ಮಾರುಕೇರಿ ಪಂಚಾಯತ್ ಗ್ರಾಮಸಭೆಯಲ್ಲಿ ಸದ್ದು ಮಾಡಿದ ಭಟ್ಕಳ-ಸಾಗರ ಸರ್ಕಾರಿ ಬಸ್

Source: sonews | By sub editor | Published on 26th July 2018, 6:18 PM | Coastal News | Don't Miss |

2018-19ನೇ ಸಾಲಿನ ಮೊದಲ ಹಂತದ ಗ್ರಾಮಸಭೆ

ಭಟ್ಕಳ: ಮಾರುಕೇರಿ ಗ್ರಾಮ ಪಂಚಾಯತ ನ 2018-19ನೇ ಸಾಲಿನ ಮೊದಲ ಹಂತದ ಗ್ರಾಮಸಭೆ ಬುಧವಾರ ಇಲ್ಲಿನ ಸಮುದಾಯ ಭವನದಲ್ಲಿ ಜರಗಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪಂಚಾಯತ ಅಧ್ಯಕ್ಷ ನಾರಾಯಣ ಎಸ್.ಹೆಬ್ಬಾರ, ಜನರು ಕೇವಲ ಗ್ರಾಮಸಭೆಯಲ್ಲಿ ಮಾತ್ರ ಸಮಸ್ಯೆಯ ಬಗ್ಗೆ ಪರಿಹಾರ ಹುಡುಕದೇ ಸಭೆಯನ್ನು ಹೊರತು ಪಡಿಸಿ ಪಂಚಾಯತ್ ಕಚೇರಿಗೆ ತಮ್ಮ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದ್ದು ಯಾವುದೇ ಸಂದರ್ಭದಲ್ಲೂ ಸಾರ್ವಜನಿಕ ಕೆಲಸಕ್ಕೆ ಪಂಚಾಯತ್ ಜನಪ್ರತಿನಿಧಿಗಳು, ಅಧಿಕಾರಿಗಳು ಸಿದ್ಧರಿದ್ದಾರೆ ಎಂದರು. 

ಕಳೆದ 30ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ಭಟ್ಕಳ-ಸಾಗರ ಬಸ್ ವ್ಯವಸ್ಥೆಯನ್ನು ಕಳೆದ ವರ್ಷದ ಏಕಾಎಕಿ ಸ್ಥಗಿತಗೊಳಿಸಿದ್ದು ಇದರಿಂದಾಗಿ ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಸಮಸ್ಯೆಯು ಸಭೆಯಲ್ಲಿ ಬಲವಾಗಿ ಕೇಳಿಬಂದಿತು. ಈ ಕುರಿತು ಸ್ಪಷ್ಟನೆ ನೀಡಿದ ಸಾರಿಗೆ ಇಲಾಖೆ ಅಧಿಕಾರಿ ಆದಾಯವಿಲ್ಲದ ಕಾರಣ ಬಸ್ ವ್ಯವಸ್ಥೆಯನ್ನು ರದ್ದುಗೊಳಿಸಿದ್ದು ಸಾಗರ ಡಿಪೋ ಬಸ್ ಈ ಮಾರ್ಗವಾಗಿ ಬರುತ್ತಿದೆ ಎಂದು ಸಮಾಜಾಯಿಶಿ ನೀಡಿದ್ದನ್ನು ಒಪ್ಪಿಕೊಳ್ಳಲು ಸಿದ್ದರಿರದ ಗ್ರಾಮಸ್ಥರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಒಂದು ವಾರದೊಳಗಾಗಿ ಮೊದಲಿನಂತೆಯೇ ಬೆಳಿಗ್ಗೆ 7 ಗಂಟೆ ಮಾರುಕೇರಿ-ಕೋಟಖಂಡ ಮಾರ್ಗವಾಗಿ ಸಾಗರಕ್ಕೆ ತೆರಳುತ್ತಿದ್ದ ಬಸ್ ಮತ್ತೆ ಪುನರಾರಂಭವಾಗಬೇಕೆಂದು ಅಧಿಕಾರಿಗೆ ತಾಕೀತು ಮಾಡಿದರು. 

ಕೋಣಾರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಇಲ್ಲಿನ ಜನರಿಗೆ ಸರಿಯಾದ ರೀತಿಯಲ್ಲಿ ಸೇವೆ ಸಿಗುತ್ತಿಲ್ಲವಾಗಿದ್ದು, ಇದರ ಸ್ಥಳಾಂತರಕ್ಕೆ ಸಬೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದರು. ಈ ಬಗ್ಗೆ ಪ್ರಾಥಮಿಕ ಕೇಂದ್ರದ ಸ್ಥಳಾಂತರದ ವಿಚಾರವಾಗಿ ಇಲಾಖೆ ಅಧಿಕಾರಿಗೆ ಈಗಾಗಲೇ ಪಂಚಾಯತನಿಂದ ಪತ್ರವನ್ನು ಬರೆದಿದ್ದು ಕೆ.ಡಿ.ಪಿ. ಸಭೆಯಲ್ಲಿ ಈ ಬಗ್ಗೆ ಮಾತುಗಳು ಕೇಳಿ ಬಂದಿರುವ ಬಗ್ಗೆ ಅಧ್ಯಕ್ಷ ನಾರಾಯಣ ಹೆಬ್ಬಾರ ತಿಳಿಸಿದರು. ಹಾಗೂ ಸಾರ್ವಜನಿಕರೆಲ್ಲರು ಸೇರಿ ಶಾಸಕರನ್ನು ಭೇಟಿ ಮಾಡಿ ಮನವಿ ಪತ್ರವನ್ನು ನೀಡುವ ಬಗ್ಗೆ ತೀರ್ಮಾನಿಸಲಾಯಿತು. ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ವೇಳೆಗೆ ನರ್ಸಗಳಿಲ್ಲದೇ ರೋಗಿಗಳು ದೂರದ ತಾಲೂಕಾಸ್ಪತ್ರೆಗೆ ಹೊಗಬೇಕಾಗಿದೆ. ಅದೇ ರೀತಿ ವೈದ್ಯರು ಸಹ ವಾರದಲ್ಲಿ ಒಂದು ದಿನ ಬಂದು ಹೋಗುವುದರಿಂದ ರೋಗಿಗಳು ಪರದಾಡುವಂತಾಗಿದೆ. ಈ ಬಗ್ಗೆ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ಪಂಚಾಯತ್ ಅಧ್ಯಕ್ಷರು ತರಬೇಕೆಂದು ಸಾರ್ವಜನಿಕರು ತಾಕೀತು ಮಾಡಿದರು. ಶೀಘ್ರ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಸಮಸ್ಯೆಯಾಗದಂತೆ ನರ್ಸಗಳನ್ನು ಇರಿಸುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಆರೋಗ್ಯ ಕೇಂದ್ರ ವೈದ್ಯರು ತಿಳಿಸಿದರು. 

ಇಲ್ಲಿನ ಮಾರುಕೇರಿ ವ್ಯಾಪ್ತಿಯ ಸಾಕಷ್ಟು ಕಡೆಗಳಲ್ಲಿ ಸರಾಯಿ ಮಾರಾಟ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ವೃದ್ಧರೋರ್ವರು ಸಭೆಯಲ್ಲಿ ನೇರ ಆರೋಪ ಮಾಡಿದ್ದು,ಪ್ರತಿ ಮನೆ, ಅಂಗಡಿಯಲ್ಲಿ ಸಿಗುತ್ತಿರುವ ಬಗ್ಗೆ ಮಾಹಿತಿ ಇದ್ದರು ಸಹ ಅಬಕಾರಿ ಇಲಾಖೆ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ತಿಂಗಳ ವಸೂಲಿ ಪಡೆದು ಸರಾಗವಾಗಿ ಸರಾಯಿ ಮಾರಾಟ ಮಾಡಲು ಅಬಕಾರಿ ಇಲಾಖೆ ನೆರವು ನೀಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದು, ತಕ್ಷಣಕ್ಕೆ ಅಂತಹವರ ಮೇಲೆ ಕ್ರಮಕ್ಕೆ ಮುಂದಾಗಬೇಕೆಂದು ಅಧ್ಯಕ್ಷರು ಇಲಾಖೆ ಅಧಿಕಾರಿಗೆ ಹೇಳಿದರು. 

ಸಭೆಯಲ್ಲಿ ಮುಖ್ಯವಾಗಿ ಇಲ್ಲಿನ ತಾಲೂಕಾಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಚರ್ಚೆಗಳಾಗಿದ್ದು, ಗ್ರಾಮೀಣ ಭಾಗದ ರೋಗಿಗಳು ಬಂದರೆ ಅವರ ಸೇವೆಗೆ ನರ್ಸಗಳು ವೈದ್ಯರು ನಿರಾಕರಿಸುತ್ತಿದ್ದು ಇದರಿಂದ ಬೇಸತ್ತಿದ್ದೇವೆ ಎಂದು ನೊಂದ ರೋಗಿಯೊಬ್ಬರು ಅಳಲು ತೊಡಿಕೊಂಡರು. ಶಿರಾಲಿ ಆರೋಗ್ಯ ಕೇಂದ್ರದಲ್ಲಿನ ವ್ಯವಸ್ಥೆ ಸರಿಯಿದ್ದು ಭಟ್ಕಳ ತಾಲೂಕಾಸ್ಪತ್ರೆ ಯಾಕೆ ದುಸ್ಥಿತಿಗೆ ಬಂದಿದೆ ಎಂದು ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದ ಜಿ.ಪಂ. ಸದಸ್ಯ ಅಲ್ಬರ್ಟ ಡಿಕೋಸ್ತಾರಿಗೆ ಪ್ರಶ್ನಿಸಿದ್ದು, ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿಗಳ ನಡುವೆ ಇಲ್ಲದ ಹೊಂದಾಣಿಕೆಯಿಂದ ಸಮಸ್ಯೆಯಾಗುತ್ತಿದ್ದು ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತಂದಿರುವ ಬಗ್ಗೆ ತಿಳಿಸಿದರು. 

ಸಭೆಯಲ್ಲಿ ಕೆಲ ಇಲಾಖೆಯ ಮೇಲಾಧಿಕಾರಿಗಳು ಬಾರದೇ ಅವರ ಗೈರು ಹಾಜರಾತಿಗೆ ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದು, ಹಾಜರಿದ್ದ ಎಲ್ಲಾ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾದ ಮಾಹಿತಿಯೊಂದಿಗೆ ಜನರ ಸಮಸ್ಯೆ ಪರಿಹಾರಕ್ಕೆ ಕೆಲಸ ಮಾಡಬೇಕೆಂದು ಜಿ.ಪಂ. ಸದಸ್ಯ ಅಲ್ಬರ್ಟ ಡಿಕೋಸ್ತಾ ಸೂಚಿಸಿದರು. 

ಪಂಚಾಯತ್ ಉಪಾಧ್ಯಕ್ಷೆ ನಾಗಮ್ಮ ಎಸ್.ಗೊಂಡ, ಪಿಡಿಓ ಮಹೇಶ ನಾಯ್ಕ, ಕಾರ್ಯದರ್ಶಿ ನಿತಿನ್ ನಾಯ್ಕ, ಮಾಜಿ ಗ್ರಾ.ಪಂ. ಅಧ್ಯಕ್ಷ ಎಮ್.ಡಿ.ನಾಯ್ಕ, ಶಿವಾನಂದ ಹೆಬ್ಬಾರ ಮುಂತಾದವರು  ಸಭೆಯಲ್ಲಿ ಉಪಸ್ಥಿತರಿದ್ದರು. 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...