ಅಧಿಕಾರಿಗಳಲ್ಲಿರುವ ಮಾಹಿತಿಯ ಕೊರತೆಯ ಬಗ್ಗೆ ತೀವ್ರ ಬೇಸರ:ಸಂಸದ ಅನಂತಕುಮಾರ್ ಹೆಗಡೆ

Source: s o news | By MV Bhatkal | Published on 27th May 2017, 1:05 AM | Coastal News | Don't Miss |

ಭಟ್ಕಳ: ಕೇಂದ್ರ ಪುರಸ್ಕತ ಯೋಜನೆಗಳ ಅಭಿವೃದ್ಧಿ ಪರಿಶೀಲನಾ ಸಭೆಯು ಇಲ್ಲಿನ ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ಸಂಸದ ಅನಂತಕುಮಾರ್ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 
ವಿವಿಧ ಯೋಜನೆಗಳ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದ ಸಂಸದರು ಅಧಿಕಾರಿಗಳಲ್ಲಿರುವ ಮಾಹಿತಿಯ ಕೊರತೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಅಧಿಕಾರಿಗಳಲ್ಲಿಯೇ ಮಾಹಿತಿ ಇಲ್ಲ ಎಂದ ಮೇಲೆ ಜನತೆಗೆ ನೀವೇನು ಸೌಲಭ್ಯ ನೀಡುತ್ತೀರಿ ಎಂದು ಖಾರವಾಗಿಯೇ ನುಡಿದರು. 
ಅರಣ್ಯ ಹಕ್ಕು ಸಮಿತಿಯನ್ನು ಕೇಂದ್ರ ಸರಕಾರ ಸಂವಿಧಾನ ರೀತ್ಯಾ ರಚನೆ ಮಾಡಿರುವಂತದ್ದು, ಅವರಿಗೆ ಎಲ್ಲಾ ರೀತಿಯ ಅಧಿಕಾರವನ್ನು ಕೇಂದ್ರ ಸರಕಾರ ನೀಡಿದೆ. ತಾಲೂಕಿನಲ್ಲಿ ಸಮಿತಿಯ ಸದಸ್ಯರಿಗೆ ಸರಿಯಾದ ಮಾಹಿತಿ ನೀಡದೇ ಅವರ ಅಧಿಕಾರವನ್ನು ತಿಳಿಸದೇ ಇರುವುದು ಸರಿಯಲ್ಲ. ಇದರಲ್ಲಿ ಅಧಿಕಾರಿಗಳ ತಪ್ಪು ಬಹಳಷ್ಟಿದ್ದು ಸರಿಯಾಗಿ ತಿಳಿದುಕೊಂಡು ಮಾಹಿತಿಯನ್ನು ನೀಡಬೇಕಾಗುತ್ತದೆ. ಕಂದಾಯ, ಅರಣ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆಗಳು ಜಂಟಿಯಾಗಿ ಈ ಕುರಿತು ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದರು. ಅರಣ್ಯ ಹಕ್ಕು ಸಮಿತಿ ರಚನೆಯಾದ ಮೇಲೆ ಅರಣ್ಯ ಇಲಾಖೆಗೆ ಆ ಗ್ರಾಮದಲ್ಲಿ ಕೆಲಸವೇ ಇಲ್ಲವಾಗುತ್ತದೆ. ಎಲ್ಲಾ ಅರಣ್ಯಕ್ಕೆ ಸಂಬಂಧ ಪಟ್ಟ ಕೆಲಸಗಳನ್ನು ಅರಣ್ಯ ಹಕ್ಕು ಸಮಿತಿಯೇ ಮಾಡಬೇಕು. ಅರಣ್ಯ ಇಲಾಖೆ ಕೇವಲ ಉಸ್ತುವಾರಿಯಷ್ಟೇ ಎಂದ ಸಂಸದರು ಮಾಹಿತಿ ಕೊರತೆಯಿದ್ದರೆ ತಿಳಿದುಕೊಳ್ಳುವಂತೆ  ಸಲಹೆ ನೀಡಿದರು. 
ಸಂಸದರು ಸಭೆಯನ್ನು ಆರಂಭಿಸುತ್ತಿದ್ದಂತೆಯೇ ಎಲ್ಲಾ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಿದ್ದುದು ವಿಶೇಷವಾಗಿದ್ದರೆ, ಸಭೆಯಲ್ಲಿ ಅತ್ಯಂತ ಗಂಭೀರತೆ ಎದ್ದು ಕಾಣುತ್ತಿತ್ತು. ಪ್ರತಿಯೊಂದು ಇಲಾಖೆಯ ಕುರಿತು, ಕಾಮಗಾರಿಯ ಕುರಿತು, ಗುಣಮಟ್ಟದ ಕುರಿತು ಕರಾರುವಕ್ಕಾಗಿ ಪ್ರಶ್ನೆ ಕೇಳುವ ಸಂಸದರು ಅಧಿಕಾರಿಗಳಿಂದ ನಿಖರವಾದ ಉತ್ತರ ಬಯಸಿರುವುದು ಹಲವು ಅಧಿಕಾರಿಗಳಿಗೆ ಕಲ್ಲಿನ ಕಡಲೆಯಾಗಿತ್ತು. ಕೇವಲ ತಾವು ತಯಾರಿಸಿದ ವರದಿಯನ್ನು ಓದುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳದೇ ಕುಳ್ಳಿರಿಸಿರುವುದು ಬೀಸೋದೊಣ್ಣೆ ತಪ್ಪಿದಂತಾಗಿತ್ತು. ಸಭೆಯಲ್ಲಿ ಮಾತನಾಡಿದ ಅವರು ಕೇವಲ ಒಂದೆರಡು ಅಧಿಕಾರಿಗಳನ್ನು ಬಿಟ್ಟರೆ ಯಾರೂ ಕೂಡಾ ನಿಖರವಾದ ಮಾಹಿತಿ ಕೊಡುವಲ್ಲಿ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 
ಸಭೆಯಲ್ಲಿ ಸರಕಾರದ ಮನೆಗಳನ್ನು ಗ್ರಾಮ ಪಂಚಾಯತ್‍ಗಳೇ ಆಯ್ಕೆ ಮಾಡಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಕಳುಹಿಸಬೇಕು, ರಾಜ್ಯದಲ್ಲಿ ಶಾಸಕರು ಫಲಾನುಭವಿಗಳನ್ನು ಆಯ್ಕೆ ಮಾಡುವುದಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದರು ಹೇಳಿದ ಅವರು ಸರ್ವ ಶಿಕ್ಷಾ ಅಭಿಯಾನದಡಿಯಲ್ಲಿ ಎಷ್ಟು ವಿಧಗಳಿವೆ? ಯಾವ್ಯಾವುದಕ್ಕೆ ಅನುದಾನ ಬಿಡುಗಡೆಯಾಗುತ್ತದೆ ಎನ್ನುವ ಪ್ರಶ್ನೆ ಕೇಳುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೇ ಒಮ್ಮೆ ತಬ್ಬಿಬ್ಬುಗೊಳಿಸಿದರು. ಹಲವು ಬಾರಿ ನನಗೆ ನೀವು ಕೊಟ್ಟ ಲೆಕ್ಕ ಬೇಡಾ, ನಿಜವಾಗಿ ಆಗಿರುವ ಪ್ರಗತಿಯ ವರದಿಯನ್ನು ಕೊಡಿ ಎಂದೂ ತಾಕೀತು ಮಾಡಿದ ಪ್ರಸಂಗ ನಡೆಯಿತು. 
ಹೆಸ್ಕಾಂ ಇಲಾಖೆಗೆ ಕೇಂದ್ರ ಸರಕಾರದ ದೀನದಯಾಳ್ ಉಪಾಧ್ಯಾಯ ಗ್ರಾಮೀಣ ವಿದ್ಯುತ್ ಯೋಜನೆಯಡಿಯಲ್ಲಿ ವಿದ್ಯುತ್ ಇಲ್ಲದ 691 ಮನೆಗಳಿಗೆ ವಿದ್ಯುತ್ ನೀಡಲು 1.84 ಕೋಟಿ ರೂಪಾಯಿ ಮಂಜೂರಾಗಿದೆ. ಅವುಗಳಲ್ಲಿ 1ಕೋಟಿ ವಿದ್ಯುತ್ ನೀಡಲು ಹಾಗೂ 84 ಲಕ್ಷ ಉಪಕರಣ ಹಾಗೂ ಅಭಿವೃದ್ಧಿಗೆ ಮೀಸಲಿದೆ ಎಂದರು. 
ಕೇಂದ್ರ ಪುರಸ್ಕøತ ಯೋಜನೆಯಡಿಯಲ್ಲಿ ಮುರ್ಡೇಶ್ವರ - ತೂದಳ್ಳಿ ರಸ್ತೆ ಟೆಂಡರ್ ಹಂತದಲ್ಲಿದೆ. 260 ಲಕ್ಷ ಸೈಕ್ಲೋನ್ ಸೆಂಟರ್ ಮಾಡಲು ಮಂಜೂರಾಗಿದೆ. 435 ಲಕ್ಷ ಸೈಕ್ಲೋನ್ ಸೆಂಟರ್‍ಗಳ ನಿರ್ಮಾಣಕ್ಕೆ ಬಂದಿದೆ ಎಂದು ಮಾಹಿತಿ ನೀಡಲಾಯಿತು. ಕಡವಿನಕಟ್ಟಾ ಡ್ಯಾಂನಿಂದ ಗ್ರಾಮ ಪಂಚಾಯತ್‍ಗಳು ಕುಡಿಯುವ ನೀರನ್ನು ಉಪಯೋಗಿಸುತ್ತಿದ್ದು ಹೂಳು ತುಂಬಿ ನೀರಿನ ಸಂಗ್ರಹ ಕಡಿಮೆಯಾಗುತ್ತಿರುವ ಕುರಿತು ಮೈನರ್ ಇರಿಗೇಶನ್ ಇಲಾಖೆಯವರಿಂದ ಮಾಹಿತಿ ಪಡೆದ ಅವರು ಹೂಳೆತ್ತಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 
ಸಭೆಯಲ್ಲಿ ತಹಸೀಲ್ದಾರ್ ವಿ.ಎನ್. ಬಾಡಕರ್, ತಾ.ಪಂ.ಪ್ರಭಾರ ಕಾ.ನಿ.ಅಧಿಕಾರಿ ವಿಶ್ವನಾಥ ಕೋಟ್ಯಾನ್, ಜಿ.ಪಂ. ಸದಸ್ಯೆ ನಾಗಮ್ಮ ಗೊಂಡ, ತಾ.ಪಂ. ಸದಸ್ಯರಾದ ಹನುಮಂತ ನಾಯ್ಕ, ಪಾಶ್ರ್ವನಾಥ ಶೆಟ್ಟಿ, ಮಾಲತಿ ಮೋಹನ ದೇವಡಿಗ, ಸುಲೋಚನಾ ನಾಯ್ಕ, ಇಲಾಖೆಯ ಅಧಿಕಾರಿಗಳು  ಉಪಸ್ಥಿತರಿದ್ದರು. 

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...