ರೈತರ ಸಾಲಮನ್ನಾ ಮಾಡಲು ಶೇ.50ರಷ್ಟು ಕೇಂದ್ರದ ನೆರವು ಕೋರಿದ ಸಿಎಂ ಎಚ್‍ಡಿಕೆ

Source: so news | By Manju Naik | Published on 17th June 2018, 7:17 PM | National News |

ನವದೆಹಲಿ, ಜೂ.17-ರಾಜ್ಯದ 85 ಲಕ್ಷ ರೈತರು ಕೃಷಿ ಸಾಲದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನ್ನದಾತರ ಸಾಲ ಮನ್ನಾ ಮಾಡುವ ನಮ್ಮ ಮಹತ್ವಾಕಾಂಕ್ಷೆ ಉದ್ದೇಶಕ್ಕೆ ಕೇಂದ್ರ ಸರ್ಕಾರ ಶೇ.50ರಷ್ಟು ನೆರವು ನೀಡಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಮನವಿ ಮಾಡಿದ್ದಾರೆ.
ರಾಜಧಾನಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ನಾಲ್ಕನೇ ನೀತಿ ಆಯೋಗದ ಮಹತ್ವದ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ,ರಾಜ್ಯದ ಕೃಷಿಕರು ಎದುರಿಸುತ್ತಿರುವ ಬವಣೆಗಳನ್ನು ವಿವರಿಸಿದರು. ಕೃಷಿ ಸಾಲ ಮನ್ನಾ ಮಾಡಲು ನಮ್ಮ ಸರ್ಕಾರ ಸಿದ್ಧವಾಗಿದೆ ಎಂದು ಪುನರುಚ್ಚರಿಸಿದ ಕುಮಾರಸ್ವಾಮಿ, ಇದಕ್ಕಾಗಿ ಕೇಂದ್ರ ಸರ್ಕಾರ ಬೆಂಬಲ ಮತ್ತು ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಬರ, ಬೆಳೆಹಾನಿ ವಿವಿಧ ಕಾರಣಗಳಿಂದ ರೈತರ ಬದುಕು ತೀವ್ರ ಸಂಕಷ್ಟದಲ್ಲಿದೆ. ಅನ್ನದಾತರಿಗೆ ನೆರವಾಗಬೇಕಿರುವುದು ಸರ್ಕಾರದ ಕರ್ತವ್ಯ. ವಿವಿಧ ಬ್ಯಾಂಕ್‍ಗಳಿಂದ ಕೃಷಿ ಸಾಲ ಪಡೆದು ಸಾಲದ ಭಾರೀ ಹೊರೆಯಿಂದ ರೈತರು ಕುಗ್ಗಿ ಹೋಗಿದ್ದಾರೆ ಎಂದು ಅವರು ವಾಸ್ತವ ಸ್ಥಿತಿಯನ್ನು ಸಭೆಗೆ ಮನವರಿಕೆ ಮಾಡಿಕೊಟ್ಟರು.
ರಾಜ್ಯದ ಕೃಷಿಕರ ಹಿತಾಸಕ್ತಿ ಮತ್ತು ಅನುಕೂಲಕ್ಕಾಗಿ ಹೊಸ ಹೊಸ ಅನ್ವೇಷಣಾತ್ಮಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಈಗಾಗಲೇ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದು ವಿವರಿಸಿದರು. ಪ್ರತಿವರ್ಷ ರಾಜ್ಯದಲ್ಲಿ ನೈಸರ್ಗಿಕ ವಿಪತ್ತುಗಳು ಸಂಭವಿಸುತ್ತಿವೆ. ಇದನ್ನು ನಿಭಾಯಿಸಲು ಸರ್ಕಾರ ಭಾರೀ ಮೊತ್ತದ ಹಣವನ್ನು ವೆಚ್ಚ ಮಾಡುತ್ತಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯ ಬರ ಪರಿಹಾರ ನಿಧಿ ಮಂಜೂರಾತಿ(ಎಸ್‍ಡಿಆರ್‍ಎಫ್) ಆರು ಪಟ್ಟುಗಳಿಗಿಂತಲೂ ಹೆಚ್ಚಾಗಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಹೊರೆ ಉಂಟು ಮಾಡಿದೆ ಎಂಬ ಅಂಶವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಎಸ್‍ಡಿಆರ್‍ಎಫ್ ಅಡಿ 2015ರಿಂದ 2020ರವರೆಗೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ನಿಧಿ ಕೇವಲ 1,375 ಕೋಟಿ ರೂ.ಗಳು. ಬೇರೆ ರಾಜ್ಯಗಳಿಗೆ ಮಂಜೂರು ಮಾಡಿರುವ ಮೊತ್ತವನ್ನು ಹೋಲಿಸಿದರೆ ಇದು ಅತ್ಯಂತ ಕಡಿಮೆ. ಹೀಗಾಗಿ ಮಂಜೂರಾತಿ ಮೊತ್ತವನ್ನು ಹೆಚ್ಚಿಸಬೇಕೆಂದು ಅವರು ಕೋರಿದರು. ಯುವಕರ ಉದ್ಯೋಗ ಸೃಷ್ಠಿ ಕುರಿತು ಪ್ರಸ್ತಾಪಿಸಿದ ಕುಮಾರಸ್ವಾಮಿ, ಸ್ವಯಂ ಉದ್ಯೋಗ ಸ್ಥಾಪಿಸಲು ಬಂಡವಾಳಗಳು ಎಷ್ಟು ಮುಖ್ಯವೋ ಕೌಶಲ್ಯ ಸೃಷ್ಟಿಯೂ ಸಹ ಅಷ್ಟೇ ಮಹತ್ವದ್ದು. ಕೌಶಲ್ಯಾಭಿವೃದ್ಧಿ ಅನುಷ್ಠಾನಕ್ಕೆ ನಮ್ಮ ರಾಜ್ಯವು ಸಾಕಷ್ಟು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಇದು ಇಮ್ಮಡಿಯಾಗಬೇಕು. ಈ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿ ಮತ್ತು ಕೌಶಲ್ಯಾಭಿವೃದ್ಧಿ ವಿಷಯಗಳನ್ನು ನೀತಿ ಆಯೋಗದ ಕಾರ್ಯಸೂಚಿಯಲ್ಲಿ ಸೇರಿಸಬೇಕಾದ ಅಗತ್ಯವಿದೆ ಎಂದು ಅವರು ಸಲಹೆ ಮಾಡಿದರು.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ರಾಷ್ಟ್ರೀಯ ಸ್ವಾಸ್ಥ್ಯ ಸುರಕ್ಷಾ ಮಿಷನ್ (ಪಿಎಂಆರ್‍ಎಸ್‍ಎಸ್‍ಎಂ) ಯೋಜನೆಯನ್ನು ಸ್ವಾಗತಿಸಿದ ಅವರು, ಕರ್ನಾಟಕದಲ್ಲೂ ಯಶಸ್ವಿನಿ ಮತ್ತಿತರ ಮಹತ್ವಾಕಾಂಕ್ಷೆ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ. 30 ಲಕ್ಷ ಎಪಿಎಲ್ ಕುಟುಂಬಗಳ 145 ಲಕ್ಷ ಫಲಾನುಭವಿಗಳಿಗೆ ಈ ಯೋಜನೆಯ ವ್ಯಾಪ್ತಿ ತಲುಪಿದೆ ಎಂದು ಅವರು ಹೇಳಿದರು

Read These Next

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು