ಸರ್ಕಾರಿ ಭಯೋತ್ಪಾದನೆಯ ಮತ್ತೊಂದು ಮುಖ

Source: sonews | By Staff Correspondent | Published on 17th July 2018, 11:55 PM | National News | Special Report | Don't Miss |

ಸರ್ಕಾರವು ಜಾರಿ ಮಾಡುತ್ತಿರುವ ತಥಾಕಥಿತ ಅಭಿವೃದ್ಧಿ ಯೋಜನೆಗಳನ್ನು ಪ್ರಶ್ನಿಸುವ ಹಕ್ಕನ್ನು ಸಹ ಸರ್ಕಾರ ನಿರಾಕರಿಸುತ್ತಿದೆ.

ಸಾರ್ವಜನಿಕರ ಒಳಿತಿಗಾಗಿ ಎಂಬ ಹೆಸರಿನಲ್ಲಿ ಜಾರಿಯಾಗುತ್ತಿರುವ ಬೃಹತ್ ಯೋಜನೆಗಳನ್ನು ವಿರೋಧಿಸುತ್ತಿರುವವರಿಗೆ ಅಭಿವೃದ್ಧಿ ವಿರೋಧಿಗಳೆಂದು ಹಣೆಪಟ್ಟಿ ಕಟ್ಟುವುದರಿಂದ ಹಿಡಿದು ರಾಷ್ಟ್ರ ವಿರೋಧಿ, ನಗರ ನಕ್ಸಲ್ ಹಾಗೂ ಭಯೋತ್ಪಾದಕರೆನ್ನುವವರೆಗೆ ಬೇರೆಬೇರೆ ಸರ್ಕಾರಗಳು ಹೊಸಹೊಸ ಹಣೆಪಟ್ಟಿಗಳನ್ನು ಕಟ್ಟುತ್ತಿವೆ. ಇದೇ ಜುಲೈ ರಂದು ಚೆನ್ನೈನಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೇಂದ್ರ ಸರ್ಕಾರದ ಹಣಕಾಸು ಮತ್ತು ಹಡಗು ಉದ್ಯಮ ಇಲಾಖೆಯ ರಾಜ್ಯಮಂತ್ರಿ ಪೊನ್. ರಾಧಾಕೃಷ್ಣನ್ರವರು ಸರ್ಕಾರಿ ಯೋಜನೆಗಳನ್ನು ವಿರೋಧಿಸುವವರು ಮತ್ತು ಅದರ ವಿರುದ್ಧ ಪ್ರತಿಭಟನೆಗಳನ್ನು ನಡೆಸುವವರನ್ನು ಭಯೋತ್ಪಾದಕರೆಂದಲ್ಲದೆ ಬೇರೇನೂ ಹೇಳಲು ಸಾಧ್ಯವಿಲ್ಲ ಎಂದು ಘೋಷಿಸಿದರು. ಅಂಥವರು ಜನತೆ ಮತ್ತು ಅಭಿವೃದ್ಧಿಯ ವಿರುದ್ಧ ಇರುವುದರಿಂದ ಅಂಥ ವ್ಯಕ್ತಿಗಳನ್ನು ಭಯೋತ್ಪಾದಕರೆನ್ನದೆ ಬೇರೇನೂ ಹೇಳಲೂ ಸಾಧ್ಯವಿಲ್ಲ ಎಂದು ಒತ್ತುಕೊಟ್ಟು ಹೇಳಿದರು.

ಪ್ರಾಯಶಃ ಮಂತ್ರಿಗೆ  ಭಯೋತ್ಪಾದಕನೆಂದರೆ ಯಾರು ಎಂಬ ಬಗ್ಗೆ ನಿಘಂಟಿನಲ್ಲಿರುವ ನಿರ್ವಚನದ ಬಗ್ಗೆ ಮಾಹಿತಿಯಿರಲಿಕ್ಕಿಲ್ಲ. ನಿಘಂಟಿನ ಪ್ರಕಾರ ಭಯೋತ್ಪಾದಕನೆಂದರೆ  ಒಂದು ನಿರ್ದಿಷ್ಟ ರಾಜಕೀಯ ಉದ್ದೇಶಗಳಿಗೋಸ್ಕರ ನಾಗರಿಕರ ವಿರುದ್ಧ ಕಾನೂನುಬಾಹಿರ ಹಿಂಸೆ ಮತ್ತು ಬೆದರಿಕೆಯನ್ನು ಬಳಸುವ ವ್ಯಕ್ತಿ. ತಮಿಳುನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ನಾಗರಿಕರ ವಿರುದ್ಧ ಕಾನೂನುಬಾಹಿರ ಹಿಂಸೆ ಮತ್ತು ಬೆದರಿಕೆಗಳನ್ನು ಬಳಸಿರುವುದು ಪ್ರಭುತ್ವವೇ ಆಗಿದೆಯೆಂಬುದು ಅರ್ಥಮಾಡಿಕೊಳ್ಳುವುದು ಪ್ರಾಯಶಃ ಮಂತ್ರಿವರ್ಯರಿಗೆ ಸಾಧ್ಯವಾಗಿಲ್ಲ. ಅದರಲ್ಲೂ ಮೇ ೨೨ ರಂದು ವೇದಾಂತ ಎಂಬ ಕಾರ್ಪೊರೇಟ್ ಕಂಪನಿಗೆ ಸೇರಿದ ಸ್ಟೆರಲೈಟ್ ತಾಮ್ರ ಸಂಸ್ಕರಣೆ ಕಾರ್ಖಾನೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ನಾಗರಿಕರನ್ನು ಗುಂಡಿಟ್ಟು ಕೊಂದಿದ್ದು ಸರ್ಕಾರವೇ. ಪೊಲೀಸ್ ಗೋಲಿಬಾರಿನಲ್ಲಿ ೧೩ ಜನರು ಕೊಲ್ಲಲ್ಪಟ್ಟರು. ನಂತರವೂ ಸರ್ಕಾರವು ನೂರಾರು ಅಮಾಯಕರನ್ನು ಬಂಧಿಸಿ ಕರಾಳ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಸೆರೆಗಟ್ಟಿತು. ತಮ್ಮ ಪ್ರಾಣವನ್ನು ಬಲಿತೆಗೆದುಕೊಳ್ಳುತ್ತಿದ್ದ ಕಾರ್ಖಾನೆಯೊಂದು ಸೃಷ್ಟಿಸುತ್ತಿದ್ದ ಮಾಲಿನ್ಯದ ವಿರುದ್ಧ ಹೋರಾಡುತ್ತಿದ್ದ ಜನರು ಹೇಗೆ ಭಯೋತ್ಪಾದಕರಾಗುತ್ತಾರೆ? ಮತ್ತು ಜನರ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಅತಿರೇಕದ ಹಿಂಸಾಚಾರವನ್ನು ಪ್ರಯೋಗಿಸಿದ ಸರ್ಕಾರದ ಕ್ರಮಗಳನ್ನು ಭಯೋತ್ಪಾದನೆಎನ್ನದೇ ಬೇರೇನೆಂದು ಹೇಳಲು ಸಾಧ್ಯ?

ವಾಸ್ತವವಾಗಿ ತನ್ನ ಯೋಜನೆಗಳ ವಿರುದ್ಧ ಪ್ರತಿಭಟಿಸುವ ಜನಸಾಮಾನ್ಯರಲ್ಲಿ ಹೇಗೆ ಪ್ರಭುತ್ವವು ಭೀತಿಯನ್ನು ಹುಟ್ಟಿಸಬಹುದೆಂಬುದಕ್ಕೆ ತಮಿಳುನಾಡು ಒಂದು ನಿದರ್ಶನವಾಗಿಬಿಡುತ್ತಿದೆ. ಸ್ಟೆರಲೈಟ್ ವಿರೋಧಿ ಪ್ರದರ್ಶನವಾದ ಕಳೆದ ಒಂದು ತಿಂಗಳಲ್ಲಿ ಸರ್ಕಾರವು ಹೋರಾಟಗಳಲ್ಲಿ ನೇರವಾಗಿ ಭಾಗವಹಿಸಿದ್ದವರನ್ನು ಬಂಧಿಸುವುದರ ಜೊತೆಜೊತೆಗೆ ಬಂಧಿತರ ಪರ ವಕಾಲತ್ತು ವಹಿಸಿದ್ದ ವಕೀಲರನ್ನು, ಖ್ಯಾತ ಪರಿಸರವಾದಿಯೊಬ್ಬರನ್ನು ಸಹ ಬಂಧಿಸಿದೆಯಲ್ಲದೆ ಮೇ ೨೨ ಪ್ರದರ್ಶನವನ್ನು ಹಾಗೂ ಮತ್ತಿತರ ಹೋರಾಟಗಳನ್ನು ವರದಿ ಮಾಡುತ್ತಿದ್ದ ಪತ್ರಕರ್ತರನ್ನೂ ಸಹ ವಶಕ್ಕೆ ತೆಗೆದುಕೊಂಡು ಕೆಲಸಮಯದ ನಂತರ ಬಿಡುಗಡೆ ಮಾಡಿದೆ. ದಾಳಿಗೆ ಮುನ್ನ ತೂತ್ತುಕುಡಿಯಲ್ಲಿ ನಡೆದಂಥ ಹಲವು ಹೋರಾಟಗಳನ್ನು ಜನರ ಗಮನಕ್ಕೆ ಬರದಂತೆ ಮಾಡಲು ತಮಿಳುನಾಡಿನ ೮೫ ಲಕ್ಷ ಮನೆಗಳಿಗೆ ಕೇಬಲ್ ಟಿವಿ ಸಂಪರ್ಕವನ್ನು ಕೊಡುವ ಸರ್ಕಾರಿ ಸ್ವಾಮ್ಯದ ಅರಸು ಕೇಬಲ್ ಟಿವಿ ಕಾರ್ಪೊರೇಷನ್ ತನ್ನ ಜಾಲದಿಂದ ೧೧ ಸುದ್ದಿ ವಾಹಿನಿಗಳನ್ನು ನಿಷೇಧಿಸುವಂತೆ ಮಾಡಿತ್ತು. ಅದೇ ರೀತಿ ಚೆನ್ನೈ- ಸೇಲಂ ಹಸಿರು ಕಾರಿಡಾರ್ ಯೋಜನೆಯನ್ನು ಜಾರಿಮಾಡಲು ಸರ್ಕಾರವು ಹಾಕುತ್ತಿರುವ ಒತ್ತಡವೂ ಆತಂಕವನ್ನು ಹುಟ್ಟಿಸುತ್ತಿದೆ. ಕೇಂದ್ರಸರ್ಕಾರದ ಧನಸಹಾಯದಿಂದ ಜಾರಿಯಾಗಲಿರುವ ಹೆದ್ದಾರಿ ಯೋಜನೆಯಿಂದ ೧೫೯ ಹಳ್ಳಿಗಳು, ಫಲವತ್ತಾದ ಜಮೀನು ಹಾಗೂ ಮೀಸಲು ಅರಣ್ಯವನ್ನು ಒಳಗೊಂಡಂತೆ ಸಾಕಷ್ಟು ಅರಣ್ಯಭೂಮಿಯೂ ನಾಶವಾಗುವುದಲ್ಲದೆ ಸಾವಿರಾರು ಕುಟುಂಬಗಳು ಬೀದಿಪಾಲಾಗಲಿವೆ

ಇಂಥಾ ಯೋಜನೆಗಳಿಗೆ ಎದುರಾಗುವ ಪ್ರತಿರೋಧದ ಬಗ್ಗೆ ತಮಿಳುನಾಡು ಸರ್ಕಾರ ತೋರಿರುವ ಅಸಹನೆ ಅತಿರೇಕದಿಂದ ಕೂಡಿದ್ದರೂ ಇದೇ ಬಗೆಯ ಧೋರಣೆಯು ಇತರ ಸರ್ಕಾರಗಳ ಕ್ರಮಗಳಲ್ಲೂ ಪ್ರತಿಫಲಿತಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಚ್ಚುಮೆಚ್ಚಿನ ಯೋಜನೆಯಾದ ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ಟ್ರೈನ್ ಯೋಜನೆಗೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದರ ವಿರುದ್ಧ ಎದುರಾಗುತ್ತಿರುವ ಜನಪ್ರತಿರೋಧವನ್ನು ಮಹಾರಾಷ್ಟ್ರ ಸರ್ಕಾರ ಹೇಗೆ ನಿಭಾಯಿಸಲಿದೆಯೆಂಬುದನ್ನು ಕಾದುನೋಡಬೇಕಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಮುಗಿಸಲು ೨೦೧೮ರ ಡಿಸೆಂಬರ್ ಗಡುವಾಗಿದ್ದರೂ  ಭೂಮಿಯನ್ನು ತೊರೆಯಲು ನಿರಾಕರಿಸುತ್ತಿರುವ ರೈತಾಪಿಯ ಪ್ರತಿರೋಧ ದಿನೇದಿನೇ ಹೆಚ್ಚಾಗುತ್ತಿರುವುದರಿಂದ ಗಡುವಿನೊಳಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿಯುವಂತೆ ಕಾಣುತ್ತಿಲ್ಲ.

ಯಾವ ಸರ್ಕಾರಗಳು ಸಹ ತಾವು ಅಭಿವೃದ್ಧಿಗೆ ಅಗತ್ಯ ಎಂದು ಭಾವಿಸಿದ ಯೋಜನೆಗಳ ವಿರುದ್ಧ ಎದುರಾಗುವ ಪ್ರತಿರೋಧದ ಬಗ್ಗೆ ಸಹನೆಯನ್ನು ಪ್ರದರ್ಶಿಸಿಲ್ಲ. ಆದರೂ ಹಿಂದೆ ಯಾವ ಯೋಜನೆಗಳು ಜನರಿಗೆ ಮತ್ತು ಅಭಿವೃದ್ಧಿಗೆ ಉಪಯೋಗಕಾರಿ ಎಂದು ಭಾವಿಸಲ್ಪಟ್ಟಿದ್ದವೋ ಅಂಥಾ ಯೋಜನೆಗಳ ನೈಜ ಪ್ರಯೋಜನದ ಬಗ್ಗೆ ೧೯೮೦ರ ಂತರದಲ್ಲಿ  ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಉದಾಹರಣೆಗೆ ಸರ್ದಾರ್ ಸರೋವರ ಅಣೆಕಟ್ಟನ್ನೂ ಒಳಗೊಂಡಂತೆ ನರ್ಮದಾ ನದಿಯುದ್ದಕ್ಕೂ ನಿರ್ಮಿಸಲು ಉದ್ದೇಶಿಸಿದ ಹಲವು ಅಣೆಕಟ್ಟುಗಳ ವಿರುದ್ಧ ೧೯೮೦ರ ದಶಕದಲ್ಲಿ ನರ್ಮದಾ ಬಚಾವ್ ಆಂದೋಲನವು ಕಟ್ಟಿದ ಜನಾಂದೋಲನದಿಂದಾಗಿ ವಿಶ್ವಬ್ಯಾಂಕಿನಂಥ ಅಂತರರಾಷ್ಟ್ರೀಯ ಧನಸಹಾಯ ನೀಡುತ್ತಿದ್ದ ಸಂಸ್ಥೆಗಳು ಸಹ ಇಂಥಾ ಬೃಹತ್ ಅಣೆಕಟ್ಟು ಯೋಜನೆಗಳಿಗೆ ನೀಡುತ್ತಿದ್ದ ಬೆಂಬಲದ ಬಗ್ಗೆ ಪುನರಾವಲೋಕನ ಮಾಡಲು ಪ್ರಾರಂಭಿಸಿದವು. ೧೯೯೨ರಲ್ಲಿ ವಿಶ್ವಬ್ಯಾಂಕು ಪ್ರಪ್ರಥಮ ಬಾರಿಗೆ ತಾನು ಧನಸಹಾಯ ಮಾಡುತ್ತಿದ್ದ ಸರ್ದಾರ್ ಸರೋವರ ಯೋಜನೆಯ ಬಗ್ಗೆ ಸ್ವತಂತ್ರ ಪರಿಶೋಧನೆಯನ್ನು ನಡೆಸಲು ಆದೇಶಿಸಿತು. ಇದರ ಪರಿಣಾಮವಾಗಿ ವಿಶ್ವಬ್ಯಾಂಕು ಸರ್ದಾರ್ ಸರೋವರ ಯೋಜನೆಗೆ ತಾನು ನೀಡುತ್ತಿದ್ದ ಸಹಾಯವನ್ನು ಹಿಂತೆಗೆದುಕೊಂಡಿತು. ಮಾತ್ರವಲ್ಲದೆ ನಂತರದಲ್ಲಿ ತಾನು ಬೆಂಬಲಿಸುವ ಯೋಜನೆಗಳಲ್ಲಿ ಪರಿಸರ ಮತ್ತು ಸಾಮಾಜಿಕ ಕಾಳಜಿಗಳು ಅಂತರ್ಗತವಾಗಿರುವಂತೆ ನೋಡಿಕೊಳ್ಳಲು ಪ್ರಪಂಚಾದ್ಯಂತ ಜಾರಿಯಲ್ಲಿದ್ದ ಇಂಥಾ ಯೋಜನೆಗಳ ಬಗ್ಗೆ ಅಧ್ಯಯನ ಮಾಡಲು ವಿಶ್ವ ಅಣೆಕಟ್ಟು ಅಯೋಗ (ವರ್ಲ್ಡ್ ಕಮಿಷನ್ ಆನ್ ಡ್ಯಾಮ್ಸ್)ವೊಂದನ್ನು ರಚಿಸಲು ಸಹ ಇಂಬಾಯಿತು. ನರ್ಮದಾ ಬಚಾವ್ ಆಂದೋಲನದಿಂದ ಸರ್ದಾರ್ ಸರೋವರ ಅಣೆಕಟ್ಟನ್ನು ತಡೆಹಿಡಿಯಲು ಸಾಧ್ಯವಗದಿದ್ದರೂ ಬೃಹತ್ ಪ್ರಮಾಣದ ಪರಿಸರ ಹಾನಿಯುಂಟು ಮಾಡಿ ಲಕ್ಷಾಂತರ ಜನರನ್ನು ನಿರ್ವಸಿತಗೊಳಿಸಿ ಕಟ್ಟಲಾಗುವ ಬೃಹತ್ ಯೋಜನೆಗಳ ನೈಜ ಪ್ರಯೋಜನಗಳ ಬಗ್ಗೆ ಸರಿಯಾದ ಸಂದೇಹಗಳನ್ನು ಹುಟ್ಟುಹಾಕುವಲ್ಲಿ ಮಾತ್ರ ಖಂಡಿತಾ ಯಶಸ್ವಿಯಾಗಿದೆ.

ಇಂಥಾ ಬೃಹತ್ ಯೋಜನೆಗಳನ್ನು ಯಾವ ಸ್ಥಳದಲ್ಲಿ ನಿರ್ಮಿಸಬೇಕೆಂಬ ನಿರ್ಧಾರದಲ್ಲಿ ಸ್ಥಳೀಯ ಸಂತ್ರಸ್ತ ಸಮುದಾಯಗಳ ಪಾಲುದಾರಿಕೆಯು ಇರಬೇಕೆಂಬುದನ್ನು ಒರಿಸ್ಸಾದ ನಯಮ್ಗಿರಿ ಪರ್ವತದಾಸರೆಯಲ್ಲಿ ಬದುಕುತ್ತಿರುವ ಆದಿವಾಸಿ ಡೋಗ್ರಿಯಾ ಕೋಂದ್ ಸಮುದಾಯ ೨೦೧೩ರಲ್ಲಿ ಸ್ಪಷ್ಟವಾಗಿ ತೋರಿಸಿದೆ. ೨೦೦೬ರ ಪರಿಶಿಷ್ಟ ಬುಡಕಟ್ಟು ಮತ್ತು ಇತರ ಅರಣ್ಯವಾಸಿಗಳ ಹಕ್ಕು ಕಾಯಿದೆಯನ್ನು ಬಳಸಿಕೊಂಡು ಸಮುದಾಯವು ತಮ್ಮ ಪ್ರದೇಶದಲ್ಲಿ ವೇದಾಂತ ಕಂಪನಿಯು ಬಾಕ್ಸೈಟ್ ಗಣಿಗಾರಿಕೆ ಮಾಡುವುದನ್ನು ತಡೆಗಟ್ಟಿತು. ಜಗತ್ತಿನಾದ್ಯಂತ ಸಮುದಾಯದ ಹೋರಾಟ ದೊಡ್ಡ ಸ್ಪೂರ್ತಿಯನ್ನೇ ನೀಡಿತು. ಹಾಗಿದ್ದರೂ, ವೇದಾಂತ ಕಂಪನಿಯ ವಿರುದ್ಧ ಹೋರಾಟ ನಡೆಸಿದ ನಿಯಾಮ್ಗಿರಿ ಸುರಕ್ಷಾ ಸಮಿತಿಗೆ ಮಾವೋವಾದಿಗಳೊಂದಿಗೆ ಸಂಪರ್ಕವಿತ್ತೆಂದು ಕಳೆದ ವರ್ಷ ಕೇಂದ್ರ ಗೃಹ ಇಲಾಖೆ ಅದರ ಮೇಲೆ ಆರೊಪ ಹೊರಿಸಿದೆ. ರೀತಿ ಕೇಂದ್ರ ಮತ್ತು ಹಲವು ರಾಜ್ಯ ಸರ್ಕಾರಗಳು ತಾವು ಜಾರಿಮಾಡ ಬಯಸುವ ಬೃಹತ್ ಯೋಜನೆಗಳ ವಿರುದ್ಧ ನಡೆಯುವ ಜನಾಂದೋಲನಗಳ ಹಿಂದೆ ತೀವ್ರಗಾಮಿಗಳಿದ್ದರೆಂಬ ಕಥನಗಳನ್ನು ಹುಟ್ಟುಹಾಕುವುದು ಕಳವಳ ಹುಟ್ಟಿಸುತ್ತದೆ. ಏಕೆಂದರೆ ಇಂದು ಜನರು ಪ್ರಶ್ನಿಸುವ ಹಕ್ಕನ್ನೂ ಒಳಗೊಂಡಂತೆ ತಮ್ಮ ಹಕ್ಕುಗಳ ಬಗ್ಗೆ ಸಾಕಷ್ಟು ಜಾಗೃತರಾಗಿದ್ದಾರೆ ಎಂಬುದನ್ನು ಬಗೆಯ ತಿಳವಳಿಕೆಯು ಕಡೆಗಣಿಸುತ್ತದೆ.

ಅದೇರೀತಿ ಜೂನ್ ಮಾಸಂತ್ಯದಲ್ಲಿ ಮುಂಬೈನಲ್ಲಿ ತನ್ನ ಆಡಳಿತ ನಿರ್ವಾಹಕರ ವಾರ್ಷಿಕ ಸಭೆಯನ್ನು ನಡೆಸಿದ ಏಷಿಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ನಂಥ ಬಹುಪಕ್ಷೀಯ ಧನಸಹಾಯ ನೀಡುವ ಸಂಸ್ಥೆಗಳಿಗೆ ಜನಹೋರಾಟಗಳು ಎತ್ತುತ್ತಿರುವ ಕಾಳಜಿಗಳ ಬಗ್ಗೆ ಅರಿವೇ ಇಲ್ಲದಿರುವುದೂ ಸಹ ಅತ್ಯಂತ ಕಳವಳ ಹುಟ್ಟಿಸುವ ಸಂಗತಿಯಾಗಿದೆ. ಬದಲಿಗೆ ಅಂಥಾ ಸಂಸ್ಥೆಗಳು ಹೋರಾಟಗಳನ್ನು ಗಣನೆಗೇ ತೆಗೆದುಕೊಳ್ಳದೆ ಮತ್ತಷ್ಟು ಧನಸಹಾಯ ನೀಡಲು ಮುಂದೆ ಬರುತ್ತಿವೆ. ಇದು ನಮ್ಮ ದೇಶದ ಸರ್ಕಾರಗಳಿಗೆ ಅಸ್ಥಿತ್ವದಲ್ಲಿರುವ ಪರಿಸರ ಹಾಗೂ ಕಾರ್ಮಿಕ ಸಂಬಂಧೀ ಮತ್ತು ಭೂಸ್ವಾಧೀನ ಕಾನೂನುಗಳನ್ನು ಒಳಗೊಂಡಂತೆ ಎಲ್ಲಾ ಕಾನೂನು ಮತ್ತು ನಿಯಂತ್ರಣಗಳನ್ನು ಮತ್ತಷ್ಟು ಸಡಿಲಗೊಳಿಸಿ ಇಂಥಾ ಯೋಜನೆಗಳಿಗೆ ಮತ್ತಷ್ಟು ಅನುವು ಮಾಡಿಕೊಡಲು ಉತ್ತೇಜನ ನೀಡುತ್ತಿದೆ. ಇದರ ಜೊತೆಗೆ ಜನಪ್ರತಿರೋಧಗಳಿಗೆ ಭಯೋತ್ಪಾದಕ ಕೃತ್ಯವೆಂದು ಹಣೆಪಟ್ಟಿ ಹಚ್ಚಿಬಿಟ್ಟರಂತೂ ಪ್ರಭುತ್ವ ದಮನವನ್ನು ಹರಿಬಿಡಲು ಹಸಿರು ನಿಶಾನೆ ನೀಡಿದಂತೆ ಆಗುವುದರಲ್ಲಿ ಸಂಶಯವಿಲ್ಲ

ಕೃಪೆ: Economic and Political Weekly     ಅನು: ಶಿವಸುಂದರ್ 

 

ï

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...