ಶಿಕ್ಷಣಕ್ಕೆ ಮನುಷ್ಯನ ಅಂತರ್ಯವನ್ನು ಬದಲಿಸುವ ಶಕ್ತಿ ಇದೆ : ಡಾ. ಜಿ.ಪರಮೇಶ್ವರ

Source: S.O. News Service | By Manju Naik | Published on 12th August 2018, 7:36 PM | Coastal News | Don't Miss |

ಭಟ್ಕಳ: ಪ್ರತಿ ವ್ಯಕ್ತಿಯ ಬದಲಾವಣೆಗೆ ಶಿಕ್ಷಣ ಕಾರಣವಾಗಿರುತ್ತದೆ. ಶಿಕ್ಷಣಕ್ಕೆ ಮನುಷ್ಯನ ಅಂತರ್ಯವನ್ನು ಬದಲಾಯಿಸುವ ಶಕ್ತಿ ಇದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.
ಅವರು ಇಲ್ಲಿನ ಅಂಜುಮನ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಅನಿವಾಸಿ ಭಟ್ಕಳದ ಉದ್ಯಮಿಗಳ ರಾಬಿತಾ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಹಣ ಮತ್ತು ಚಿನ್ನಾಭರಣಗಳಿಗಿಂತ ಶಿಕ್ಷಣಕ್ಕೆ ಹೆಚ್ಚಿನ ಮೌಲ್ಯ ಇದೆ. ಇದನ್ನು ವಿದ್ಯಾರ್ಥಿಗಳ ಪಾಲಕರು ಅರಿತುಕೊಳ್ಳಬೇಕು. ಭಾರತ ಉನ್ನತ ಮಟ್ಟದ ಮಾನವ ಸಂಪನ್ಮೂಲವನ್ನು ಹೊಂದಿದೆ. ಪ್ರತಿ ವರ್ಷ 70 ಸಾವಿರ ವೈದ್ಯರು, ಲಕ್ಷಾಂತರ ಇಂಜಿನೀಯರುಗಳು, ಪದವೀಧರರು ಹೊರ ಹೊಮ್ಮುತ್ತಿದ್ದಾರೆ. ಯಾವುದೇ ದೇಶಕ್ಕೆ ಹೋದರೂ ಭಾರತೀಯ ವೈದ್ಯರು, ಇಂಜಿನೀಯರು ಕಾಣ ಸಿಗುತ್ತಾರೆ. ಜಗತ್ತಿನಲ್ಲಿ ಭಾರತ, ಭಾರತದಲ್ಲಿ ಕರ್ನಾಟಕ ವೇಗವಾಗಿ ಬೆಳೆಯುತ್ತಿದ್ದು, ಅಂತರಾಷ್ಟ್ರೀಯ ಮಟ್ಟಕ್ಕೆ ಸ್ಪರ್ಧೆ ಒಡ್ಡುವ ಮಟ್ಟಕ್ಕೆ ಶಿಕ್ಷಣವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಸ್ವಾತಂತ್ರ್ಯ ನಂತರ ಕಳೆದ 70 ವರ್ಷಗಳಲ್ಲಿ ಭಾರತ ಬಹಳಷ್ಟು ಅಭಿವೃದ್ಧಿಯನ್ನು ಕಂಡಿದ್ದು, 250 ವರ್ಷಗಳ ಸ್ವಾತಂತ್ರ್ಯದ ಇತಿಹಾಸವನ್ನು ಹೊಂದಿರುವ ಯುರೋಪ್ ರಾಷ್ಟ್ರಗಳೊಡನೆ ತುಲನೆ ಮಾಡಿ ದೇಶದ ಅಭಿವೃದ್ಧಿಯನ್ನು ಹೀಗಳೆಯುವುದು ಸರಿಯಲ್ಲ. 1970ರ ಸಂದರ್ಭದಲ್ಲಿ ದೇಶ ಆಹಾರದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಾವು ಇದೀಗ ಬೇರೆ ದೇಶಕ್ಕೆ ಆಹಾರ ಧಾನ್ಯಗಳನ್ನು ರಫ್ತು ಮಾಡುವ ಹಂತವನ್ನು ತಲುಪಿದ್ದೇವೆ. ನಾವು ಏನನ್ನು ಸಾಧಿಸಿದ್ದೇವೆ ಎಂಬುದನ್ನು ದೇಶವಾಸಿಗಳು ತಿಳಿದುಕೊಳ್ಳಬೇಕು. ಕಳೆದ 70 ವರ್ಷಗಳಲ್ಲಿ ಏನು ಮಾಡಿದ್ದೀರಿ ಎಂದು ಕೇಳುವವರಿಗೆ ಉತ್ತರಿಸಬೇಕು. ನಮ್ಮಲ್ಲಿ ಏನೇ ವ್ಯತ್ಯಾಸ ಇದ್ದರೂ ನಾವು ಒಗ್ಗಟ್ಟಾಗಿದ್ದೇವೆ. ಭಾರತದ ಸಂವಿಧಾನ ಎಲ್ಲ ಜಾತಿ, ಧರ್ಮೀಯರಿಗೆ ಸಮಾನವಾಗಿ ಬದುಕುವ ಅವಕಾಶವನ್ನು ನೀಡಿದೆ. ಆದರೆ ಸಂವಿಧಾನವನ್ನು ಕಡೆಗಣಿಸಿ ನಾವು ಮಾತ್ರ ಬದುಕಬೇಕು, ಮಾತನಾಡಬೇಕು, ಅಧಿಕಾರ ಹಿಡಿಯಬೇಕು ಎನ್ನುವ ಪ್ರವೃತ್ತಿ ಹೆಚ್ಚುತ್ತಲಿದೆ ಎಂದು ಪ್ರತಿಪಕ್ಷ ಬಿಜೆಪಿಯತ್ತ ಟೀಕಾಸ್ತ್ರ ಪ್ರಯೋಗಿಸಿದರು. ಭಟ್ಕಳದಲ್ಲಿ ಯಾರಿಗೂ ತಾವು ಅಸುರಕ್ಷಿತರು ಎಂಬ ಭಾವನೆ ಬೇಡ. ಕರ್ನಾಟಕ ಸರಕಾರ ಎಲ್ಲರಿಗೂ ರಕ್ಷಣೆಯನ್ನು ಒದಗಿಸಲಿದೆ. ಎಲ್ಲರೂ ಸಹೋದರರಂತೆ ಬಾಳೋಣ ಎಂದು ವಿವರಿಸಿದರು. ಮುಸ್ಲೀಮ್ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ, ಹಿರಿಯ ನ್ಯಾಯವಾದಿ ಝಬರ್ಯಾಬ್ ಜೈಲಾನಿ ಉಪನ್ಯಾಸ ನೀಡಿದರು. ಕೆಪಿಸಿಸಿ ಸದಸ್ಯ ಜಿ.ಎ.ಬಾವಾ, ಕಾಂಗ್ರೆಸ್ ಮುಖಂಡ ನಿವೇದಿತ್ ಆಳ್ವಾ, ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಮೌಲಾನಾ ಖಾಜಾ ಮದನಿ, ಮೌಲಾನಾ ಆಜೀಮ್ ಮೊದಲಾದವರು ಉಪಸ್ಥಿತರಿದ್ದರು. ರಾಬಿತಾ ಸಂಸ್ಥೆಯ ಅಧ್ಯಕ್ಷ ಜಾಹೀದ್ ರುಕ್ನುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಯಮಿ ಯೂನುಸ್ ಖಾಜಿಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ತನ್ವೀರ್ ಜುಶಿದ್ಧಿ ಮತ್ತು ಯೂಸೂಫ್ ಬರ್ಮಾವರ್ ಕಾರ್ಯಕ್ರಮ ನಿರೂಪಿಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಗುರುವಿನ ಮನೆಯಲ್ಲಿ ಭಾವುಕರಾದ ಪರಮೇಶ್ವರ
ಭಟ್ಕಳ: ತಮ್ಮನ್ನು ರಾಜಕೀಯಕ್ಕೆ ಕರೆ ತಂದ ಮಾಜಿ ಮಂತ್ರಿ, ಭಟ್ಕಳದ ನಿವಾಸಿ ದಿವಂಗತ ಎಸ್.ಎಮ್.ಯಾಹ್ಯಾ ಮನೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಭೇಟಿ ನೀಡಿದರು.
ನಂತರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಅವರು, ನನ್ನನ್ನು ರಾಜಕೀಯಕ್ಕೆ ಕರೆ ತಂದಿದ್ದು ಎಸ್.ಎಮ್.ಯಾಹ್ಯಾ. ಆಸ್ಟ್ರೇಲಿಯಾದಲ್ಲಿ ಶಿಕ್ಷಣ ಮುಗಿಸಿ ಬಂದವನನ್ನು ರಾಜಕೀಯಕ್ಕೆ ಬರುವಂತೆ ನಿರಂತರವಾಗಿ ಒತ್ತಾಯಿಸಿದರು. ಒಂದೂವರೆ ವರ್ಷಗಳ ನಂತರ ಪಟ್ಟು ಬಿಡದೇ ನನಗೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವವನ್ನು ಒದಗಿಸಿದರು. ದೆಹಲಿಗೆ ಕರೆದುಕೊಂಡು ಹೋದರು. ನಂತರ ಶಾಸಕನಾದೆ. ಮಂತ್ರಿಯಾದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದೆ. ಇದೀಗ ಉಪಮುಖ್ಯಮಂತ್ರಿಯಾಗಿದ್ದೇನೆ. ನನ್ನ ರಾಜಕೀಯ ಏಳಿಗೆಯ ಎಲ್ಲ ಕ್ರೆಡಿಟ್ ಎಸ್.ಎಮ್.ಯಾಹ್ಯಾರಿಗೆ ಸಲ್ಲುತ್ತದೆ. ಬಹಳ ವರ್ಷಗಳ ನಂತರ ಅವರ ಮನೆಗೆ ಭೇಟಿ ನೀಡಿದ್ದು, ನಿಜಕ್ಕೂ ಭಾವುಕನಾಗಿದ್ದೇನೆ. ಎಸ್.ಎಮ್.ಯಾಹ್ಯಾ ಕಾಲದಲ್ಲಿ ಇಲ್ಲಿಗೆ ಬಂದಿದ್ದು, ಅವರ ತಾಯಿಯವರಿಂದ ಆಶೀರ್ವಾದ ಪಡೆದಿದ್ದು ಎಲ್ಲವೂ ಕಣ್ಣ ಮುಂದೆ ಇದೆ. ನನ್ನ ಉಸಿರು ಇರುವವರೆಗೂ ಅವರನ್ನು ಮರೆಯಲಾರೆ ಎಂದರು.

 ಭಟ್ಕಳದ ಅಡುಗೆಯನ್ನು ಮೆಚ್ಚಿದ ಪರಮೇಶ್ವರ
ಭಟ್ಕಳ: ಉಪಮುಖ್ಯಮಂತ್ರಿ ಪರಮೇಶ್ವರ ಭಟ್ಕಳದ ಅಡುಗೆಯ ರುಚಿಯನ್ನು ಮನಸಾರೆ ಹೊಗಳಿದರು.
ಉದ್ಯಮಿ ಯೂನುಸ್ ಖಾಜಿಯಾ ಮನೆಯಲ್ಲಿ ಮಧ್ಯಾಹ್ನ ಚಿಕನ್ ಬಿರ್ಯಾನಿ, ಫಿಶ್ ಫ್ರೈ, ಅಣಬೆ ಮಸಾಲಾ, ರೋಟಿಯನ್ನು ಸವಿದ ಪರಮೇಶ್ವರ, ನಂತರ ತಮ್ಮ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.  ಭಟ್ಕಳದ ಊಟ ನನಗೆ ಖುಷಿ ಕೊಟ್ಟಿದೆ. ಬಿರ್ಯಾನಿಯನ್ನು ಸ್ವಲ್ಪ ಹೆಚ್ಚಿಗೆ ತಿಂದಿದ್ದೇನೆ. ಭಟ್ಕಳದ ಊಟವನ್ನು ಸವಿಯಲು ಮತ್ತೊಮ್ಮೆ ಬರುವುದಾಗಿ ತಿಳಿಸಿದರು.

 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...