ಭಟ್ಕಳ:ಸೆ.24ರಂದು ಮಂಗಳೂರಿನ ನುರಿತ ವೈದ್ಯರ ತಂಡದಿಂದ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

Source: so english | By Arshad Koppa | Published on 22nd September 2017, 2:59 PM | Coastal News |

ಭಟ್ಕಳ: ಯೆನಪೋಯಾ ಡೆಂಟಲ್ ಕಾಲೇಜ್ ಮತ್ತು ಹಾಸ್ಪಿಟಲ್ ಮಂಗಳೂರಿನ ನುರಿತ ವೈದ್ಯರ ತಂಡದಿಂದ ಸೆ.24ರಂದು ರವಿವಾರ ಬಂದರ್ ರಸ್ತೆಯ ಆಲ್-ಅಫ್ರಾ ಶಾದಿ ಹಾಲ್‍ನಲ್ಲಿ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಎರ್ಪಡಿಸಲಾಗಿದ್ದು ಭಟ್ಕಳ-ಹೊನ್ನಾವರ ತಾಲೂಕಿನ ಹೆಚ್ಚಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಾಮಾಜಿಕ ಮುಖಂಡ ಇನಾಯತುಲ್ಲಾ ಶಾಬಂದ್ರಿ ಹೇಳಿದರು. 

ಅವರು ಇಲ್ಲಿನ ಖಾಸಗೀ ಹೋಟೆಲ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. 

ಇಂದು ವೈದ್ಯಕೀಯ ಚಿಕಿತ್ಸೆ ತೀರಾ ದುಬಾರಿಯಾಗಿ ಪರಿಣಮಿಸಿದ್ದು, ಸಾಮಾನ್ಯ ಜನರು ಹಲ್ಲಿನ ಚಿಕಿತ್ಸೆಗಾಗಿ ಹೆಚ್ಚು ಹೆಚ್ಚು ಹಣ ಖರ್ಚು ಮಾಡಬೇಕಾಗಿ ಬರುತ್ತದೆ.  ಹಾಗಾಗಿ ಕೇವಲ ತಪಾಸಣೆ ಮಾತ್ರವಲ್ಲ ಉತ್ತಮ ಚಿಕಿತ್ಸೆಯನ್ನೂ ನೀಡಬೇಕು ಎಂದು ಶಿಬಿರ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೊಂದ ಶಿಬಿರವನ್ನು ಆಯೋಜಿಸಿ ಅಗತ್ಯವಿದ್ದವರಿಗೆ ಭಾಗವಹಿಸಲು ಅನುಕೂಲ ಮಾಡಿಕೊಡಲಾಗುವುದು ಎಂದೂ ಹೇಳಿದರು. 
ದಂತ ಚಿಕಿತ್ಸಾ ಶಿಬರದಲ್ಲಿ ನರಿತ ವೈದ್ಯರುಗಳಿಂದಲೇ ಹಲ್ಲುಗಳ ತಪಾಸಣೆ, ಸೂಕ್ತ ಚಿಕಿತ್ಸೆ ಮಾಡಲಾಗುವುದು. ಅಗತ್ಯವಿದ್ದವರಿಗೆ ಹಾಗೂ ನಿರಂತರ ಚಿಕಿತ್ಸೆ ಅಗತ್ಯವಿದ್ದವರಿಗೆ ಮಂಗಳೂರಿನ ಯೆನಪೋಯಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಉಚಿತ ಇಲ್ಲವೇ ಅತೀ ಕಡಿಮೆ ಹಣದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆಯ ವೈದ್ಯೆ ಡಾ. ನಾಜಿಯಾ ಶಾಬಂದ್ರಿ ತಿಳಿಸಿದರು. 
ತಮ್ಮ ತಂದೆಯವರಾದ ದಿವಂಗತ ಸೈಫುಲ್ಲಾ ಶಾಬಂದ್ರಿ ಅವರ ಸ್ಮರಣಾರ್ಥವಾಗಿ ಶಿಬಿರವನ್ನು ಹಮ್ಮಿಕೊಂಡಿದ್ದು ಪ್ರತಿ ಬಡವರಿಗೂ ಶಿಬಿರದ ಪ್ರಯೋಜನ ದೊರೆಯಬೇಕು. ಕೇವಲ ತಪಾಸಣೆಯನ್ನು ಮಾಡುವುದಷ್ಟೇ ಅಲ್ಲ, ಉತ್ತಮ ನುರಿತ ವಿವಿಧ ವಿಭಾಗದ ವೈದ್ಯರಿಂದ ಚಿಕಿತ್ಸೆ ಸಹ ನೀಡಲಾಗುವುದು.  ಶಿಬಿರದಲ್ಲಿ 25ಕ್ಕೂ ಹೆಚ್ಚು ನುರಿತ ವೈದ್ಯರು ಭಾಗವಹಿಸುತ್ತಿದ್ದು, ಚಿಕ್ಕ ಮಕ್ಕಳಲ್ಲಿ ಹಲ್ಲಿನ ಸಮಸ್ಯೆ, ಚಿಕಿತ್ಸೆಯ ಕುರಿತು ಉಪನ್ಯಾಸ ಕೂಡಾ ಎರ್ಪಡಿಸಲಾಗಿದ್ದು ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದೂ ಅವರು ಕೋರಿದರು. 
ಈ ಸಂದರ್ಭದಲ್ಲಿ ಡಾ. ನಾಜಿಯಾ ಅವರ ಪತಿ ಸೈಯದ್ ಹಸನ್ ಆತಿಫ್ ಬರ್ಮಾವರ್ ಉಪಸ್ಥಿತರಿದ್ದರು. 
ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು ಸೆ. 22ರೊಳಗಾಗಿ ತಮ್ಮ ಹೆಸರನ್ನು ಇನಾಯತುಲ್ಲಾ ಶಾಬಂದ್ರಿಯವರ-9448629437 ಮೊಬೈಲ್ ನಂಬರ್ ಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. 

Read These Next