ಭಟ್ಕಳ-ಹೊನ್ನಾವರ ವಿಧಾನಸಭಾ ಚುನಾವಣೆ; ಕಾಂಗ್ರೇಸ್ ಬೆಂಬಲಕ್ಕೆ ನಿಂತ ಕೆನರಾ ಕಲೀಝ್ ಕೌನ್ಸಿಲ್

Source: sonews | By sub editor | Published on 1st April 2018, 5:06 PM | Coastal News | Gulf News | Special Report | Don't Miss |


•    ತಂಝೀಮ್ ನಡೆ ಇನ್ನೂ ನಿಗೂಢ


•    ಅಡಕತ್ತರಿಯಲ್ಲಿ ಶಾಬಂದ್ರಿ ರಾಜಕೀಯ ಭವಿಷ್ಯ


ಭಟ್ಕಳ: ಕರಾವಳಿಯ ಶರಾವತಿ ನದೀ ತೀರದ ಸುಮಾರು 29ಕ್ಕೂ ಹೆಚ್ಚು ಜಮಾಅತ್ ಗಳ ಒಕ್ಕೂಟವಾಗಿರುವ ಗಲ್ಫ್‍ನಲ್ಲಿ ಸ್ಥಾಪಿತ ಕೆನರಾ ಮುಸ್ಲಿಮ್ ಖಲೀಝ್ ಕೌನ್ಸಿಲ್ ನ ಮಹಾಸಭೆಯು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾವನ್ನು ತೆಗೆದುಕೊಂಡಿದೆ ಎಂದು ಕೌನ್ಸಿಲ್ ಅಧ್ಯಕ್ಷ ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್   ಜಾಲಾತಾಣ ಸಾಹಿಲ್ ಆನ್ ಲೈನ್ ಗೆ ತಿಳಿಸಿದ್ದಾರೆ.


ಸೌದಿ ಅರೆಬಿಯಾದ ಜಿದ್ದಾ ದಲ್ಲಿ ನಡೆದ ಮಹಾಸಭೆಯಲ್ಲಿ ಕರ್ನಾಟಕ ಕರಾವಳಿಯ ಶರಾವತಿ ನದಿತೀರದ ಭಟ್ಕಳ, ಮುರುಢೇಶ್ವರ, ಮಂಕಿ, ವಲ್ಕಿ, ಕುರ್ವಾ,ಹೊನ್ನಾವರ, ಸಂಶಿ, ಉಪ್ಪಾಣಿ, ಹೇರಾಂಗಡಿ, ಗೇರುಸೊಪ್ಪಾ, ಅಲ್ಲದೆ ಗಂಗೋಳಿ, ಶಿರೂರು,ಬೈಂದೂರು ಭಾಗದ 29ಕ್ಕೂ ಹೆಚ್ಚು ಜಮಾಅತ್ ಗಳ ಒಕ್ಕೂಟವಾಗಿರುವ ಕೆನರಾ ಖಲೀಝ್ ಕೌನ್ಸಿಲ್ ಸರ್ವಾನುಮತದೊಂದಿಗೆ ನಿರ್ಣಯವನ್ನು ಕೈಗೊಂಡಿದ್ದು, ಇಡೀ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ಆಡಳಿತ ಚುಕ್ಕಾಣಿ ಹಿಡಿಯಲಿದ್ದು ಇದನ್ನು ಪರಿಗಣಿಸುತ್ತ ಕೆನರಾ ಕೌನ್ಸಿಲ್ ಮಹಾಸಭೆಯೂ ಕೂಡ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ ಆದರೆ, ಅದಕ್ಕೂ ಪೂರ್ವ ಭಟ್ಕಳದ ತಂಝೀಮ್ ಸಂಸ್ಥೆಯು ಕಾಂಗ್ರೇಸ್ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿ ಮುಸ್ಲಿಮ ಸಮುದಾಯದ ಸಮಸ್ಯೆಗಳ ಕುರಿತು ಚರ್ಚಿಸಿ ಅವುಗಳನ್ನು ಪರಿಹರಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು, ಮಹಾಸಭೆಯಲ್ಲಿ ಎಲ್ಲ 29 ಜಮಾಅತ್ ಗಳ ಪ್ರತಿನಿಧಿಗಳು ಕಾಂಗ್ರೇಸ್ ಪಕ್ಷದ ಕೈಬಲಪಡಿಸುವ ಕುರಿತಂತೆ ಒಕ್ಕೋರಲಿನಿಂದ ನಿರ್ಣಯವನ್ನು ಕೈಗೊಂಡಿದ್ದು ಇದಕ್ಕಾಗಿ ಎಲ್ಲ ರೀತಿಯ ಸಹಾಯ ಸಹಕಾರ ಕೌನ್ಸಿಲ್ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.   

ಕೌನ್ಸಿಲ್ ನಿರ್ಣಯಗಳನ್ನು ಭಟ್ಕಳದ ತಂಝೀಮ್ ಸಂಸ್ಥೆಯು ಗೌರವಿಸುತ್ತದೆ ಮತ್ತು ನಮ್ಮ ನಿರ್ಣಯಗಳಿಗೆ ಅನುಗುಣವಾಗಿ ತನ್ನ ನಿರ್ಣಯವನ್ನು ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ ಬಾಷಾ, ಒಂದು ವೇಳೆ ತಂಝೀಮ್ ನಿಮ್ಮ ನಿರ್ಣಯಗಳನ್ನು ಒಪ್ಪಿಕೊಳ್ಳದೆ ಇದ್ದರೆ ಏನು ಮಾಡುವಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ತಂಝಿಮ್ ಕೌನ್ಸಿಲ್ ನ ನಿರ್ಣಯಗಳನ್ನು ಒಪ್ಪಿಕೊಳ್ಳದೆ ಇರಲು ಸಾಧ್ಯವಿಲ್ಲ ಏಕೆಂದರೆ ಕೆನರಾ ಖಲೀಝ್ ಕೌನ್ಸಿಲ್ ನಲ್ಲಿ ಭಟ್ಕಳ ಸೇರಿದಂತೆ ಶರಾವತಿ ನದಿ ತೀರದ ಪ್ರಮುಖ 29ಜಮಾಅತ್ ಗಳ ಪ್ರತಿನಿಧಿಗಳ ಒಕ್ಕೋರಲಿನ ನಿರ್ಣಯ ಇದಾಗಿದ್ದು ತಂಝೀಮ್ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸುತ್ತದೆ ಎಂದರು. 

ಭಟ್ಕಳ ಮುಸ್ಲಿಮ್ ಸಮುದಾಯದ ಮುಖಂಡ  ಎಸ್.ಎಂ.ಸೈಯ್ಯದ್ ಖಲೀಲುರ್ರಹ್ಮಾನ್ ಸಹ ಈ ಬಾರಿ ಎಲ್ಲ ಜಮಾಅತ್ ಪ್ರತಿನಿಧಿಗಳು ಕಾಂಗ್ರೇಸ್ ಪಕ್ಷದ ಬೆಂಬಲಕ್ಕೆ ನಿಂತಿವೆ. ಇಂತಹ ಸಂದರ್ಭದಲ್ಲಿ ತಂಝೀಮ್ ನಿರ್ಣಯವೂ ಕೂಡ ಇದಕ್ಕೆ ಹೊರತಾಗಿರುವುದಿಲ್ಲ ಎಂದ ಅವರು ಕಾಂಗ್ರೇಸ್ ಮುಖಂಡರೊಂದಿಗೆ ಮಾತುಕತೆ ನಡೆಸಿ ಅಭ್ಯರ್ಥಿಯ ಘೋಷಣೆಯಾದ ಬಳಿಕ ತಂಝೀಮ್ ಕಾರ್ಯಾಲಯಕ್ಕೆ ಹೋಗಿ ಮುಖಂಡರೊಂದಿಗೆ ಚರ್ಚಿಸಲು ತಿಳಿಸುತ್ತೇನೆ ಎಂದರು. 

ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೆ ಭಟ್ಕಳ ವಿಧಾನಸಭಾ ಕ್ಷೇತ್ರದ ಮುರುಡೇಶ್ವರ, ಮಂಕಿ, ವಲ್ಕಿ, ಮತ್ತು ಶರಾವತಿ ನದಿ ತೀರದ ಸ್ಥಳಿಯ ಜಮಾಅತ್ ಗಳು ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸುತ್ತಿವೆ ಎಂಬ ಸುದ್ದಿ ಹರಿದಾಡುತ್ತಿದ್ದು ಇಂತಹ ಸಂದರ್ಭದಲ್ಲಿ ಕೆನರಾ ಖಲೀಝ್ ಕೌನ್ಸಿಲ್ ಕೂಡ ಕಾಂಗ್ರೇಸ್ ಪಕ್ಷದ ಪರ ಬ್ಯಾಟಿಂಗ್ ಮಾಡಿದ್ದು ಮುಂದಿನ ದಿನಗಳಲ್ಲಿ ತಂಝಿಮ್ ನಡೆ ಏನು ಎಂಬುದರ ಕೂತುಹಲ ಎಲ್ಲರಲ್ಲಿಯೂ ಉಂಟಾಗುತ್ತಿದೆ. (ಫೋಟೊ: ಕೆನರಾ ಕೌನ್ಸಿಲ್ ಸಭೆ ಜಿದ್ದಾ)

•    ತಂಝೀಮ್ ನಡೆ ನಿಗೂಢ

ಕೆನಾರ ಕೌನ್ಸಿಲ್ ಕಾಂಗ್ರೇಸ್ ಪಕ್ಷದ ಬೆಂಬಲಕ್ಕೆ ನಿಂತುಕೊಂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಕುರಿತಂತೆ ಇಲ್ಲಿನ ಪ್ರಮುಖ ರಾಜಕೀಯ ಸಂಸ್ಥೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝಿಮ್ ನ ನಡೆ ಇನ್ನೂ ಕೂಡ ನಿಗೂಢವಾಗಿದೆ. ಎಲ್ಲ ರಾಜಕೀಯ ಸಂಬಂಧ ನಿರ್ಣಯಗಳನ್ನು ಮೊದಲಿನಿಂದಲೂ ತಂಝೀಮ್ ಸಂಸ್ಥೆಯೇ ಕೈಗೊಳ್ಳುತ್ತಿದ್ದು ಈಗ ಒಂದು ಹೆಜ್ಜೆ ಮುಂದೆ ಹೋಗಿ ತಂಝೀಮ್ ಸಂಸ್ಥೆಯನ್ನು ಓವರ್ ಟೇಕ್ ಮಾಡಿರುವ ಕೆನರಾ ಖಲೀಝ್  ಕೌನ್ಸಿಲ್ ತಂಝೀಮ್ ಸಂಸ್ಥೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಈ ಕುರಿತಂತೆ ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಝಿಯರನ್ನು ಸಾಹಿಲ್ ಆನ್ ಲೈನ್  ಮಾತನಾಡಿದ್ದು ‘ಕೆನರಾ ಕೌನ್ಸಿಲ್ ಎಂಬುದು ಕೆಲ ಬೆರಳೆಣಿಕೆಯ ಜನರು ಕುಳಿತು ಮಾಡಿರುವ ಒಂದು ಸಂಸ್ಥೆಯಾಗಿದ್ದು ಅವರು ತಮ್ಮ ಮನಸ್ಸಿಗೆ ತೋಚಿದಂತೆ ನಿರ್ಣಯವನ್ನು ಕೈಗೊಂಡಿದ್ದಾರೆ. ಭಟ್ಕಳದಲ್ಲಿ ಇನ್ನೂ ಯಾವುದೇ ಪಕ್ಷ ತನ್ನ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಅಭ್ಯರ್ಥಿಗಳ ಘೋಷಣೆಯಾದ ಬಳಿಕ ನಾವು ಈ ಕುರಿತು ಕುಳಿತು ನಿರ್ಣಯವನ್ನು ಕೈಗೊಳ್ಳುತ್ತೇವೆ. ಈಗಾಗಲೇ ಹಲವು ಸುತ್ತಿನ ಸಭೆಗಳು ನಡೆದಿವೆ. ನಾವು ಯಾರನ್ನು ಬೆಂಬಲಿಸಬೇಕು ಎಂಬ ಕುರಿತು ಅಭ್ಯರ್ಥಿಗಳ ಘೋಷಣೆಯಾದ ಬಳಿಕವಷ್ಟೇ ನಿರ್ಣಯವನ್ನು ಕೈಗೊಳ್ಳಲಾಗುವುದು. ಇದಕ್ಕೂ ಪೂರ್ವ ನಿರ್ಣಯವನ್ನು ಕೈಗೊಳ್ಳುವುದು ಮೂರ್ಖತನವಾದೀತು ಎಂದು ತಿಳಿಸಿದ್ದಾರೆ.

 

•    ಅಡಕತ್ತರಿಯಲ್ಲಿ ಶಾಬಂದ್ರಿ ಭವಿಷ್ಯ

ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ 50ರಿಂದ 55ಸಾವಿರ ಮುಸ್ಲಿಮ್ ಮತದಾರರಿದ್ದು ಇದರ ಆಧಾರದಲ್ಲೇ ಕಳೆದ ಬಾರಿ ತಂಝೀಮ್ ಸಂಸ್ಥೆಯು ಜೆಡಿಎಸ್ ಅಭ್ಯರ್ಥಿ ಇನಾಯತುಲ್ಲಾ ಶಾಬಂದ್ರಿಯನ್ನು ಬೆಂಬಲಿಸಿತ್ತು. ಆದರೆ ಗೌಡ ಸಮುದಾಯದ ಮತಗಳು ಕೈಕೊಟ್ಟಿದ್ದರಿಂದ ಕೇವಲ 5ಸಾವಿರ ಮತಗಳ ಅಂತರದೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆಗಿನ ಟ್ರೆಂಡ್ ನೋಡಿಯೇ ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಕುಮಾರ್ ಸ್ವಾಮಿ ಈ ಬಾರ ಎರಡು ತಿಂಗಳು ಮುಂಚೆಯೇ ಭಟ್ಕಳಕ್ಕೆ ಇನಾಯತುಲ್ಲಾ ಶಾಬಂದ್ರಿಯೇ ಜೆ.ಡಿ.ಎಸ್. ಅಭ್ಯರ್ಥಿ ಎಂದು ಘೋಷಣೆಯೂ ಮಾಡಿದ್ದರು. ಆದರೆ ಈಗ ಮುಸ್ಲಿಮ್ ಸಮುದಾಯದವರೇ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ಘೋಷಣೆ ಮಾಡಿದ್ದರಿಂದಾಗಿ ಮುಸ್ಲಿಮ್ ಮತದಾರರನ್ನೇ ನಂಬಿಕೊಂಡಿದ್ದ ಇನಾಯತುಲ್ಲಾ ಶಾಬಂದ್ರಿಯ ರಾಜಕೀಯ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿಕೊಂಡಂತಾಗಿದೆ. 

ಈ ಕುರಿತಂತೆ ತಮ್ಮ ಪ್ರತಿಕ್ರಿಯೇ ವ್ಯಕ್ತಪಡಿಸಿದ ಶಾಬಂದ್ರಿ, ತಂಝೀಮ್ ಸಂಸ್ಥೆಯ ಮೇಲೆ ತನಗೆ ಸಂಪೂರ್ಣ ವಿಶ್ವಾಸವಿದೆ ಅವರು ತಮ್ಮ ಏಕೈಕ ಮುಸ್ಲಿಮ್ ಅಭ್ಯರ್ಥಿಯ ಕೈಬಿಡುವುದಿಲ್ಲ. ಖಲಿಝ್ ಕೌನ್ಸಿಲ್ ಗಲ್ಫ್ ನಲ್ಲಿ ಕುಳಿತುಕೊಂಡು ನಿರ್ಣಯ ಕೈಗೊಂಡಿದೆ ಎಂಬ ಸುದ್ದಿ ನನ್ನ ಗಮಕ್ಕೆ ಬಂದಿದ್ದು ಅವರಿಗೆ ಭಟ್ಕಳ ಕ್ಷೇತ್ರದ ಸ್ಥಿತಿಗತಿಯ ಕುರಿತ ಮಾಹಿತಿ ಕೊರತೆಯಿಂದಾಗಿ ಇಂತಹ ನಿರ್ಣಯ ಕೈಗೊಂಡಿರಬಹುದು. ಆದರೆ ತಂಝೀಮ್ ಇನ್ನೂ ತನ್ನ ನಿರ್ಣಯವನ್ನು ಕೈಗೊಂಡಿಲ್ಲ. ಅದು ನನ್ನ ಪರವಾಗಿ ನಿರ್ಣಯವನ್ನು ಕೈಗೊಳ್ಳುತ್ತೇ ಎಂಬ ವಿಶ್ವಾಶ ವ್ಯಕ್ತಿಪಡಿಸಿದ್ದಾರೆ. ಕುಮಾರ್ ಸ್ವಾಮಿಯವರು ಭಟ್ಕಳಕ್ಕೆ ಬಂದು ಹೋದ ನಂತರ ಸಂಪೂರ್ಣ ಚಿತ್ರಣ ಬದಲಾಗಿದೆ. ಹಿಂದೂ ಮತದಾರರು ನನ್ನ ಬೆಂಬಲಕ್ಕೆ ಇದ್ದಾರೆ. ಇಂತಹ ಸಂದರ್ಭದಲ್ಲಿ ತಂಝೀಮ್ ಕೂಡ ನನ್ನ ಪರವಾಗಿದೆ ಎಂದು ತಿಳಿಸಿದರು.

•    ಎಂ.ಆರ್.ಮಾನ್ವಿ

Read These Next

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...