ಭಟ್ಕಳ ಅಂಜುಮನ್ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆ; 2019 ವರ್ಷವಿಡೀ ಕಾರ್ಯಕ್ರಮ; ಲಾಂಛನ ಬಿಡುಗಡೆ

Source: S O News service | By I.G. Bhatkali | Published on 22nd October 2018, 5:38 PM | Coastal News | State News |

ಭಟ್ಕಳ: ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿರುವ `ಭಟ್ಕಳ ಅಂಜುಮನ್ ಹಾಮಿ ಎ ಮುಸ್ಲಿಮೀನ್' ನೂರು ವರ್ಷಗಳನ್ನು ಪೂರೈಸುತ್ತಿರುವ ಈ ಶುಭ ಸಂದರ್ಭದಲ್ಲಿ 2019ರ ಜನವೇರಿಯಿಂದ ಡಿಸೆಂಬರ್ ಅಂತ್ಯದವರೆಗೆ ಒಂದು ವರ್ಷ ಕಾಲ ಶತಮಾನೋತ್ಸವ ಕಾರ್ಯಕ್ರಮ ನಡೆಸಲು ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಜುಕಾಕು ಅಬ್ದುರ್ರಹೀಮ್ ಹೇಳಿದರು.

 ಅವರು ರವಿವಾರ ಇಲ್ಲಿನ ಅಂಜುಮನ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜನೇವರಿ ಮೊದಲ ವಾರದಂದು ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಇದರ ಅಂಗವಾಗಿ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. 3 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ  ರಾಜಕೀಯ, ಧಾರ್ಮಿಕ ಹಾಗೂ ಶೈಕ್ಷಣಿಕ ಮುಖಂಡರು ಉಪಸ್ಥಿತರಿರಲಿದ್ದಾರೆ. ಅಂಜುಮನ್ ಸಂಸ್ಥೆಗೆ ಸೇವೆ ಸಲ್ಲಿಸಿರುವ ಉಪನ್ಯಾಸಕರು, ಶಿಕ್ಷಕರು, ಸಮಿತಿಯ ಸದಸ್ಯರುಗಳು, ವಿಶ್ವವಿದ್ಯಾಲಯದಿಂದ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಗುತ್ತದೆ. ರಾತ್ರಿ ಮಕ್ಕಳಿಂದ ಹಿರಿಯರವರೆಗೆ ಮನರಂಜನಾ ಕಾರ್ಯಕ್ರಮ ನಡೆಯಲಿದೆ. 2ನೇ ದಿನ ಮಹಿಳೆಯರಿಗಾಗಿಯೇ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 3ನೇ ದಿನ ಭಟ್ಕಳದ ಪ್ರಸಿದ್ಧ ನವಾಯತಿ ಭಾಷೆಯ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದರು. ಶತಮಾನೋತ್ಸವದ ಅಂಗವಾಗಿ ವರ್ಷವಿಡೀ ವಿವಿಧ ವಿಚಾರಗೋಷ್ಠಿಗಳು, ಕಾರ್ಯಾಗಾರಗಳು, ಅಂಜುಮನ್ ಸಂಸ್ಥೆಯ ಶಿಕ್ಷಣ ಮತ್ತು ಇತಿಹಾಸದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಭಟ್ಕಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದಲೂ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುವುದು. ಅಂಜುಮನ್ ಶಿಕ್ಷಣ ಸಂಸ್ಥೆಯ ಪ್ರಗತಿ, ಮೈಲಿಗಲ್ಲನ್ನು ನೆನಪಿಸುವ ವಸ್ತು ಪ್ರದರ್ಶನ, ಸಂಸ್ಥೆಯ ಸ್ಥಾಪನೆ, ಪ್ರಗತಿ, ಬೆಳವಣಿಗೆ ಮತ್ತು ಸಾಧನೆಗಳ ಇತಿಹಾಸವನ್ನು ಒಳಗೊಂಡ ಪುಸ್ತಕ ಪ್ರದರ್ಶನ ನಡೆಸಲಾಗುತ್ತದೆ ಎಂದು ವಿವರಿಸಿದರು.

ಶತಮಾನಗಳಿಂದಲೂ ಉತ್ತರಕನ್ನಡ ಜಿಲ್ಲೆ ಮಾತ್ರವಲ್ಲದೇ ಉಳಿದ ಜಿಲ್ಲೆಗಳಿಗೂ ಶಿಕ್ಷಣವನ್ನು ಪಸರಿಸುವ ಕೆಲಸ ಮಾಡುತ್ತ ಬಂದಿರುವ ಭಟ್ಕಳ ಅಂಜುಮನ್ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಎಲ್ಲ ವರ್ಗ, ಧರ್ಮಗಳ ಜನರು ಪಾಲ್ಗೊಳ್ಳುವಂತಾಗಬೇಕು ಎನ್ನುವ ಸದಾಶಯವನ್ನು ಸಂಸ್ಥೆಯು ಹೊಂದಿದೆ ಎಂದು ವಿವರಿಸಿದರು. ಇದಕ್ಕೂ ಪೂರ್ವದಲ್ಲಿ ಶತಮಾನೋತ್ಸವ ಕಾರ್ಯಕ್ರಮದ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು. ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಇಸ್ಮೈಲ್, ಶತಮಾನೋತ್ಸವ ಆಚರಣೆಯ ಸಂಚಾಲಕ ಎಮ್.ಜೆ.ಅಬ್ದುಲ್ ರಕೀಬ್, ಇನಾಯಿತುಲ್ಲಾ ಶಾಬಂದ್ರಿ, ಆಫ್ತಾಬ್ ಕೋಲಾ, ಅಬ್ದುರ್ರೆಹೆಮಾನ್ ಬಾತೀನ್, ಸಂಸ್ಥೆಯ ಹೆಚ್ಚುವರಿ ಕಾರ್ಯದರ್ಶಿ ಇಶಾಕ್ ಶಾಬಂದ್ರಿ, ಡಾ.ಜುಬೇರ್ ಕೋಲಾ, ಅಜೀಮ್ ಅಂಬಾರಿ ಮೊದಲಾದವರು ಉಪಸ್ಥಿತರಿದ್ದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...