ಬಾಳೆಹೊನ್ನೂರು: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕ ಗೊಡಚಿ ಸುಕ್ಷೇತ್ರದಲ್ಲಿ ದಸರಾ ರಜತ ಮಹೋತ್ಸವ

Source: balanagoudra | By Arshad Koppa | Published on 25th September 2016, 8:28 PM | State News |

ರಂಭಾಪುರಿ ಪೀಠ (ಬಾಳೆಹೊನ್ನೂರು) - ಸಪ್ಟಂಬರ್ 25. ಶ್ರೀಮದ್ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ರಜತ ಮಹೋತ್ಸವ ಧರ್ಮ ಸಮಾವೇಶ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಶ್ರೀ ವೀರಭದ್ರೇಶ್ವರ ಸುಕ್ಷೇತ್ರ ಗೊಡಚಿಯಲ್ಲಿ ಜರುಗುವುದಾಗಿ ಶ್ರೀ ಜಗದ್ಗುರು ರಂಭಾಪುರಿ ಪೀಠದ ಪ್ರಕಟಣೆಯಲ್ಲಿ ತಿಳಿಸಿದೆ.
    ಗೊಡಚಿ ಸುಕ್ಷೇತ್ರದಲ್ಲಿ ನಿರ್ಮಾಣಗೊಂಡಿರುವ ‘ಮಾನವ ಧರ್ಮ ಮಂಟಪ’ದಲ್ಲಿ ಶ್ರೀಮದ್ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ 2016 ಅಕ್ಟೋಬರ್ 1 ರಿಂದ 11 ವರೆಗೆ ಪ್ರತಿ ದಿನ ಸಂಜೆ 7.00 ಘಂಟೆಗೆ ಸಮಾರಂಭ ನಡೆಯುವುದು.
    ದಿನಾಂಕ 1 ರಂದು ರಾಜ್ಯದ ಗೃಹ ಸಚಿವ ಡಾ|| ಜಿ. ಪರಮೇಶ್ವರ ಉದ್ಘಾಟಿಸುವರು. ದಿನಾಂಕ 2ರಂದು 25 ದಸರೆಗಳ ಸವಿ ನೆನಪಿಗಾಗಿ 25 ಗ್ರಂಥಗಳನ್ನು ಮಾಜಿ ಮುಖ್ಯ ಮಂತ್ರಿ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಿಡುಗಡೆ ಮಾಡುವರು. ಅಕ್ಟೋಬರ್ 11 ರ ವರೆಗೆ ನಡೆಯುವ ಪ್ರತಿ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಮತ್ತು ರಾಜ್ಯದ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸುವರು. 
ಪ್ರಶಸ್ತಿ ಪ್ರದಾನ:  2016ನೇ ಸಾಲಿನ ದಸರಾ ಮಹೋತ್ಸವದಲ್ಲಿ ‘ಸಾಧನ ಸಿರಿ’ ಪ್ರಶಸ್ತಿಯನ್ನು ತುಮಕೂರು ಜಿಲ್ಲೆ ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳವರಿಗೆ, ‘ರಂಭಾಪುರಿ ಯುವ ಸಿರಿ’ ಪ್ರಶಸ್ತಿಯನ್ನು ರಾಮದುರ್ಗದ ರಾಜೇಶ ಶಿವಮೂರ್ತಿ ಬೀಳಗಿಯವರಿಗೆ, ‘ಸಾಹಿತ್ಯ ಸಿರಿ’ ಪ್ರಶಸ್ತಿಯುನ್ನು ಚಿಕ್ಕಮಗಳೂರು ಜಿಲ್ಲೆ ಹಣ್ಣೆ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳವರಿಗೆ,  ‘ವೀರಶೈವ ಸಿರಿ’ ಪ್ರಶಸ್ತಿಯನ್ನು ಗದಗ ಜಿಲ್ಲೆ ಲಕ್ಷ್ಮೇಶ್ವರದ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಇವರಿಗೆ ಮತ್ತು ‘ಶಿವಾಚಾರ್ಯ ರತ್ನ’ ಪ್ರಶಸ್ತಿಯನ್ನು ಚಿತ್ರದುರ್ಗ ಜಿಲ್ಲೆ ಜಗಳೂರು ತಾಲೂಕಿನ ಕಣ್ವಕುಪ್ಪಿ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳವರಿಗೆ ಅನುಗ್ರಹಿಸಿ ಆಶೀರ್ವದಿಸಲಾಗುವುದೆಂದು ತಿಳಿಸಿದರು. 
ಉಪನ್ಯಾಸ:-  ಡಾ|| ಮಲ್ಲೇಪುರಂ ಜಿ. ವೆಂಕಟೇಶ್, ಡಾ|| ಎ.ಸಿ.ವಾಲಿ, ಡಾ|| ಶಲ್ವ ಪಿಳ್ಳೈ ಐಯ್ಯಂಗಾರ್, ಜಿ.ಎಸ್.ಫಣಿಭೂಷಣ, ಡಾ|| ಚನ್ನಬಸಯ್ಯ ಹಿರೇಮಠ, ಡಾ|| ಮೀನಾಕ್ಷಿ ಖಂಡಿಮಠ, ಗಿರಿಜಾದೇವಿ ದುರ್ಗದಮಠ, ಜಿ.ಎಸ್.ನಟೇಶ, ಡಾ|| ಎಚ್.ಕೆ.ಎಸ್. ಸ್ವಾಮಿ, ಹಿರೇಮುಗದೂರಿನ ಚಂದ್ರಶೇಖರಪ್ಪ ಕನವಳ್ಳಿ ಇವರು ಧಾರ್ಮಿಕ ಮತ್ತು ಸಾಮಾಜಿಕ ವಿಷಯವಾಗಿ ಉಪನ್ಯಾಸ ನೀಡುವರು. ವಿವಿಧ ಮಠಗಳ ಪಟ್ಟಾಧ್ಯಕ್ಷರು ಸಮಾರಂಭದಲ್ಲಿ ತಮ್ಮ ನುಡಿ ಸೇವೆ ಸಲ್ಲಿಸುವರು.  
ಗುರು ರಕ್ಷೆ:- ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹನೀಯರಿಗೆ ಕವಿ ಕಲಾವಿದರಿಗೆ ಪ್ರತಿ ದಿನದ ಕಾರ್ಯಕ್ರಮದಲ್ಲಿ  ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆ ನೀಡಿ ಆಶೀರ್ವದಿಸುವರು.  
ಶಮಿ ಸೀಮೋಲಂಘನ:- ಅಕ್ಟೋಬರ್ 11ರ ಸಂಜೆ 4.45 ಕ್ಕೆ ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವವು ಸಕಲ ವಾದ್ಯ ವೈಭವದೊಂದಿಗೆ ಜರುಗಿ ಶ್ರೀ ಜಗದ್ಗುರುಗಳು ಶಮೀ ಪೂಜೆ ಸಲ್ಲಿಸಿದ ನಂತರ ಸಭಾ ಮಂಟಪಕ್ಕೆ ಆಗಮಿಸಿ ವೀರಸಿಂಹಾಸನಾರೋಹಣ ಮಾಡಿ ಆಶೀರ್ವಚನ ಅನುಗ್ರಹಿಸುವರು. ಪೀಠಾಭಿಮಾನಿಗಳಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಜಗದ್ಗುರುಗಳಿಗೆ ದಸರಾ ಮಹೋತ್ಸವ ಸಮಿತಿ ಹಾಗೂ ಶಿಷ್ಯ ಸದ್ಭಕ್ತರಿಂದ ಶಮೀ ಕಾಣಿಕಾ ಸಮರ್ಪಣೆ ಜರುಗುವುದು. 
ಸಂಗೀತ:-  ಪದ್ಮಶ್ರೀ ಡಾ|| ಎಂ. ವೆಂಕಟೇಶ ಕುಮಾರ್, ಗಾನಭೂಷಣ ವೀರೇಶ ಕಿತ್ತೂರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಉದಯೋನ್ಮುಖ ಕಲಾವಿದರಿಂದ ಭರತನಾಟ್ಯ ಪ್ರದರ್ಶನ, ಕಡೂರಿನ ಅಂತರ್ ರಾಷ್ಟ್ರೀಯ ಯೋಗಪಟು ಕುಸುಮಾ ಎ.ಎಸ್. ಇವರಿಂದ ಯೋಗಾಸನ ಪ್ರದರ್ಶನ ಜರುಗಲಿದೆ.
ನಜರ್ ಸಮರ್ಪಣೆ:- ಪ್ರತಿ ದಿನದ ಸಮಾರಂಭದ ನಂತರ ಶ್ರೀ ಶಿವಾಚಾರ್ಯರಿಂದ, ಶ್ರೀಪೀಠದ ಸಿಬ್ಬಂದಿ ಮತ್ತು ಧರ್ಮಾಭಿಮಾನಿಗಳಿಂದ ನಜರ್(ಗೌರವ) ಸಮರ್ಪಣೆ ಜರುಗುವುದು. 
ಇಷ್ಟಲಿಂಗ ಮಹಾಪೂಜೆ:- ಶ್ರೀ ರಂಭಾಪುರಿ ಜಗದ್ಗುರುಗಳವರು ವಿಶ್ವ ಶಾಂತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಪ್ರತಿ ನಿತ್ಯ ಬೆಳಿಗ್ಗೆ 8 ಘಂಟೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪಕ್ಕದಲ್ಲಿ ನಿರ್ಮಿಸಲಾಗಿರುವ ಪೂಜಾ ಮಂಟಪದಲ್ಲಿ ಇಷ್ಟಲಿಂಗ ಮಹಾಪೂಜೆ ನಡೆಸುವರು.
ಶುಭಾಗಮನ:-  ಸಪ್ಟಂಬರ್ 30ರ ಸಂಜೆ 5.00 ಘಂಟೆಗೆ ಪರಮಪೂಜ್ಯ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶುಭಾಗಮನದ ನಂತರ ಶ್ರೀ ರಂಭಾಪುರಿ ಜಗದ್ಗುರುಗಳು ಸಂದೇಶ ನೀಡುವರು.    
ಹಿಂದಿನ ದಸರಾ ಕಾರ್ಯಕ್ರಮಗಳು:-  ಪ್ರಸ್ತುತ ಶ್ರೀ ರಂಭಾಪುರಿ ಜಗದ್ಗುರುಗಳು 1992ರಲ್ಲಿ ತಮ್ಮ ಪ್ರಥಮ ಶರನ್ನವರಾತ್ರಿ ದಸರಾ ಮಹೋತ್ಸವವನ್ನು ಬಿಜಾಪುರ ಜಿಲ್ಲೆಯ ನಿಡಗುಂದಿ ಗ್ರಾಮದಲ್ಲಿ ನಡೆಸಿದರು. ನಂತರ ಕ್ರಮವಾಗಿ ತುಮಕೂರು, ಮುಂಡರಗಿ, ಬಾಗಲಕೋಟೆ, ಶಿಗ್ಗಾಂವ, ಸವದತ್ತಿ, ಸಿಂಧನೂರು, ಕುಂದಗೋಳ, ಬೀರೂರು, ಹಾವೇರಿ, ಮಹಾರಾಷ್ಟ್ರದ ಸೊಲ್ಲಾಪುರ, ಗುಲಬರ್ಗಾ, ಹೊಸದುರ್ಗ, ರಾಣೆಬೆನ್ನೂರು, ಶಿವಮೊಗ್ಗ, ಹುಬ್ಬಳ್ಳಿ, ತಿಪಟೂರು, ಚಿಕ್ಕಮಗಳೂರು, ಗಜೇಂದ್ರಗಡ, ಬೆಂಗಳೂರು, ಗಂಗಾವತಿ, ಜೇವರ್ಗಿ, ಅರಸೀಕೆರೆ ಹಾಗೂ ಭದ್ರಾವತಿ ನಗರದಲ್ಲಿ ನಡೆಸಿದ್ದಾರೆ. ಹೀಗೆ ನಡೆಸಿದ ಒಂದೊಂದು ವರ್ಷದ ದಸರಾ ಕಾರ್ಯಕ್ರಮಗಳು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಚಾರಿತ್ರಿಕ ಇತಿಹಾಸದಲ್ಲಿ ವಿನೂತನ ದಾಖಲೆ ನಿರ್ಮಿಸಿವೆ. 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...