ಪ್ರವಾದಿ ಮುಹಮ್ಮದ್ ಕೋಮುಸೌಹಾರ್ದತೆಯ ಪ್ರತೀಕ: ಜ್ಞಾನಪ್ರಕಾಶ ಸ್ವಾಮಿ

Source: sonews | By Staff Correspondent | Published on 3rd December 2017, 12:47 AM | State News | Don't Miss |

ಬೆಂಗಳೂರು: ಪ್ರವಾದಿ ಮುಹಮ್ಮದ್(ಸ) ತಮ್ಮ ನೆರೆಮನೆಯವರ ಹಸಿವಿನ ಬಗ್ಗೆಯೂ ಗಮನ ಹರಿಸುವಂತೆ ಮುಸ್ಲಿಮರಿಗೆ ನೀಡಿದ್ದ ಮಾರ್ಗದರ್ಶನವು ಇಡೀ ವಿಶ್ವಕ್ಕೆ ಅವರೊಬ್ಬ ಕೋಮುಸೌಹಾರ್ದತೆಯ ಪ್ರತೀಕ ಎಂಬುದನ್ನು ಸಾರಿ ಹೇಳುತ್ತದೆ ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮಿ ಅಭಿಪ್ರಾಯಪಟ್ಟರು.

ಶನಿವಾರ ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಈದ್ಗಾ ಬಿಲಾಲ್‌ನಲ್ಲಿ ಜಮೀಯತ್ ಉಲಮಾ ಕರ್ನಾಟಕ ಸಂಘಟನೆಯು ಮೀಲಾದ್ದುನ್ನಬಿ ಅಂಗವಾಗಿ ಆಯೋಜಿಸಿದ್ದ ‘ಪ್ರವಾದಿ ಮುಹಮ್ಮದ್(ಸ) ದೃಷ್ಟಿಯಲ್ಲಿ ಕೋಮುಸೌಹಾರ್ದತೆ’ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

ನೆರೆ ಮನೆಯವರು ಹಸಿವಿನಿಂದ ಬಳಲುತ್ತಿದ್ದರೆ ಮೊದಲು ಅವರಿಗೆ ಊಟ ನೀಡಬೇಕು. ಆನಂತರ, ನೀವು ಊಟ ಮಾಡಬೇಕು ಎಂಬ ಸಂದೇಶವನ್ನು ಇಸ್ಲಾಮ್ ಧರ್ಮದಲ್ಲಿ ನೀಡಲಾಗಿದೆ. ನೆರೆ ಮನೆಯವರು ಯಾವುದೆ ಧರ್ಮಕ್ಕೆ ಸೇರಿರಲಿ ಅವರ ಯೋಗಕ್ಷೇಮ ವಿಚಾರಿಸುವ ಸಂದೇಶವು ಅತ್ಯಮೂಲ್ಯವಾದದ್ದು ಎಂದು ಅವರು ಹೇಳಿದರು.
ಕೋಮುಸೌಹಾರ್ದತೆಯ ಸಂದೇಶ ಸಾರುವ ಇಸ್ಲಾಮ್ ಧರ್ಮವು, ಯಾವುದೆ ಕಾರಣಕ್ಕೂ ಹಿಂಸೆಯನ್ನು ಪ್ರಚೋದಿಸುವ ಭಯೋತ್ಪಾದನೆಯ ಸಂದೇಶ ನೀಡುವುದಿಲ್ಲ. ಇವತ್ತು ಜಗತ್ತಿನೆಲ್ಲೆಡೆ ಮೀಲಾದ್ದುನ್ನಬಿ ಆಚರಣೆ ಮಾಡಲಾಗುತ್ತಿದೆ. ಪ್ರವಾದಿ ಮುಹಮ್ಮದ್ ಬೋಧಿಸಿದ ಕೋಮುಸೌಹಾರ್ದತೆಯ ಸಂದೇಶವನ್ನು ಪ್ರಧಾನಿ ನರೇಂದ್ರಮೋದಿ ಹಾಗೂ ಅವರ ಸಂಗಡಿಗರು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ದೇಶದ ಸ್ವಾತಂತ್ರ ಹೋರಾಟದಲ್ಲಿ ಮುಸ್ಲಿಮರು ಮುಂಚೂಣಿಯಲ್ಲಿದ್ದು ಹೋರಾಟ ಮಾಡಿ ತಮ್ಮ ರಕ್ತ ಹರಿಸಿದ್ದಾರೆ. ಆದರೆ, ದುರಾದೃಷ್ಟವಶಾತ್ ಈಗ ದೇಶದಲ್ಲಿ ದನಗಳ ಪೂಜೆ ನಡೆಯುತ್ತಿದೆಯೋ ಹೊರತು ಜನಗಳ ಪೂಜೆಯಲ್ಲ. ಮಾಂಸಾಹಾರದ ಹೆಸರಿನಲ್ಲಿ ಗಲಭೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಉತ್ತರಪ್ರದೇಶದಲ್ಲಿ ಮುಗ್ಧ ಅಖ್ಲಾಕ್‌ರನ್ನು ಹತ್ಯೆ ಮಾಡಿ, ಕೋಮುಸೌರ್ಹಾದತೆಯ ಮಾತುಗಳನ್ನು ಆಡಲಾಗುತ್ತಿದೆ. 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎನ್ನುವವರು ಕೇವಲ ಅಂಬಾನಿ, ಅದಾನಿಯಂತಹವರ ವಿಕಾಸ ಮಾಡುತ್ತಿದ್ದಾರೆ. ದೇಶವು ಮಾಂಸಾಹಾರ ಸೇವಿಸುವವರಿಂದ ಹಾಳಾಗಿಲ್ಲ, ತುಪ್ಪ ತಿನ್ನುವವರಿಂದ ಹಾಳಾಗಿದೆ ಎಂದು ಜ್ಞಾನಪ್ರಕಾಶ ಸ್ವಾಮಿ ತಿಳಿಸಿದರು.

ಹಿಂದೂ-ಮುಸ್ಲಿಮರ ನಡುವಿನ ಕೋಮುಸೌಹಾರ್ದತೆಯನ್ನು ಕಾಪಾಡುವಲ್ಲಿ ಶ್ರಮಿಸಿದ ಮೈಸೂರು ಹುಲಿ ಟಿಪ್ಪುಸುಲ್ತಾನ್ ‘ಅನರ್ಘ್ಯರತ್ನ’ ಎಂದು ರಾಷ್ಟ್ರಪಿತ ಮಹಾತ್ಮಗಾಂಧೀಜಿ ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಹೇಳಿದ್ದಾರೆ. ದಲಿತರಿಗೆ ಭೂಮಿ ಹಂಚಿ, ಅವರಿಗೆ ಗೌರವಯುತ ಹುದ್ದೆಗಳನ್ನು ನೀಡಿದ ದೇಶದ ಮೊದಲ ರಾಜ ಟಿಪ್ಪುಸುಲ್ತಾನ್ ಎಂದು ಜ್ಞಾನಪ್ರಕಾಶ ಸ್ವಾಮಿ ತಿಳಿಸಿದರು.

ಭಾರತದಲ್ಲಿ ಮುಸ್ಲಿಮ್ ಅರಸರು 850 ವರ್ಷಗಳ ಕಾಲ ಆಡಳಿತ ನಡೆಸಿದರು. ಆದರೆ, ದೇಶದ ಸ್ವಾತಂತ್ರಕ್ಕಾಗಿ 200 ವರ್ಷಗಳ ಕಾಲ ಆಡಳಿತ ನಡೆಸಿದ ಬ್ರಿಟಿಷರ ವಿರುದ್ಧ ಮಾತ್ರ ಹೋರಾಟ ನಡೆಯಿತು. ಇದರ ಅರ್ಥ ಮುಸ್ಲಿಂ ಅರಸು ಶಾಂತಿ ಪ್ರಿಯರಾಗಿ, ದೇಶದ ಅಭಿವೃದ್ಧಿಗಾಗಿ ಆಡಳಿತ ನಡೆಸಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಎನ್‌ಐಎಯಿಂದ ಬಂಧಿಸಲ್ಪಟ್ಟು ಇತ್ತೀಚೆಗಷ್ಟೇ ನಿರಪರಾಧಿಯಾಗಿ ಬಿಡುಗಡೆಯಾಗಿ ಇದೇ ಮೊದಲ ಬಾರಿಗೆ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಮೌಲಾನ ಅನ್ಝರ್ ಶಾ ಖಾಸ್ಮಿ, ಜೈಲಿನ ಜೀವನವು ಸ್ನೇಹಿತರು ಹಾಗೂ ಶತ್ರುಗಳ ಪರಿಚಯವನ್ನು ಮಾಡಿಸುತ್ತದೆ. ನನ್ನ ಬಂಧನವಾಗುತ್ತಿದ್ದಂತೆ ಅನೇಕ ಸ್ನೇಹಿತರು ನನ್ನ ಮೊಬೈಲ್ ಸಂಖ್ಯೆಯನ್ನೆ ಅಳಿಸಿ ಹಾಕಿದರು ಎಂದರು.

ನಾನು ಇಮಾಂ ಆಗಿದ್ದ ಮಸ್ಜಿದ್‌ಗೆ ನಮಾಝ್ ಮಾಡಲು ಹೋಗಲು ನನ್ನ ಪರಿಚಯದವರು ಹೆದರುತ್ತಿದ್ದರು. ಆದರೆ, ಜಮೀಯತ್ ಉಲಮಾ ಹಿಂದ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಅರ್ಶದ್ ಮದನಿ ಹಾಗೂ ಅವರ ಸಂಘಟನೆಯು ನನ್ನಂತಹ ಅನೇಕ ನಿರಪರಾಧಿಗಳನ್ನು ಜೈಲಿನ ಕರಾಳ ಬದುಕಿನಿಂದ ಹೊರತರುವ ಪ್ರಯತ್ನ ಮಾಡುತ್ತಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಭಯೋತ್ಪಾದನೆಯ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟವರ ಪರವಾಗಿ ವಾದ ಮಂಡಿಸಲು ವಕೀಲರು ಸಿಗುವುದಿಲ್ಲ. ಲಕ್ಷಾಂತರ ರೂ.ಗಳ ಶುಲ್ಕವನ್ನು ನ್ಯಾಯವಾದಿಗಳು ಕೇಳುತ್ತಾರೆ. ಬಂಧನಕ್ಕೊಳಗಾದ ವ್ಯಕ್ತಿಯ ಇಡೀ ಕುಟುಂಬದ ಬದುಕು ಅಂಧಾಕಾರದಲ್ಲಿ ಮುಳುಗುತ್ತದೆ. ಆ ಪರಿಸ್ಥಿತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ನೊಂದು ನುಡಿದರು.

ಸಮಾವೇಶದ ಅಧ್ಯಕ್ಷತೆಯನ್ನು ಜಮೀಯತ್ ಉಲಮಾ ಹಿಂದ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಅರ್ಶದ್ ಮದನಿ ವಹಿಸಿದ್ದರು. ರಾಜ್ಯಾಧ್ಯಕ್ಷ ಮೌಲಾನ ಅಬ್ದುಲ್ ರಹೀಮ್, ಮುಫ್ತಿ ಶುಐಬುಲ್ಲಾಖಾನ್, ಮೌಲಾನ ಮುಫ್ತಿ ಸೈಯ್ಯದ್ ಮಾಸೂಮ್ ಸಾಖಿಬ್, ಮುಖಂಡರಾದ ಶಫೀವುಲ್ಲಾ, ಮುಹಮ್ಮದ್ ನಝೀರ್‌ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...