ನೀತಿ ಆಯೋಗ ಸಭೆಯಲ್ಲಿ ಸಾಲ ಮನ್ನಾಕ್ಕೆ ಕೇಂದ್ರದ ನೆರವು ಕೋರಿದ ಸಿಎಂ ಕುಮಾರಸ್ವಾಮಿ

Source: so news | By Manju Naik | Published on 17th June 2018, 7:45 PM | State News |

ಬೆಂಗಳೂರು :ದೆಹಲಿಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ನಾಲ್ಕನೇ ಸಭೆಯಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲಮನ್ನಾ ಕುರಿತಂತೆ ಕೇಂದ್ರದ ಗಮನಸೆಳೆದಿದ್ದಾರೆ.
ರಾಜ್ಯದ ಕೆಲವು ವಿಷಯಗಳ ಕುರಿತು ವಿಷಯ ಮಂಡನೆ ಮಾಡಿದ ಅವರು ಸಾಲಮನ್ನಾಕ್ಕೆ ಅಗತ್ಯ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿಕೊಂಡರು.
ಸಭೆಯಲ್ಲಿ ಮಾತನಾಡಿದ ಅವರು ಸಾಲಮನ್ನಾ ಕುರಿತು ಪ್ರಸ್ತಾಪಿಸಿದ್ದಾರೆ. ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕೃಷಿ ಬಿಕ್ಕಟ್ಟು ಕೂಡ ಒಂದಾಗಿದ್ದು, ರೈತರ ಸಾಲ ಮನ್ನಾದ ಕುರಿತು ರಾಜ್ಯ ಎದುರು ನೋಡುತ್ತಿರುವುದಾಗಿ ತಿಳಿಸಿದರು. ರಾಜಕೀಯವಾಗಿ ಬೇರೆ ಬೇರೆ ಸಿದ್ಧಾಂತಗಳನ್ನು ಪ್ರತಿನಿಧಿಸುತ್ತಿದ್ದರೂ ದೇಶದ ಅಭಿವೃದ್ಧಿಯ ವಿಷಯಕ್ಕೆ ಕೈಜೋಡಿಸಬೇಕಿದೆ ಎಂದರು.
ರೈತರ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ. ಬರ, ಬೆಳೆಹಾನಿಯಂತಹ ಅನೇಕ ಸಮಸ್ಯೆಯಿಂದಾಗಿ ಕರ್ನಾಟಕದ 85 ಲಕ್ಷ ರೈತರು ಬ್ಯಾಂಕ್​ಗಳಲ್ಲಿ ಸಾಲ ಹೊಂದಿದ್ದಾರೆ. ಈ ಸಾಲವನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ಧವಿದ್ದು ಇದಕ್ಕೆ ಶೇ 50ರಷ್ಟು ಬೆಂಬಲವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ ಕೃಷಿಯಲ್ಲಿ ಮಾರುಕಟ್ಟೆ ನಿಯಮದಲ್ಲಿ 2013ರಿಂದ ಹಲವಾರು ರೂಪಾಂತರವನ್ನು ಪಡೆದಿದೆ. ಇದರ ಬಗ್ಗೆ ಭಾರತ ಸರ್ಕಾರ ಹಾಗೂ ಇ-ನಾಮ್ ಕೂಡ ಅಧ್ಯಯನ ನಡೆಸಿದೆ
ಏಕೀಕೃತ ಮಾರುಕಟ್ಟೆ ವೇದಿಕೆ (ಯುಪಿಎಂ) ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆಯ ಆವಿಷ್ಕಾರ ವಿಧಾನದ ಮೂಲಕ ನಿರ್ಧರಿಸುತ್ತಿದೆ.
ಕರ್ನಾಟಕ ಮಣ್ಣಿನ ಪರೀಕ್ಷೆಯಲ್ಲಿ ಜಿಐಎಸ್-ಜಿಪಿಎಸ್ ಹಾಗೂ ಮಣ್ಣು ಮಾದರಿ ಸಂಗ್ರಹದಂತಹ ಆ್ಯಂಡ್ರಾಯ್ಡ್ ರೀತಿಯಲ್ಲಿ ಹೊಸ ಪದ್ಧತಿಯನ್ನು ಅಳವಡಿಸಿಕೊಂಡಿದೆ.
ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿ ದತ್ತಾಂಶವನ್ನು ಎನ್ಐಸಿ ನವದೆಹಲಿಯ ಮಣ್ಣಿನ ಸಂರಕ್ಷಣಾ ಕಾರ್ಡ್ ಪೋರ್ಟಲ್ ಜೊತೆ ಸಂಯೋಜಿಸಲಾಗಿದೆ. ಈ ಯೋಜನೆಯನ್ನು ಅಧಿಕಮಟ್ಟದ ರೈತರಿಗೆ ಉಪಯೋಗವಾಗುವಂತೆ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.
ಹವಾಮಾನ ಚೇತರಿಕೆ ಕೃಷಿ ಪದ್ಧತಿ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಹವಾಗುಣ ಚೇತರಿಸಿಕೊಳ್ಳುವ ಕೃಷಿಯ ಕ್ರಾಂತಿಗೆ ಅನುಗುಣವಾಗಿ ಪರಿಣಿತರ ತಂಡ ಸಮಗ್ರ ಚೌಕಟ್ಟು, ತಂತ್ರಗಳು ಮತ್ತು ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲು ಮುಂದಾಗುವಂತೆ ತಿಳಿಸಿದರು.
ಕೃಷಿ ಚಟುವಟಿಕೆಗೆ ನೀರು ಅಗತ್ಯವಾಗಿದ್ದು, ನೀರು ಸಂರಕ್ಷಣೆಗಾಗಿ ಕೆರೆ ಸಂಜೀವಿನಿಯಂತಹ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಅಳವಡಿಸಿದ್ದೇವೆ. ನೀರಿನ ಸಂರಕ್ಷಣೆಗಾಗಿ ನಾವು ಈ ದಶಕವನ್ನು ನೀರಿನ ದಶಕವನ್ನಾಗಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ರಾಷ್ಟ್ರೀಯ ಸ್ವಾಸ್ಥ್ಯ ಸುರಕ್ಷಾ ಮಿಷನ್ ಅನ್ನು ನಾವು ಸ್ವಾಗತಿಸುತ್ತೇವೆ. ಇದೇ ರೀತಿಯಲ್ಲಿ ರಾಜ್ಯ ಸರ್ಕಾರ ಯಶಸ್ವಿನಿ ಸೇರಿದಂತೆ ಹಲವು ವಿಭಾದ ಜನರಿಗೆ ಕಳೆದ 15 ವರ್ಷಗಳಿಂದ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದೇವೆ. ಇದು 30 ಎಪಿಲ್ ಕುಟುಂಬ ಸೇರಿದಂತೆ 145 ಲಕ್ಷ ಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದು, ಇದು ಕೇಂದ್ರದ ಯೋಜನೆಗಿಂತ ದೊಡ್ಡದಾಗಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಮತದಿಂದ ಈ ಎರಡೂ ಯೋಜನೆಗಳನ್ನು ಕಾರ್ಯಗತಗೊಳಿಸುವುದಾಗಿ ತಿಳಿಸಿದರು.
ಹಿಂದುಳಿದ ಯಾದಗಿರಿ, ರಾಯಚೂರು ಜಿಲ್ಲೆಗಳ ಅಭಿವೃದ್ಧಿಗೆ ನಾವು ಕ್ರಮ ಕೈಗೊಳ್ಳಬೇಕಾಗಿದ್ದು, ಇದಕ್ಕಾಗಿ ಭಾರತ ಸರ್ಕಾರ ವರ್ಷಕ್ಕೆ 100 ಕೋಟಿ ರೂ.ನಂತೆ ಐದು ವರ್ಷ ಹಣ ನೀಡಬೇಕು ಎಂದರು.
ಇನ್ನು ಯುವಜನತೆಗೆ ಉದ್ಯೋಗ ಕಲ್ಪಿಸಲು ಕೌಶಲ್ಯ ರೂಪಿಸಿದರೆ ಸಾಲದು ಅದಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿ ಕೂಡ ಮಾಡಬೇಕು ಎಂದು ಸಲಹೆ ನೀಡಿದರು
ರಾಜ್ಯದಲ್ಲಿ ಪ್ರತಿವರ್ಷ ವಿಪತ್ತು ಮರುಕಳಿಸುತ್ತಿದ್ದು, ಇದು ರಾಜ್ಯಕ್ಕೆ ದೊಡ್ಡ ಹೊರೆಯಾಗಿದೆ. ಐದು ವರ್ಷದ ಅವಧಿಗೆ ಕೇಂದ್ರದಿಂದ ವಿಪತ್ತು ಪರಿಹಾರದ ಹಣ (ಎಸ್​ಡಿಆರ್​ಎಫ್) ಕೇವಲ 1375 ಕೋಟಿ ನೀಡಲಾಗುತ್ತಿದೆ. ಇದು ಉಳಿದ ರಾಜ್ಯಗಳಿಗೆ ಹೋಲಿಸಿಕೊಂಡರೆ ತೀರ ಕಡಿಮೆಯಾಗಿದೆ.
ಅಲ್ಲದೇ ನಗರ ಅಭಿವೃದ್ಧಿ ತಂತ್ರವನ್ನು ನೀತಿ ಆಯೋಗದಲ್ಲಿ ಅಳವಡಿಸಿಕೊಳ್ಳಬೇಕು. ನೀತಿ ಆಯೋಗ ಭಾರತ ಸರ್ಕಾರದಲ್ಲಿ ಒಕ್ಕೂಟಗಳ ಪಾಲ್ಗೊಳ್ಳುವಿಕೆ, ಮಧ್ಯಮ ಅವಧಿಯ ಯೋಜನೆಯ ಗುರಿ ಮತ್ತು ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತದೆ ಎಂದು ನಂಬಿದ್ದೇನೆ ಎಂದು ತಿಳಿಸಿದರು.

Read These Next