ಘರ್‌ವಾಪಸಿಗೆ ಉಜಿರೆಯ ರಾಮತೀರ್ಥ ಶ್ರೀಗಳ ಹೆಸರು ದುರ್ಬಳಕೆ

Source: S O News service | By Staff Correspondent | Published on 23rd March 2017, 11:54 PM | Coastal News | Don't Miss |

ಭಟ್ಕಳ: ಶ್ರೀರಾಮಸೇನೆಯ ಅಧ್ಯಕ್ಷ ಎಂದು ಹೇಳಿಕೊಳ್ಳುತ್ತಿರುವ ಶಂಕರ್ ನಾಯ್ಕ ಎಂಬಾತ ಘರ್‌ವಾಪಸಿ ಕಾರ್ಯಕ್ರಮ ನಡೆಸುವುದಾಗಿ ಹೇಳಿಕೊಂಡು ಉಜಿರೆಯ ರಾಮತೀರ್ಥ ಬ್ರಹ್ಮಾನಂದಾ ಸರಸ್ವತಿ ಸ್ವಾಮೀಜಿಯವರ ಫೋಟೊ ಹಾಗೂ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಇದನ್ನು ನಾಮಧಾರಿ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ನಾಮಧಾರಿ ಗುರುಮಠದ ಅಧ್ಯಕ್ಷ ಡಿ.ಬಿ. ನಾಯ್ಕ ಹೇಳಿದರು.

 

ಗುರುಮಠದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಕೆಲದಿನಗಳಿಂದ ಶ್ರೀರಾಮಸೇನೆ ಅಧ್ಯಕ್ಷ ಎಂದು ಹೇಳಿಕೊಂಡಿರುವ ಶಂಕರ್ ನಾಯ್ಕ ಭಟ್ಕಳದಲ್ಲಿ ಮುಸ್ಲಿಮರು ಹಾಗೂ ಕ್ರೈಸ್ತ ಸಮುದಾಯದ 50 ಮಂದಿಯನ್ನು ಘರ್‌ವಾಪಸಿ ಮಾಡಲಾಗುವುದು ಎಂದು ಹೇಳಿಕೊಂಡು ಜಿಲ್ಲೆಯ ಸುದ್ದಿವಾಹಿನಿಯೊಂದರಲ್ಲಿ ಸ್ವಾಮೀಜಿಯವರ ಭಾವಚಿತ್ರ ಮತ್ತು ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುದ್ದಿ ಪ್ರಕಟಿಸಿದ್ದಾನೆ. ಘರ್‌ವಾಪಸಿ ಕಾರ್ಯಕ್ರಮಕ್ಕೆ ಸಂಬಂಧವೇ ಇಲ್ಲದ ಸ್ವಾಮೀಜಿಯವರ ಭಾವಚಿತ್ರ ಮತ್ತು ಹೆಸರು ದುರ್ಬಳಕೆ ಮಾಡಿರುವುದಕ್ಕೆ ಸ್ವಾಮೀಜಿಯವರು ಮತ್ತು ಸಮಸ್ತ ನಾಮಧಾರಿ ಸಮುದಾಯದವರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸುದ್ದಿಗೋಷ್ಠಿಗೆ ಹಾಜರಾದ ಶಂಕರ್ ನಾಯ್ಕ ಮಾತನಾಡಿ, ಶ್ರೀ ರಾಮ ಕ್ಷೇತ್ರದ ಮಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಭಾವಚಿತ್ರ ಅಚಾತುರ್ಯದಿಂದ ಪ್ರಕಟಿಸಿದ್ದು ಇದಕ್ಕೆ ಸ್ವಾಮೀಜಿಗಳ ಪಾದಗಳಿಗೆ ಕ್ಷಮೆ ಯಾಚಿಸುತ್ತೇನೆ. ಅಲ್ಲದೆ, ಆಸರಕೇರಿಯ ನಾಮಧಾರಿ ಗುರುಮಠದಲ್ಲಿ ನಾಮಧಾರಿ ಸಮಾಜದ ಅಧ್ಯಕ್ಷರ ಹಾಗೂ ಸದಸ್ಯರ ಸಮ್ಮುಖದಲ್ಲಿ ಕ್ಷಮಾಪಣಾ ಹೇಳಿಕೆ ನೀಡಿದರು.

ಅಚಾತುರ್ಯದಿಂದಾಗಿ ಸ್ವಾಮೀಜಿಗಳ ಪೋಟೊವನ್ನು ಘರ್‌ವಾಪಸಿ ಕಾರ್ಯಕ್ರಮದ ಬಗ್ಗೆ ತಾನು ಹೇಳಿಕೆ ನೀಡಿದ ಸುದ್ದಿಯಲ್ಲಿ ಬಿತ್ತರಿಸಿರುವುದಕ್ಕೆ ಸುದ್ದಿವಾಹಿನಿಯೇ ನೇರ ಹೊಣೆ. ನಾನು ಈ ವಾಹಿನಿಯ ವಿರುದ್ಧ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.
ಘರ್‌ವಾಪಸಿ ಕಾರ್ಯಕ್ರಮಕ್ಕೂ ಸ್ವಾಮೀಜಿಯವರಿಗೂ ಯಾವುದೇ ಸಂಬಂಧ ಇಲ್ಲ. ಇನ್ನೊಮ್ಮೆ ಇಂತಹ ಅಚಾತುರ್ಯ ಮಾಡುವುದಿಲ್ಲ. ಈ ಬಗ್ಗೆ ವಿಷಾದ ವ್ಯಕ್ತ ಪಡಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಡಿ.ಬಿ. ನಾಯ್ಕ ಮಾತನಾಡಿ, ಸ್ವಾಮೀಜಿಯವರ ಭಾವಚಿತ್ರ ಪ್ರಕಟಿಸಿರುವ ಬಗ್ಗೆ ಈಗಾಗಲೇ ಶಂಕರ ನಾಯ್ಕ ಕ್ಷಮಾಪಣೆ ಕೇಳಿದ್ದಾರೆ. ಬೇಜವಾಬ್ದಾರಿತನದ ಕೆಲಸಕ್ಕಾಗಿ ವಾಹಿನಿಯವರೂ ಕ್ಷಮಾಪಣೆ ಕೇಳಿ ವಿಷಾದ ಹೇಳಿಕೆ ನೀಡಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಡಿ.ನಾಯ್ಕ, ಕೆ.ಆರ್. ನಾಯ್ಕ, ಗೋವಿಂದ ನಾಯ್ಕ, ಶ್ರೀಧರ ನಾಯ್ಕ, ಈಶ್ವರ ನಾಯ್ಕ, ವಿಠ್ಠಲ್ ನಾಯ್ಕ, ನಾರಾಯಣ ನಾಯ್ಕ, ರಾಜೇಶ ನಾಯ್ಕ, ಗಣಪತಿ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...