ಜ.೨೯ ರಂದು "ಗೌರಿ ದಿನ" ಆಚರಣೆ

Source: sonews | By Staff Correspondent | Published on 26th January 2018, 11:43 PM | State News | Public Voice |

ಆತ್ಮೀಯರೇ , 

 ಗೌರಿ ಲಂಕೇಶ್ ಅವರು ಪ್ರಜಾತಂತ್ರ ಮತ್ತು ಸೌಹಾರ್ದತೆಯ ನಿರ್ಭೀತ ಪ್ರತಿಧ್ವನಿಯಾಗಿದ್ದರು. ಅವರು ಗೌರಿ ಲಂಕೇಶ್ ಪತ್ರಿಕೆ ಯ ಸಂಪಾದಕಿಯಾಗಿ ಹೊರತಂದ ಪ್ರತಿಯೊಂದು ಸಂಚಿಕೆಯೂ ಮತ್ತು ಪಾಲ್ಗೊಂಡ ಪ್ರತಿಯೊಂದು ಚಳವಳಿಯು ದ್ವೇಷದ ವಿರುದ್ಧ ಪ್ರೀತಿಗಾಗಿ, ಸುಳ್ಳಿನ ವಿರುದ್ಧ ಸತ್ಯಕ್ಕಾಗಿ, ಅಸಮಾನತೆಗಳ ವಿರುದ್ಧ ಸಮಾನತೆಗಾಗಿ ನಡೆಸಿದ ಹೋರಾಟವೇ ಆಗಿತ್ತು. ಹೀಗಾಗಿಯೇ ಈ ದೇಶದಲ್ಲಿ ದ್ವೇಷದ ರಾಜಕಾರಣವನ್ನು ಬಿತ್ತುವ ಮೂಲಕ ಪ್ರಜಾತಂತ್ರವನ್ನು ನಾಶಮಾಡಬೇಕೆಂದಿರುವ ಶಕ್ತಿಗಳು ೨೦೧೭ರ ಸೆಪ್ಟೆಂಬರ್ ೫ರಂದು ಗೌರಿ ಲಂಕೇಶರನ್ನು ಭೀಕರವಾಗಿ ಹತ್ಯೆ ಮಾಡಿದವು. ಮತ್ತು ಗೌರಿಯವರ ಹತ್ಯೆಯನ್ನು ಸಂಭ್ರಮಿಸಿದವು. 

 
ಆದರೆ ಅವರ ಸಂಭ್ರಮ ಕ್ಷಣಿಕವಾಗಿತ್ತು. ಏಕೆಂದರೆ ದ್ವೇಷಕಾರಣದ ಶಕ್ತಿಗಳಿಗೆ ಭ್ರಮನಿರಸನ ಉಂಟುಮಾಡುವಂತೆ ಗೌರಿ ಲಂಕೇಶರ ಹತ್ಯೆ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಸಾತ್ವಿಕ ಆಕ್ರೋಶವನ್ನು ಕೆರಳಿಸಿ, ನ್ಯಾಯಕ್ಕಾಗಿ ಹೋರಾಡುವವರ ಬದ್ಧತೆಯನ್ನು ನೂರ್ಮಡಿ ಹೆಚ್ಚಿಸಿದ್ದು ಈಗ ಇತಿಹಾಸ. ವಾಸ್ತವವಾಗಿ ಕರ್ನಾಟಕ ಮತ್ತು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಮೂಲೆಮೂಲೆಂiಲ್ಲಿ ಜನರು ಗೌರಿಯ ಸಾವಿಗೆ ಕಣ್ಣೀರು ಮಿಡಿದಿದ್ದಾರೆ. ತಮಗೆ ತೋಚಿದ ರೀತಿಯಲ್ಲಿ ಹತ್ಯೆಯ ವಿರುದ್ಧ ಹಲವು ಬಗೆಯ ಹೋರಾಟಗಳನ್ನು ಹಮ್ಮಿಕೊಂಡಿದ್ದಾರೆ. ಗೌರಿ ನಂಬಿದ ಮೌಲ್ಯಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದಾಗಿ ಧೃಢ ನಿಶ್ಚಯ ಘೋಷಿಸಿದ್ದಾರೆ. 
 
ಹೀಗಾಗಿ ಇಂದು ನಮ್ಮ ಗೌರಿ ನಿರ್ಭೀತ ಭಿನ್ನಮತದ ಮತ್ತು ಜಾತ್ಯತೀತ ಪ್ರಜಾತಂತ್ರದ ಅದಮ್ಯ ಧ್ವನಿಗೆ ಸಂಕೇತವಾಗಿಬಿಟ್ಟಿದ್ದಾರೆ. ಸಾಂವಿಧಾನಿಕ ಮೌಲ್ಯಗಳನ್ನು, ಸಾಂಸ್ಕೃತಿಕ ಬಹುತ್ವವನ್ನೂ ಮತ್ತು ಜಾತಿರಹಿತ, ಲಿಂಗ ಹಾಗೂ ಧಾರ್ಮಿಕ ತಾರತಮ್ಯ ರಹಿತ, ಮುಕ್ತ ಮತ್ತು ನಿರ್ಭೀತ ಸಮಾಜದ ಆಶಯವನ್ನು ಹೊಂದಿರುವ ಪ್ರತಿಯೊಂದು ವ್ಯಕ್ತಿಯಲ್ಲೂ ಗೌರಿಯವರ ಸಾವು ಸಕಾರಾತ್ಮಕವಾದ ಶಕ್ತಿಯನ್ನೂ ಹುಟ್ಟಿಹಾಕಿದಂತಿದೆ. ಇದೀಗ ಗೌರಿ ಸಾವಿರ ಸಾವಿರ ಧ್ವನಿಗಳಲ್ಲಿ ಅಧಿಕಾರಕ್ಕೆದುರಾಗಿ ಸತ್ಯವನ್ನು ಪ್ರತಿಪಾದಿಸುತ್ತಿರುವಂತೆ ಕಾಣುತ್ತಿದೆ. 
 
 ಗೌರಿ ಮೆಮೊರಿಯಲ್ ಟ್ರಸ್ಟ್ ಆ ಧ್ವನಿಯ ಮುಂದುವರೆಕೆಯಾಗಿದೆ. ಹಿರಿಯ ಸ್ವಾತಂತ್ರ್ಯ ಹೊರಾಟಗಾರ ಮತ್ತು ಸಾಮಾಜಿಕ ಚಳವಳಿಗಳ ರಾಕ್ ಸ್ಟಾರ್ ಎಂದು ಗೌರಿ ಲಂಕೇಶರು ಮೆಚ್ಚಿಕೊಳ್ಳುತ್ತಿದ್ದ ನಾಡಿನ ಸಾಕ್ಷಿಪ್ರಜ್ನೆಯಾದ ಶ್ರೀ.ಎಚ್.ಎಸ್. ದೊರೆಸ್ವಾಮಿಯವರು ಈ ಟ್ರಸ್ಟಿನ ಅಧ್ಯಕ್ಷರಾಗಿದ್ದಾರೆ. ತೀಸ್ತಾ ಸೆಟೆಲ್‌ವಾದ್, ಗಣೇಶ್ ದೇವಿ, ರಾಜ್‌ದೀಪ್ ಸರ್ದೇಸಾಯಿ, ಸಿದ್ಧಾರ್ಥ್ ವರದರಾಜನ್, ಪ್ರಕಾಶ್ ರೈ ನಂಥ ಭಾರತದ ಪ್ರಖ್ಯಾತ ವಿದ್ವಾಂಸರು, ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು ಹಾಗೂ ಕಲಾವಿದರು ಮತ್ತು ಕರ್ನಾಟಕದ ಎಲ್ಲಾ ಜನಪರ ಹೋರಾಟ ಧಾರೆಗಳು ಈ ಟ್ರಸ್ಟಿನ ಸದಸ್ಯರು ಮತ್ತು ಪೋಷಕರಾಗಿದ್ದಾರೆ. 
 

 ಈ ಟ್ರಸ್ಟಿನ ವತಿಯಿಂದ ಗೌರಿಯ ಹುಟ್ಟುದಿನವಾದ ಜನವರಿ ೨೯ ಅನ್ನು ಗೌರಿ ದಿನವೆಂದು ಆಚರಿಸಲು ಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಗೌರಿಯವರು ತನ್ನ ಹೆಮ್ಮೆಯ ಮಕ್ಕಳೆಂದು ಭಾವಿಸುತ್ತಿದ್ದ ಮತ್ತು ಭಾರತವನ್ನು ದ್ವೇಷ ರಾಜಕಾರಣದಿಂದ ರಕ್ಷಿಸಿ ಭವಿಷ್ಯದ ಭಾರತವನ್ನು ಪರಸ್ಪರ ಗೌರವ ಮತ್ತು  ಸಮಾನತೆ ಇರುವ ನೈಜ ಪ್ರಜಾಸತ್ತಾತ್ಮಕ ಭಾರತವನ್ನಾಗಿಸಲು ಹೋರಾಡುತ್ತಿರುವ ಜಿಗ್ನೇಶ್, ಕನ್ಹಯ್ಯ ಕುಮಾರ್, ಶೆಹ್ಲಾ ರಷೀದ್, ಉಮರ್ ಖಲೀದ್, ರೀಚಾ ಸಿಂಗ್ ಹಾಗೂ ದೇಶದ ಮತ್ತು ಕರ್ನಾಟಕದ ಇನ್ನಿತರ ಯುವ ನಾಯಕರು ಭಾಗವಹಿಸಲಿದ್ದಾರೆ. ಒಟ್ಟುಸೇರಿ ಗೌರಿಗೆ, ಅವರ ಆಶಯಗಳನ್ನು ಸಾಕಾರಗೊಳಿಸುವುದಕ್ಕೆ ತಮ್ಮ ಬದ್ಧತೆಯನ್ನು ಮರುಘೋಷಿಸಲಿದ್ದಾರೆ. ಅವರ ಜೊತೆ ಹುತಾತ್ಮ ರೋಹಿತ್ ವೇಮುಲ ಅವರ ತಾಯಿ ರಾಧಿಕಾ ವೇಮುಲ, ಕವಿತಾ ಲಂಕೇಶ್, ಪ್ರಖ್ಯಾತ ನಟ ಪ್ರಕಾಶ್ ರೈ ಹಾಗೂ ಇನ್ನಿತರರು ಕೂಡಾ ಸೇರಿಕೊಳ್ಳಲಿದ್ದಾರೆ. ಕಬೀರ್ ಕಲಾ ಮಂಚ್‌ನ ಶೀಥಲ್ ಸಾಟೆ ಮತ್ತವರ ತಂಡ, ಆರತಿ ಹಾಗು ಅವರ ತಂಡ ಮತ್ತು ಖ್ಯಾತ ಶಾಸ್ತ್ರೀಯ ಗಾಯಕ ಟಿಎಂ ಕೃಷ್ಣ ಅವರುಗಳು ಗೌರಿಯ ನೆನಪಲ್ಲಿ ಹಾಡಲಿದ್ದಾರೆ. 

 
ಗೌರಿಯ ಆಶಯಗಳಿಗೆ ಬದ್ಧತೆಯನ್ನು ಘೋಷಿಸುತ್ತಾ ಗೌರಿಯನ್ನು ನೆನಸಿಕೊಳ್ಳುವ ಈ ಕಾರ್ಯಕ್ರಮಕ್ಕೆ ತಾವು ತಪ್ಪದೇ ಹಾಜರಿರಬೇಕೆಂದು ನಮ್ಮ ಪ್ರೀತಿಪೂರ್ವಕ ಆಗ್ರಹ. 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...