ಭಟ್ಕಳದಲ್ಲಿ ಬೆಟ್ಟ ಬಾಗುವ ಮುನ್ನ ಭಾರ ಇಳಿಸುವವರಾರು? ಮುರುಡೇಶ್ವರಕ್ಕಿದೆ ಮಹಾಮಳೆಯಲ್ಲಿ ಮುಳುಗುವ ಭೀತಿ

Source: S O News service | By V. D. Bhatkal | Published on 1st September 2018, 8:51 PM | Coastal News | Special Report |

ಭಟ್ಕಳ: ಇದು ಕಣ್ಣೆದುರಿನ ಸತ್ಯ. ಭಾರ ಮಿತಿ ಮೀರಿದಾಗ ಹೊತ್ತುಕೊಂಡ ಮನುಷ್ಯ, ಪ್ರಾಣಿ ಯಾವುದೇ ಆಗಲಿ ಬಾಗಲೇ ಬೇಕು. ಬೆಟ್ಟ, ಗುಡ್ಡಗಳೂ ಇದರಿಂದ ಹೊರತಾಗಿಲ್ಲ. ಜಾರಿದ ಗುಡ್ಡದಡಿಯಲ್ಲಿ ಸಿಲುಕಿ ರೋಧಿಸುತ್ತಿರುವ ಕೊಡಗಿನ ಕಥೆ ಕೇಳುತ್ತಿರುವ ನಮಗೆ ನಮ್ಮ ಕಾಲ ಬುಡದಲ್ಲಿ ಅಡಗಿಕೊಂಡಿರುವ ಅಪಾಯ ಇದೀಗ ನಿಧಾನಕ್ಕೆ ಹೊರಗೆ ಎಳೆದುಕೊಂಡು ತರಚಲಾರಂಭಿಸಿದೆ.

ನಿಜ, ಉತ್ತರಕನ್ನಡ ಜಿಲ್ಲೆಯಲ್ಲಿಯೇ ಭಟ್ಕಳ ಅತಿವೇಗವಾಗಿ ಬೆಳೆಯುತ್ತಿದೆ. ಭಟ್ಕಳ ಬೆಳೆಯುತ್ತಿದೆ ಎಂದರೆ ಅದರ ವಿಸ್ತೀರ್ಣವೇನೂ ಹೆಚ್ಚಾಗುವುದಿಲ್ಲ ತಾನೆ? ಹೊಳೆ, ಸಮುದ್ರದ ದಂಡೆಯಲ್ಲಿ ಮನೆ ಕಟ್ಟಿಕೊಂಡು ಅದನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಜನರಿಗೆ ಇದೀಗ ಇದ್ದ ಜಾಗ ಕಿರಿದಾಗಿದೆ. ಗುಡ್ಡದ ಸಂದಿಯಲ್ಲಿ ದನಕರುಗಳನ್ನು ಮೇಯಿಸಿ, ಹಸಿರು ಬೆಳೆಸಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ರೈತನಿಗೂ ಅಲ್ಲೊಂದಿಷ್ಟು ಜಮೀನನ್ನು ಮಾರಿ ಕಾಸಿನ ಕಷ್ಟವನ್ನು ನೀಗಿಸಿಕೊಳ್ಳುವ, ಜೊತೆಗೆ ಪೇಟೆಯ ಮನುಷ್ಯನಾಗುವ ಹಂಬಲವಿದೆ. ಇವರೆಡರ ನಡುವೆ ಬೃಹದಾಕಾರದ ಬಂಗಲೆ ನಿರ್ಮಿಸಿ ಊರ ಸಾಹುಕಾರನೆನ್ನಿಸಿಕೊಳ್ಳುವ ಕಾತುರಕ್ಕೆ ಪೇಟೆಯಲ್ಲಿಯೂ ನೆಲ ಎಷ್ಟಿದ್ದರೂ ಸಾಲದು ಎಂಬಂತಾಗಿದೆ. ಗುಡ್ಡಬೆಟ್ಟಗಳ ಸೆರಗು, ಹರಿಯುವ ನೀರಿನ ದಾರಿಯಲ್ಲಿ ಯಂತ್ರಗಳ ಸದ್ದು ಜೋರಾಗಿದೆ. ಪರಿಣಾಮವಾಗಿ ಬೆಟ್ಟ ಬಾಗುವ, ಹಳ್ಳ ಹೊಳೆಯಾಗಿ ಮೇಲೇರಿ ಬರುವ ಅಪಾಯ ಸ್ಪಷ್ಟವಾಗಿ ಕಾಣಿಸುತ್ತಿದೆ.

ಪೃಕೃತಿ ನನಗೇ ಬಂದು ಪಾಠ ಹೇಳುವವರೆಗೆ ಕಾಯುವುದರಲ್ಲಿ ಯಾವುದೇ ಅರ್ಥ ಇಲ್ಲ. ಕೊಡಗು ಕುಸಿಯುವುದಕ್ಕೆ ಮೊದಲು ನಮ್ಮೂರಿನಲ್ಲಿ ಕಡಲು ಮೇಲೇರಿ ಬರಲು ನಡೆಸಿದ ಪ್ರಯತ್ನ ಕಣ್ಣ ಮುಂದೆ ಇದೆ. ಭಟ್ಕಳದಲ್ಲಿ ಗುಡ್ಡ ತಪ್ಪಲಿನಲ್ಲಿಯೇ ಬಂದರು, ಬೆಳ್ನಿಯಂತಹ ಪ್ರದೇಶಗಳಿವೆ. ಬೆಂಕಿ ಬಿದ್ದಾಗ ಎಚ್ಚರಗೊಳ್ಳುವ ಬದಲು ಇಂತಹ ಜನರಿಗೆ ಮೊದಲೇ ಭವಿಷ್ಯ ರೂಪಿಸುವ ಪ್ರಯತ್ನ ನಡೆಯಬೇಕು.
                   - ಪ್ರೋ.ಆರ್.ಎಸ್.ನಾಯಕ್, ಚಿಂತಕರು

ವೆಂಕಟಾಪುರದಿಂದ ಜಾಲಿ, ಹೆಬಳೆಯನ್ನು ಒಳಗೊಂಡಂತೆ ಬಿಎಸ್‍ಎನ್‍ಎಲ್ ಕಚೇರಿಯವರೆಗೂ ಭಟ್ಕಳ ಶಹರದ ಅರ್ಧಕ್ಕಿಂತ ಹೆಚ್ಚಿನ ಭಾಗ ಬೆಟ್ಟದ ಮೇಲೆಯೇ ನಿಂತಿದೆ. ಅದಕ್ಕೆ ತಾಲೂಕಿನ ತಗ್ಗು ಪ್ರದೇಶಗಳ ಜನರು ಶಹರಕ್ಕೆ ಬರುವಾಗ ಅರೆ ಮೇಲೆ(ಬೆಟ್ಟದ ಮೇಲೆ) ಹೋಗಿ ಬರುತ್ತೇನೆ ಎಂದು ಹೇಳುವುದು ಇಲ್ಲಿನ ವಾಡಿಕೆ. ಉಳಿದ ಪ್ರದೇಶಗಳ ವಿಷಯಕ್ಕೆ ಬಂದರೆ ಗುಡ್ಡವನ್ನೇ ಹಾಸಿಗೆಯನ್ನಾಗಿ ಮಾಡಿಕೊಂಡು ಗುಳ್ಮಿ ಎಂಬ ಊರು ನಿರ್ಮಾಣಗೊಂಡಿದೆ. ಇದ್ದೊಂದು ಮನೆ ಹತ್ತಾಗಿ, ಹತ್ತು ನೂರಾಗಿದೆ! ಗುಡ್ಡವನ್ನು ಕೆರೆಯುತ್ತ ಗುಡ್ಡದ ಶಿಖರವನ್ನೇರಿ ಕುಳಿತುಕೊಳ್ಳುವ ತವಕ ಹೆಚ್ಚಾಗಿದೆ. ಇದ್ದವರು, ಹೊಸದಾಗಿ ಬಂದವರೆಲ್ಲರೂ ಇದೇ ಗುಡ್ಡದ ತಪ್ಪಲಿನಲ್ಲಿ ಅಂಗೈ ಅಗಲದ ಜಾಗಕ್ಕಾಗಿ ಹುಡುಕಾಟ ಮುಂದುವರೆಸಿಕೊಂಡೇ ಇದ್ದಾರೆ. ಇತ್ತ ಕಡೆ ಬಂದರೆ ಊರಿನ ಸ್ವಚ್ಛತೆಗೆ ಜೀವ ತೇಯುತ್ತಿರುವ ಕೊರಗಾರರ ಕೇರಿಗೂ ಗುಡ್ಡವೇ ಆಸರೆಯಾಗಿದೆ. ಅಲ್ಲಿಂದೀಚೆ ನಾವು ಬಂದರಿನ ಬೆಳ್ನಿಯ ಕಡೆ ವಾಲಿದರೆ ಗುಡ್ಡವನ್ನೇ ಗೋಡೆಗೂ, ತಳಪಾಯಕ್ಕೂ ಎಲ್ಲದಕ್ಕೂ ಆಧಾರವಾಗಿಟ್ಟುಕೊಂಡು ನೂರಾರು ಮನೆಗಳು ಸುತ್ತುವರಿದಿರುವುದನ್ನು ಕಾಣಬಹುದಾಗಿದೆ. ಇನ್ನೇನು ಉರುಳಲಿದೆ ಎಂದೆನ್ನಿಸುವ ಕಲ್ಲು ಬಂಡೆಗಳ ಕೆಳಗೆ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ ಮನೆ, ಊರು, ಕೇರಿ ಎಲ್ಲ ಸಿದ್ಧಗೊಂಡಿದೆ. ಅತ್ತ ತಲಗೋಡು, ಇತ್ತ ಬೆಳ್ನಿಯ ಮಾರ್ಗವಾಗಿ ಮುಗ್ದಮ್ ಕಾಲೋನಿಯನ್ನು ತಲುಪಿದರೂ ಕಣ್ಣಿಗೆ ಕಾಣುವುದು ಅದೇ ಮಿನಿ ಕೊಡಗು! ದೇವರ ಮೇಲೆ ಭಾರ ಹಾಕಿ ಮನೆಯೊಳಗಿನ ಒಲೆಯ ಬೆಂಕಿಯಲ್ಲಿ ಅನ್ನ ಬೇಯುತ್ತಲೇ ಇದೆ. ಹಾಡುವಳ್ಳಿ, ಕೋಣಾರ, ಮಾರುಕೇರಿ, ಉತ್ತರಕೊಪ್ಪದತಹ ಗ್ರಾಮೀಣ ಪ್ರದೇಶಗಳಲ್ಲಿಯೂ ಸಮತಟ್ಟು ಪ್ರದೇಶಗಳು ಸಾಕಾಗದೇ ಗುಡ್ಡದ ತಪ್ಪಲನ್ನು ಅರಸಿಕೊಂಡು ಹೋಗುವ ಪ್ರಯತ್ನ ಎಗ್ಗಿಲ್ಲದೇ ಸಾಗಿದೆ. ಇವೆಲ್ಲದರ ಒಟ್ಟೂ ಫಲಿತಾಂಶವೆಂಬಂತೆ ಬೆಟ್ಟ ಗುಡ್ಡಗಳ ಮೇಲೆ ದಿನದಿಂದ ದಿನಕ್ಕೆ ಭಾರ ಹೆಚ್ಚಾಗುತ್ತಲೇ ಇದೆ. ಬೆಟ್ಟ ಬಾಗುವ ಮುನ್ನ ಭಾರ ಇಳಿಸುವವರಾರು ಎನ್ನುವುದೇ ಈಗಿರುವ ಪ್ರಶ್ನೆ.

ಮುರುಡೇಶ್ವರಕ್ಕೆ ಮುಳುಗುವ ಭೀತಿ: ಭಟ್ಕಳ ಶಹರ ಹಾಗೂ ಸುತ್ತಮುತ್ತಲಿನ ಊರಿನ ಕಥೆ ಹೀಗಾದರೆ ಮುರುಡೇಶ್ವರ ಎಂಬ ಪ್ರವಾಸಿ ತಾಣದ ವ್ಯಥೆ ಇನ್ನೊಂದು ತೆರನಾಗಿರುವಂತದ್ದು. ಮೈಯೆಲ್ಲ ಹಸಿರಾಗಿಸಿಕೊಂಡು ಪ್ರಕೃತಿಗೆ ಜೀವಕಳೆ ತಂದುಕೊಟ್ಟಿರುವ ಗುಡ್ಡಕ್ಕೆ ಅಂಗಳವಾಗಿ ಇರುವ ಬಯಲು ಪ್ರದೇಶವೇ ಮುರುಡೇಶ್ವರವಾಗಿ ಗುಡ್ಡ ಕುಸಿತದ ಅಪಾಯದಿಂದ ದೂರ ಇರುವುದೇನೋ ನಿಜವೇ. ಆದರೆ ಮಳೆಗಾಲ ಎನ್ನುವುದು ಮುರುಡೇಶ್ವರವನ್ನು ಕಾಡುತ್ತಲೇ ಇದೆ. ಪ್ರವಾಸಿಗರನ್ನು ಬಾಚಿಕೊಳ್ಳುವ ಭರದಲ್ಲಿ ಮುರುಡೇಶ್ವರ ಎರ್ರಾಬಿರ್ರಿಯಾಗಿ ಬೆಳೆಯಲಾರಂಭಿಸಿದೆ. ಕಂಡಕಂಡಲ್ಲಿ ಮನೆಗಳು, ವಸತಿಗೃಹಗಳು ತಲೆ ಎತ್ತಲಾರಂಭಿಸಿದೆ. ಮಳೆಗಾಲದ ನೀರಿಗೆ ಸಮುದ್ರದ ಮಾರ್ಗ ತೋರಿಸುವ ಕಾರಿಹಳ್ಳದ ದಿಕ್ಕು ಬದಲಾಗಿದೆ. ನೀರು ನಿಲ್ಲುವ, ಹರಿಯುವ ಜಾಗದಲ್ಲಿ ಕಟ್ಟಡಗಳು ಕಾಣಸಿಗುತ್ತಿವೆ. ದೊಡ್ಡ ಮಳೆ ಬಂತೆಂದರೆ ಅಲ್ಲಿನ ರಸ್ತೆ, ಗದ್ದೆಗಳೇ ಹಳ್ಳ, ಹೊಳೆಯಾಗುವುದು ಇತ್ತೀಚಿನ ವರ್ಷಗಳಲ್ಲಿ ಸಹಜ ಬದಲಾವಣೆ ಎಂಬಂತಾಗಿದೆ. ಕುರುಡು ಕಾಂಚಾಣದ ಬೆನ್ನು ಹತ್ತಿ ಊರನ್ನೇ ವಿಕಾರಗೊಳಿಸುವ ಪ್ರಯತ್ನದಲ್ಲಿ ಅಲ್ಲಿನ ಗ್ರಾಮ ಪಂಚಾಯತಗಳು, ಕಂದಾಯ ಅಧಿಕಾರಿಗಳ ಪಾಲು ಇದೆ ಎಂಬ ಆರೋಪ ಸರ್ವೇ ಸಾಮಾನ್ಯವಾಗಿದೆ. ಎಷ್ಟೇ ಮಳೆ ಬರಲಿ, ಹತ್ತಿರ ಇರುವ ಸಮುದ್ರವನ್ನು ಸೇರುತ್ತದೆ ಎನ್ನುವವರಿಗೆ ಸಮುದ್ರ ಸೇರುವ ಮುನ್ನ ಮುಂದೊಂದು ದಿನ ಅದೇ ನೀರು ಊರನ್ನು ಮುಳುಗಿಸಿ ಬಿಟ್ಟರೆ ಎಂಬ ಪರಿವೆ ಸದ್ಯ ಇದ್ದಂತೆ ಕಾಣಿಸುತ್ತಿಲ್ಲ. ಆದರೆ ಮಹಾಮಳೆಗೆ ಮುಳುಗಿದ ಕೇರಳದ ಕಷ್ಟವನ್ನು ನೆನೆದು ಭಾವುಕವಾದ ಕಣ್ಣುಗಳಲ್ಲಿ ಮುರುಡೇಶ್ವರ ಮುಳುಗುವ ಭೀತಿ ಎದ್ದು ಕಾಣಿಸುತ್ತಿದೆ! 
         

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...