ದಿವಂಗತ ಕಾಮ್ರೇಡ್ ಸುಭಾಶ್ ಕೊಪ್ಪಿಕರ್ ಕುಟುಂಬಕ್ಕೆ ಸಹಾಯ ನಿಧಿ ಹಸ್ತಾಂತರ

Source: sonews | By Staff Correspondent | Published on 12th August 2018, 4:29 PM | Coastal News | Don't Miss |

ಭಟ್ಕಳ: ಜಿಲ್ಲೆಯ ರೈತ ಕಾರ್ಮಿಕ ಯುವಜನರ ಮುಂಚೂಣಿ  ಹೋರಾಟಗಾರ, ಮಾಕ್ಸ್ರ್ವಾದಿ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಹಾಗೂ ಸೌಹಾರ್ದತೆಗೆ ಅವಿರತ ಶ್ರಮಿಸುತ್ತಿದ್ದ ಭಟ್ಕಳ ಶಿರಾಲಿಯ ಕಾಮ್ರೇಡ್  ಸುಭಾಸ್ ಕೊಪ್ಪಿಕರ್ ಮೇ 5 ರಂದು ಆಕಸ್ಮಿಕ ನಿಧನರಾಗಿದ್ದು ಅವರ ಕುಟುಂಬಕ್ಕೆ  ಸಹಾಯ ನಿಧಿ ಅರ್ಪಣೆ ಕಾರ್ಯಕ್ರಮ ಶಿರಾಲಿಯ ಮಾರುತಿ ಸಭಾಭವನದಲ್ಲಿ ನಡೆಯಿತು. ಸಹಾಯನಿಧಿಯ ಮೊದಲ ಕಂತಿನ ಭಾಗವಾಗಿ 2.20 ಲಕ್ಷ ರೂಪಾಯಿ ಸಂಗ್ರಹಿಸಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ   ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್ ವರಲಕ್ಷ್ಮಿ ಮಾತನಾಡಿ, ದೇಶದ ಜನತೆಯ ಹಕ್ಕುಗಳಿಗಾಗಿ ಹೋರಾಟ ಮಾಡಲು ತನ್ನ ಬದುಕನ್ನೇ ಮುಡಿಪಾಗಿಟ್ಟವರನ್ನು ಚಳುವಳಿ ಎಂದಿಗೂ ಮರೆಯುವುದಿಲ್ಲ. ಕಮ್ಯುನಿಸ್ಟ್ ರು ಸ್ವಾತಂತ್ರ್ಯ ಚಳುವಳಿಯಲ್ಲಿ ಅತಿಹೆಚ್ಚು ತ್ಯಾಗ ಬಲಿದಾನ ಗೈದವರು. ನಿರ್ಗತಿಕ, ಶೋಷಿತ ಸಮುದಾಯಕ್ಕೆ ಅನ್ನ ಉಳಿಸಲು ತಮ್ಮ ಸ್ವಾರ್ಥ ಬದಿಗಿಟ್ಟು ಶ್ರಮಿಸಿದವರು. ಧನವಂತರ ದಬ್ಬಾಳಿಕೆಯ ವಿರುದ್ಧ ಕೂಲಿ, ಮನೆ, ನಿವೇಶನ, ಶಿಕ್ಷಣ, ಉದ್ಯೋಗ, ಭೂಮಿ, ಆರೋಗ್ಯಕ್ಕೆ ಮತ್ತು ಉತ್ತಮ ಭವಿಷ್ಯಕ್ಕೆ ಆ ಮೂಲಕ ಸಮಸಮಾಜದ ಕನಸು ನನಸು ಮಾಡಲು ಹಗಲಿರುಳು ಶ್ರಮಿಸುವವರು ಕೆಂಬಾವುಟದ ಚಳವಳಿಗಾರರು. ಅಂಥ ಬದ್ಧತೆಯೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಕಾಮ್ರೇಡ್ ಸುಭಾಸ್ ಕೊಪ್ಪಿಕರ್, ಅವರ ಕುಟುಂಬವೆಂದರೆ ನಮ್ಮ ಚಳುವಳಿಯ ಅವಿಭಾಜ್ಯ ಅಂಗ. ಅಗಲಿದ ಸಂಗಾತಿಯ ಅವಲಂಬಿತರಿಗೆ ಬದುಕು ಕೊಡಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದರು. 
ಸಿಪಿಐಎಂ ರಾಜ್ಯ ಮುಖಂಡ ಕೆ. ಶಂಕರ್ ಮಾತನಾಡುತ್ತಾ ಇಂದಿನ ಸರ್ಕಾರದ ಸರ್ವಾಧಿಕಾರಿ ಧೋರಣೆಯ ಆರ್ಥಿಕ ನೀತಿಗಳಿಗೆ ದುಡಿಯುವ ಜನತೆಯ ಪ್ರತಿರೋಧ ಇನ್ನಷ್ಟು ಹೆಚ್ಚಬೇಕಿದೆ, ಅದಕ್ಕಾಗಿ ವೈಯಕ್ತಿಕ ಆಶೆಆಕಾಂಕ್ಷೆ ಬದಿಗೊತ್ತಿ, ಜನತೆಯನ್ನು ಸಂಕಷ್ಟದಿಂದ ಪಾರುಮಾಡಲು ಶ್ರಮಿಸುವ ಕಾರ್ಯಕರ್ತರಾಗಿ ದುಡಿಯುವವರನ್ನು ಸಂಘಟನೆಗಳು ಮತ್ತು ಸಾರ್ವಜನಿಕರು ಗೌರವಿಸಬೇಕು ಮತ್ತು ಸಕಾಲದಲ್ಲಿ ಸಹಾಯ ಸಹಕಾರ ನೆರವು ನೀಡಬೇಕು. ಹಾಗಾಗಿ ಇಂದು ಸಂಗಾತಿ ಸುಭಾಸ್ ಕೊಪ್ಪಿಕರ್ ಕುಟುಂಬಕ್ಕೆ ನೀಡುತ್ತಿರುವ ನೆರವು ನಮ್ಮ ಜವಾಬ್ದಾರಿ ಹೆಚ್ಚಿಸಿದೆ, ಈ ಭಾಗದಲ್ಲಿ ಕೋಮುಸೌಹಾರ್ದತೆಗಾಗಿ ಮತ್ತು ಸಾಮಾನ್ಯ ಜನರ ಬೇಡಿಕೆಗಾಗಿ ಚಳುವಳಿಯನ್ನು ಇನ್ನೂ ಬಲಗೊಳಿಸುವ ಬದ್ಧತೆ ಸ್ಪೂರ್ತಿಯನ್ನು ನೀಡುತ್ತದೆ ಎಂದರು. 

ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್ ಪ್ರಸ್ತಾವಿಕವಾಗಿ ಕುಟುಂಬ ನಿಧಿ ಅರ್ಪಣೆಯ ಮಹತ್ವ ಮತ್ತು ಸುಭಾಸ್ ಕೊಪ್ಪಿಕರ್ ರವರ ಹೋರಾಟದ ಬದುಕನ್ನು ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ  ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಗೀತಾ ನಾಯ್ಕ,  ಈ ಭಾಗದಲ್ಲಿ ಯಾವುದೇ ಸಮಸ್ಯೆಗಳ ವಿರುದ್ಧ ಧ್ವನಿಎತ್ತಲು ಸುಭಾಸ ರವರು ನಂಬಿದ ಸಿದ್ಧಾಂತ ವನ್ನು ಮುಂದುವರೆಸುತ್ತೇವೆ ಎಂದರು. 
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಾಂತಾರಾಮ ನಾಯಕ ಮೂರು ದಶಕಗಳ ಕಾಲದ ವಿವಿಧ ಚಳುವಳಿಯಲ್ಲಿ ಸುಭಾಸರೊಂದಿಗಿನ ಕೆಲಸದ ಅನುಭವ ಹಂಚಿಕೊಂಡು ಕಾರ್ಯಕ್ರಮ ನಿರ್ವಹಿಸಿದರು. 

ವಾಮನ ಪಾವಸ್ಕರ್ ಮತ್ತು ಸಿಐಟಿಯು ಜಿಲ್ಲಾಧ್ಯಕ್ಷ ತಿಲಕ ಗೌಡ, ತಾಲ್ಲೂಕು ಪದಾಧಿಕಾರಿಗಳಾದ ಪುಷ್ಪಾವತಿ ನಾಯ್ಕ, ಸುಧಾ ಭಟ್, ಪುಂಡಲೀಕ ನಾಯ್ಕ, ಗಜೇಂದ್ರ ಶಿರಾಲಿ ಇತರ ಮುಖಂಡರು ಹಾಜರಿದ್ದರು. ಪ್ರಾರಂಭದಲ್ಲಿ ಸುಶೀಲಾ ನಾಡಾ ಹೋರಾಟದ ಹಾಡುಗಳನ್ನು ಹೇಳಿದರು.

ಕ್ರಾಂತಿಕಾರಿ ಘೋಷಣೆಗಳ ಮಧ್ಯೆ ಸುಭಾಸ್ ಕೊಪ್ಪಿಕರ್ ಮಡದಿ ಕವಿತಾ, ಮಗಳು ಸ್ನೇಹಾ ಮತ್ತು ಗಣ್ಯರಿಂದ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. 

ಕಾರ್ಯಕ್ರಮವನ್ನು ಕಾಮ್ರೇಡ್ ಸುಭಾಸ್ ಕೊಪ್ಪಿಕರ್ ಕುಟುಂಬ ಸಹಾಯ ನಿಧಿ ಸಮಿತಿ ಆಯೋಜಿಸಿತ್ತು.
 

Read These Next

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ಹೊಸದಿಲ್ಲಿ:ಬಿಜೆಪಿ ರಾಷ್ಟ್ರೀಯ ಪ್ರ. ಸಂಘಟನಾ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ಬಿ.ಎಲ್ ಸಂತೋಷ್ ನೇಮಕ

ಹೊಸದಿಲ್ಲಿ: ಕಳೆದ 13 ವರ್ಷಗಳಿಂದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಲಾಲ್ ಹುದ್ದೆ ತೊರೆದ ಹಿನ್ನೆಲೆಯಲ್ಲಿ ತೆರವಾದ ...