ಭಾರತ್ ಬಂದ್ ಹಿನ್ನೆಲೆ; ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದ ಮಂಗಳೂರಿಗರು

Source: sonews | By sub editor | Published on 10th September 2018, 5:03 PM | Coastal News | Don't Miss |

ಮಂಗಳೂರು: ಇಂಧನಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ನೀಡಿದ್ದ ಕರೆಯ ಮೇರೆಗೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಇಂದು ನಡೆದ ಭಾರತ್ ಬಂದ್ ನಗರದ ವಿವಿಧ ಕಡೆ ವಿಭಿನ್ನ ರೀತಿ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು.

ಮಾಜಿ ಶಾಸಕ ಜೆ.ಆರ್.ಲೋಬೋ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತ(ಜ್ಯೋತಿ ಸರ್ಕಲ್)ದ ಬಳಿ ಪ್ರತಿಭಟನೆ ನಡೆಯಿತು. ಬಳಿಕ ಕಂಕನಾಡಿಯವರೆಗೆ ರ್ಯಾಲಿ ನಡೆಸಲಾಯಿತು. ಈ ಸಂದರ್ಭ ಲೋಬೋ ಸೇರಿದಂತೆ ಕೆಲ ನಾಯಕರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಬಿಡುಗಡೆಗೊಳಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಹಂಪನಕಟ್ಟೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯ ಸಂದರ್ಭ ಎತ್ತಿನಗಾಡಿ, ಬೈಕ್‌ನಲ್ಲಿ ಅಡುಗೆ ಅನಿಲ ಸಿಲಿಂಡರ್, ಕಟ್ಟಿಗೆಯನ್ನಿಟ್ಟು ವಿನೂತನವಾಗಿ ಪ್ರತಿರೋಧವನ್ನು ಪ್ರದರ್ಶಿಸಲಾಯಿತು. ಐವನ್ ಡಿಸೋಜ ತಮ್ಮ ಚತುಷ್ಚಕ್ರ ವಾಹನವನ್ನು ದೂಡಿಕೊಂಡು ಬಂದರಲ್ಲದೆ, ಸೈಕಲ್ ಏರಿ ತೈಲ ಬೆಲೆ ಏರಿಕೆಯನ್ನು ವಿರೋಧಿಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಪ್ರದರ್ಶನದ ವೇಳೆ ಐವನ್ ಡಿಸೋಜ ವೇದಿಕೆಯಲ್ಲಿ ಕಟ್ಟಿಗೆ ಹೊರೆಯನ್ನು ತಲೆ ಮೇಲೆ ಹೊತ್ತುಕೊಂಡು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿ ಕಚೇರಿ ಎದುರು ನಡು ರಸ್ತೆಯಲ್ಲೇ ಒಲೆ ಉರಿಸಿ ಚಹಾ ತಯಾರಿಸಿದ ಪ್ರಸಂಗವೂ ನಡೆಯಿತು.

ನಗರದ ಅಂಬೇಡ್ಕರ್ ವೃತ್ತದ ಬಳಿ ಮಾಜಿ ಶಾಸಕ ಜೆ.ಆರ್. ಲೋಬೋ ನೇತೃತ್ವದಲ್ಲಿ ಪ್ರತಿಭಟನೆ ವೇಳೆ ಹಾಲಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿರುವುದು ವರದಿಯಾಗಿದೆ.

ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಾಂಗ್ರೆಸ್ ಕಾರ್ಯಕರ್ತರು ಅಂಬೇಡ್ಕರ್ ವೃತ್ತದ ರಸ್ತೆ ಮಧ್ಯೆ ಪ್ರತಿಭಟನೆ ನಡೆಸುತ್ತಿದ್ದರು. ಆಗ ಆ ದಾರಿಯಾಗಿ ವೇದವ್ಯಾಸ ಕಾಮತ್ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದರು. ಆ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ತೀವ್ರಗೊಳಿಸಿ ಶಾಸಕರ ವಾಹನವನ್ನು ತಡೆಯಲೆತ್ನಿಸಿದರು.

ಆಗ ವಾಹನದಿಂದ ಇಳಿದು ಬಂದ ಶಾಸಕ ವೇದವ್ಯಾಸ ಕಾಮತ್‌ಸ್ಥಳದಲ್ಲಿ ಉಪಸ್ಥಿತರಿದ್ದ ಮಾಧ್ಯಮದವರ ಜತೆ ಪ್ರತಿಕ್ರಿಯಿಸಿ, ‘‘ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ಮಾಡಿ ಬಲವಂತದ ಪ್ರತಿಭಟಿಸುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಪೊಲೀಸರು ಕೂಡಾ ಪ್ರತಿಭಟನೆಯನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ರಾಜ್ಯದ ಆಡಳಿತ ಪಕ್ಷದ ಪರವಾಗಿ ದ.ಕ. ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಕೂಡಾ ಬಂದ್‌ಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಬಳಿಕ ಸ್ಥಳದಲ್ಲಿದ್ದ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಬಳಿ ತೆರಳಿದ ವೇದವ್ಯಾಸ ಕಾಮತ್, ಪೊಲೀಸರು ಕಾಂಗ್ರೆಸ್ ಪರ ವರ್ತನೆ ತೋರಿಸುತ್ತಿದ್ದಾರೆ ಎಂದು ವಾಗ್ವಾದಕ್ಕಿಳಿದರು. ಈ ಸಂದರ್ಭ ಆಯುಕ್ತರು ಪ್ರತಿಕ್ರಿಯಿಸಿ, ತಾವು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವುದಾಗಿ ಹೇಳುತ್ತಾ, ಶಾಸಕರನ್ನು ಸ್ಥಳದಿಂದ ತೆರಳುವಂತೆ ಸೂಚಿಸಿದರು. ಇದರಿಂದ ಶಾಸಕರು ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಮಾತಿನ ಚಕಮಕಿಯೂ ನಡೆಯಿತು. ಇದಾಗಿ ಮತ್ತೆ ಶಾಸಕರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಲು ಮುಂದಾದಾಗ, ಪ್ರತಿಭಟನಾ ನಿರತರು ಪೊಲೀಸ್ ಅಧಿಕಾರಿಗಳ ಬಳಿ ಮಾತಿನ ಚಕಮಕಿಗೆ ಮುಂದಾದರು. ಕೆಲ ಹೊತ್ತು ವಾಗ್ವಾದದ ಬಳಿಕ ಪೊಲೀಸರು ಎಲ್ಲರನ್ನೂ ಜಾಗ ಖಾಲಿ ಮಾಡಲು ಸೂಚಿಸಿದರು.

ಅಲ್ಲಿಂದ ಪ್ರತಿಭಟನಾ ರ್ಯಾಲಿಯೊಂದು ಕಂಕನಾಡಿಯತ್ತ ತೆರಳಿತು. ಅದೇ ವೇಳೆ ನಗರದ ಬೆಂದೂರ್‌ವೆಲ್‌ಬಳಿ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆಯೂ ನಡೆಯುತ್ತಿತ್ತು. ಕಂಕನಾಡಿ ಬಳಿ ಮಾಜಿ ಶಾಸಕ ಜೆ.ಆರ್.ಲೋಬೋ ಸೇರಿದಂತೆ 49 ಮಂದಿಯನ್ನು ಬಂಧಿಸಿದ ಪೊಲೀಸರು ಬಳಿಕ ಬಿಡುಗಡೆಗೊಳಿಸಿದರು.

ಐವನ್ ಡಿಸೋಜ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಹಿರಿಯ ನ್ಯಾಯವಾದಿ, ಜಸ್ಟಿಸ್ ಫಾರ್ ಫೋರಂನ ದಯಾನಾಥ ಕೋಟ್ಯಾನ್ ಮಾತನಾಡಿ, ಸುಳ್ಳಿನ ಸರಮಾಲೆಯನ್ನೇ ಹೇಳಿಕೊಂಡು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ವಸ್ತುಗಳ ಬೆಲೆ ಏರಿಕೆಯಾಗಿ ಮನುಷ್ಯನಿಗೆ ಬೆಲೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಐವನ್ ಡಿಸೋಜ ಮಾತನಾಡಿ, ಈ ದೇಶದ ಕಾವಲುಗಾರನಾಗುತ್ತೇನೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ಪಾಲುದಾರರಾಗಿದ್ದಾರೆ. ಮೋದಿ ಹೇಳಿದಂತೆ ದೇಶದ ಜನರಿಗೆ ಅಚ್ಚೇ ದಿನ್ ಬರಲೇ ಇಲ್ಲ. ಬದಲಾಗಿ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಸಂಕಷ್ಟ ಪಡುವಂತಾಗಿದೆ. ನಾಲ್ಕು ವರ್ಷಗಳ ಕಾಲ ವೌನವಾಗಿದ್ದ ಜನತೆ ಇಂದು ಪ್ರತಿಭಟನೆಗೆ ಮುಂದಾಗಿದ್ದು, ಇಂಧನಗಳ ಬೆಲೆ ಇಳಿಕೆ ಆಗುವವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಪ್ರತಿಭಟನಾ ನಿರತ ಮಹಿಳೆಯರ ಪರವಾಗಿ ಗೀತಾ ಉಚ್ಚಿಲ್, ಇಂಟಕ್‌ನ ಸುರೇಶ್ ಮಾತನಾಡಿದರು. ಬಳಿಕ ನಡು ರಸ್ತೆಯಲ್ಲೇ ತಯಾರಿಸಲಾದ ಚಹಾವನ್ನು ಸೇವಿಸಿ ಪ್ರತಿಭಟನೆಯನ್ನು ಕೊನೆಗೊಳಿಸಲಾಯಿತು.

ಅಚ್ಚೇ ದಿನ್ ಬಂದೇ ಇಲ್ಲ...ಕಪ್ಪು ಹಣವು ಸಿಗಲೇ ಇಲ್ಲ....

ಆನ್‌ಲೈನ್ ಟ್ಯಾಕ್ಸಿ ಚಾಲಕರು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ನೇತೃತ್ವದಲ್ಲಿ ರಾವ್ ಆ್ಯಂಡ್ ರಾವ್ ವೃತ್ತದ ಬಳಿಯಿಂದ ಪುರಭವನದ ಎದುರಿನ ವೃತ್ತವದೆರೆಗೆ ಕಾರುಗಳಿಗೆ ಹಗ್ಗ ಕಟ್ಟಿ ರಸ್ತೆಯಲ್ಲಿ ಎಳೆದೊಯ್ಯುತ್ತಾ ವಿನೂತನವಾಗಿ ಪ್ರತಿಭಟಿಸಿದರು 

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ತ್ರಿವಿಧ ದಾಸೋಹಿ ಡಾ.ಶಿವಕುಮಾರ್ ಶಿವಯೋಗಿಗಳ ನಿಧನಕ್ಕೆ ರಾಬ್ತಾ ಮಿಲ್ಲತ್ ತೀವ್ರ ಸಂತಾಪ

ಭಟ್ಕಳ: ತ್ರಿವಿಧ ದಾಸೋಹಿ ಜ್ಞಾನಯೋಗಿ ಸಿದ್ದಗಂಗಾ ಶ್ರೀಗಳ ನಿಧನಕ್ಕೆ ರಾಬ್ತಾ-ಇ-ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ನ್ಯಾಯಾವಾದಿ ...

ಶಿರಾಲಿ ಹೆದ್ದಾರಿ ಅಗಲಿಕರಣ;ಸಾರ್ವಜನಿಕರ ಬೇಡಿಯಂತೆ 30 ರ ಬದಲು 45ಮೀಟರ್ ವಿಸ್ತರಣೆ-ಕೇಂದ್ರ ಸಚಿವ ಅನಂತ್ ಭರವಸೆ

ಭಟ್ಕಳ: ಶಿರಾಲಿ ಭಾಗದ ಗ್ರಾಮಸ್ಥರ ಬೇಡಿಕೆಯಂತೆ ರಾ.ಹೆ.66 ರ ಅಗಲೀಕರಣವನ್ನು 30ಮೀಟರ್ ಬದಲು 45ಮೀಟರ್ ಗೆ ವಿಸ್ತರಿಸಲು ಅಗತ್ಯ ಕ್ರಮಗಳನ್ನು ...

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ತ್ರಿವಿಧ ದಾಸೋಹಿ ಡಾ.ಶಿವಕುಮಾರ್ ಶಿವಯೋಗಿಗಳ ನಿಧನಕ್ಕೆ ರಾಬ್ತಾ ಮಿಲ್ಲತ್ ತೀವ್ರ ಸಂತಾಪ

ಭಟ್ಕಳ: ತ್ರಿವಿಧ ದಾಸೋಹಿ ಜ್ಞಾನಯೋಗಿ ಸಿದ್ದಗಂಗಾ ಶ್ರೀಗಳ ನಿಧನಕ್ಕೆ ರಾಬ್ತಾ-ಇ-ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ನ್ಯಾಯಾವಾದಿ ...

ಮಾನವೀಯತೆಯ ಸೌಧದಡಿ ಸಮಾನತೆಯ ಸಮಾಜ ಕಟ್ಟಿದ ಕಾಯಕ ಯೋಗಿ ಡಾ.ಶಿವಕುಮಾರ ಸ್ವಾಮೀಜಿ ಇನ್ನಿಲ್ಲ

ತುಮಕೂರು: ಪದ್ಮಭೂಷಣ, ಕರ್ನಾಟಕ ರತ್ನ, ಕಾಯಕ ಯೋಗಿ, ಶತಾಯುಷಿ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಸೋಮವಾರ ಬೆಳಗ್ಗೆ ...