ಬಟನ್ಸ್ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ

Source: S.O. News Service | By Mohammed Ismail | Published on 12th June 2018, 7:04 PM | State News |

ಕೋಲಾರ: ಆ್ಯಸ್ಟರ್ ಕರ್ನಾಟಕದಲ್ಲಿ ಬಟನ್ಸ್ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿರುವ ಕಡಿಮೆ ಅವಧಿಯ ಹೂವಿನ ಬೆಳೆ. ಇದು ದೊಡ್ಡ ರೈತರಿಗಲ್ಲದೆ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ಲಾಭದಾಯಕವಾಗಿದ್ದು, ಸಮಗ್ರ ಕೃಷಿ ಪದ್ಧತಿಯಲ್ಲಿ ಯಶಸ್ವಿಯಾಗಿ ಬೆಳೆಯಬಹುದಾಗಿದೆ. ಆ್ಯಸ್ಟರ್‍ನ ಬಿಡಿ ಹೂ ಹಾಗೂ ಕಾಂಡಸಹಿತ ಹೂಗಳು ಬಳಕೆಯಲ್ಲಿವೆ. ನಮ್ಮ ರಾಜ್ಯದಲ್ಲಿ ತುಮಕೂರು, ಬೆಂಗಳೂರು, ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಬೆಳೆಯಲಾಗುತ್ತಿದೆ.

ಮಣ್ಣು ಮತ್ತು ಹವಾಗುಣ: ಈ ಬೆಳೆಗೆ ಫಲವತ್ತಾದ ನೀರು ಬಸಿದು ಹೋಗುವಂತಹ ಮರಳು ಮಿಶ್ರಿತ ಗೋಡುಮಣ್ಣು ಸೂಕ್ತ. ಆ್ಯಸ್ಟರ್ ಬೆಳೆಯ ಬೇಸಾಯವನ್ನು ವರ್ಷವಿಡಿ ಮಾಡಬಹುದಾದರೂ, ಈ ಬೆಳೆಗೆ ತಂಪಾದ ವಾತಾವರಣ (ಚಳಿಗಾಲ) ತುಂಬಾ ಸೂಕ್ತವಾಗಿದ್ದು, ಮೇ-ಜೂನ್‍ನಲ್ಲಿ ನಾಟಿ ಮಾಡಿದ ಬೆಳೆಯಿಂದ ಅತ್ಯುತ್ತಮ ಇಳುವರಿಯನ್ನು ಪಡೆಯಬಹುದಾಗಿದೆ.

ತಳಿಗಳು: ರೈತರ ಅನುಕೂಲಕ್ಕಾಗಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಹೆಚ್ಚು ಇಳುವರಿ ನೀಡುವ ಕಾಮಿನಿ, ಪೂರ್ಣಿಮಾ, ವೈಲೆಟ್‍ಕುಷನ್, ಶಶಾಂಕ್, ಅರ್ಕಾಆಧ್ಯ ಮತ್ತು ಅರ್ಕಾ ಅರ್ಚನ ತಳಿಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೆ, ಫುಲೆಗಣೇಶ ವೈಟ್, ಫುಲೆಗಣೇಶ ಪಿಂಕ್, ಫುಲೆಗಣೇಶ ಪರ್ಪಲ್, ಫುಲೆಗಣೇಶ ವೈಲೆಟ್ ತಳಿಗಳನ್ನು ಸಹ ಬೆಳೆಯಬಹುದಾಗಿದೆ.

ಸಸ್ಯಾಭಿವೃದ್ಧಿ:- ಒಂದು ಹೆಕ್ಟೇರ್‍ಗೆ 750 ಗ್ರಾಂ ಬೀಜ ಬೇಕಾಗುತ್ತದೆ. ಸಸಿಗಳನ್ನು ಬೆಳೆಸಲು ಏರು ಮಡಗಳನ್ನು ತಯಾರಿಸಬೇಕು. ಒಂದು ಹೆಕ್ಟೇರ್‍ಗೆ ಬೇಕಾಗುವ ಸಸಿಗಳನ್ನು 7.5 ಮೀ, ಉದ್ದ, 1.2ಮೀ ಅಗಲ ಮತ್ತು 30ಸೆಂ.ಮೀ. ಎತ್ತರದ 4 ಏರು ಮಡಿಗಳಲ್ಲಿ ಬೆಳೆಸಬಹುದು. ಏರು ಮಡಿಗಳನ್ನು ಶೇ.0.2 ಆಕ್ಸಿಕ್ಲೋರೈಡ್ ದ್ರಾವಣದಿಂದ ನೆನೆಸಬೇಕು. ಬೀಜವನ್ನು ತೆಳುವಾಗಿ  (0.6ಮೀ ಆಳಕ್ಕೆ) ಹಾಕಿದ ನಂತರ, ಸಣ್ಣ ಗಾತ್ರದ ಮರಳು ಅಥವಾ ತೆಂಗಿನ ಒಟ್ಟಿನಿಂದ ಮುಚ್ಚಿ ನೀರನ್ನು ಸಿಂಪಡಿಸಬೇಕು. ಸಸಿಗಳು 4 ರಿಂದ 6 ವಾರಗಳಲ್ಲಿ ನಾಟಿ ಮಾಡಲು ಸಿದ್ಧವಾಗುತ್ತವೆ.

ಬೇಸಾಯ ಕ್ರಮಗಳು:- ಚೈನಾ ಆ್ಯಸ್ಟರ್ ಹೂವನ್ನು ಬೆಳೆಯಲು ಆಯ್ಕೆ ಮಾಡಿರುವ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು. ಒಂದು ಹೆಕ್ಟೇರಿಗೆ 20 ಟನ್ ಕೊಟ್ಟಿಗೆಗೊಬ್ಬರ, 9ಕೆ.ಜಿ. ಸಾರಜನಕ, 120ಕೆ.ಜಿ, ರಂಜಕ ಮತ್ತು 60ಕೆ.ಜಿ. ಪೊಟ್ಯಾಷ್ ಸತ್ವವುಳ್ಳ ರಾಸಾಯನಿಕ ಗೊಬ್ಬರವನ್ನು ಮಣ್ಣಿಗೆ ಸೇರಿಸಿ ಭೂಮಿಯನ್ನು ಹದ ಮಾಡಿಕೊಂಡು 30ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ನಾಟಿ ಮಾಡಿದ ಒಂದು ತಿಂಗಳ ನಂತರ ಕುಡಿ ಚಿವುಟಿ ಹೆಕ್ಟೇರಿಗೆ 9ಕೆ.ಜಿ. ಸಾರಜನಕವನ್ನು ಮೇಲು ಗೊಬ್ಬರವಾಗಿ ಮಣ್ಣಿಗೆ ಸೇರಿಸಬೇಕು. ಮಣ್ಣು ಮತ್ತು ಹವಾಗುಣದ ಅನುಗುಣವಾಗಿ 5 ರಿಂದ 7 ದಿನ ಅಂತರದಲ್ಲಿ ನೀರು ಹಾಯಿಸಬೇಕು. 

ಕೊಯ್ಲು ಮತ್ತು ಇಳುವರಿ:- ನಾಟಿಯಾದ ಮೂರುವರೆ ಅಥವಾ ನಾಲ್ಕು ತಿಂಗಳಲ್ಲಿ ಹೂ ಕೊಯ್ಲಿಗೆ ಬರುತ್ತದೆ. ಒಂದು ಹೆಕ್ಟೇರಿಗೆ 10 ರಿಂದ 12.5 ಟನ್ ಹೂವಿನ ಇಳುವರಿಯನ್ನು ಪಡೆಯಬಹುದು. ಒಂದು ಹೆಕ್ಟೇರಿಗೆ ಸುಮಾರು ರೂ.18000/- ದಿಂದ 20000/- ವರೆಗೆ ಖರ್ಚು ತಗಲಬಹುದು. ಪೂರ್ತಿ ಅರಳಿದ ಹೂಗಳನ್ನು ತೊಟ್ಟು ಸಹಿತ ಅಥವಾ ತೊಟ್ಟು ರಹಿತವಾಗಿ ಕೊಯ್ಲು ಮಾಡಬಹುದು. ಇಡೀ ಸಸ್ಯವನ್ನು ಕಿತ್ತಾಗ ಕೆಳಗಿನ ಹಾಗೂ ಹಾಳಾದ ಎಲೆಗಳನ್ನು ತೆಗೆದು ಸ್ವಚ್ಛ ನೀರಿರುವ ಬಕೇಟ್‍ನಲ್ಲಿ ತಕ್ಷಣವೇ ಇರಿಸಬೇಕು.
ಸಸ್ಯ ಸಂರಕ್ಷಣ ಕ್ರಮಗಳು :- ಹೇನು, ಥ್ರಿಪ್ಸ್, ಎಲೆ ತಿನ್ನುವ ಹುಳು, ಎಲೆ ಚುಕ್ಕೆ ರೋಗ, ಸೊರಗು ರೋಗ ಮತ್ತು ಹೂ ಅಂಗಮಾರಿ ರೋಗ (ನಂಜು ರೋಗ) ಇವು ಚೈನಾ ಆ್ಯಸ್ಟರ್‍ನಲ್ಲಿ ಸಾಮಾನ್ಯವಾಗಿ ಕಂಡು ಬರುವ ಕೀಟ ಮತ್ತು ರೋಗಗಳು.

ಹತೋಟಿ ವಿಧಾನ:- ಚೆನ್ನಾಗಿ ನೀರು ಬಸಿದು ಹೋಗುವಂತೆ ಮಾಡಿ ಬೆಳೆಯನ್ನು ಸೊರಗು ರೋಗದಿಂದ ರಕ್ಷಿಸಬೇಕು. ಸೊರಗು ರೋಗದ ನಿಯಂತ್ರಣಕ್ಕಾಗಿ 1 ಗ್ರಾಂ ಕಾರ್ಬೆಂಡೇಜಿಂ ಪ್ರತಿ ಲೀಟರ್ ನೀರಿಗೆ ಬೆರೆಸಿ ತೋಯಿಸಬೇಕು. ಕೀಟಗಳಾದ ಹೇನು, ಥ್ರಿಪ್ಸ್ ಹಾಗೂ ರೋಗಬಾಧೆ (ಎಲೆ ಚುಕ್ಕೆ ರೋಗ) ಕಂಡುಬಂದಾಗ ಬೆಳಗ್ಗೆ 2 ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್ ಮತ್ತು 2 ಗ್ರಾಂ ಮ್ಯಾಂಕೋಜೆಬ್‍ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೆಕು. ಬೇವಿನ ಬೀಜದ ಕಷಾಯ (ಶೇ.4ರ) ಅಥವಾ 1 ಮಿ.ಲೀ.ಆಕ್ಸಿಡೆಮಿಟಾನ್ ಮಿಥೈಲ್ ಅನ್ನು ಪ್ರತಿ ಲೀಟರ್ ನೀರಿನಲ್ಲೆ ಬೆರೆಸಿ ಸಿಂಪಡಿಸುವುದರಿಂದ ಹೂವು ಮತ್ತು ಕಾಯಿ ಕೊರಕ ಹುಳುಗಳನ್ನು ನಿಯಂತ್ರಿಸಬಹುದು. ಹೂಗಳು ಸಂಪೂರ್ಣವಾಗಿ ಎಲೆಗಳಾಗಿ ಪರಿವರ್ತನೆಯಾಗುವ ಅಂಗಮಾರಿ ರೋಗವು ಬಹಳಷ್ಟು ಆರ್ಥಿಕ ನಷ್ಟವುಂಟು ಮಾಡುತ್ತದೆ. ರೋಗ ಕಾಣಿಸಿಕೊಂಡ ಗಿಡಗಳನ್ನು ಕಿತ್ತೊಗೆದು ಇತರೆ ಗಿಡಗಳಿಗೆ ಹರಡದಂತೆ ಅಂತರವ್ಯಾಪಿ ಕೀಟನಾಶಕ ಮಾನೊಕ್ರೋಟೋಪಾಸ್ 2ಮಿ.ಲೀ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಹಾರ್ಟಿಕ್ಲಿನಿಕ್, ಕೋಲಾರ ಅಥವಾ ದೂರವಾಣಿ ಸಂಖ್ಯೆ 7829512236 ನ್ನು ಸಂಪರ್ಕಿಸಬಹುದಾಗಿದೆ.
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...