜಕೀಯ ಹಿತಾಸಕ್ತಿಗೆ ಒಳಗಾಗಿ ಮನುಷ್ಯ ಮನುಷ್ಯರನ್ನು ಇರಿಯುವ, ಪೈಶಾಚಿಕ ಚಿಂತನೆಗಳನ್ನು ಹುಟ್ಟುಹಾಕುತ್ತಿದೆ. ಅಂದಿನ ಭಾರತ ಇಂದಿಗೂ ಪ್ರಸ್ತುತವಾಗಿದ್ದು ಇಲ್ಲಿ ಬಹುಸಂಖ್ಯಾತರು ಕೂಡಿಬಾಳುತ್ತಿದ್ದಾರೆ ಬೆರಳೆಣಿಕೆಯ ಮಂದಿ ಪರಸ್ಪರರನ್ನು ಕಚ್ಚಾಡಿಸುತ್ತಿದ್ದು ನಾವೆಲ್ಲರೂ ಮನುಷ್ಯರು ಎಂದು ಮತ್ತೆ ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸವಾಗಬೇಕಾಗಿದೆ. ಒಬ್ಬರು ಮತ್ತೊಬ್ಬರನ್ನು ಸಹಾನುಭೂತಿ, ಅನುಕಂಪಗಳಿಂದ ಕಾಣುವಂತಾಬೇಕು, ನಮ್ಮಲ್ಲಿನ ವಿಚಾರ ಭಿನ್ನತೆಗಳನ್ನು ಬದಿಗಿಟ್ಟು ದೇಶದ ಪ್ರಗತಿಗಾಗಿ ಶ್ರಮಿಸಬೇಕಾಗಿದೆ, ಚಿಕಿತ್ಸೆ ಮಾಡುವ ವೈದ್ಯ ರೋಗಿಯನ್ನು ಯಾವ ಧರ್ಮದವನು ಎಂದು ಕೇಳದೆ ಚಿಕತ್ಸೆಯನ್ನು ನೀಡುತ್ತಾನೆ. ಮನುಷ್ಯ ಮನುಷ್ಯರು ಹೊಡೆದಾಗಿ ಗಲಭೆಗಳನ್ನು ಸೃಷ್ಟಿಸಿದರೆ ಅದರಿಂದಾಗಿ ಇಬ್ಬರಿಗೂ ನಷ್ಟವೇ ಹೊರತು ಯಾವ ಲಾಭವು ಆಗದು. ಇಸ್ಲಾಮ್ ಮನುಷ್ಯರನ್ನು ಪ್ರೀತಿಸುವಂತೆ, ನೆರಮನೆಯನ್ನು ಸಹೋದರರಂತೆ ಕಾಣಬೇಕೆಂಬ ಆದೇಶ ನೀಡಿದೆ ಎಂದರು. 

ವಾರ್ತಾಭಾರತಿ ಪ್ರಧಾನ ಸಂಪಾದಕ ಎ.ಎಸ್.ಪುತ್ತಿಗೆ ಮಾತನಾಡಿ, ಭಾರತದಲ್ಲಿ ಧರ್ಮಗಳು ಹೊಸದೇನಲ್ಲ, ಆದರೆ ಸೌಹಾರ್ಧ ಸಭೆಗಳು ಮಾತ್ರ ಹೊಸತು. ಕಳೆದ ಎರಡು ದಶಕಗಳಿಂದ ಆರಂಭಗೊಂದ ಸೌಹಾರ್ಧ ಸಭೆಗಳು ನಮ್ಮಲ್ಲಿ ಸೌಹಾರ್ಧತೆಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ಸೌಹಾರ್ಧ ಸಮಾವೇಶಗಳ ಅಗತ್ಯತೆ ಏಕೆ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯತೆ ಇಂದು ಉಂಟಾಗುತ್ತಿದೆ. ಸಮಾಜದಲ್ಲಿ ಮಸೀದಿ,ದೇವಸ್ಥಾನ, ಧಾರ್ಮಿಕ ಸಭೆಗಳು ಹೆಚ್ಚುತ್ತಿದ್ದು ಜನರು ಹೆಚ್ಚೆಚ್ಚು ಧಾರ್ಮಿಕರಾಗುತ್ತಿದ್ದಾರೆ ಎನ್ನುವ ಭಾವನೆ ನಮ್ಮಲ್ಲಿ ಬೆಳೆಯುತ್ತಿದೆ. ಒಂದು ವೇಳೆ ಹೀಗಾದರೆ ನಮ್ಮಲ್ಲಿನ ಸಾಮಾಜಿಕ ಬಾಂಧವ್ಯಗಳು ಹೆಚ್ಚಾಗಬೇಕಿತ್ತು. ಆದರೆ ಹಾಗೆ ಆಗುತ್ತಿಲ್ಲ ಬದಲಾಗಿ ನಮ್ಮಲ್ಲಿ ಇನಷ್ಟು ಅಂತರ ಹೆಚ್ಚುತ್ತಿದೆ. ಧರ್ಮದ ಸತ್ವ,ತಿರುಳು ಹಾಗೂ ಅದರ ಸಂದೇಶಗಳಿಗೆ ನಾವು ಹತ್ತಿರವಾಗದೇ ಕೇವಲ ಧರ್ಮಿಕ ಸಂಕೇತಗಳಿಗೆ ಮಾತ್ರ ಸೀಮಿತರಾಗಿದ್ದೇವೆ. ಐಸಿಸ್ ಎಂಬ ದುಷ್ಟಕೂಟವೊಂದು ಎಸಗುತ್ತಿರುವ ದುಷ್ಕೃತ್ಯಗಳು ಇಡೀ ಮಾನವ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿವೆ. ಆದರೆ ಅದು ಧಾರ್ಮಿಕ ಸಂಕೇತಗಳನ್ನು ಬಳಿಸಿಕೊಳ್ಳುವುದರ ಮೂಲಕ ಒಂದು ಇಡೀ ಧರ್ಮವೇ ಈ ದುಷ್ಕೃತ್ಯವೆಸಗಿದೆ ಎನ್ನುವಂತೆ ಮಾಡುತ್ತಿದೆ. ಧರ್ಮವನ್ನು ವ್ಯಾಪಾರಿಗಳು ತಮ್ಮ ವ್ಯಾಪಾರಕ್ಕೆ ಪುರೋಹಿತರು ತಮ್ಮ ಪೌರತ್ಯಕ್ಕಾಗಿ ಬಳಸಿಕೊಳ್ಳುತ್ತಿರುವುದು ಇಂದು ದರ್ಮ ದುರ್ಗತಿಗೆ ತಲಪಲು ಕಾರಣವಾಗಿದೆ ಧರ್ಮದ ದುರ್ಬಳಕ್ಕೆಯ ತಡೆಯದೆ ಹೋದರೆ ಅದು ಅಪಾರ್ಥಕ್ಕೀಡಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂದರು. ಮಸೀದಿ, ಮಂದಿರ ಚರ್ಚುಗಳ ನಿರ್ಮಾಣದಿಂದಾಗಿ ಜನರಲ್ಲಿ ಧರ್ಮದ ತಿಳಿವಳಿಕೆ ಉಂಟಾಗುವುದಿಲ್ಲ. ಧರ್ಮಗಳನ್ನು ಅಧ್ಯಾಯನ ಮಾಡಿ ಅದರ ಸಾರವನ್ನು ಜನರಿಗೆ ತಿಳಿಸುವ, ತಿಳಿಯುವ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.  

ಶಾಸಕ ಮಾಂಕಾಳ್ ವೈದ್ಯ ಮಾತನಾಡಿ, ನಮ್ಮ ದೇಶದ ಸಂವಿಧಾನ ಎಲ್ಲರೂ ಕೂಡಿ ಬಾಳುವಂತೆ ಕಲಿಸುತ್ತದೆ. ಕೇವಲ ನಾನು ಬದುಕುವುದಲ್ಲ ಇತರರು ತನ್ನಂತೆ ಸುಖವಾಗಿ ಬದುಕಬೇಕು ಎನ್ನುವ ಆದರ್ಶ ನಮ್ಮದಾಗಬೇಕು. ಭಟ್ಕಳದ ಜನತೆ ತುಂಬ ವಿಚಾರವಂತರಾಗಿದ್ದು ಇಲ್ಲಿ ಯಾವುದೇ ವ್ಯತ್ಯಾಸ ಉಂಟಾಗಲು ಬಿಡುವುದಿಲ್ಲ.ಇತ್ತಿಚೆಗೆ ಕೆಲವು ವಿವೇಚನ ರಹಿತ ಸಂದೇಶಗಳನ್ನು ಹರಡುವುದರ ಮೂಲಕ ಇಲ್ಲಿನ ವಾತವರಣ ಕೆಡಿಸುವ ಪ್ರಯತ್ನಕ್ಕೆ ಕೈಹಾಕುತ್ತಿರುವುದು ಕಂಡು ಬರುತ್ತಿದೆ ಇಂತಹದ್ದಕ್ಕೆಲ್ಲ ಪ್ರಜ್ಞಾವಂತ ಭಟ್ಕಳದ ಜನತೆ ಅವಕಾಶ ಮಾಡಿಕೊಡುವುದಿಲ್ಲ ಎಂದರು. 

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ಗೋಪಾಲ್ ಬ್ಯಾಕೋಡ್,ಶಿರಾಲಿ ಎಂ.ಜಿ.ಎಂ ಮಂದಿರ ಅರ್ಚಕ ಡಾ.ಗಣಪತಿ ಪಿ.ಭಟ್, ತಹಸಿಲ್ದರ್ ವಿ.ಎನ್.ಬಾಡ್ಕರ್, ಮೌಲಾನ ಸಜ್ಜಾದ್ ನೋಮಾನಿ, ಮೌಲಾನ ಬಿಲಾಲ್ ಹಸನಿ ನದ್ವಿ, ಪ್ರೋ.ಅನೀಸ್ ಚುಶ್ತಿ, ಮೌಲಾನ ಇಲ್ಯಾಸ್ ನದ್ವಿ, ಮತ್ತಿತರರು ಮಾತನಾಡಿದರು. 

ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ಖಾಝಿ ಮೌಲಾನ ಮುಲ್ಲಾ ಇಖ್ಬಾಲ್ ನದ್ವಿ, ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಜಿಯಾ, ಜಾಮಿಯಾ ಇಸ್ಲಾಮಿಯ ಅಧ್ಯಕ್ಷ ಮುಹಮ್ಮದ್ ಶಫಿ ಶಾಬಂದ್ರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
 

Read These Next

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...