ಪ್ರತಾಪ್ ಸಿಂಹ ಗೆ ಮಾಹಿತಿ ಕೊರತೆ-ಸಚಿವ ಯು.ಟಿ.ಕಾದರ್

Source: sonews | By Staff Correspondent | Published on 9th December 2018, 10:55 PM | Coastal News | Don't Miss |

ಮಂಗಳೂರು: ಕೊಡಗು ಸಂತ್ರಸ್ತರಿಗೆ ಕೇಂದ್ರ ಸರಕಾರ ನಯಾಪೈಸೆ ಅನುದಾನವನ್ನು ನೀಡಿಲ್ಲ. ಸಂಸದ ಪ್ರತಾಪ ಸಿಂಹ ಮಾಹಿತಿಯ ಕೊರತೆಯಿಂದ, ಸ್ಪಷ್ಟವಾದ ವಿಚಾರ ತಿಳಿಯದೆ ಕೇವಲ ಪ್ರಚಾರಕ್ಕಾಗಿ ಮತನಾಡಿದ್ದಾರೆ. ಅನುದಾನ ನೀಡಿದ್ದೇ ಆದಲ್ಲಿ ಸ್ಪಷ್ಟ ಅಂಕಿ-ಅಂಶವನ್ನು ನೀಡಲಿ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಸವಾಲೆಸೆದಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ರವಿವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊಡಗಿನಲ್ಲಿ ದುರಂತ ಸಂಭವಿಸಿದಾಗ ಅಲ್ಲಿನ ಸಂತ್ರಸ್ತರಿಗೆ ಸ್ವಾಭಿಮಾನ ಬದುಕು ಕಟ್ಟಿಕೊಡಲು 9.40 ಕೋಟಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿದ್ದರೆ ಅದು ಕರ್ನಾಟಕ ಸರಕಾರವಾಗಿದೆ. ಈ ವಿಷಯದಲ್ಲಿ ದೇಶಕ್ಕೆ ರಾಜ್ಯ ಮಾದರಿಯಾಗಿದೆ ಎಂದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯಿಂದ ಕೊಡಗು ಸಂತ್ರಸ್ತರಿಗೆ 546.21 ಕೋಟಿ ರೂ. ನಿಧಿ ನೀಡುವುದಾಗಿ ಮಾತ್ರ ಆದೇಶ ಬಂದಿದೆ. ಆದರೆ ಇಲ್ಲಿಯವರೆಗೆ ನಯಾಪೈಸೆಯನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸಿಲ್ಲ. ಎನ್‌ಡಿಆರ್‌ಎಫ್ ಕೇವಲ ಕೊಡಗು ಮಾತ್ರವಲ್ಲ, ರಾಜ್ಯದ ಎಂಟು ಜಿಲ್ಲೆಗಳಲ್ಲಿ ನಡೆದ ಪ್ರಕೃತಿ ವಿಕೋಪದಂತಹ ದುರಂತಕ್ಕೆ ಸಂಬಂಧಿಸಿದಂತೆ ಸಮಾನವಾಗಿ ಹಂಚಲ್ಪಡುತ್ತದೆ. ಹಾಗೆಯೆ ಇದು ಕೇವಲ ರಾಜ್ಯಕ್ಕೂ ಸೀಮಿತವಲ್ಲ; ಎಲ್ಲ ರಾಜ್ಯಗಳಿಗೆ ಪ್ರತಿವರ್ಷದಂತೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.

546.21 ಕೋಟಿ ರೂ. ನಿಧಿಯನ್ನು ಎಂಟು ಜಿಲ್ಲೆಗೆ ಸಮಾನವಾಗಿ ಹಂಚಿಕೆ ಮಾಡಿದಾಗ 60 ಕೋಟಿ ರೂ. ಲಭ್ಯವಾಗುತ್ತದೆ. ಅದರಿಂದ ಕೇವಲ ಸಂಪಾಜೆ ರಸ್ತೆಯನ್ನು ದುರಸ್ತಿಗೊಳಿಸಲು ಸಾಕಾಗುವುದಿಲ್ಲ. ಇನ್ನು ಹೆಚ್ಚಿನ ಕೆಲಸಗಳು ಬಾಕಿ ಇರುತ್ತವೆ. ಕೊಡಗು ಜಿಲ್ಲೆ ಪ್ರಕೃತಿ ವಿಕೋಪಕ್ಕೊಳಗಾದ ಜಿಲ್ಲೆಯೆಂದು ಘೋಷಣೆಯಾಯಿತು. ಇಂತಹ ದುರಂತಗಳು ಸಂಭವಿಸುವುದು ವಿರಳ. ಕೊಡಗು ಸಂತ್ರಸ್ತರಿಗೆ ಪ್ರತ್ಯೇಕವಾಗಿ ಪರಿಹಾರ ನಿಧಿಯನ್ನು ಕೇಂದ್ರ ಸರಕಾರ ಕಲ್ಪಿಸಿಲ್ಲ ಎಂದು ಸಚಿವರು ತಿಳಿಸಿದರು.

ಆಡಳಿತ ಮತ್ತು ಮಾನವೀಯತೆಯನ್ನು ಅರ್ಥ ಮಾಡಿಕೊಂಡು ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ ಸೇರಿ ಅನುದಾನ ಬಿಡುಗಡೆ ಮಾಡಿದ್ದಾರೆ. ಮನೆ ಬಿದ್ದಾಗ ಒಂದು ಲಕ್ಷ ರೂ., ಹೆಚ್ಚುವರಿಯಾಗಿ 50 ಸಾವಿರ ರೂ.ನ್ನು ಸರಕಾರ ನೀಡಿದೆ. ಇದು ಯಾವ ಕಾನೂನಿನಲ್ಲಿಯೂ ತಿಳಿಸಿಲ್ಲ. ಕೇವಲ ಮಾನವೀಯ ನೆಲೆಯಿಂದ ಪರಿಹಾರ ನೀಡಲಾಗಿದೆ ಎಂದರು.

ಹಿಂದಿನ ಬಿಜೆಪಿ ಸರಕಾರದ ಆಡಳಿತದ ಸಮಯ ಉತ್ತರ ಕರ್ನಾಟಕದಲ್ಲಿ ಸಮಸ್ಯೆ ತಲೆದೋರಿತ್ತು. ಆಗ ಅಲ್ಲಿನ ಸಂತ್ರಸ್ತರು ಆರು-ಏಳು ತಿಂಗಳು ಶೆಡ್‌ಗಳಲ್ಲಿ ಜೀವನವನ್ನು ನಡೆಸಿದ್ದರು. ಅಂತಹ ಕಷ್ಟ ಬಾರದಿರಲಿ ಎಂದು ಮನೆ ನಿರ್ಮಾಣವಾಗುವವರೆಗೆ ಮನೆ ಬಾಡಿಗೆಯನ್ನು ರಾಜ್ಯ ಸರಕಾರ ನೀಡುತ್ತಿದೆ. ಅಲ್ಲಿ ಸಿಂಗಲ್ ಬೆಡ್‌ರೂಮ್ ಸಾಕಾಗುವುದಿಲ್ಲ ಎನ್ನುವ ಸಂತ್ರಸ್ತರ ದೂರಿಗೆ ಸ್ಪಂದಿಸಿ ಡಬಲ್ ಬೆಡ್ ರೂಮ್ ವ್ಯವಸ್ಥೆಯನ್ನು ಸರಕಾರ ಮಾಡಿದೆ ಎಂದರು.

ಸಂಸದರಿಗೆ ಕೊಡಗುವಿನ ಬಗ್ಗೆ ಕಾಳಜಿ, ಜವಾಬ್ದಾರಿ ಎನ್ನುವುದು ಇದ್ದರೆ ಪಾರ್ಲಿಮೆಂಟ್‌ನಲ್ಲಿ ಮಾತನಾಡಿ, ಕೊಡಗಿಗಾಗಿ ಪ್ರತ್ಯೇಕ ನಿಧಿಯನ್ನು ಕೇಳಬೇಕಾಗಿತ್ತು. ಅಂತಹ ಅಭಿವೃದ್ಧಿ ವಿಚಾರಗಳಿಗೆ ಮಾತನಾಡದೇ ವಿನಾಕಾರಣ ಪ್ರಚಾರಕ್ಕಾಗಿ ಮುಖ್ಯಮಂತ್ರಿ ವಿರುದ್ಧ ಮಾತನಾಡಿದ್ದಾರೆ. ಎಲ್ಲ ಅನುದಾನ, ನಿಧಿಯನ್ನು ಬಿಡುಗಡೆ ಮಾಡಿದ್ದರೂ ಮುಖ್ಯಮಂತ್ರಿಯ ಮನಸನ್ನು ನೋಯಿಸಿದ್ದಾರೆ ಎಂದು ಹೇಳಿದರು.

ಮಧ್ಯವರ್ತಿ ಹಾವಳಿ ತಪ್ಪಿಸಲು ಏಕಗವಾಕ್ಷಿ ಯೋಜನೆ

ಏಕಗವಾಕ್ಷಿ ಯೋಜನೆಯನ್ನು ಜಾರಿಗೆ ತರುವುದರಿಂದ ಜನಸಾಮಾನ್ಯರಿಗೆ ಕಿರುಕುಳ ತಪ್ಪಲಿದೆ. ಇದೇ ಡಿಸೆಂಬರ್ 15ರಂದು ಏಕಗವಾಕ್ಷಿ ಯೋಜನೆಗೆ ಚಾಲನೆ ನೀಡಲಾಗುವುದು. ಈ ಹಿಂದೆ ಮನೆ ನಿರ್ಮಿಸಲು, ಲೇಔಟ್ ಪ್ಲಾನಿಂಗ್ ಮತ್ತಿತರ ಕಾರ್ಯಕ್ರಮಕ್ಕಾಗಿ ಅಪ್ರೂವಲ್ ಪಡೆಯಲು ಹಲವು ತಿಂಗಳುಗಳ ಕಾಲ ತೆಗೆದುಕೊಳ್ಳುತ್ತಿತ್ತು. ಮುಂದಿನ ದಿನಗಳಲ್ಲಿ ಕೇವಲ ಒಂದೇ ತಿಂಗಳಲ್ಲಿ ಅಪ್ರೂವಲ್ ದೊರೆಯಲಿದೆ. ದೇಶಕ್ಕೆ ರಾಜ್ಯದ ಯೋಜನೆ ಮಾದರಿಯಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಜನ ಸಾಮಾನ್ಯರು ಎಲ್ಲ ದಾಖಲಾತಿಗಳನ್ನು ಲಗತ್ತಿಸಿದ್ದರೂ ತಿರಸ್ಕೃತಗೊಳ್ಳುತ್ತಿದ್ದವು. ಇನ್ನು ಕೆಲವು ದಾಖಲೆಗಳಿಲ್ಲದಿದ್ದರೂ ಸ್ವಕೃತಗೊಳ್ಳುತ್ತಿದ್ದವು. ಇನ್ನು ಮುಂದೆ ಇಂತಹ ಸಮಸ್ಯೆ ತಲೆದೋರುವುದಿಲ್ಲ. ಸ್ಥಳ ಪರಿಶೀಲನೆಗೆ ನಿಗದಿತ ಸ್ಥಳಕ್ಕೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಿರಬೇಕು. ಅದೇ ಜಾಗದಲ್ಲಿಯೇ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ ಎಂದರು ಹೇಳಿದರು.

ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆಯ ದಿನಾಂಕ, ಸಮಯ, ಸ್ಥಳದ ಬಗ್ಗೆ ಮಾಹಿತಿಯನ್ನು ಮೊದಲೇ ಅವರ ಮೊಬೈಲ್ ಸಂಖ್ಯೆಗೆ ಸಂದೇಶ ಹೋಗುತ್ತದೆ. ಇದರಿಂದ ಪಾರದರ್ಶಕ ಆಡಳಿತವನ್ನು ನೀಡಬಹುದಾಗಿದೆ. ಇನ್ನು ಎಲ್ಲ ವಿಧಾನವೂ ಕಂಪ್ಯೂಟರೀಕರಣಗೊಳ್ಳಲಿದೆ ಎಂದರು.

ಮರಳು ವಿತರಣೆಗೆ ಟಾಲ್‌ಫ್ರೀ ನಂಬರ್

ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಮರಳು ವಿತರಣೆ ಕಾರ್ಯ ಆರಂಭವಾಗಿದೆ. ಜನಸಾಮಾನ್ಯರಿಗೆ ಮರಳಿನ ಅಗತ್ಯವಿದ್ದಲ್ಲಿ ತಾತ್ಕಾಲಿಕ ನಂಬರ್‌ಗೆ ಕರೆ ಮಾಡುವ ಮೂಲಕ ಮಾಹಿತಿ ನೀಡಿದರೆ, ಮರಳನ್ನು ಸರಬರಾಜು ಮಾಡಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಲ್ ಫ್ರೀ ನಂಬರ್‌ನ್ನು ಆರಂಭಿಸಲಾಗುವುದು. ಇದರಿಂದ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬಹುದಾಗಿದೆ. ಈ ನೂತನ ವಿಧಾನದ ಬಗ್ಗೆ ಮರಳು ಗಣಿಗಾರಿಕೆ ಸಮಿತಿ ದರ ನಿಗದಿಪಡಿಸಲಿದೆ. ತುಂಬೆ ಅಣೆಕಟ್ಟಿನಲ್ಲಿಯೂ ಮಹಾನಗರ ಪಾಲಿಕೆಯಿಂದ ಮರಳನ್ನು ಸಂಗ್ರಹಿಸಿ, ವಿತರಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ಸ್ವಯಂ ಪರವಾನಿಗೆಗೆ ಅವಕಾಶ

30x 40 ಅಳತೆಯ ಮನೆ ಕಟ್ಟಲು ಎನ್‌ಒಸಿ ಅಗತ್ಯವಿದ್ದಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದಕ್ಕಾಗಿಯೇ ಮುಂದಿನ ದಿನಗಳಲ್ಲಿ ಅಗತ್ಯ ದಾಖಲೆಗಳನ್ನು ನಿಗದಿತ ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಸ್ವಯಂ ಪರವಾನಿಗೆಯನ್ನು ಪಡೆದುಕೊಳ್ಳಬಹುದಾಗಿದೆ. ದ.ಕ. ಜಿಲ್ಲೆಯಲ್ಲಿ ಈ ಯೋಜನೆ ಯಶಸ್ವಿಯಾದಲ್ಲಿ ಒಂದು ತಿಂಗಳ ನಂತರ ರಾಜ್ಯಕ್ಕೂ ವಿಸ್ತರಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...