ಅರಸೀಕೆರೆ: ಒಳ್ಳೆಯ ಗುಣ ಸಂಬಂಧ ಮನುಷ್ಯನ ಆಸ್ತಿ – ಡಾ|| ರಂಭಾಪುರಿ ಜಗದ್ಗುರುಗಳು

Source: balanagoudra | By Arshad Koppa | Published on 17th July 2017, 8:34 AM | State News |

ಅರಸೀಕೆರೆ-16: ಜಗದಲ್ಲಿ ಸತ್ಯ ಶಾಂತಿ ಸಾಮರಸ್ಯ ಬೆಳೆದುಕೊಂಡು ಬರಬೇಕಾಗಿದೆ. ಸಂಸ್ಕಾರ ಸದ್ವಿಚಾರಗಳ ಪರಿಪಾಲನೆಯಿಂದ ಜೀವನ ಉನ್ನತಿ ಸಾಧ್ಯ. ಒಳ್ಳೆಯ ಗುಣ ಮತ್ತು ಸಂಬಂಧಗಳು ಮನುಷ್ಯನ ನಿಜವಾದ ಆಸ್ತಿಯೆಂದು ಬಾಳೆಹೊನ್ನೂರು ಶ್ರೀ ಮದ್ ರಂಭಾಪುರಿ ಜಗದ್ಗುರು ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು. 
ಅವರು ನಗರದ ವೀರಶೈವ ಸಮುದಾಯ ಭವನದಲ್ಲಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. 
ಮನುಷ್ಯ ದೊಡ್ಡ ಮಾತುಗಳನ್ನು ಆಡುವುದರಿಂದ ದೊಡ್ಡವನಾಗುವುದಿಲ್ಲ. ಸಣ್ಣ ಸಣ್ಣ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದನ್ನು ಕಲಿತಾಗ ಪ್ರಬುದ್ಧರಾಗಲು ಸಾಧ್ಯವಾಗುತ್ತದೆ. ಸತ್ಯವನ್ನು ಜನ ಸುಲಭವಾಗಿ ನಂಬುವುದಿಲ್ಲ. ಆದರೆ ಸುಳ್ಳನ್ನು ಬೇಗನೇ ನಂಬುತ್ತಾರೆ. ಹಾಲು ಮಾರಲು ಮನುಷ್ಯ ಬೀದಿ ಬೀದಿ ತಿರುಗುತ್ತಾನೆ. ಆದರೆ ಸರಾಯಿ ಇದ್ದಲ್ಲಿಗೆ ಬಂದು ಕುಡಿಯುತ್ತಾರೆಂಬುದನ್ನು ಮರೆಯಬಾರದು. ಸತ್ಯ, ಧರ್ಮ, ಸಂಸ್ಕøತಿ ಕಟ್ಟಿ ಬೆಳೆಸುವುದು ಬಲುಕಷ್ಟ. ಆದರೆ ನಾಶ ಮಾಡಲು ಹೆಚ್ಚು ಸಮಯ ಬೇಕಾಗಿಲ್ಲ. ಕೈಲಾಸಕ್ಕಿಂತ ಕಾಯಕ, ಧರ್ಮಕ್ಕಿಂತ ದಯೆ, ಅರಿವಿಗಿಂತ ಆಚಾರ, ಆಸ್ತಿಗಿಂತ ಆರೋಗ್ಯ, ಸನ್ಮಾನಕ್ಕಿಂತ ಸಂಸ್ಕಾರ, ಹಣಕ್ಕಿಂತ ಗುಣ, ಮನೆಗಿಂತ ಮನಸ್ಸು ದೊಡ್ಡದಾಗಿರಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣ ಯಲ್ಲಿ ಬೋಧಿಸಿದ್ದಾರೆ. ಮನುಷ್ಯ ನಿಂತ ನೀರಾಗಬಾರದು. ಬೇರು ಬುಡವಿಲ್ಲದ ಅತಂತ್ರರೂ ಆಗದೇ ಧರ್ಮವಂತರಾಗಿ ಬಾಳಬೇಕು. ಕಟ್ಟುವುದಾದರೆ ಸ್ನೇಹ-ವಿಶ್ವಾಸಗಳ ಸೌಧಗಳನ್ನು ಕಟ್ಟು, ಕೆಡುವುದಾದರೆ ನಿನ್ನೊಳಗಿನ ದ್ವೇಷ-ಅಸೂಯೆಗಳನ್ನು ಕೆಡವು. ಆವಾಗ ಜೀವನದಲ್ಲಿ ಶಾಂತಿ ನೆಮ್ಮದಿ ದೊರಕಲು ಸಾಧ್ಯವಾಗುತ್ತದೆ. ವೀರಶೈವ ಧರ್ಮದಲ್ಲಿ ಬಹು ಅಮೂಲ್ಯವಾದ ಜೀವನ ದರ್ಶನದ ಸತ್ಯ ಸಂಗತಿಗಳನ್ನು ಅರಿಯುವ ಪ್ರಯತ್ನ ಮಾಡಬೇಕಾಗಿದೆ ಎಂದರು. 
ಬಿ.ಜೆ.ಪಿ. ಧುರೀಣ, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಜ್ಯೋತಿ ಬೆಳಗಿಸಿ ಸಮಾರಂಭ ಉದ್ಘಾಟಿಸಿದ ಅವರು ಮನುಷ್ಯ ಜೀವನದಲ್ಲಿ ಭೌತಿಕ ಸಂಪತ್ತಿಗಿಂತ ಆಧ್ಯಾತ್ಮ ಸಂಪತ್ತು ಅಮೂಲ್ಯ. ಈ ನಾಡಿನಲ್ಲಿ ಧರ್ಮಪೀಠಗಳ ಮಾರ್ಗದರ್ಶನದಲ್ಲಿ ಬಾಳುತ್ತಿರುವ ನಾವೆಲ್ಲರೂ ಧನ್ಯರು. ಜಾತಿ-ಮತ-ಪಂಥಗಳ ಗಡಿ ಮೀರಿ ಭಾವೈಕ್ಯತೆಯ ಬೆಸುಗೆಯನ್ನು ವೀರಶೈವ ಧರ್ಮ ಮಾಡಿದೆ ಎಂದರು. 
ಸಮಾರಂಭದಲ್ಲಿ ಪಾಲ್ಗೊಂಡ ಎಡೆಯೂರಿನ ರೇಣುಕ ಶಿವಾಚಾರ್ಯರು, ಕುಪ್ಪೂರಿನ ಡಾ. ಯತೀಶ್ವರ ಶಿವಾಚಾರ್ಯರು, ದೊಡ್ಡಗುಣ  ರೇವಣಸಿದ್ಧೇಶ್ವರ ಶಿವಾಚಾರ್ಯರು, ಹೊನ್ನವಳ್ಳಿ ಶಿವಪ್ರಕಾಶ ಶಿವಾಚಾರ್ಯರು, ತಿಪಟೂರಿನ ರುದ್ರಮುನಿ ಸ್ವಾಮಿಗಳು, ಮಾಡಾಳಿನ ರುದ್ರಮುನಿ ಶ್ರೀಗಳು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು. ಮಾಜಿ ಶಾಸಕ ಕೆ. ಪಿ. ಪ್ರಭುಕುಮಾರ, ಜಿ. ಎಸ್. ಪರಮೇಶ್ವರಪ್ಪ, ಎ. ಎಸ್. ಬಸವರಾಜ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನುಡಿನಮನ ಸಲ್ಲಿಸಿದರು. ಎನ್. ಎಸ್. ಸಿದ್ಧರಾಮಶೆಟ್ಟರು, ಕೆ. ವಿ. ನಿರ್ವಾಣಸ್ವಾಮಿ, ಜಿ. ಎಸ್. ಗುರುಸಿದ್ದಪ್ಪ, ಜಿ. ಎಸ್. ಮುರುಗೇಂದ್ರಪ್ಪ, ಕೆ. ಪಿ. ಚಂದ್ರಶೇಖರ ಉಪಸ್ಥಿತರಿದ್ದರು. ಸಿ. ರಾಮಚಂದ್ರು, ಬಿ. ಎಸ್. ಸೇತುರಾಂ, ಮಂಜುನಾಥ ಜವಳಿ, ಡಿ. ಸಿ. ವೀರೇಂದ್ರ, ಶಿವಲಿಂಗಪ್ಪ ಇವರೆಲ್ಲರಿಗೂ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. 
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ವೀರಶೈವ ಮಹಿಳಾ ಸಮಾಜ ಹಾಗೂ ಶ್ರೀ ಜಗದ್ಗುರು ರೇಣುಕ ಮಹಿಳಾ ಸಂಘದವರಿಂದ ಪ್ರಾರ್ಥನೆ, ಪೂಜಾ ಸಮಿತಿ ಅಧ್ಯಕ್ಷ ಸಿ. ಜೆ. ರಾಜು ಅವರಿಂದ ಸ್ವಾಗತ ಜರುಗಿತು. ಕೆ. ಎಸ್. ಲೋಕೇಶಕುಮಾರ, ಮಹೇಶ್ವರಯ್ಯ, ನಾಗಭೂಷಣ ಇವರುಗಳು ನಿರೂಪಿಸಿದರು. 

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...