ಪಂಚಾಕುಲಾ ಹಿಂಸಾಚಾರ ಪ್ರಕರಣ; ಪಂಜಾಬ್ ಹರಿಯಾಣ ಹೈಕೋರ್ಟನಿಂದ ಕೇಂದ್ರಕ್ಕೆ ಮಂಗಳಾರತಿ

Source: sonews | By Staff Correspondent | Published on 26th August 2017, 6:54 PM | National News | Don't Miss |

ಚಂಡಿಗಡ: ಅತ್ಯಾಚಾರ ಪ್ರಕರಣದಲ್ಲಿ ದೇರಾ ಸಚ್ಚಾ ಸೌದಾದ ಮುಖ್ಯಸ್ಥ, ಸ್ವಯಂಘೋಷಿತ ದೇವಮಾನವ ಬಾಬಾ ಗುರ್ಮಿತ್  ಸಿಂಗ್‌ನನ್ನು ತಪ್ಪಿತಸ್ಥನೆಂದು ಪಂಚಕುಲಾದ ವಿಶೇಷ ಸಿಬಿಐ ನ್ಯಾಯಾಲಯವು ಶುಕ್ರವಾರ ಘೋಷಿಸಿದ ನಂತರ ಭುಗಿಲೆದ್ದ ವ್ಯಾಪಕ ಹಿಂಸಾಚಾರಗಳಿಂದ ಕೆಂಡಾಮಂಡಲಗೊಂಡಿರುವ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಮಂಗಳವಾರ ಕೇಂದ್ರ ಮತ್ತು ಹರ್ಯಾಣ ಸರಕಾರಗಳನ್ನು ತೀವ್ರ ತರಾಟೆಗೆತ್ತಿಕೊಂಡಿತು. ಪ್ರಧಾನಿ ನರೇಂದ್ರ ಮೋದಿಯವರನ್ನೂ ನ್ಯಾಯಾಲಯವು ಬಿಡಲಿಲ್ಲ. ‘‘ಅವರು ಬಿಜೆಪಿಯ ಪ್ರಧಾನಿಯಲ್ಲ, ಅವರು ಇಡೀ ಭಾರತದ ಪ್ರಧಾನಿಯಾಗಿದ್ದಾರೆ’’ ಎಂದು ಹೇಳುವ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳುವಲ್ಲಿ ಮೋದಿಯವರ ವೈಫಲ್ಯವನ್ನು ಅದು ಬೆಟ್ಟು ಮಾಡಿತು. ಶುಕ್ರವಾರ ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಗುರ್ಮಿತ್‌ನ ಅನುಯಾಯಿಗಳು ನಡೆಸಿದ ವ್ಯಾಪಕ ಹಿಂಸಾಚಾರವು 31 ಜನರನ್ನು ಬಲಿ ತೆಗೆದುಕೊಂಡಿದ್ದು, 250ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ನೂರಾರು ವಾಹನಗಳು ಮತ್ತು ಸರಕಾರಿ ಕಚೇರಿಗಳು ಬೆಂಕಿಗೆ ಆಹುತಿಯಾಗಿವೆ. ವಿಶೇಷ ಸಿಬಿಐ ನ್ಯಾಯಾಲಯವು ಗುರ್ಮಿತ್‌ಗೆ ಶಿಕ್ಷೆಯ ಪ್ರಮಾಣ ವನ್ನು ಸೋಮವಾರ ಪ್ರಕಟಿಸಲಿದೆ.

 

ಶುಕ್ರವಾರ ನಡೆದ ಹಿಂಸಾಚಾರವು ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ ಎಂಬ ಕೇಂದ್ರ ಸರಕಾರದ ಪರ ವಕೀಲರ ಹೇಳಿಕೆಯಿಂದ ಕೆರಳಿದ ಪೀಠವು, ಹರ್ಯಾಣ ಭಾರತದ ಭಾಗವಲ್ಲವೇ? ಪಂಜಾಬ್ ಮತ್ತು ಹರ್ಯಾಣಗಳನ್ನು ಮಲಮಕ್ಕಳಂತೆ ಏಕೆ ನೋಡಲಾಗುತ್ತಿದೆ ಎಂದು ಪ್ರಶ್ನಿಸಿತು.

 ಖಟ್ಟರ್‌ಗೆ ಮಂಗಳಾರತಿ 

 ಇದಕ್ಕೂ ಮುನ್ನ ಹರ್ಯಾಣಾ ಸರಕಾರವನ್ನು ಕಟುವಾಗಿ ಟೀಕಿಸಿದ ನ್ಯಾಯಾಲಯವು, ರಾಜಕೀಯ ಉದ್ದೇಶಗಳಿಗಾಗಿ ಪಂಚಕುಲಾದಂತಹ ನಗರವು ಹೊತ್ತಿ ಉರಿಯುವಂತೆ ಮಾಡಿದ್ದೀರಿ ಎಂದು ಝಾಡಿಸಿತು.

ಗುರ್ಮಿತ್ ವಿರುದ್ಧ ತೀರ್ಪು ಹೊರಬೀಳುತ್ತಿದ್ದಂತೆಯೇ ನ್ಯಾಯಾಲಯದ ಬಳಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಆತನ ಬೆಂಬಲಿಗರು ದಂಗೆಗಿಳಿದು ವಾಹನಗಳಿಗೆ ಬೆಂಕಿ ಹಚ್ಚಿ ಆಸ್ತಿಪಾಸಿಗಳಿಗೆ ನಷ್ಟವನ್ನುಂಟು ಮಾಡಿದ್ದರು. ಸ್ಥಳೀಯ ನಿವಾಸಿಗಳ ಮೇಲೂ ಹಲ್ಲೆ ನಡೆಸಿದ್ದರು. ಹಿಂಸಾಚಾರವು ಹರ್ಯಾಣದ ಇತರ ನಗರಗಳಿಗೆ ಮತ್ತು ಪಂಜಾಬ್‌ನ ಕೆಲವು ಭಾಗಗಳಿಗೂ ವ್ಯಾಪಿಸಿತ್ತು.

ಹಿಂಸಾಚಾರದ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಪಂಚಕುಲಾದ ಉಪ ಪೊಲೀಸ್ ಆಯಕ್ತ(ಡಿಸಿಪಿ) ಅಶೋಕ ಕುಮಾರ್ ಅವರ ಅಮಾನತು ಕುರಿತಂತೆ ರಾಜ್ಯ ಸರಕಾರಕ್ಕೆ ಛೀಮಾರಿ ಹಾಕಿದ ನ್ಯಾಯಾಲಯವು, ಪರಿಸ್ಥಿತಿ ವಿಷಮಿಸಲು ಅವಕಾಶ ನೀಡಿದ್ದೇ ನೀವು. ರಾಜಕೀಯವಾಗಿ ಶರಣಾಗಿದ್ದ ನೀವು ಡಿಸಿಪಿಯಂತಹ ಸಣ್ಣ ಅಧಿಕಾರಿಯನ್ನು ಶಿಲುಬೆಗೇರಿಸಲು ಪ್ರಯತ್ನಿಸುತ್ತಿದ್ದೀರಿ. ಆದರೆ ನಿರ್ದೇಶಗಳನ್ನು ನೀಡುತ್ತಿರುವ ರಾಜಕೀಯ ನಾಯಕರ ಬಗ್ಗೆ ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿತು.

ಹಿಂಸಾಚಾರದ ಹಿಂದೆ ಸಮಾಜ ವಿರೋಧಿ ಶಕ್ತಿಗಳು ಮತ್ತು ದುಷ್ಕರ್ಮಿಗಳ ಕೈವಾಡವಿದೆ ಎಂದು ಶುಕ್ರವಾರ ಹೇಳಿಕೆ ನೀಡಿದ್ದ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ ಪೀಠವು, ಸಮಾಜ ವಿರೋಧಿ ಶಕ್ತಿಗಳ ಕುರಿತು ಒಂದೇ ದಿನದಲ್ಲಿ ತಿಳಿದುಕೊಳ್ಳಲು ಮುಖ್ಯಮಂತ್ರಿಗಳಿಗೆ ಸಾಧ್ಯವಾಗಿರುವಾಗ ಕಳೆದ ಏಳು ದಿನಗಳಲ್ಲಿ ಪಂಚಕುಲಾಕ್ಕೆ ಅವುಗಳ ಪ್ರವೇಶವನ್ನೇಕೆ ತಡೆಯಲಿಲ್ಲ ಎಂದು ಪ್ರಶ್ನಿಸಿತು.

ಕಾನೂನು ಮತ್ತು ಸುವ್ಯವಸ್ಥೆ ಕುರಿತು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ಮೂವರು ನ್ಯಾಯಾಧೀಶರ ಪೀಠವು, ಪಂಚಕುಲಾದ ಡಿಸಿಪಿಯನ್ನು ಬಲಿಪಶು ಮಾಡಲಾಗಿದೆ ಎಂದು ಹೇಳಿತು. ಜನರ ಗುಂಪುಗಳನ್ನು ನಿಯಂತ್ರಿಸುವಲ್ಲಿ ವಿಫಲಗೊಂಡ ಅಸಮರ್ಪಕ ಭದ್ರತಾ ವ್ಯವಸ್ಥೆಗಳ ಬಗ್ಗೆ ಆಳವಾದ ತನಿಖೆಯು ನಡೆಯಬೇಕಿದೆ ಎಂದು ಅದು ಹೇಳಿತು.

ಹೆಚ್ಚಿನ ಸಂಖ್ಯೆಯಲ್ಲಿ ಜನರ ಜಮಾವಣೆಯನ್ನು ನಿಷೇಧಿಸಲಾಗಿದ್ದರೂ ದೇರಾ ಸಚ್ಚಾ ಸೌದಾದ ಕನಿಷ್ಠ 1.5 ಲಕ್ಷ ಬೆಂಬಲಿಗರು ಪಂಚಕುಲಾದಲ್ಲಿ ಸೇರಲು ಅವಕಾಶ ನೀಡಿದ್ದಕ್ಕಾಗಿ ಹರ್ಯಾಣ ಸರಕಾರವನ್ನು ಟೀಕಿಸಿದ ನ್ಯಾಯಾಲಯವು, ಇದು ವೋಟ್ ಬ್ಯಾಂಕ್ ಗಳಿಕೆಯ ಉದ್ದೇಶದ ರಾಜಕೀಯ ಶರಣಾಗತಿಯಾಗಿದೆ. ಅವರು(ಗುರ್ಮಿತ್ ಬೆಂಬಲಿಗರು) ಹೊರಗಿನವರಾಗಿದ್ದರು. ಅವರು ಪಂಚಕುಲಾ ಪ್ರವೇಶಿಸಲು ಮತ್ತು ಅಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದ್ದೀರಿ ಎಂದು ಬೆಟ್ಟು ಮಾಡಿತು.

ಶುಕ್ರವಾರ ಮಧ್ಯಾಹ್ನ ತೀರ್ಪು ಪ್ರಕಟಣೆಗಾಗಿ ಗುರ್ಮಿತ್ ಸಿರ್ಸಾದಿಂದ ಬೆಂಗಾವಲು ವಾಹನಗಳ ಸಾಲಿನಲ್ಲಿ ಬರುವಾಗ ಎಷ್ಟು ಕಾರುಗಳಿಗೆ ಅನುಮತಿ ನೀಡಿದ್ದೀರಿ ಎಂದೂ ನ್ಯಾಯಾಲಯವು ಪ್ರಶ್ನಿಸಿತು.

ಭಾರೀ ಬಿಗುಭದ್ರತೆಯನ್ನು ಹೊಂದಿದ್ದ ನ್ಯಾಯಾಲಯದಲ್ಲಿ ತೀರ್ಪು ಘೋಷಣೆಯಾದ ಬೆನ್ನಿಗೇ ಗುರ್ಮಿತ್‌ನ ಉನ್ಮತ್ತ ಬೆಂಬಲಿಗರು ಕಚೇರಿಗಳು, ವಾಹನಗಳು ಮತ್ತು ರೈಲ್ವೆ ನಿಲ್ದಾಣಗಳಿಗೆ ಬೆಂಕಿ ಹಚ್ಚಿ ಪಂಚಕುಲಾವನ್ನು ಅಕ್ಷರಶಃ ರಣರಂಗವನ್ನಾಗಿಸಿದ್ದರು. ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ವಿಫಲಗೊಂಡು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸ್ ಅಧಿಕಾರಿ ಗಳು ಜೀವ ಉಳಿಸಿಕೊಳ್ಳಲು ಕಾಲಿಗೆ ಬುದ್ಧಿ ಹೇಳುತ್ತಿರುವುದನ್ನು ಸಿಸಿಟಿವಿ ತುಣುಕುಗಳು ತೋರಿಸಿವೆ. ಮುಸುಕುಧಾರಿ ವ್ಯಕ್ತಿಗಳು ರಸ್ತೆಗಳಲ್ಲಿ ಅಟ್ಟಹಾಸ ಮೆರೆದಿದ್ದು, ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆ ನಡೆಸಿದ್ದರು. ಸುದ್ದಿವಾಹಿನಿಗಳ ವಾಹನಗಳನ್ನೂ ಉದ್ರಿಕ್ತ ಗುಂಪುಗಳು ಜಖಂಗೊಳಿಸಿದ್ದವು. ಜನರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗ, ಲಾಠಿ ಪ್ರಹಾರ ನಡೆಸಿದ ಬಳಿಕ ಅಂತಿಮವಾಗಿ ಗೋಲಿಬಾರ್ ಗೆ ಮೊರೆ ಹೋಗಿದ್ದವು.

ಈ ಎಲ್ಲ ಬೆಳವಣಿಗೆಗಳು ಮತ್ತು ಮಾಧ್ಯಮ ವರದಿಗಳನ್ನು ಪೀಠವು ಗಮನಕ್ಕೆ ತೆಗೆದುಕೊಂಡಿತು. ಕಲಂ 144ನ್ನು ಹೇರಿದ ಆದೇಶಗಳಲ್ಲಿಯ ತೊಡಕು ಜನರು ಶಸ್ತ್ರಸಜ್ಜಿತರಾಗಿ ಪಂಚಕುಲಾ ಪ್ರವೇಶಿಸುವುದನ್ನು ನಿರ್ಬಂಧಿಸಿತ್ತೇ ಹೊರತು ಭಾರೀ ಸಂಖ್ಯೆ ಯಲ್ಲಿ ಜನರ ಜಮಾವಣೆಯನ್ನಲ್ಲ ಎಂದು ನ್ಯಾಯಾಲಯಕ್ಕೆ ನಿವೇದನೆ ಸಲ್ಲಿಕೆಯಾದಾಗ, ಈ ಆದೇಶಗಳನ್ನು ನೀಡಿದ್ದ ರಾಜಕೀಯ ವ್ಯಕ್ತಿ ಯಾರು ಎನ್ನುವುದನ್ನು ತಿಳಿಯಲು ನಾವು ಬಯಸಿದ್ದೇವೆ ಎಂದು ನ್ಯಾಯಾಧೀಶರು ಹೇಳಿದರು.

 ಲೋಪಗಳನ್ನು ಒಪ್ಪಿದ್ದ ಖಟ್ಟರ್

ಭದ್ರತಾ ವ್ಯವಸ್ಥೆಯಲ್ಲಿ ಲೋಪಗಳಾಗಿರುವುದನ್ನು ಖಟ್ಟರ್ ಶುಕ್ರವಾರ ರಾತ್ರಿ ಒಪ್ಪಿಕೊಂಡಿದ್ದರು. ಲೋಪಗಳನ್ನು ಗುರುತಿಸಲಾಗಿದೆ ಮತ್ತು ಸೂಕ್ತಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಘಟನೆ ಸಂಭವಿಸಬಾರದಿತ್ತು ಎಂದು ಅವರು ಹೇಳಿದ್ದರು. ಆದರೆ ಇನ್ನೊಂದು ಹೇಳಿಕೆಯಲ್ಲಿ ‘ದೇರಾ ಸಚ್ಚಾ ಸೌದಾದ ಭಕ್ತರ ನಡುವೆ ಕ್ರಿಮಿನಲ್‌ಗಳು ಸೇರಿಕೊಂಡಿದ್ದರು’ ಎಂದು ಹೇಳುವ ಮೂಲಕ ಗುರ್ಮಿತ್‌ನ ಬೆಂಬಲಿಗರ ರಕ್ಷಣೆಯ ಪ್ರಯತ್ನವನ್ನೂ ಖಟ್ಟರ್ ಮಾಡಿದ್ದರು.

Read These Next

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ಹೊಸದಿಲ್ಲಿ:ಬಿಜೆಪಿ ರಾಷ್ಟ್ರೀಯ ಪ್ರ. ಸಂಘಟನಾ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ಬಿ.ಎಲ್ ಸಂತೋಷ್ ನೇಮಕ

ಹೊಸದಿಲ್ಲಿ: ಕಳೆದ 13 ವರ್ಷಗಳಿಂದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಲಾಲ್ ಹುದ್ದೆ ತೊರೆದ ಹಿನ್ನೆಲೆಯಲ್ಲಿ ತೆರವಾದ ...

ವಂಚನೆಯ ಮತ್ತೊಂದು ಮಾರ್ಗ

ಸಾಮಾಜಿಕ-ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಹೀನಾಯವಾದ ಕಾರ್ಯನಿರ್ವಹಣೆ ತೋರಿದ ಸರ್ಕಾರವೊಂದು ಹಿಂದಿಗಿಂತಲೂ ಹೆಚ್ಚಿನ ...

ತಡೆಗಟ್ಟಬಹುದಾದ ಸಾವುಗಳು

ಕಳೆದ ತಿಂಗಳು ಬಿಹಾರದ ಮುಝಫರ್‌ಪುರ್  ಜಿಲ್ಲೆಯಲ್ಲಿ ತೀವ್ರ ಮೆದುಳು ಜ್ವರಕ್ಕೆ ಬಲಿಯಾಗಿ ಪ್ರಾಣ ತೆತ್ತಿರುವ ೧೫೩ ಮಕ್ಕಳ ಸಾವುಗಳು ...

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ಹೊಸದಿಲ್ಲಿ:ಬಿಜೆಪಿ ರಾಷ್ಟ್ರೀಯ ಪ್ರ. ಸಂಘಟನಾ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ಬಿ.ಎಲ್ ಸಂತೋಷ್ ನೇಮಕ

ಹೊಸದಿಲ್ಲಿ: ಕಳೆದ 13 ವರ್ಷಗಳಿಂದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಲಾಲ್ ಹುದ್ದೆ ತೊರೆದ ಹಿನ್ನೆಲೆಯಲ್ಲಿ ತೆರವಾದ ...