ಭಟ್ಕಳದಲ್ಲಿ 1 ವರ್ಷದಿಂದ ಮುಚ್ಚಿದ ಸಬ್‍ಜೈಲು:ಕಾರವಾರ ಭಟ್ಕಳ ಅಲೆದಾಟದಲ್ಲಿ ಕೈದಿಗೆ ಹೆಚ್ಚುವರಿ ಶಿಕ್ಷೆ

Source: S.O. News Service | By MV Bhatkal | Published on 12th August 2018, 8:31 PM | Coastal News |

ಭಟ್ಕಳ: ವಿಚಾರಣಾಧೀನ ಕೈದಿಗಳನ್ನು ಇರಿಸಲಾಗುವ ಭಟ್ಕಳದ ಸಬ್ ಜೈಲು ಬಾಗಿಲು ಮುಚ್ಚಿಕೊಂಡು ಒಂದು ವರ್ಷ ಕಳೆದಿದೆ. ಕುಸಿದು ಬಿದ್ದ ಸಬ್‍ಜೈಲು ದುರಸ್ತಿ ಕಾಣದೇ ವಿಚಾರಣಾಧೀನ ಕೈದಿಗಳು ಭಟ್ಕಳ ಕಾರವಾರ ಅಲೆದಾಟದಲ್ಲಿ ಸುಸ್ತಾಗಿ ಹೋಗಿದ್ದಾರೆ. ಅನಾವಶ್ಯಕವಾಗಿ ದುಪ್ಪಟ್ಟು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಮೊದಲೇ ಹಾಳೂರ ಮನೆಯಂತಾಗಿದ್ದ ಭಟ್ಕಳದ ಸಬ್‍ಜೈಲಿನಲ್ಲಿ ಪ್ರಸ್ತುತ ಜನ ವಸತಿ ಇಲ್ಲ. ಜೈಲಿಗೆ ಹೊಂದಿಕೊಂಡ ತಾಲೂಕಿನ ಖಜಾನೆ ಕಚೇರಿ ಕಾಯಲು ಜೈಲಿನ ಹೊರಗಡೆ ಮೂಲೆಯ ಬೆಂಚಿನಲ್ಲಿ ಕುಳಿತ ಪೊಲೀಸ್ ಪೇದೆಯೇ ಸದ್ಯ ಅಲ್ಲಿ ಕಾಣ ಸಿಗುವ ಮನುಷ್ಯಾಕೃತಿ! ಗೋಡೆ ಕುಸಿತದ ಅಪಾಯವನ್ನು ಎದುರಿಸಿದ್ದ ಭಟ್ಕಳ ಸಬ್‍ಜೈಲಿನಲ್ಲಿ ವಿಚಾರಣಾಧೀನ ಕೈದಿಗಳನ್ನು ಇರಿಸುವ ಧೈರ್ಯ ಅಧಿಕಾರಿಗಳಿಗೆ ಇಲ್ಲ. ಪಿಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆದ ಕಂದಾಯ ಇಲಾಖೆಯ ಅಧಿಕಾರಿಗಳು ಪರಿಹಾರ ಸಿಗಬಹುದೇ ಎಂದು ಕಾದು ಕುಳಿತರಾದರೂ ನಿರೀಕ್ಷೆಗಳೆಲ್ಲ ಸುಳ್ಳಾಗಿದೆ. ದುರಸ್ತಿ ಕೆಲಸ ಯಾರಿಗೂ ನೆನಪಿಲ್ಲದಂತೆ ನೆನೆಗುದಿಗೆ ಬಿದ್ದಿದೆ. ಪರಿಣಾಮವಾಗಿ ಇಲ್ಲಿನ ವಿಚಾರಣಾಧೀನ ಕೈದಿಗಳ ಗೋಳು ಹೇಳ ತೀರದಾಗಿದೆ. ನ್ಯಾಯಾಲಯ ಆರೋಪಿಗೆ ಒಂದು ದಿನದ ಕಸ್ಟಡಿ ನೀಡಿದರೂ ಪೊಲೀಸರು ಆರೋಪಿಗಳನ್ನು 3 ಗಂಟೆ ದಾರಿಯ ಕಾರವಾರಕ್ಕೆ ಕರೆದೊಯ್ಯುತ್ತಿದ್ದಾರೆ. ಸಂಜೆ ನ್ಯಾಯಾಲಯ ಆದೇಶ ನೀಡಿದರೂ ಆದೇಶದ ಪ್ರತಿ ಜೈಲಿನ ಅಧಿಕಾರಿಗಳನ್ನು ತಲುಪುವವರೆಗೆ ರಾತ್ರಿಯಾಗುತ್ತದೆ. ಅಧಿಕಾರಿಗಳು ಅವಧಿ ಮೀರಿದ ಕಾರಣ ನೀಡಿ ಆರೋಪಿಯ ಕುಟುಂಬದವರನ್ನು ವಾಪಸ್ಸು ಕಳುಹಿಸುತ್ತಾರೆ. ಪರಿಣಾಮವಾಗಿ ವಿಚಾರಣಾಧೀನ ಕೈದಿ ಮತ್ತೊಂದು ದಿನದವರೆಗೆ ಜೈಲಿನಲ್ಲೇ ಕಳೆಯಬೇಕು. ಇದು ಆರೋಪಿಗೆ ಸಿಗುತ್ತಿರುವ ಹೆಚ್ಚುವರಿ ಶಿಕ್ಷೆಯಾಗಿದೆ. ಪೊಲೀಸರಿಗೂ ದುಪ್ಪಟ್ಟು ಕೆಲಸ! ಆರೋಪಿಗಳಿಗೆ ಭದ್ರತೆ ನೀಡಿ ಕಾರವಾರವನ್ನು ತಲುಪಬೇಕು. ಅಲ್ಲದೇ ಆದೇಶ ಪ್ರತಿಯನ್ನು ಅಂಚೆಗೂ ಮೊದಲು ಕಳುಹಿಸಬೇಕು ಎಂದರೆ ನ್ಯಾಯಾಲಯದ ಸಿಬ್ಬಂದಿಯನ್ನು ನಿಯೋಜಿಸಬೇಕು. ಅವರೂ ಕಾರವಾರ ಬಸ್ಸನ್ನು ಹತ್ತಬೇಕು. ಈ ಕುರಿತು ಮಾತನಾಡಿರುವ ನ್ಯಾಯವಾದಿ ಎಮ್.ಜೆ.ನಾಯ್ಕ, ಸಬ್‍ಜೈಲಿನ ಸಮಸ್ಯೆ ಆರಂಭವಾಗಿ 2 ವರ್ಷ ಸಮೀಪಿಸುತ್ತ ಬಂದರೂ ಯಾರೂ ಆ ಬಗ್ಗೆ ಲಕ್ಷ್ಯ ವಹಿಸುತ್ತಿಲ್ಲ. ಶ್ರೀ ಸಾಮಾನ್ಯರಿಗೆ ತೀವೃ ತೊಂದರೆಯಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸಬ್‍ಜೈಲಿನ ಅವ್ಯವಸ್ಥೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಂದಾಯ ಇಲಾಖೆಯ ಶಿರಸ್ತೇದಾರ ಸಂತೋಷ ಭಂಡಾರಿ, ಸಬ್‍ಜೈಲಿನ ಹಿಂಬದಿಯ ಗೋಡೆ ಕುಸಿದ ನಂತರ ದುರಸ್ತಿ ಮಾಡಿಕೊಡುವಂತೆ ಪಿಡಬ್ಲ್ಯೂಡಿಗೆ ಬರೆದುಕೊಂಡಿದ್ದೇವೆ. ಆದರೆ ಅನುದಾನದ ಕೊರತೆಯಿಂದ ಪ್ರಸ್ತಾವನೆ ಹಾಗೆಯೇ ಉಳಿದುಕೊಂಡಿದೆ ಎಂದು ವಿವರಿಸುತ್ತಾರೆ. ಜೈಲುವಾಸವೇ ಕಷ್ಟ ಎನ್ನಿಸುವಾಗ ಭಟ್ಕಳ ಸಬ್‍ಜೈಲು ವಿಚಾರಣಾಧೀನ ಕೈದಿಗಳಿಗೆ ಇನ್ನಷ್ಟು ಯಾತನೆಯನ್ನು ನೀಡಿರುವುದಂತೂ ಸುಳ್ಳಲ್ಲ.      

ಸಬ್‍ಜೈಲಿನ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಗೋಡೆಯ ಕಲ್ಲು ಉರುಳಿ ಬಿದ್ದು ವರ್ಷ ದಾಟಿದೆ. ಇನ್ನೂ ದುರಸ್ತಿಯಾಗಿಲ್ಲ. ಜನಸಾಮಾನ್ಯರ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವವರು ಯಾರು ಎನ್ನುವುದೇ ಈಗ ಉಳಿದಿರುವ ಪ್ರಶ್ನೆ ಎಮ್.ಜೆ.ನಾಯ್ಕ,ನ್ಯಾಯವಾದಿಗಳು ಎಂದು ಹೇಳಿದರು.
           
ಸಬ್ ಜೈಲಿನ ಜೈಲಿನ ಹಿಂಬದಿಯ ಗೋಡೆ ಕುಸಿದ ನಂತರ ದುರಸ್ತಿ ಮಾಡಿಕೊಡುವಂತೆ ಪಿಡಬ್ಲ್ಯೂಡಿಗೆ ಬರೆದುಕೊಂಡಿದ್ದೇವೆ. ದುರಸ್ತಿ ಕಾರ್ಯವನ್ನೇ ಎದುರು ನೋಡುತ್ತಿದ್ದೇವೆ.ಎಂದು ಸಂತೋಷ ಭಂಡಾರಿ, ಶಿರಸ್ತೇದಾರರು ಹೇಳಿದರು.

    

Read These Next