ರಾಜ್ಯದಾದ್ಯಂತ ಆಯುಧ ಪೂಜೆ ಸಂಭ್ರಮ

Source: S.O. News Service | By MV Bhatkal | Published on 19th October 2018, 3:30 PM | State News |

ಬೆಂಗಳೂರು: ನವರಾತ್ರಿಯ ಒಂಬತ್ತನೆ ದಿನದ ಆಯುಧ ಪೂಜೆಯನ್ನು ನಾಗರಿಕರು ವಿಜೃಂಭಣೆಯಿಂದ ಆಚರಿಸಿದರು. ವರ್ಷಪೂರ್ತಿ ತಾವು ಬಳಸುವ ವಾಹನ, ಯಂತ್ರ ಮತ್ತಿತರ ವಸ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಗೌರವ ಸೂಚಿಸುವುದೇ ಆಯುಧ ಪೂಜೆ. ಬೆಳಗ್ಗೆಯಿಂದಲೇ ಮನೆಗಳ ಮುಂದೆ ರಂಗೋಲಿ ಇಟ್ಟು ತಮ್ಮ ವಾಹನಗಳನ್ನು ಶುಚಿಗೊಳಿಸಿ ಬಾಳೆಕಂಬ, ಹೂಗಳಿಂದ ಅಲಂಕರಿಸಿ ನಿಂಬೆಹಣ್ಣು, ಬೂದುಗುಂಬಳಕಾಯಿ ಒಡೆಯುವ ಮೂಲಕ ಹಬ್ಬ ಆಚರಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.ಹಬ್ಬದ ಹಿನ್ನೆಲೆಯಲ್ಲಿ ಪೂಜಾ ಸಾಮಗ್ರಿಗಳ ದರ ಏರಿಕೆಯಾಗಿದ್ದರೂ ಆಯುಧಪೂಜೆ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಸರ್ಕಾರಿ ಮತ್ತಿತರ ಕಚೇರಿಗಳಲ್ಲಿ ನಿನ್ನೆಯೇ ಆಯುಧಪೂಜೆ ನೆರವೇರಿಸಲಾಯಿತು. ಮನೆಯಲ್ಲಿ ಆಯುಧಪೂಜೆ ಆಚರಿಸಲು ನಾಗರಿಕರು ಮಾರುಕಟ್ಟೆಗೆ ಲಗ್ಗೆಯಿಟ್ಟು ಬೆಲೆ ಏರಿಕೆಯನ್ನೂ ಲೆಕ್ಕಿಸದೆ ವರ್ಷಪೂರ್ತಿ ತಮ್ಮನ್ನು ಸಲಹುವ ವಾಹನ ಹಾಗೂ ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಿದರು.
ಕೆಲವರು ತಮ್ಮ ವಾಹನಗಳಿಗೆ ಬೂದುಗುಂಬಳಕಾಯಿ ಒಡೆದು ಪೂಜೆ ಸಲ್ಲಿಸಿದರೆ, ಮತ್ತೆ ಕೆಲವರು ಕೋಳಿ, ಕುರಿಗಳನ್ನು ಬಲಿ ಕೊಟ್ಟು ಪೂಜೆ ಮಾಡಿದರು. ಕೆಆರ್ ಮಾರುಕಟ್ಟೆ, ಎಪಿಎಂಸಿ ಯಾರ್ಡ್, ಬಸ್ ಮತ್ತು ಲಾರಿ ನಿಲ್ದಾಣಗಳಲ್ಲಿ ಸಾಮೂಹಿಕವಾಗಿ ಆಯುಧಪೂಜೆ ಆಚರಿಸಲಾಯಿತು. ಅದ್ಧೂರಿಯಾಗಿ ಹಬ್ಬ ಆಚರಿಸಲು ಮುಂದಾಗಿದ್ದ ನಾಗರಿಕರಿಗೆ ನಿನ್ನೆ ಸುರಿದ ಭಾರೀ ಮಳೆ ಅಡ್ಡಿಪಡಿಸಿತು. ಪೂಜಾ ಸಾಮಗ್ರಿ ಖರೀದಿಗೆ ಮಾರುಕಟ್ಟೆಗೆ ತೆರಳಿದ್ದವರು ಮಧ್ಯಾಹ್ನ ಏಕಾಏಕಿ ಬಿಟ್ಟೂಬಿಡದೆ ಸುರಿದ ಮಳೆಯಿಂದ ಮನೆ ಸೇರಲು ಪರದಾಡುವಂತಾಯಿತು.
ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆರಾಯ ಮತ್ತೆ ರಾತ್ರಿ ಬಿಟ್ಟೂಬಿಡದೆ ಸುರಿದಿದ್ದರಿಂದ ತಮ್ಮ ವಾಹನಗಳನ್ನು ಸಿಂಗರಿಸಲು ಪರದಾಡುವ ಸನ್ನಿವೇಶ ಎದುರಾಯಿತು. ಹೀಗಾಗಿ ಇಂದು ಮುಂಜಾನೆ ಮನೆ ಮುಂದೆ ವಾಹನಗಳನ್ನು ಶುಚಿಗೊಳಿಸಿ ಪೂಜೆ ಸಲ್ಲಿಸಿ ಮುಂದೆ ಸಕಲವೂ ಒಳಿತಾಗಲಿ ಎಂದು ಬೇಡಿಕೊಂಡರು. ಆಯುಧಪೂಜೆ ಮುಗಿದ ಮರುದಿನವೇ ವಿಜಯದಶಮಿ ಇದ್ದು, ಭಕ್ತರು ದೇವಾಲಯಗಳಿಗೆ ತೆರಳಿ ತ್ರಿಶಕ್ತಿ ದೇವತೆಗೆ ಪೂಜೆ ಸಲ್ಲಿಸಿ ಒಳಿತು ಮಾಡುವಂತೆ ಬೇಡಿಕೊಂಡು ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಒಂಬತ್ತು ದಿನಗಳ ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...