ಭಟ್ಕಳ ಶಿರಾಲಿ,ಬೆಂಗ್ರೆ ಭಾಗಗಳಲ್ಲಿ ಗದ್ದೆ ನಾಟಿ ಕಾರ್ಯ ಆರಂಭ:ಪೇಟೆಗೆ ಮುಖ ಮಾಡಿ ನಾಟಿಗೆ ನೋ ಎನ್ನುತ್ತಿರುವ ನಾರಿಯರು

Source: so news | By V. D. Bhatkal | Published on 18th June 2018, 9:57 PM | Coastal News | Special Report |

ಭಟ್ಕಳ: ಮುಂಗಾರು ಮಳೆಯಿಂದಾಗಿ ತಾಲೂಕಿನಲ್ಲಿ ಕೃಷಿ ಭೂಮಿ ತಂಪಾಗಿದೆ. ಇದ್ದ ತುಂಡು ಭೂಮಿಯಲ್ಲಿಯೇ ಅನ್ನ ಹುಡುಕಾಡುವ ಇಲ್ಲಿನ ರೈತನಿಗೆ ಕೈ ತುಂಬಾ ಕೆಲಸ ಸಿಕ್ಕಿದೆ. ಆದರೆ ಮಾಡಲೋ ಬಿಡಲೋ ಎನ್ನುತ್ತ ಅನಿವಾರ್ಯವಾಗಿ ಗದ್ದೆಗೆ ಇಳಿಯುತ್ತಿರುವ ರೈತನ ಮುಖದಲ್ಲಿ ಮೊದಲಿನ ಮಂದಹಾಸ ಮಾತ್ರ ಕಾಣಿಸುತ್ತಿಲ್ಲ.
 ಭಟ್ಕಳ ತಾಲೂಕಿನಲ್ಲಿ ಅಂದಾಜು 3500 ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತಿರುವ ಬಗ್ಗೆ ಕೃಷಿ ಇಲಾಖೆ ಲೆಕ್ಕ ಬರೆದುಕೊಂಡಿದೆ. ಆದರೆ ವರ್ಷದಿಂದ ವರ್ಷಕ್ಕೆ ಕೃಷಿ ಚಟುವಟಿಕೆಯಲ್ಲಿ ಅಂತಹ ಸಂತೃಪ್ತಿ ಕಾಣಿಸುತ್ತಿಲ್ಲ. ಭಟ್ಕಳದ ಭೌಗೋಳಿಕ ಪರಿಸರದಲ್ಲಿ ಹೆಚ್ಚಿನ ಭೂಮಿಯನ್ನು ಅರಣ್ಯ ಆವರಿಸಿಕೊಂಡಿರುವುದರಿಂದ ನೆಲೆ ಇಲ್ಲದವರಿಗೆ ಅರಣ್ಯವೇ ನೆಲೆ ಕೊಡಬೇಕಾದ ಸ್ಥಿತಿ ಇದೆ. ಜನಸಂಖ್ಯಾ ಹೆಚ್ಚಳ ಸಹಜವಾಗಿ ಅರಣ್ಯದ ಮೇಲೆ ಒತ್ತಡವನ್ನು ಹೇರುತ್ತಿದೆ. ಆದರೆ ಈ ಹಿಂದೆ ಇದ್ದ ಅತಿಕ್ರಮಣದಾರನೇ ಇನ್ನೂ ಅತಂತ್ರ ಸ್ಥಿತಿ ಅನುಭವಿಸುತ್ತಿದ್ದು, ಹೊಸ ಅತಿಕ್ರಮಣಕ್ಕೆ ಕಾನೂನಿನ ತೊಡಕು ಬಾಧಿಸುತ್ತಿದೆ. ಆದ್ದರಿಂದ ಇದ್ದ ತುಂಡು ಗದ್ದೆಗಳಲ್ಲಿ ಕಲ್ಲು ಬಂದು ಬೀಳುತ್ತಿದೆ. ಸಿಕ್ಕ ಸಿಕ್ಕಲ್ಲಿ ಮನೆಗಳು ತಲೆ ಎತ್ತುತ್ತಿವೆ. ಹಣಕಾಸಿನ ತಾಪತ್ರಯವನ್ನು ಕಳೆಯಲು ಗದ್ದೆಗಳು ಮಾರಾಟವಾಗುತ್ತಲೇ ಇವೆ. ಅನಿವಾರ್ಯವೋ, ಅತಿ ಆಸೆಯೋ ಕೃಷಿ ಭೂಮಿ ಕಡಿಮೆಯಾಗುತ್ತಿರುವುದಂತೂ ನಿಜ. ಇದರ ಜೊತೆಗೆ ಆದಾಯದ ಲೆಕ್ಕ ಹಾಕುತ್ತಿರುವ ರೈತರು ಅಲ್ಲಲ್ಲಿ ಗದ್ದೆಗಿಳಿಯಲು ಮೀನ ಮೇಷ ಎಣಿಸುತ್ತಿರುವುದು ಬೆಳಕಿಗೆ ಬಂದಿದೆ. ಭಟ್ಕಳವಷ್ಟೇ ಅಲ್ಲ, ಉತ್ತರಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ರೈತರಿಗೆ ಕೃಷಿ ಎನ್ನುವುದು ಉಪ ಕಸುಬಾಗಿ ಪರಿಣಮಿಸಿದೆ. ಹೆಚ್ಚಿನ ಜನರು ಕೃಷಿ ಕೂಲಿ ಅಂತಲೇ ಕರೆದುಕೊಳ್ಳುತ್ತಿದ್ದು, ಕೂಲಿ ದುಡಿಮೆ ದಿನವೊಂದಕ್ಕೆ 600 ರುಪಾಯಿ ದಾಟುವುದರಿಂದ ಕೃಷಿಯತ್ತ ಆಸಕ್ತಿ ಕಳೆದುಕೊಳ್ಳಲು ಇರುವ ಇನ್ನೊಂದು ಕಾರಣ ಎಂಬ ಮಾತು ಕೇಳಿ ಬರುತ್ತಿದೆ. 
 ನಾರಿಯರೂ ನೋ ಎಂದರು: ಕೃಷಿ ಚಟುವಟಿಕೆಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಪ್ರಚಾರ ನೀಡಲಾಗುತ್ತಿದ್ದರೂ ಭಟ್ಕಳದಂತಹ ಪರಿಸರದಲ್ಲಿ ತಂತ್ರಜ್ಞಾನದ ಸಂಪೂರ್ಣ ಬಳಕೆಯಾಗುತ್ತಿಲ್ಲ. ದನ, ಎತ್ತು ಸಾಕಾಣಿಕೆಯಿಂದಲೂ ಮುಕ್ತಿ ಹೊಂದಲು ಹೆಣಗಾಡುತ್ತಿರುವ ಇಲ್ಲಿನ ರೈತ, ಇತ್ತೀಚಿನ ದಿನಗಳಲ್ಲಿ ಊಳಲು ಅನಿವಾರ್ಯವಾಗಿ ಯಂತ್ರವನ್ನು ಅಪ್ಪಿಕೊಂಡಿದ್ದಾನೆ. ಆದರೆ ನಾಟಿ ಹಾಗೂ ಕೊಯ್ಲಿಗೆ ಯಂತ್ರದ ಬಳಕೆ ವಿಷಯದಲ್ಲಿ ಭಾಗಶಃ ಪ್ರಗತಿಯೂ ಕಾಣಿಸುತ್ತಿಲ್ಲ. ಹಿಂದಿನಿಂದ ನಾಟಿ ಹಾಗೂ ಕೊಯ್ಲಿನಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ಇಲ್ಲಿನ ನಾರಿಯರೂ ಇದೀಗ ನೋ ಎನ್ನಲಾರಂಭಿಸಿದ್ದಾರೆ. ಕುಟುಂಬದ ಮಹಿಳೆಯರನ್ನು ಒಟ್ಟು ಸೇರಿಸಿ ಗದ್ದೆಗೆ ಕರೆದುಕೊಂಡು ಬರುವುದೂ ಸಾಹಸದ ಕೆಲಸ ಎನ್ನುವಂತಾಗಿದೆ. ಅಂಗಡಿ, ಫ್ಯಾಕ್ಟರಿ ಕೆಲಸದಂತಹ ಪೇಟೆಯ ದುಡಿಮೆಯೇ ಅವರಿಗೆ ಪ್ರಿಯವಾಗುತ್ತಿದ್ದು, ಕೃಷಿ ಭೂಮಿಗೆ ಮುಂದೆ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. 
 ಬವಡೆ, ಹೆಸರು ಮಾಯ: ಮಳೆಗಾಲ ಮುಗಿಯುತ್ತಿದ್ದಂತೆಯೇ ರೈತರು ಶೇಂಗಾ, ಹೆಸರು, ಬವಡೆಯಂತಹ ಆದಾಯ ತರುವ ಬೇಳೆ ಕಾಳುಗಳನ್ನು ಬೆಳೆಯುತ್ತಿದ್ದುದು ಇಲ್ಲಿ ನಡೆದುಕೊಂಡು ಬಂದಿರುವ ಪದ್ಧತಿ. ಆದರೆ ಇತ್ತೀಚಿನ ವರ್ಷಗಳಲ್ಲಿ ನೀರು ಲಭ್ಯತೆಯ ಕಾರಣ ಕೆಲವು ಪ್ರದೇಶಗಳಲ್ಲಿ ಶೇಂಗಾ ಬೆಳೆಯಲು ಹಿಂದೇಟು ಹಾಕುತ್ತಿರುವುದು ಕೃಷಿ ಕ್ಷೇತ್ರದ ಆತಂಕವನ್ನು ತೆರೆದಿಟ್ಟಿದೆ. ಇನ್ನು ಸಾಕಷ್ಟು ಆದಾಯ ತಂದು ಕೊಡುವಂತಿದ್ದರೂ ಬವಡೆ, ಹೆಸರು ಕಾಳಿನ ಬಗ್ಗೆ ಹೆಚ್ಚಿನ ರೈತರು ಕಣ್ಣೆತ್ತಿಯೂ ನೋಡುತ್ತಿಲ್ಲ. ರೈತರಲ್ಲಿ ಜಾಗೃತಿ ಮೂಡಿಸಿ, ರೈತರ ಸಹಾಯಕ್ಕೆ ನಿಲ್ಲಬೇಕಾದ ಅಧಿಕಾರಿಗಳು ಸರಕಾರದಿಂದ ಬಂದ ಬೀಜ, ಸಲಕರಣೆಗಳನ್ನು ವಿತರಿಸುವದರಲ್ಲಿಯೇ ಸುಸ್ತಾಗಿ ಹೋಗಿದ್ದಾರೆ. ರೈತ ಸಂಘಟನೆಗಳಂತೂ ಇಲ್ಲಿನ ಕೃಷಿಗಿಂತ ಹೆಚ್ಚಾಗಿ ರಾಜಕೀಯ ಪಕ್ಷ ಪಾರ್ಟಿಗಳ ಆಸಕ್ತಿಗೆ ಸಿಲುಕಿಕೊಂಡು ಲಾಭ, ನಷ್ಟದ ಲೆಕ್ಕ ಹಾಕಿ ಮಾತನಾಡುತ್ತ ಬಂದಿದ್ದೇ ಹೆಚ್ಚು! ಇವೆಲ್ಲದರ ಒಟ್ಟೂ ಪರಿಣಾಮವಾಗಿ ನಿಧಾನವಾಗಿ ಕೃಷಿ ಭೂಮಿ ಕಳೆದು ಹೋಗುತ್ತಿದೆ. ಪರಿಸ್ಥಿತಿ ಹೀಗೇಯೇ ಮುಂದುವರೆದರೆ ಕೃಷಿಕನ ಬದುಕು ಕೆಸರಾಗುವ ಅಪಾಯ ತಪ್ಪಿದ್ದಲ್ಲ. 
 ಈ ಬಗ್ಗೆ ಸ್ಥಳೀಯ ಕೃಷಿಕ ವೆಂಕಟಯ್ಯ ಬೆಂಗ್ರೆ ಮಾತನಾಡಿದ್ದು ಗದ್ದೆ ಕೆಲಸಕ್ಕೆ ಜನರು ಸಿಗುತ್ತಿಲ್ಲ.  ಆದರೂ ನಾವು ಬಿಡುವ ಹಾಗೆ ಇಲ್ಲ. ರೈತ ಕುಟುಂಬದ ಸದಸ್ಯರೂ ಭತ್ತ ಬಿಟ್ಟು ಮಲ್ಲಿಗೆ ಬೆಳೆಯತ್ತ ಆಸಕ್ತಿ ತಾಳಿದ್ದಾರೆ. ಯಂತ್ರ ಬಳಕೆ ಇಲ್ಲಿನ ಎಲ್ಲ ಗದ್ದೆಗಳಿಗೂ ಹೊಂದಿಕೆಯಾಗುತ್ತಿಲ್ಲ. ವಿಶೇಷವಾಗಿ ಕೆಸರು ಗದ್ದೆಯಲ್ಲಿ ಇದು ಉಪಯೋಗಕ್ಕೆ ಬರುವುದಿಲ್ಲ. ಯಂತ್ರ ಬಳಕೆಗೆ ಬೀಜ ಬಿತ್ತನೆಯಿಂದ ಹಿಡಿದು ಕೊಯ್ಲಿನ ತನಕ ನಮ್ಮ ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಎಂದರು.
   
    

Read These Next

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯಿಂದ ಮುಖ್ಯಮಂತ್ರಿಗಳಿಗೆ ಮನವಿ

ಮುಂಡಗೋಡ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಚಿದಾನಂದ ಹರಿಜನ ...

4 ಕೋಟಿ ಮೊತ್ತದ “ಹೆಬ್ಬಾರ ರೇಷನ್ ಕಿಟ್” ನ ಮೂಲ ಬಹಿರಂಗ ಪಡಿಸುವಂತೆ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹ

ಶಿರಸಿ: ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕ್ಷೇತ್ರದ ಶಾಸಕ ಮತ್ತು ಸಚಿವ ಶಿವರಾಮ ಹೆಬ್ಬಾರ ಲಾಕ್‍ಡೌನ್ ...

ಮಂಗಳೂರು ಆಸ್ಪತ್ರೆಯಿಂದ ಭಟ್ಕಳಕ್ಕೆ ಶಿಫ್ಟಾದ ಕೊರೋನಾ;12 ಹೊಸ ಕೊರೋನಾ ಪ್ರಕರಣ ಪತ್ತೆ

ಭಟ್ಕಳ: ಇಂದು ಶುಕ್ರವಾರ ಎಲ್ಲರಿಗೂ ಶುಭವನ್ನು ತರುವ ವಾರ. ಆದರೆ ಭಟ್ಕಳಕ್ಕದು ಶುಭವಾಗದೆ 12 ಹೊಸ ಕೊರೋನಾ ಪ್ರಕರಣ ಪತ್ತೆಯಾದ ದಿನವಾಗಿ ...

ಭಟ್ಕಳಕ್ಕೆ ಸಧ್ಯಕ್ಕಿಲ್ಲ ಲಾಕ್‍ಡೌನ್ ಸಡಿಲಿಕೆಯ ಭಾಗ್ಯ; ಅಗತ್ಯ ಸೇವೆ ಹೊರತುಪಡಿಸಿ ಯಥಾಸ್ಥಿತಿ ಮುಂದುವರಿಕೆ

ಕರಾವಳಿ ಜಿಲ್ಲೆಗಳಲ್ಲಿ ಮೊದಲ ಕೊರೋನಾ ಪ್ರಕರಣ ದಾಖಲು ಮಾಡಿದ ಅಪಕೀರ್ತಿಗೆ ಪಾತ್ರವಾಗಿರುವ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಮಾತ್ರ ...

ಕೋವಿಡ್-19; ಹಸಿರು ವಲಯದತ್ತ ಹೆಜ್ಜೆ ಹಾಕುತ್ತಿದೆ ಭಟ್ಕಳ ಕೇವಲ ಒಂದು ಸಕ್ರಿಯ ಪ್ರಕರಣ ಬಾಕಿ

ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನ ಕೊರೋನಾ ಸೋಂಕಿನ ಪ್ರಥಮ ಪ್ರಕರಣ ದಾಖಲಾಗಿದ್ದು ಮಾ.19 ಹಾಗೂ ಕೊನೆಯ ಪ್ರಕರಣ ದಾಖಲಾಗಿದ್ದು ಎ.14 ಈ ...