ಭಟ್ಕಳ: ಪುರಸಭೆ ಆಡಳಿತ ಸಂಪೂರ್ಣ ಅಂಗಡಿಕಾರರ ಪರ, ಅನ್ಯಾಯವಾಗದಂತೆ ಶತಪ್ರಯತ್ನ-ಮಟ್ಟಾ ಸಾಧಿಕ್

Source: so english | By Arshad Koppa | Published on 22nd September 2017, 2:54 PM | Coastal News |

ಭಟ್ಕಳ: ಪುರಸಭೆ ಆಡಳಿತ ಸಂಪೂರ್ಣ ಅಂಗಡಿಕಾರರ ಪರವಾಗಿದೆಯೇ ಹೊರತು ಯಾವುದೇ ಕಾರಣಕ್ಕೂ ಅಂಗಡಿಕಾರರಿಗೆ ಅನ್ಯಾಯವಾಗಬಾರದು ಎಂದು ಶತಪ್ರಯತ್ನ ಮಾಡುತ್ತಿದೆ ಎಂದು  ಪುರಸಭಾ ಅಧ್ಯಕ್ಷ ಮುಹಮ್ಮದ್ ಮಟ್ಟಾ ಸಾಧಿಕ್ ತಿಳಿಸಿದ್ದಾರೆ. 

ಪುರಸಭಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂಗಡಿಕಾರರ ಪರವಾಗಿ ನಾವು 3-4 ಬಾರಿ ಠರಾವು ಮಾಡಿ ಜಿಲ್ಲಾಧಿಕಾರಿಯವರಿಗೆ ಕಳುಹಿಸಿದ್ದರೂ ಕೂಡಾ ಜಿಲ್ಲಾಡಳಿತ ನಮ್ಮ ಠರಾವಿಗೆ ಬೆಲೆಕೊಟ್ಟಿಲ್ಲ.  ನಾವು ಭಟ್ಕಳದಲ್ಲಿ ಪುರಸಭೆಯ ಎಲ್ಲಾ 28 ಸದಸ್ಯರೂ ಒಗ್ಗಟ್ಟಾಗಿದ್ದೇವೆ. ನಾವು ಅಂಗಡಿಕಾರರಿಗೆ ಯಾವುದೇ ರೀತಿಯ ಬೇಧ-ಭಾವ ಮಾಡುವುದಾಗಲೀ ತಾರತಮ್ಯ ಮಾಡುವುದಾಗಲೀ ಮಾಡಿಯೇ ಇಲ್ಲ. ಅಂಗಡಿಕಾರರ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಅವರ ಪರವಾಗಿಯೇ ನಾವು ಸಾಮಾನ್ಯ ಸಭೆಯಲ್ಲಿ ಠರಾವು ಮಾಡಿದ್ದೇವೆ. ನಮ್ಮ ಠರಾವಿಗೆ ಉತ್ತರ ನೀಡದೇ ಹಾಗೆ ಇಟ್ಟುಕೊಳ್ಳಲಾಗಿದೆ. ಶಾಸಕರು ನಡೆಸಿದ ಸಭೆಯಲ್ಲೂ ಅಂಗಡಿಕಾರರ ಪರವಾಗಿ ಠರಾವು ಮಾಡಿಸಿ ಕಳುಹಿಸಲಾಗಿದ್ದು ಇದಕ್ಕೆ ಮಾತ್ರ ಉತ್ತರ ಬಂದಿದೆ ಎಂದರು.  
ಪುರಸಭೆಯ ಯಾವ ಸದಸ್ಯರೂ ಅಂಗಡಿಕಾರರ ವಿರುದ್ದವಾಗಿ ಒಂದೇ ಒಂದು ಸಭೆಯಲ್ಲಿ ಮಾತನಾಡಿಲ್ಲ, ಎಲ್ಲಾ ಸದಸ್ಯರಿಗೂ ಅಂಗಡಿಕಾರರ ಬಗ್ಗೆ ಕಾಳಜಿ, ಪ್ರೀತಿ, ವಿಶ್ವಾಸವನ್ನು ವ್ಯಕ್ತಪಡಿಸಿಯೇ ಸಭೆಯಲ್ಲಿ ಠರಾವು ಮಾಡಿದ್ದೇವೆ.  ಆದರೆ  ಹಿಂಜಾವೇ ಮುಖಂಡರೊಬ್ಬರು ಭಟ್ಕಳ ಪುರಸಭೆ ತಂಝೀಂ ಕೈಗೊಂಬೆ ಎಂದು ಆರೋಪ ಮಾಡಿರುವುದು ತಮ್ಮ ಗಮನಕ್ಕೆ ಬಂದಿದ್ದು ತೀರಾ ಬೇಸರವಾಗಿದೆ.  ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು ಎಲ್ಲಾ ಪುರಸಭಾ ಸದಸ್ಯರಿಗೂ ಕೂಡಾ ಗೊತ್ತಿದೆ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅವರು ಯಾಕೆ ಹಾಗೆ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಹಿಂದೂ ಮುಸ್ಲೀಮರಲ್ಲಿ ಒಡಕು ಮೂಡಿಸಲು ಅವರು ಹೇಳಿಕೆ ನೀಡಿರಬಹುದು ಎನ್ನುವ ಭಾವನೆ ನನಗೆ ಮೂಡಿದೆ. ಯಾರು ಎನೇ ಹೇಳಿದರೂ ನಾವು ಪುರಸಭಾ ಸದಸ್ಯರಲ್ಲಿ ಒಡಕು ಮೂಡಿಸುವುದು ಅಸಾಧ್ಯವಾಗಿದೆ.  ಅವರು ಬೇಕಾದರೆ ಭಟ್ಕಳಕ್ಕೆ ಬಂದು ನಮ್ಮ ಎಲ್ಲಾ ಸದಸ್ಯರನ್ನು ಮಾತನಾಡಿಸಲಿ. ನಾವಿಲ್ಲಿ ಸಹೋದರರಂತೆ ಕೆಲಸ ಮಾಡುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡ ಅವರು ಮುಖಂಡರ ಇಂತಹ ಆರೋಪದಿಂದ ನೋವಾಗಿದೆ. ನಮ್ಮ ಪುರಸಭಾ ವ್ಯಾಪ್ತಿಯಲ್ಲಿ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದವರೋರ್ವರು ಸಾವನ್ನಪ್ಪಿರುವುದು ನಮಗೆಲ್ಲರಿಗೂ ದು:ಖ ತಂದಿದೆ. ನಮ್ಮ ವ್ಯಾಪ್ತಿಯಲ್ಲಿ ಇಂತಹ ದುರ್ಘಟನೆ ನಡೆದಿರುವುದು ವಿಷಾದದ ಸಂಗತಿ ಎಂದೂ ಹೇಳಿದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...