ಪ್ರಾಚೀನ ಭಾರತ, ಆಧುನಿಕ ವಿಜ್ನಾನ ಮತ್ತು ಅಭದ್ರ ರಾಜಕೀಯ

Source: sonews | By Staff Correspondent | Published on 13th January 2019, 3:44 PM | Special Report | Don't Miss |

ಭಾರತೀಯ ವಿಜ್ನಾನ ಕಾಂಗ್ರೆಸ್ಸಿನಲ್ಲಿ ಮಾಡಲಾದ ಹಲವು ಪ್ರತಿಪಾದನೆಗಳು ವಿಜ್ನಾನ ಮತ್ತು ತಂತ್ರಜ್ನಾನಗಳ ನೈಜ ಅನ್ವೇಷಣೆಗಳನ್ನು ದಾರಿತಪ್ಪಿಸುವಂತಿವೆ.

ಮತ್ತೊಂದು ವರ್ಷ. ಮತ್ತೊಂದು ಭಾರತೀಯ ವಿಜ್ನಾನ ಕಾಂಗ್ರೆಸ್ಸಿನ ಅಧಿವೇಶನ. ಮತ್ತೊಮ್ಮೆ ಸನಾತನ ಋಷಿಗಳ ಸಾಧನೆಗಳನ್ನು ಸತ್ಯ ಸಂಗತಿ ಎಂಬಂತ ಬಿತ್ತರ. ಕಳೆದ ನಾಲ್ಕು ವರ್ಷಗಳಿಂದ ಭಾರತೀಯ ವಿಜ್ನಾನ ಕಾಂಗ್ರೆಸ್ಸಿನ ಪ್ರತಿ ಅಧಿವೇಶನದಲ್ಲೂ ಚಿಂತೆಗೀಡುಮಾಡುವ ಧೋರಣೆಯು ಮರುಕಳಿಸುತ್ತಲೇ ಇದೆ.

ಆಧುನಿಕ ವಿಜ್ನಾನದ ಸಂಶೋಧನೆ ಮತ್ತು ವಿಜ್ನಾನದ ಇತಿಹಾಸದ ಸಂಶೋಧನೆಗಳಲ್ಲಿ ಭಾರತದ ಸಾಧನೆಗಳನ್ನು ಪ್ರಚುರಪಡಿಸುವ ಉದ್ದೇಶಕ್ಕೆ ಪೂರಕವಾಗಿ ಭಾರತೀಯ ವಿಜ್ನಾನ ಕಾಂಗ್ರೆಸ್ಸನ್ನು ವಿನ್ಯಾಸಗೊಳಿಸಲಾಗಿದೆ. ಆದರೆ ಅಧಿವೇಶನಗಳಲ್ಲಿ ಹಸಿ ಸುಳ್ಳುಗಳಿಗೆ ವೇದಿಕೆಯನ್ನು ಒದಗಿಸುವ ಮೂಲಕ ಭಾರತೀಯ ವಿಜ್ನಾನವನ್ನೇ ಅಪಮಾನಕ್ಕೆ ಗುರಿಮಾಡಲಾಗುತ್ತಿದೆ. ಮತ್ತಿದು ಕಳೆದ ನಾಲ್ಕು ವರ್ಷಗಳಿಂದ ಪದೇಪದೇ ಮರುಕಳಿಸುತ್ತಲೇ ಇದೆ.

ಸಾಧಾರಣವಾಗಿ ಅಂಥಾ ಪ್ರತಿಪಾದನೆಗಳು ತಮ್ಮ ಯೋಗ್ಯತೆಗೆ ತಕ್ಕಂಥ ತಿರಸ್ಕಾರವನ್ನು ಪಡೆಯುತ್ತವೆ ಮತ್ತು ಅವುಗಳಿಗೆ ವಿಜ್ನಾನ ಕಾಂಗ್ರೆಸ್ಸಿನ ಅಧಿವೇಶನಗಳ ವೇದಿಕೆಯಲ್ಲಿ ಸ್ಥಾನ ಸಿಗುವುದಿಲ್ಲ. ಆದರೆ ಇಂಥಾ ಅಪಸವ್ಯದ ಪುನರಾವರ್ತನೆಗೆ ಪ್ರಧಾನಿಗಳನ್ನೂ ಒಳಗೊಂಡಂತೆ ಭಾರತದ ಭವಿಷ್ಯದ ನಿರ್ಮಾತೃಗಳು ಉತ್ತೇಜನ ಕೊಡುತ್ತಿರುವಾಗ ಅವುಗಳಿಗೆ ಪ್ರತಿಕ್ರಿಯೆ ನೀಡಲೇ ಬೇಕಾಗುತ್ತದೆ.

ಹಾಗೆ ನೋಡಿದರೆ ನಮ್ಮ ಪ್ರಾಚೀನರ ಅಪೂರ್ವವಾದ ಸಾಧನೆಗಳನ್ನು ಅರ್ಥಮಾಡಿಕೊಳಲು ಎಲ್ಲರಿಗೂ ಆಸಕ್ತಿ ಇದ್ದೇ ಇರುತ್ತದೆ. ಏಕೆಂದರೆ ಆಗ ಮಾತ್ರ ನಾವು ಯಾರು ಎಂಬುದನ್ನೂ ಮತ್ತು ನಾವು ಈಗ ಹೇಗಿದ್ದೇವೆಯೋ ಹಾಗಿರಲು ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಬೇಕಾದ ಸುಳಿವುಗಳು ದೊರೆಯುತ್ತವೆ. ಪುರಾತನ ಕಾಲದಲ್ಲೇ ನಮ್ಮ ದೇಶದಲ್ಲಿ ವಿಮಾನಗಳಿದ್ದವು ಎಂಬಿತರ ಪ್ರತಿಪಾದನೆಗಳ ಬಗ್ಗೆ ಮಾದರಿಗಳ ಮರುಸೃಷ್ಟಿಯನ್ನು ಒಳಗೊಂಡಂತೆ ಹಲವು ಗಂಭೀರ ಅಧ್ಯಯನಗಳನ್ನು ಪ್ರಖ್ಯಾತ ವಿಜ್ನಾನಿಗಳು ನಡೆಸಿದ್ದಾರೆ ಮತ್ತು ಪ್ರತಿಪಾದನೆಗಳಲ್ಲಿ ಹುರುಳಿಲ್ಲ ಎಂಬುದನ್ನು ಬಯಲುಮಾಡಿದ್ದಾರೆ. ಆದರೂ ಹುಸಿ ಪ್ರತಿಪಾದನೆಗಳನ್ನು ಮುಂದುವರೆಸುತ್ತಿರುವವರಿಗೆ ವೇದಿಕೆಯನ್ನು ನಿರಾಕರಿಸಲು ಇಷ್ಟು ಕಾರಣಗಳು ಸಾಕಿತ್ತು.

ಇಂಥಾ ಬಹುಪಾಲು ಪ್ರತಿಪಾದನೆಗಳ ಸತ್ಯಾಸತ್ಯತೆಗಳನ್ನು ವಿಶ್ಲೇಷಿಸಲು ಗಹನವಾದ ವೈಜ್ನಾನಿಕ ಜ್ನಾನವೇನೂ ಅಗತ್ಯವಿಲ್ಲ. ವಿಜ್ನಾನವು ಹಿಂದಿನ ಪೀಳಿಗೆಯ ಅನ್ವೇಷಣೆಗಳ ಆಧಾರದ ಮೇಲೆ ಮುಂದಿನ ಅನ್ವೇಷಣೆಯನ್ನು ಮುಂದುವರೆಸುತ್ತಾ ಆಗಾಗ ಅದ್ಭುತವಾದ ಬೃಹತ್ ಮುನ್ನಡೆಯನ್ನು ಸಾಧಿಸುತ್ತಾ ಉಳಿದಂತೆ ಕ್ರಮೇಣವಾಗಿ ಬೆಳೆಯುತ್ತಾ ಸಾಗುತ್ತದೆ. ಉದಾಹರಣೆಗೆ ಜೀವಕೋಶದ ರಚನೆಯನ್ನು ಅರ್ಥಮಾಡಿಕೊಳ್ಳಲು ಸೂಕ್ಷ್ಮದರ್ಶPವು ಅಗತ್ಯ; ಜೀವದ ಜೆನೆಟಿಕ್ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಎಕ್ಸ್ರೇ ಸ್ಪೆಕ್ಟ್ರೋಸ್ಕೋಪಿ ಅಗತ್ಯ; ಹಾಗೆಯೇ ವಿಮಾನಗಳ ಸಂಶೋಧನೆಗೆ ಮುನ್ನ ಗಾಳಿಗಿಂತ ಭಾರವಾದ ವಸ್ತುಗಳನ್ನು ಗಾಳಿಯಲ್ಲಿ ಹೇಗೆ ತೇಲಿಸಬಹುದೆಂದು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಹಲವಾರು ದಶಕಗಳ ಪ್ರಯೋಗದ ನಂತರ ಅತ್ಯಂತ ಸಂಕೀರ್ಣವಾದ ಅಂತರಿಕ ದಹನ (ಇಂಟರ್ನಲ್ ಕಂಬಸ್ಚನ್) ಇಂಜಿನ್ ಹೊಂದಿರುವ ಮೊಟ್ಟಮೊದಲ ವಿಮಾನವನ್ನು ನಿರ್ಮಿಸಲಾಯಿತು. ಅಂತರ್ಗ್ರಹ ಯಾನದ ತಂತ್ರಜ್ನಾನಕ್ಕೆ ಇಡೀ ಸೌರವ್ಯೂಹದ ಗ್ರಹಗಳು ಸೂರ್ಯನ ಸುತ್ತಾ ತಿರುಗುತ್ತದೆ ಎಂಬ ಮತ್ತು ಮತ್ತು ಸೌರ ವ್ಯವಸ್ಥೆಯಲ್ಲಿ ಭೂಮಿಯು ಒಂದು ಸಣ್ಣ ಖಭೌತ ವಸ್ತು ಎಂಬ ಗ್ರಹಿಕೆ ಅತ್ಯಗತ್ಯ. ಪ್ರಾಚೀನ ಭಾರತದಲ್ಲಿ ಇಂಥಾ ಯಾವ ಪರಿಕಲ್ಪನೆಗಳೂ ಅಸ್ಥಿತ್ವದಲ್ಲಿರಲಿಲ್ಲ.

ಹೀಗಾಗಿ ಕೌರವರು ಪ್ರನಾಳ ಶಿಶು ತಂತ್ರಜ್ನಾನದ ಮೂಲಕ ಜನಿಸಿದ್ದರು ಎಂಬ ಪ್ರತಿಪಾದನೆಯನ್ನು ಮಾಡಬಯಸುವವರು ಕಾಲದಲ್ಲೇ ನಮ್ಮಲ್ಲಿ  ಅತ್ಯುತ್ತಮ ಗುಣಮಟ್ಟದ ಅತಿ ಶುಭ್ರ ಕೋಣೆಗಳು, ಭ್ರೂಣದೊಳಗೆ ಜೀವ ವಿಕಾಸವಾಗುವ ಪರಿಯ ತಿಳವಳಿಕೆಗಳು ಅಸ್ಥಿತ್ವದಲ್ಲಿತ್ತು ಎಂಬುದನ್ನು ಸಾಬೀತುಮಾಡಬೇಕಿರುತ್ತದೆ. ಕಾಲದಲ್ಲಿ ಪರಿಶುಭ್ರ ಕೋಣೆಗಳು ಮತ್ತು ಜೀವವಸ್ತುವಿನ ಅಣ್ವಂಶಗಳ ತಿಳವಳಿಕೆಗಳಿರಲಿ, ಕನಿಷ್ಟ ವಿದ್ಯುತ್ ವ್ಯವಸ್ಥೆ ಇತ್ತು  ಎಂಬ ಬಗ್ಗೆಯೂ ಯಾವುದೇ ಪುರಾವೆಗಳಿಲ್ಲ. ಇನ್ನು ಬೇರೆಬೇರೆ ಪ್ರಾಣಿಗಳ ರಕ್ತ ಮಾದರಿಗಳು ಮತ್ತು ಕುತ್ತಿಗೆ ಭಾಗದ ರಚನೆಗಳನ್ನು ಒಳಗೊಂಡಂತೆ ಪ್ರತಿಯೊಂದು ದೇಹರಚನೆಗಳೂ ವಿಭಿನ್ನವಾಗಿರುವುದರಿಂದ  ಭಿನ್ನಭಿನ್ನ ಪ್ರಾಣಿಗಳ ನಡುವೆ ಅಂಗಾಂಗ ಬದಲಾವಣೆಗಳ ಸಾಧ್ಯತೆಯನ್ನು ಪರಿಗಣಿಸಲೂ ಸಾಧ್ಯವಿಲ್ಲ.

ಇದರ ಅರ್ಥ ಭಾರತವು ವಿಜ್ನಾನ ಕ್ಷೇತ್ರದಲ್ಲಿ ದೊಡ್ದ ದೊಡ್ಡ ಸಾಧನೆಗಳನ್ನು ಮಾಡಿಲ್ಲವಂತೇನಲ್ಲ. ಆದರೆ ವಿಜ್ನಾನ ಕ್ಷೇತ್ರದ ಬಹುಭಾಗಗಳಲ್ಲಿ ಸಂಭವಿಸಿರುವಂತೆ ದೊಡ್ಡ ದೊಡ್ಡ ಪರಿಕಲ್ಪನೆಗಳನ್ನು ನೀಡಿದ ತೀರ್ಮಾನ ಪ್ರೇರಿತ (ಇಂಡಕ್ಟೀವ್ ಸ್ಟಡೀಸ್) ಅಧ್ಯಯನ ವಿಧಾನದ ಬದಲಿಗೆ ಐರೋಪ್ಯ ವಿಜ್ನಾನದ ವಿಶ್ಲೇಷಣಾ ಪ್ರೇರಿತ ಅಧ್ಯಯನ ವಿಧಾನಗಳು ಚಾಲ್ತಿಗೆ ಬಂದು ವಿಜ್ನಾನ  ಕ್ಷೇತ್ರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಹೀಗಾಗಿ ನಮ್ಮ ಪ್ರಾಚೀನರ ಬಗ್ಗೆ ಸುಳ್ಳು ಸಂಶೋಧನೆಗಳ ಅನ್ವೇಷಣೆ ಮಾಡುವ ಅಗತ್ಯವೇನೂ ಇಲ್ಲ. ಅಷ್ಟೇ ಆಸಕ್ತಿಕರ ಅಂಶವೇನೆಂದರೆ ಇಂಥಾ ಎಲ್ಲಾ ಪ್ರತಿಪಾದನೆಗಳು ಗತದ ಬಗ್ಗೆ ಆಗಿದೆಯೇ ವಿನಃ ಭವಿಷ್ಯದ ವಿಜ್ನಾನದ ಕುರಿತು ಯಾವುದೇ ಪ್ರತಿಪಾದನೆಯನ್ನು ಮಾಡಿಲ್ಲ.

ಇಷ್ಟಾದರೂ, ಒಂದಾನೊಂದು ಕಾಲದಲ್ಲಿ ನಮ್ಮ ದೇಶದಲ್ಲಿ ಅತ್ಯಂತ ಪರಿಪಕ್ವ ಉಜ್ವಲ ಅವಧಿಯೊಂದು ಇತ್ತೆಂದೂ ಅದನ್ನು ಇತರರು ಮೂಲೆಗುಂಪು ಮಾಡಿದರೆಂಬ ಭ್ರಮೆಯನ್ನು ಕೆಲವರು ಹೊಂದಿದ್ದಾರೆ. ಇಪ್ಪತ್ತೊಂದನೇ ಶತಮಾನದ ಎರಡನೇ ದಶಕದಲ್ಲೂ ಬಗೆಯ ಭ್ರಮೆಯಲ್ಲಿ ಬದುಕುತ್ತಿರುವವರು ನಾವು ಮಾತ್ರವೇನಲ್ಲ. ಸಾಧಾರಣವಾಗಿ, ಇಂಥಾ ಭ್ರಮೆಗಳನ್ನು ಬಯಲುಗೊಳಿಸಲು ಆಯಾ ಪ್ರತಿಪಾದನೆಗಳಿಗೆ ಪೂರಕವಾದ ಪುರಾವೆಗಳನ್ನು ಕೇಳುವ ಮತ್ತು ಪ್ರತಿಪಾದಿಸಲ್ಪಟ್ಟ ಸಾಧನೆಗಳನ್ನು ಮಾಡಿರಲು ಬೇಕಾದ ಮೂಲಭೂತ ಸೌಕರ್ಯಗಳು ಅಸ್ಥಿತ್ವದಲ್ಲಿತ್ತೇ ಎಂಬ ಕೆಲವು ಸರಳ ಪ್ರಶ್ನೆಗಳನ್ನು ಮುಂದಿರಿಸಲಾಗುತ್ತದೆ. ಆದರೆ ಅಂಥಾ ಸುಳ್ಳು ಪ್ರತಿಪಾದನೆಗಳಿಗೆ ದೇಶವನ್ನು ಆಳುವವರೇ ಉತ್ತೇಜನ  ನೀಡುತ್ತಿರುವುದು ದೇಶಕ್ಕೆ ಹಲವು ರೀತಿಯಲ್ಲಿ ತೀವ್ರತರವಾದ ಅಪಾಯವನ್ನು ತಂದೊಡ್ಡುವ ಸಾಧ್ಯತೆಗಳಿವೆ. ಮೂಲಕ ಅವರು ನಮ್ಮ ಪ್ರಾಚೀನರ ಹಲವು ನೈಜ ಸಂಶೋಧನೆಗಳ ಬಗ್ಗೆಯೂ ಅವಹೇಳನ ಮತ್ತು ಅಗೌರವಗಳು ಉಂಟಾಗುವಂತೆ ಮಾಡುತ್ತಿದ್ದಾರೆ. ತನ್ನ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಭಾರತವು ವಿಜ್ನಾನ ಮತ್ತು ತಂತ್ರಜ್ನಾನಗಳ ಅನ್ವೇಷಣೆಯಲ್ಲಿ ಪ್ರಗತಿ ಸಾಧಿಸುವುದರಿಂದ ದಿಕ್ಕು ತಪ್ಪಿಸುತ್ತಾರೆ. ಅತಾರ್ಕಿಕ ಪ್ರತಿಪಾದನೆಗಳಿಗೆ ಇಲ್ಲದ ಮನ್ನಣೆಯನ್ನು ನೀಡುವ ಮೂಲಕ ಮುಂದಿನ ಜನಾಂಗಕ್ಕೆ ತಪ್ಪು ಮೇಲ್ಪಂಕ್ತಿಯನ್ನು ಹಾಕಿಕೊಡುತ್ತಿದ್ದಾರೆ. ಅಂಥಾ ಸುಳ್ಳು ಪ್ರತಿಪಾದನೆಗಳನ್ನು ಸರಿ ಎಂದು ಒಪ್ಪಿಕೊಳ್ಳುವುದೇ ಒಬ್ಬರ ದೇಶನಿಷ್ಟೆಗೆ ನೈಜ ಪರೀಕ್ಷೆಯಾಗುತ್ತಿದೆ. ಮತ್ತದು ಪರಿಣಾಮದಲ್ಲಿ ಅತ್ಯಂತ ದ್ವೇಷಪೂರಿತವೂ ಮತ್ತು ವಿಭಜನಕಾರಿಯೂ ಆಗಿಬಿಡುತ್ತದೆ.

 ಭಾರತದ ವಿದ್ವತ್ ವಲಯದ ಪ್ರಧಾನಧಾರೆಯಿಂದ ಇಂತಹ ಅಸಂಬದ್ಧ ಪ್ರತಿಪಾದನೆಗಳನ್ನು ತೆಗೆದುಹಾಕಬೇಕು. ಒಂದು ವೇಳೆ ಭಾರತವು ತನ್ನ ಪ್ರಾಚೀನ ವಿಜ್ನಾನದ ಬಗ್ಗೆ ಅಧ್ಯಯನ ಮಾಡುವಲ್ಲಿ ನಿಜಕ್ಕೂ ಗಂಭೀರವಾಗಿದ್ದರೆ ನೀದಂ ಸಂಶೋಧನಾ ಕೇಂದ್ರವು ಚೀನಾದ ಪ್ರಾಚೀನ ವಿಜ್ನಾನದ ಬಗ್ಗೆ ಮಾಡುತ್ತಿರುವ ಸಂಶೋಧನೆಗಳು ನಮಗೆ ಮಾದರಿಯಾಗಬೇಕು. ಅಂಥಾ ಸಂಶೋಧನೆಗಳು ತಮ್ಮ ಅಧ್ಯಯನಗಳನ್ನು ಮುಂದಿಟ್ಟ ನಂತರ ಯಾವುದೇ ಸೈದ್ಧಾಂತಿಕ ಒಳಸೆಲೆಗಳಿಗೆ ನಿಷ್ಟರಾಗದ ವಿದ್ವಾಂಸರು ಅದರ ಪುರಾವೆಗಳನ್ನು ಮತ್ತು ಪ್ರತಿಪಾದನೆಗಳನ್ನು ಪ್ರಶ್ನಿಸಲಿ.

ಇಂಥಾ ಪ್ರತಿಗಾಮಿ ಬೆಳವಣಿಗೆಗಳ ವಿರುದ್ಧ  ವಿದ್ವತ್ ವಲಯವು ಒಟ್ಟಿನಲ್ಲಿ ಒಂದು ಪ್ರಬಲವಾದ ವಿರೋಧವನ್ನೇ ವ್ಯಕ್ತಪಡಿಸುತ್ತಿದ್ದರೂ ಉನ್ನತ ಸ್ಥಾನಗಳಲ್ಲಿರುವ ವಿಜ್ನಾನಿಗಳೂ ಇನ್ನೂ ಹೆಚ್ಚುಹೆಚ್ಚಾಗಿ ಇದರ ವಿರುದ್ಧ ಧ್ವನಿ ಎತ್ತಬೇಕಾದ ಅಗತ್ಯವಿದೆ.

ಕೃಪೆ: Economic and Political Weekly ಅನು: ಶಿವಸುಂದರ್ 

 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...