ಫೆಲೆಸ್ತೀನ್: ಎಲ್ಲ ಏಳು ಶಿಖರಗಳನ್ನು ಏರಿದ ಪ್ರಪ್ರಥಮ ಅರಬ್ ಮಹಿಳೆ

Source: S O News service | By Staff Correspondent | Published on 28th June 2016, 10:56 PM | Gulf News |

 

ಫೆಲೆಸ್ತೀನ್: ಫೆಲೆಸ್ತೀನ್ ಮೂಲದ ಸಾಹಸಮಯಿ ಸುಝಾನ್ ಅಲ್ ಹೂಬಿ ಇತ್ತೀಚೆಗೆ ಅಲಾಸ್ಕಾದ ಮೌಂಟ್ ದೆನಾಲಿ ಶಿಖರದ ತುತ್ತ ತುದಿಗೆ ತಲುಪಿದಾಗ ಮೌಂಟ್ ಕಿಲಿಮಂಜಾರೋದಿಂದ ಹಿಡಿದು ಮೌಂಟ್ ಎವರೆಸ್ಟ್ ತನಕದ ವಿಶ್ವದ ಎಲ್ಲ ಏಳು ಶಿಖರಗಳನ್ನು ಯಶಸ್ವಿಯಾಗಿ ಏರಿದ ಪ್ರಪ್ರಥಮ ಅರಬ್ ಮಹಿಳೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಶಾರ್ಜಾದಲ್ಲಿ ತಮ್ಮ ಸ್ವಂತ ಸಾಹಸಮಯ ಟ್ರಾವೆಲ್ ಕಂಪೆನಿಯೊಂದನ್ನು ಹೊಂದಿರುವ ಸುಝಾನ್ ತನ್ನಂತೆಯೇ ಇತರ ಮಹಿಳೆಯರು, ಮುಖ್ಯವಾಗಿ ಅರಬ್ ಮಹಿಳೆಯರು ಇಂತಹ ಸಾಧನೆ ಮಾಡಲು ಮುಂದೆ ಬರಬೇಕೆಂದು ತಾನು ಬಯಸುತ್ತೇನೆ ಎಂದು ಹೇಳುತ್ತಾರೆ.

ಮೂರು ವಿಫಲ ಯತ್ನಗಳ ಬಳಿಕ ನಾಲ್ಕನೆ ಯತ್ನದಲ್ಲಿ ದೆನಾಲಿ ಶಿಖರವೇರಲು ಸಫಲರಾಗಿರುವ ಸುಝಾನ್ ತನ್ನ ಸಾಧನೆಯ ಬಗ್ಗೆ ತನಗೆ ಹೆಮ್ಮೆಯಿದೆ ಎಂದು ಹೇಳುತ್ತಾರೆ. ಹಿಂದಿನ ವೈಫಲ್ಯಗಳಿಂದ ತಾನು ಯಾವತ್ತೂ ಕಂಗೆಟ್ಟಿಲ್ಲವೆಂದು ಹೇಳುವ ಆಕೆ ತನ್ನ ಆತ್ಮವಿಶ್ವಾಸವೇ ತನ್ನ ಶಕ್ತಿಯಾಗಿದೆ ಎಂದು ಹೇಳಲು ಮರೆಯುವುದಿಲ್ಲ.

‘‘ಮೈನಸ್ 30 ಡಿಗ್ರಿ ಉಷ್ಣಾಂಶದಲ್ಲಿ ಮಲಗುವುದು ಯಾವತ್ತೂ ತಮಾಷೆಯಲ್ಲ ಹಾಗೆಯೇ ಗಂಟೆಗೆ 120 ಕಿಮಿ ವೇಗದಲ್ಲಿ ಮುನ್ನುಗ್ಗುವ ಗಾಳಿಯಿಂದ ನನ್ನನ್ನು ರಕ್ಷಿಸಿಕೊಳ್ಳುವುದು ಹಾಗೂ ಬಿರುಗಾಳಿಯ ವಾತಾವರಣದಲ್ಲಿ ಟೆಂಟ್ ನಿರ್ಮಿಸುವುದು ಅಷ್ಟೊಂದೇನೂ ಸುಲಭವಲ್ಲ. ಅದು ಕೂಡ ಶೌಚಾಲಯವಿಲ್ಲದೇ ಹಾಗೂ ಸ್ನಾನ ಮಾಡದೇ ಇರುವುದೂ ಸುಲಭ ಸಾಧ್ಯವಲ್ಲ,’’ ಎಂದು ತಮ್ಮ ಶಿಖರಾರೋಹಣದ ಅನುಭವವನ್ನು ಮೆಲುಕು ಹಾಕುತ್ತಾ ಅವರು ಹೇಳುತ್ತಾರೆ. ‘‘ನನಗೆ ನನ್ನಲ್ಲಿದ್ದ ಬಲವಾದ ನಂಬಿಕೆಯೇ ಹಲವು ಪ್ರತಿಕೂಲ ವಾತಾವರಣಗಳಲ್ಲಿಯೂ ನನಗೆ ಸಹಾಯ ಮಾಡಿತು,’’ಎನ್ನುತ್ತಾರೆ ಸುಝಾನ್.

ಇಂತಹ ಸಾಹಸಮಯ ಕಾರ್ಯಗಳಲ್ಲಿ ನೋವಿನ ಬಳಿಕ ಸಿಗುವ ಆನಂದವನ್ನು ಅನುಭವಿಸುವುದೇ ಒಂದು ದೊಡ್ಡ ಸಂತೋಷ, ಎಂದವರು ವಿವರಿಸುತ್ತಾರೆ.
‘‘ಏಳು ಶಿಖರಗಳನ್ನು ಏರಬೇಕೆಂದು ತಾನೇನೂ ಯೋಜನೆ ಹಾಕಿಕೊಂಡಿರಲಿಲ್ಲ. ಆದರೆ ಒಂದು ಶಿಖರದ ನಂತರ ಇನ್ನೊಂದು ಶಿಖರವನ್ನೇರಿದಾಗ ಹಾಗೂ ನಾನು ಮೌಂಟ್ ಎವರೆಸ್ಟ್ ಏರಲು ಸಫಲಳಾದಾಗ ಎಲ್ಲ ಏಳು ಶಿಖರಗಳನ್ನು ಆರೋಹಣ ಮಾಡಬಾರದೇಕೆ ಎಂದು ಯೋಚಿಸಿದೆ. ಈಗ ನನ್ನ ಕನಸು ಸಾಕಾರಗೊಂಡಿದೆ,’’ ಎಂದಿದ್ದಾರೆ ಸುಝಾನ್.

ಕೃಪೆ: ವಾರ್ತಾಭಾರತಿ

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.