ಭಟ್ಕಳ:ತಾಸುಗಳ ಕಾಲ ಎಡೆಬಿಡದೇ ಸುರಿದ ಭಾರೀ ಮಳೆ: ಸಂಶುದ್ದೀನ್ ಸರ್ಕಲ್ ಬಳಿ ತುಂಬಿದ ನೀರು.

Source: s o news | By MV Bhatkal | Published on 28th June 2018, 12:55 AM | Coastal News |

ಭಟ್ಕಳ:ಬುಧವಾರ ಸುರಿದ ಭಾರೀ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸುಮಾರು ಎರಡು ಅಡಿಗಷ್ಟು ನೀರು ನಿಂತು ಹೆದ್ದಾರಿಯಲ್ಲಿ ಓಡಾಡುವ ವಾಹನ ಸವಾರರು ತೀವ್ರ ತೊಂದರೆ ಪಟ್ಟಿದ್ದರೆ, ದ್ವಿಚಕ್ರ ವಾಹನ ಸವಾರರು ಕೂಡಾ ಪ್ರಯಾಸದಿಂದ ವಾಹನ ಚಲಾಯಿಸಬೇಕಾಗಿ ಬಂದಿತ್ತು.

ಆರಂಭವಾದ ಮಳೆ ತಾಸುಗಳ ಕಾಲ ಎಡೆಬಿಡದೇ ಸುರಿದಿದ್ದು ಜನಜೀವನ ಅಸ್ತವ್ಯವಸ್ಥವಾಯಿತು. ನಗರದ ರಂಗೀಕಟ್ಟೆಯಲ್ಲಿ ಚರಂಡಿಯ ಹೂಳು ತೆಗೆಯದೇ ಇರುವುದರಿಂದ ನೀರು ಹರಿದು ಹೋಗದೇ ಹೆದ್ದಾರಿಯ ಮೇಲೆಯೇ ನಿಂತು ಭಾರೀ ಅದ್ವಾನ ಉಂಟು ಮಾಡಿತು. ಸಂಶುದ್ದೀನ್ ಸರ್ಕಲ್ ಬಳಿ ನೀರು ತುಂಬಿದ್ದು, ಪಕ್ಕದಲ್ಲಿರುವ ಅಂಗಡಿ ಮಳಿಗೆ ನೀರು ಹತ್ತುವ ಸಂಭವ ದಲ್ಲಿದ್ದು, ಅಂಗಡಿ ಮಳಿಗೆ ಬರುವ ಜನರು ಹರಸಾಹಸ ಪಡುವಂಥ ಪರಿಸ್ಥಿತಿ ಎದುರಾಯಿತು. ಪ್ರತಿ ವರ್ಷವೂ ಕೂಡಾ ಸಣ್ಣ ಮಳೆ ಬಂದರೂ ಹೆದ್ದಾರಿಯಂಚಿನಲ್ಲಿ ನೀರು ನಿಂತು ವಾಹನ ಸವಾರರು ಹಾಗೂ ಪಾದಾಚಾರಿಗಳಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತಿದ್ದರೂ ಸಹ ಪುರಸಭೆಯಾಗಲೀ, ಹೆದ್ದಾರಿ ಇಲಾಖೆಯವರಾಗಲೀ ಇತ್ತ ಕಡೆ ಗಮನ ಹರಿಸದೇ ಇರುವುದರಿಂದ ಪ್ರತಿ ವರ್ಷವೂ ಜನರ ಗೋಳು ತಪ್ಪಿದ್ದಲ್ಲ ಎನ್ನುವಂತಾಗಿದೆ. ಪ್ರತಿ ವರ್ಷ ಸುಮಾರು 8-10 ಬಾರಿ ರೀತಿಯಾಗಿ ನೀರು ನಿಂತು ತೊಂದರೆಯಾಗುತ್ತಿದ್ದರೂ ಕೂಡಾ ಯಾವುದೇ ಅಧಿಕಾರಿಗಳು ಇತ್ತ ಕಡೆ ಗಮನ ಕೊಡದೇ ಇರುವುದು ನಾಗರೀಕರು ಸಂಕಷ್ಟ ಅನುಭವಿಸುವಂತಾಗುವುದು.

ಪುರಸಭೆಯವರು ಮಳೆಗಾಲಕ್ಕೂ ಪೂರ್ವ ಚರಂಡಿಗಳ ಹೂಳೆತ್ತಲು ಆರಂಭಿಸಿದ್ದರೂ ಕೂಡಾ ಹೆದ್ದಾರಿಯಂಚಿನಲ್ಲಿ ತುಂಬಿದ್ದ ಹೂಳು ಎತ್ತದೇ ಇರುವುದರಿಂದ ಹಾಗೂ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಹೆದ್ದಾರಿಯ ಮೇಲೆಯೇ ನೀರು ನಿಂತು ಮಳೆಯಾಗುತ್ತಲೇ ತೊಂದರೆಗೆ ಸಿಲುಕುವಂತಾಗುವುದು ಸಾಮಾನ್ಯವಾಗಿದೆ.

 

 

Read These Next