ಜೆ.ಡಿ.ಎಸ್ ಪಾಲಾದ ಕೆನರಾ ಲೋಕಾಸಭಾ ಕ್ಷೇತ್ರ; ಕಾಂಗ್ರೇಸಿಗರಲ್ಲಿ ತಳಮಳ

Source: sonews | By Staff Correspondent | Published on 14th March 2019, 12:17 AM | Coastal News | Special Report | Don't Miss |

ಭಟ್ಕಳ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೇಸ್ ಜೆ.ಡಿ.ಎಸ್ ಪಕ್ಷಗಳ ಮೈತ್ರಿ ಸರ್ಕಾರವು ಲೋಕಸಭಾ ಚುನಾವಣೆಗೂ ಮೈತ್ರಿಯನ್ನು ಮಾಡಿಕೊಂಡಿದ್ದು ಕಾಂಗ್ರೇಸ್ ಪಕ್ಷದ ಪ್ರಭಲ ಶಕ್ತಿಯಾಗಿರುವ ಉತ್ತರಕನ್ನಡ ಜಿಲ್ಲೆಯ ಕೆನರಾ ಲೋಕಸಭಾ ಕ್ಷೇತ್ರ ಜೆಡಿಎಸ್ ಪಕ್ಷದ ಪಾಲಾಗಿದೆ.

ಕಳೆದ ಹಲವು ದಿನಗಳಿಂದ ಮೈತ್ರಿಪಕ್ಷದಲ್ಲಿ ಸೀಟು ಹಂಚಿಕೆ ಕುರಿತಂತೆ ಉಂಟಾದ ಗೊಂದಲಗಳು ಕೊನೆಗೆ ನಿವಾರಣೆಯಾಗಿದ್ದು ರಾಜ್ಯದ ಎಂಟು ಕ್ಷೇತ್ರಗಳನ್ನು ಜೆ.ಡಿಎಸ್ ಪಕ್ಷದ ಪಾಲಾಗಿದ್ದು ಅದರಲ್ಲಿ ಉತ್ತರಕನ್ನಡ ಜಿಲ್ಲೆಯ ಕೆನರಾ ಲೋಕಸಭಾ ಕ್ಷೇತ್ರವು ಒಂದಾಗಿದೆ. 

ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಜೆ.ಡಿ.ಎಸ್ ಕಾರ್ಯಸಾಧನೆ ಶೂನ್ಯವಾಗಿದ್ದು ಕೆಲ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಅದು ಬೆರಳೆಣಿಕೆಯ ಕಾರ್ಯಕರ್ತರನ್ನು ಹೊಂದಿದೆ. ಅದಾಗ್ಯೂ ಜೆ.ಡಿ.ಎಸ್ ಈ ಕ್ಷೇತ್ರವನ್ನು ಪಡೆದುಕೊಂಡಿದ್ದು ಮತ್ತು ಪ್ರಭಲ ಕಾಂಗ್ರೇಸ್ ಪಕ್ಷ ತನ್ನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು ಕಾಂಗ್ರೇಸ್ ಕಾರ್ಯಕರ್ತರಲ್ಲಿ ತಳಮಳವನ್ನುಂಟು ಮಾಡಿದೆ. 
ಕಾಂಗ್ರೇಸ್ ಕಾರ್ಯಕರ್ತರ ಅಸಮಧಾನದ ನಡುವೆಯೂ ಈ ಕ್ಷೇತ್ರವನ್ನು ಜೆ.ಡಿಎಸ್ ಪಾಲಾಗುವಂತೆ ನೋಡಿಕೊಂಡಿರುವ ಜಿಲ್ಲೆಯ ಕಾಂಗ್ರೇಸ್ ಪ್ರಭಲ ನಾಯಕರ ಸ್ವಹಿತಾಸಕ್ತಿಯು ಇದರ ಹಿಂದೆ ಕೆಲಸ ಮಾಡಿದೆ ಎಂಬ ಮಾತುಗಳು ಕಾಂಗ್ರೇಸ್ ಪಕ್ಷದ ವಲಯದಿಂದ ಕೇಳಿ ಬರುತ್ತಿದೆ. 

ಕಳೆದ 25 ವರ್ಷಗಳಿಂದ ಬಿಜೆಪಿಯ ಅನಂತ್ ಕುಮಾರ್ ಹೆಗಡೆ ನಾಗರಹಾವಿನಂತೆ ಹೆಡೆ ಬಿಚ್ಚಿಕೊಂಡು ಈ ಕ್ಷೇತ್ರವನ್ನು ಆಳುತ್ತಿದ್ದಾರೆ. ಕಾಂಗ್ರೇಸ್ ಪಕ್ಷ ಎಷ್ಟೇ ಪ್ರಯತ್ನ ಮಾಡಿದ್ದರೂ ಅವರಿಂದ ಈ ಕ್ಷೇತ್ರವನ್ನು ಕಸಿದುಕೊಳ್ಳಲು ಸಾಧ್ಯವಾಗದೆ ಮತ್ತೇ ಸೋಲಿನ ಅನುಭವ ಪಡೆಯಲು ಸಿದ್ದರಿಲ್ಲದ ಕಾಂಗ್ರೇಸ್ ನ ಜಾಣ ನಾಯಕರು ಹೇಗಾದರೂ ಸೋಲುವ ಕ್ಷೇತ್ರ ಅದನ್ನು ಜೆ.ಡಿ.ಎಸ್ ಗೆ ಬಿಟ್ಟುಕೊಟ್ಟು ಸೋತರಾಯಿತು ಎಂದು  ದೊಣ್ಣೆಯೂ ಮುರಿಯದೆ ಇತ್ತ ಹಾವು ಸಾಯದಂತೆ ನೋಡಿಕೊಂಡಿರುವುದು ಮಾತ್ರ ಕಾಂಗ್ರೇಸ್ ನಾಯಕರ ರಾಜಕೀಯ ಮುತ್ಸದ್ದಿತನವನ್ನು ಮೆಚ್ಚಲೇಬೇಕು.
 

ಅನಂತ್ ಗೆಲುವಿಗೆ ದೇಶಪಾಂಡೆ ಪರೋಕ್ಷ ಕಾರಣ: ಬಿಜೆಪಿಯಿಂದ ಅನಂತ್ ಕುಮಾರ್ ಹೆಗಡೆಯವರ ಗೆಲುವು ಈ ಬಾರಿಯೂ ನಿಶ್ಚಿತ ಎಂದೇ ಹೇಳಲಾಗುತ್ತಿದ್ದು ಇದಕ್ಕಾಗಿ ಜಿಲ್ಲೆಯ ರಾಜಕೀಯದಲ್ಲಿ ಗಟ್ಟಿತಳವನ್ನು ಮಾಡಿಕೊಂಡಿರುವ ದೇಶಪಾಂಡೆಯವರು ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದು ಇದಕ್ಕೆ ಹಲವು ನಿದರ್ಶನಗಳು ನೀಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬ್ರಾಹ್ಮಣ, ಮುಸ್ಲಿಮ, ನಾಯ್ಕ(ನಾಮಧಾರಿ) ಸಮುದಾಯದ ಮತಗಳು ಸಮಬಲದಲ್ಲಿದ್ದು ಕಾಂಗ್ರೇಸ್ ನಿಂದ ನಾಮಧಾರಿ ಸಮಾಜದ ಧುರಿಣ ಬಿ.ಕೆ.ಹರಿಪ್ರಸಾದ್ ರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಲ್ಲಿ ಖಂಡಿತವಾಗಿಯೂ ಗೆಲುವು ನಿಶ್ಚಿತವಾಗಿದ್ದು ಬಿ.ಕೆ.ಹರಿಪ್ರಸಾದ್ ಜಿಲ್ಲೆಗೆ ಬಂದರೆ ಎಲ್ಲಿ ತನ್ನ ಬೇಳೆ ಬೇಯುವುದು ಕಡಿಮೆಯಾಗುತ್ತದೆ ಎನ್ನುವ ಭಯದಿಂದ ಹೇಗಾದರೂ ಮಾಡಿ ಅವರನ್ನು ಇಲ್ಲಿ ಬರದಂತೆ ನೋಡಿಕೊಳ್ಳುವುದು, ಇದೇ ಹೊತ್ತಿನಲ್ಲಿ ಜೆಡಿಎಸ್ ಪಕ್ಷಕ್ಕೊಂದು ಸೀಟು ಕೊಡಿಸುವುದು. ಈ ಎರಡನ್ನು ದೇಶಪಾಂಡೆಯವರು ಏಕಕಾಲಕ್ಕೆ ಮಾಡಿದ್ದು ಅತ್ತ ಹಾವು ಸಾಯದೆ ಇತ್ತ ಕೋಲು ಮುರಿಯದೆ ತಮ್ಮ ಸ್ವಹಿತಾಸಕ್ತಿಯನ್ನು ಪೂರ್ಣಗೊಳಿಸಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಜೆ.ಡಿಎಸ್ ನವರು ಮಾತ್ರ ಈ ಕ್ಷೇತ್ರವನ್ನು ಪಡೆದುಕೊಂಡು ಹಗಲು ಕಂಡ ಬಾವಿಯಲ್ಲಿ ರಾತ್ರಿ ಹೋಗಿ ಬಿದ್ದಂತಹ ಸ್ಥಿತಿಯನ್ನು ತಾವೆ ನಿರ್ಮಿಸಿಕೊಂಡಿದ್ದಾರೆ. 

ಜೆ.ಡಿ.ಎಸ್ ನಿಂದ ಕಳೆದ ಬಾರಿ ಕಾರವಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ ಆನಂದ ಅಸ್ನೋಟಿಕರ್, ಶಿರಸಿ ಕ್ಷೇತ್ರದ ಶಶಿಭೂಷಣ ಹೆಗಡೆ ಹೆಸರು ಸಧ್ಯಕ್ಕೆ ಕೇಳಿ ಬರುತ್ತಿದ್ದು ಅಧಿಕೃತವಾಗಿ ಪಕ್ಷವು ಇನ್ನಷ್ಟೆ ಅಭ್ಯರ್ಥಿಯ ಹೆಸರನ್ನು ಘೋಷಿಸಬೇಕಾಗಿದೆ.
 

ಜೆಡಿಎಸ್ ಗೆ ಸಿಕ್ಕ ಕ್ಷೇತ್ರಗಳು ಯಾವುವು? ಇಲ್ಲಿದೆ ಸಂಪೂರ್ಣ ವಿವರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಮೈತ್ರಿ ಸರಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ 20 ಹಾಗೂ ಜೆಡಿಎಸ್ 8 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಅಂತಿಮವಾಗಿದೆ.

ಬುಧವಾರ ಕೇರಳದ ಕೊಚ್ಚಿನ್‌ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಾನೀಶ್ ಅಲಿ, ರಾಜ್ಯದಲ್ಲಿ ಕ್ಷೇತ್ರಗಳ ಹಂಚಿಕೆ ಕುರಿತು ಚರ್ಚಿಸಿ, ಪಟ್ಟಿಯನ್ನು ಬಿಡುಗಡೆ ಮಾಡಿದರು.

ಜೆಡಿಎಸ್ ಪಕ್ಷಕ್ಕೆ ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಹಾಸನ, ಮಂಡ್ಯ, ಬೆಂಗಳೂರು ಉತ್ತರ ಹಾಗೂ ವಿಜಯಪುರ(ಎಸ್ಸಿ) ಕ್ಷೇತ್ರಗಳನ್ನು ಕಾಂಗ್ರೆಸ್ ಬಿಟ್ಟು ಕೊಟ್ಟಿದೆ. ರಾಜ್ಯದಲ್ಲಿ ಹಾಲಿ ಕಾಂಗ್ರೆಸ್ ಸಂಸದರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳನ್ನು ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೇಳುತ್ತಿದ್ದರೂ, ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ ಪ್ರತಿನಿಧಿಸುತ್ತಿರುವ ತುಮಕೂರು ಕ್ಷೇತ್ರ ಕೈ ತಪ್ಪಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದ ಮೈಸೂರು-ಕೊಡುಗು ಕ್ಷೇತ್ರವನ್ನು ಕಾಂಗ್ರೆಸ್ ತನ್ನ ಬಳಿ ಉಳಿಸಿಕೊಳ್ಳಲು, ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ ಎಂದು ತಿಳಿದು ಬಂದಿದೆ.

ಮಾಜಿ ಕೇಂದ್ರ ಸಚಿವರಾದ ಡಾ.ಎಂ.ವೀರಪ್ಪ ಮೊಯ್ಲಿ ಪ್ರತಿನಿಧಿಸುತ್ತಿರುವ ಚಿಕ್ಕಬಳ್ಳಾಪುರ ಹಾಗೂ ಕೆ.ಎಚ್.ಮುನಿಯಪ್ಪ ಪ್ರತಿನಿಧಿಸುತ್ತಿರುವ ಕೋಲಾರ ಲೋಕಸಭಾ ಕ್ಷೇತ್ರಗಳಿಗೂ ಜೆಡಿಎಸ್ ಬೇಡಿಕೆ ಇಟ್ಟಿತ್ತು. ಆದರೆ, ಕಾಂಗ್ರೆಸ್ ಈ ಕ್ಷೇತ್ರಗಳನ್ನು ಬಿಟ್ಟುಕೊಡಲು ಸಿದ್ಧವಾಗಿಲ್ಲ.

ಇನ್ನುಳಿದಂತೆ, ಅಲ್ಪಸಂಖ್ಯಾತ ಸಮುದಾಯದ ಮತದಾರರು ನಿರ್ಣಾಯಕವಾಗಿರುವ ವಿಜಯಪುರ ಮೀಸಲು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದೆ. ಸ್ಥಳೀಯ ಕಾಂಗ್ರೆಸ್ ನಾಯಕರ ವಿರೋಧದ ನಡುವೆಯೂ ಉತ್ತರ ಕನ್ನಡ ಕ್ಷೇತ್ರ ಜೆಡಿಎಸ್ ಪಾಲಾಗಿದೆ.

ಕಾಂಗ್ರೆಸ್ ಸ್ಪರ್ಧೆ: ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಮೈಸೂರು-ಕೊಡಗು, ದಕ್ಷಿಣ ಕನ್ನಡ(ಮಂಗಳೂರು), ಬೀದರ್, ಬೆಳಗಾವಿ, ರಾಯಚೂರು(ಎಸ್ಟಿ), ಕೊಪ್ಪಳ, ಬಳ್ಳಾರಿ(ಎಸ್ಟಿ), ಚಿತ್ರದುರ್ಗ(ಎಸ್ಸಿ), ದಾವಣಗೆರೆ, ಹಾವೇರಿ, ಕಲಬುರ್ಗಿ(ಎಸ್ಸಿ), ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೋಲಾರ(ಎಸ್ಸಿ), ಚಿಕ್ಕೋಡಿ-ಸದಲಗಾ, ಧಾರವಾಡ, ಚಾಮರಾಜನಗರ (ಎಸ್ಸಿ) ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ.

ಸುಮಲತಾಗೆ ನಿರಾಶೆ: ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದರಿಂದ, ಕಾಂಗ್ರೆಸ್ ಟಿಕೆಟ್ ಸಿಗಬಹುದು ಎಂಬ ಆಕಾಂಕ್ಷೆ ಹೊಂದಿದ್ದ ಹಿರಿಯ ನಟಿ ಸುಮಲತಾ ಅಂಬರೀಶ್‌ಗೆ ನಿರಾಸೆಯಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವುದು ಅಂತಿಮವಾಗಿದೆ.

ಹಾಸನ ಲೋಕಸಭಾ ಕ್ಷೇತ್ರದಿಂದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧಿಸುತ್ತಿರುವುದಾಗಿ ಇಂದು ಘೋಷಿಸಿರುವ ದೇವೇಗೌಡ, ನಾಳೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಗೋ ಬ್ಯಾಕ್ ದೇವೇಗೌಡ: ನಮ್ಮ ಸಂಸದ ನಮ್ಮ ಹೆಮ್ಮೆ, ಮುದ್ದಹನುಮೇಗೌಡ ನಮ್ಮ ನಾಯಕ. ದೇವೇಗೌಡರೇ ತುಮಕೂರಿಗೆ ವಲಸೆ ಬರಬೇಡಿ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ಇದೀಗ, ತುಮಕೂರು ಕ್ಷೇತ್ರವನ್ನು ಜೆಡಿಎಸ್ ಬಿಟ್ಟು ಕೊಟ್ಟಿರುವುದರಿಂದ, ಮುಂದಿನ ದಿನಗಳಲ್ಲಿ ರಾಜಕೀಯ ಪರಿಸ್ಥಿತಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಹಾಗೂ ತುಮಕೂರು ಎರಡು ಕ್ಷೇತ್ರಗಳಿಂದ ಎಲ್ಲಿ ಸ್ಪರ್ಧಿಸಬೇಕೆಂದು ಗೊಂದಲದಲ್ಲಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಬಹುತೇಕ ಬೆಂಗಳೂರು ಉತ್ತರದಿಂದಲೇ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...