ಅಬುಧಾಬಿ:ಯಕ್ಷಗಾನ ಕಲಾವಿದ ಶ್ರೀ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರಿಗೆ ಅಬುಧಾಬಿ ಕರ್ನಾಟಕ ಸಂಘದ ಪ್ರತಿಷ್ಠಿತ "ದ. ರಾ. ಬೇಂದ್ರೆ ಪ್ರಶಸ್ತಿ"

Source: ganesh rai | By Arshad Koppa | Published on 23rd October 2017, 8:22 AM | Gulf News | Special Report | Guest Editorial |

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮಾತೃ ಸ್ಥಾನದಲ್ಲಿರುವ ಅಬುಧಾಬಿ ಕರ್ನಾಟಕ ಸಂಘ, ಯು.ಎ.ಇ. ಯಲ್ಲಿ ಕನ್ನಡ ಭಾಷೆ, ಕಲೆ ಸಂಸ್ಕೃತಿಯಲ್ಲಿ ಸೇವೆಸಲ್ಲಿಸಿರುವ ಕನ್ನಡಿಗರನ್ನು ಗುರುತ್ತಿಸಿ ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ "ದ. ರಾ. ಬೇಂದ್ರೆ ಪ್ರಶಸ್ತಿ" ನೀಡಿ ಸನ್ಮಾನಿಸಿ ಗೌರವಿಸುತ್ತಾ ಬರುತ್ತಿದೆ. 2017 ನವೆಂಬರ್ 3ನೇ ತಾರೀಕಿನಂದು ಅಬುಧಾಬಿಯಲ್ಲಿರುವ ಇಂಡಿಯಾ ಸೋಶಿಯಲ್ ಸೆಂಟರ್ ಬೃಹತ್ ಸಭಾಂಗಣದಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಸಂಜೆಯವರೆಗೆ ದಿನಪೂರ್ತಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಮಹಾಪೋಷಕರಾಗಿರುವ ಡಾ| ಬಿ. ಆರ್. ಶೆಟ್ಟಿಯವರು ಮತ್ತು ಗಣ್ಯಾತಿ ಗಣ್ಯರು  ಭಾಗವಹಿಸಲಿದ್ದಾರೆ.
2017ನೇ ಸಾಲಿನ "ದ. ರಾ. ಬೇಂದ್ರೆ ಪ್ರಶಸ್ತಿ" ಯನ್ನು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕರಾವಳಿ ಕರ್ನಾಟಕದ ಗಂಡುಕಲೆ ಯಕ್ಷಗಾನವನ್ನು ಇಲ್ಲಿ ನೆಲೆಸಿರುವ ಹವ್ಯಾಸಿ ಕಲಾವಿದರನ್ನು ಮತ್ತು ಮಕ್ಕಳ ತಂಡವನ್ನು ಪೂರ್ಣ ಪ್ರಮಾಣದಲ್ಲಿ  ಶಾಸ್ತ್ರೀಯವಾಗಿ ತಯಾರುಗೊಳಿಸಿ ಯಕ್ಷಗಾನ ಪ್ರದರ್ಶನವನ್ನು ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಅತ್ಯುತ್ತಮ ಯಕ್ಷಗಾನ ಕಲಾವಿದರು, ಗುರುಗಳು, ನಿರ್ದೇಶಕರು ಶ್ರೀ ಶೇಖರ್ ದಾಮೋದರ ಶೆಟ್ಟಿಗಾರ್ ಕಿನ್ನಿಗೋಳಿ ಇವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಗುವುದು. 

ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಯಕ್ಷ ರಂಗದ ಹೆಜ್ಜೆಗುರುತುಗಳು....
ಭವ್ಯಭಾರತದ ಸುಂದರ ಕರ್ನಾಟಕದ ಕರಾವಳಿ ಭಾಗದ ತುಳುನಾಡಿನ ಕಿನ್ನಿಗೋಳಿಯಲ್ಲಿ ಪ್ರಸಿದ್ಧ ವೇಷಧಾರಿ, ವೇಷಭೂಷಣ ಪ್ರಸಾದನ ತಜ್ಞ, ಮೋಹಿನಿ ಕಲಾ ಸಂಪದ ಸಂಸ್ಥೆಯ ಸ್ಥಾಪಕರಾದ ದಿವಂಗತ ತಾಳಿಪಾಡಿ ದಾಮೋದರ ಶೆಟ್ಟಿಗಾರ್ ಮತ್ತು ಶ್ರೀಮತಿ ಮೋಹಿನಿ ಶೆಟ್ಟಿಗಾರ್ ದಂಪತಿಗಳ ಮಗನಾಗಿ 1966ರಲ್ಲಿ ಜನಿಸಿದ ಶೇಖರ್ ಶೆಟ್ಟಿಗಾರ್ ಬಿ. ಕಾಂ. ಪದವಿದರರು. ಪ್ರಸ್ತುತ ಡಾ| ಬಿ. ಆರ್. ಶೆಟ್ಟಿಯವರ ಎನ್.ಎಂ.ಸಿ. ಸಮೂಹ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಇವರ ಜೀವನ ಸಂಗಾತಿ ಶ್ರೀಮತಿ ಶಾಂತಾ ರವರು ಉಡುಪಿಯ ಬಳಿ ಇರುವ ಉಚ್ಚಿಲದಲ್ಲಿ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯ ಅದ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳು ಹೃಷಿಕೇಶ ದ್ವಿತೀಯ ಪಿ. ಯು. ಸಿ. ವಿಘ್ನೇಶ ಪ್ರಥಮ ಪಿ. ಯು. ಸಿ. ಯಲ್ಲಿ ವ್ಯಾಸಂಗ ಮಾಡುತಿದ್ದಾರೆ.

 

ಯಕ್ಷಗಾನ ಕಲೆಯನ್ನು ನಾಲ್ಕು ತಲೆಮಾರಿನಿಂದ ಪೂರ್ಣವಾಗಿ ತೊಡಗಿಸಿಕೊಂಡಿರುವ ಶೆಟ್ಟಿಗಾರ್ ಕುಟುಂಬ

ಶೇಖರ್ ಶೆಟ್ಟಿಗಾರ್ ರವರ ಅಜ್ಜ ದಿವಂಗತ ವೀರಯ್ಯ ಶೆಟ್ಟಿಗಾರ್ ಶನಿಪೂಜೆ ಪ್ರವಚನದ ಪ್ರಸಿದ್ಧ ಅರ್ಥಧಾರಿಯಾಗಿದ್ದರು.
ಶೇಖರ್ ಶೆಟ್ಟಿಗಾರ್ ರವರ ತಂದೆ ದಿವಂಗತ ತಾಳಿಪಾಡಿ ದಾಮೋದರ ಶೆಟ್ಟಿಗಾರ್ ಯಕ್ಷಗಾನ ನಾಟಕಗಳ ಪ್ರಸಿದ್ಧ ವೇಷಧಾರಿಯೂ, ವೇಷಭೂಷಣಗಳ ಪ್ರಸಾದನ ಕಲಾವಿದರಾಗಿದ್ದರು. ಯಕ್ಷಗಾನ ವೇಷ ಬಣ್ಣಗಾರಿಕೆ ಮತ್ತು ವಸ್ತ್ರಾಲಂಕಾರಗಳಲ್ಲಿ ಮೂರು ದಶಕಗಳಿಗೂ ಮಿಕ್ಕಿದ ಅನುಭವ ಗಳಿಸಿದವರು.
ಕಟೀಲು, ಇರುವೈಲು, ಸೌಕೂರು ಮೇಳಗಳಲ್ಲಿ ವೃತ್ತಿಕಲಾವಿದರಾಗಿ, ಸ್ತ್ರೀಪಾತ್ರಧಾರಿಯಾಗಿಯೂ ವೈವಿಧ್ಯಮಯ ಪಾತ್ರಗಳ ಮೂಲಕ ಪ್ರಸಿದ್ದಿಯನ್ನು ಪಡೆದವರಾಗಿದ್ದರು. ಯಕ್ಷಗಾನ ನಾಟಕಗಳಿಗೆ ವೇಷಭೂಷಣ, ಬಣ್ಣಗಾರಿಕೆಯನ್ನು ಒದಗಿಸುವ ಸಂಸ್ಥೆ "ಮೋಹಿನಿ ಕಲಾ ಸಂಪದ" ಸಂಸ್ಥೆಯನ್ನು ಸ್ಥಾಪಿದವರು.
ಪ್ರತಿವರ್ಷ ದಾಮೋದರ ಶೆಟ್ಟಿಗಾರರ ಸಂಸ್ಕರಣಾ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ, ಯಕ್ಷರಂಗದ ವಿಶಿಷ್ಟ ಕಲಾವಿದರೊಬ್ಬರನ್ನು ಹುಡುಕಿ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಶೇಖರ್ ಶೆಟ್ಟಿಗಾರ್ ರವರ ತಂದೆಯರಾದ ದಾಮೋದರ ಶೆಟ್ಟಿಗಾರ್ ರವರಿಂದ ಬಳುವಳಿಯಾಗಿ ಯಕ್ಷಗಾನ ಕಲೆಯನ್ನು ಪಡೆದು ಯಕ್ಷಗಾನ ಕಲೆಗಾಗಿ ತಮ್ಮನ್ನು ಸಮರ್ಪಿಸಿ ಕೊಂಡಿರುವರಲ್ಲಿ ಮೊದಲನೆಯವರು ಮನೆಯ ಹಿರಿಯ ಮಗಳು ವೇದಾವತಿ ಶೆಟ್ಟಿಗಾರ್ (ಅಕ್ಕ) ಅತಿಥಿ ಕಲಾವಿದರಾಗಿ ಮೇಳಗಳಲ್ಲಿ ವೇಷ ಮಾಡಿರುವ ಹಿರಿಮೆ - ಸುರತ್ಕಲ್ ಮೇಳ, ಅರುವ ಮೇಳ.
* ಸದಾಶಿವ ಶೆಟ್ಟಿಗಾರ್ (ತಮ್ಮ) ವೃತ್ತಿಯಲ್ಲಿ ಭೌತಶಾಸ್ತ್ರ ಉಪನ್ಯಾಸಕರು, ಯಕ್ಷಗಾನ ವೇಷಧಾರಿ, ಬಣ್ಣದ ವೇಷದಲ್ಲಿ ಹೆಚ್ಚಿನ ಪ್ರಸಿದ್ದಿಯನ್ನು ಪಡೆದವರು.
* ಗಂಗಾಧರ ಶೆಟ್ಟಿಗಾರ್ (ತಮ್ಮ) ವೃತ್ತಿಯಲ್ಲಿ ಯಕ್ಷಗಾನ, ನಾಟಕ, ನೃತ್ಯಗಳಿಗೆ ವೇಷಭೂಷಣ ತಯಾರಿಸುವವರು ಮತ್ತು ಬಾಡಿಗೆ ಕೊಡುವವರಾಗಿದ್ದು ಯಕ್ಷಗಾನ ವೇಷಧಾರಿಯಾಗಿ ಹಲವು ಪ್ರಸಂಗಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
* ಬಾಲಕೃಷ್ಣ ಶೆಟ್ಟಿಗಾರ್ (ತಮ್ಮ) ದುಬಾಯಿಯಲ್ಲಿ ಎನ್. ಎಂ.ಸಿ. ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು ಯಕ್ಷಮಿತ್ರ ತಂಡದಲ್ಲಿ ರಾಜ ವೇಷ, ಪುಂಡು ವೇಷ ಮಾಡುವಲ್ಲಿ ಪ್ರೌಡಿಮೆಯನ್ನು ಪಡೆದಿದ್ದಾರೆ.
ಶೇಖರ್ ಶೆಟ್ಟಿಗಾರ್ ರವರ ಮಕ್ಕಳು ಇಬ್ಬರೂ ಯಕ್ಷಗಾನ, ಚೆಂಡೆ-ಮದ್ದಳೆ, ಭಾಗವತಿಕೆ ವಿದ್ಯಾರ್ಥಿಗಳಾಗಿ ಗುರುಗಳು ಶ್ರೀಯುತರುಗಳಾದ ರಾಜೇಶ್ ಐ. ಕಟೀಲು, ಹರಿನಾರಾಯಣ ಬೈಪಡಿತ್ತಾಯ ಮತ್ತು ಗಣೇಶ್ ಕೊಲಕಾಡಿ ಇವರಿಂದ ಅಭ್ಯಾಸ ಮಾಡುತಿದ್ದಾರೆ. 

ಶೇಖರ್ ಶೆಟ್ಟಿಗಾರರ ಅಕ್ಕನ ಮಕ್ಕಳು, ತಮ್ಮಂದಿರ ಮಕ್ಕಳು ಯಕ್ಷಗಾನ ಅಭ್ಯಾಸಿಗಳಾಗಿದ್ದು ವೇಷಧಾರಿಗಳಾಗಿ ಮನೆಮಂದಿ ಎಲ್ಲರೂ ತೊಡಗಿಸಿಕೊಂಡಿರುವ ಯಕ್ಷಗಾನ ಕಲೆಯನ್ನು ಆರಾಧಿಸುವ ಪರಿಪೂರ್ಣ ಕುಟುಂಬವಾಗಿದೆ. 


ಶೇಖರ್ ಶೆಟ್ಟಿಗಾರ್ ನಡೆದು ಬಂದ ಹಾದಿ.....
ಯಕ್ಷಶಿಕ್ಷಣ ಬಾಲಪಾಠವನ್ನು ತಮ್ಮ ತಂದೆಯವರಿಂದ ಪ್ರಾರಂಭಿಸಿ ದಿವಂಗತ ಕಟೀಲು ಶ್ರೀನಿವಾಸ ಭಟ್, ಕೋಳ್ಯೂರ್ ರಾಮಚಂದ್ರ ಭಟ್, ಐ. ಲೋಕೇಶ್ ಕುಮಾರ್ ಕಟೀಲು ಮತ್ತು ಗಣೇಶ್ ಕೊಲಕಾಡಿಯವರಿಂದ ಛಂದಸ್ಸು-ಅರ್ಥಗಾರಿಕೆ ಅಭ್ಯಾಸವನ್ನು ಪಡೆದುಕೊಂಡರು.
ಮುಂಬೈಯ ಪ್ರಸಿದ್ಧ ಶಣ್ಮುಖಾನಂದ ಹಾಲ್ ನಲ್ಲಿ ಪ್ರಥಮ ರಂಗಪ್ರವೇಶ ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿ ಪ್ರದ್ಯುಮ್ನ ಮತ್ತು ಬಬ್ರುವಾಹನನ ದೂತನ ವೇಷದಲ್ಲಿ ಶೇಖರ್ ಶೆಟ್ಟಿಗಾರ್ ಯಕ್ಷಗಾನ ಕಲೆಯ ಹಾದಿಯಲ್ಲಿ ಮೊದಲನೆಯ ಹೆಜ್ಜೆಯನ್ನು ಪ್ರಾರಂಭಿಸಿದರು.

ಹವ್ಯಾಸಿ ಕಲಾವಿದನಾಗಿ ಮುಂಬೈಯ ನಾರಾಯಣ ಗುರುಸ್ವಾಮಿ ಯಕ್ಷಗಾನ ಮಂಡಳಿ, ವೀರಭದ್ರ ಯುವಕ ಮಂಡಲ - ತಾಳಪಾಡಿ, ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ-ಮಂಡ್ಕೂರು, ನಂದಿಕೂರು ಮಂಡಳಿಗಳಲ್ಲಿ ವೇಷಧಾರಿಯಾಗಿ ಭಾಗವಹಿಸಿದ್ದಾರೆ.
ವೃತ್ತಿಪರ ಕಲಾವಿದರಾಗಿ ಶ್ರೀಭಗವತಿ ಮೇಳ ಸಸಿಹಿತ್ಲು 2002 ರಿಂದ 2004 ರವರೆಗೆ ಎರಡು ವರ್ಷ, ಮತ್ತು 2004 ರಿಂದ 2008 ರವರೆಗೆ ನಾಲ್ಕು ವರ್ಷ ಶ್ರೀ ದುರ್ಗಾಪರಮೇಶ್ವರಿ ಮೇಳ ಕಟೀಲು ತಿರುಗಾಟದಲ್ಲಿ ಶೇಖರ್ ಶೆಟ್ಟಿಗಾರ್ ಅಪಾರ ಅನುಭವವನ್ನು ಮೈಗೂಡಿಸಿಕೊಂಡಿದ್ದಾರೆ.

ನಾಟ್ಯ ತರಬೇತಿ ಮತ್ತು ಪ್ರಸಂಗ ನಿರ್ದೇಶನ
ಶೇಖರ್ ಶೆಟ್ಟಿಗಾರ್ ರವರಿಗೆ ಕಲಾದೇವಿಯ ಅನುಗ್ರಹದಿಂದ ಯಕ್ಷಗಾನ ಕಲೆಯನ್ನು ಕಲಿಯುವ ಯುವ ಕಲಾವಿದರಿಗೆ ಸರಿಯಾದ ಮಾರ್ಗದರ್ಶನ ತರಭೇತಿ ನೀಡುವ ಗುರುವಾಗಿ ನಿರ್ದೇಶಕರಾಗಿ ಅವಕಾಶ ದೊರೆಯಿತು. ಅವುಗಳಲ್ಲಿ ಪ್ರಮುಖವಾದವುಗಳು ವೀರಭದ್ರ ಯುವಕ ಮಂಡಲದ ಬಾಲ ಕಲಾವಿದರ ತಂಡ, ತೆಂಕ ಎರ್ಮಾಳು ಹಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಉಲ್ಲಂಜೆ - ಕಟೀಲು, ಆಳ್ವಾಸ್ ಧೀಂಕಿಟ ಅಧ್ಯಯನ ಕೇಂದ್ರ - ಮೂಡಬಿದ್ರೆ, ಯಕ್ಷಮಿತ್ರರು ದುಬಾಯಿ.

ಶೇಖರ್ ಶೆಟ್ಟಿಗಾರ್ ರವರ ನಿರ್ದೇಶನಕ್ಕೆ ಲಭಿಸಿರುವ ತಂಡ ಪ್ರಶಸ್ತಿ
1. ತಂಕುತಿಟ್ಟು ಹವ್ಯಾಸಿ ಯಕ್ಷಗಾನ ಸ್ಪರ್ಧೆ : ಶ್ರೀ ಕ್ಷೇತ್ರ ಕಾಂತಾವರದಲ್ಲಿ ನಡೆದ ಸ್ಪರ್ಧೆಗಳಲ್ಲಿ ಸತತ ನಾಲ್ಕು ವರ್ಷ (2000 ದಿಂದ 2003ನೇ ಇಸವಿ) ಗಳಲ್ಲಿ 1  ಪ್ರಥಮ (ತರಣ ಸೇನ ಕಾಳಗ) 2  ದ್ವಿತೀಯ (ಸುಧನ್ವ ಮತ್ತು ಪಾಂಚಜನ್ಯ) 1  ತೃತಿಯ ಪ್ರಶಸ್ತಿ. (ಭೀಷ್ಮ-ಭೀಷ್ಮ)
2. ನಂದನೇಶ್ವರ ದೇವಸ್ಥಾನ (2004 ನೇ ಇಸವಿ) ಪಣಂಬೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಮೋಕ್ಷ ಸಂಗ್ರಾಮಕ್ಕೆ ಪ್ರಥಮ
3. ಸುಬ್ರಹ್ಮಣ್ಯ ದೇವಾಸ್ಥಾನ, ಸೂಡ (2007ನೇ ಇಸವಿ) ದಲ್ಲಿ ನಡೆದ ಸ್ಪರ್ಧೆಯಲ್ಲಿ ಯಾಗ ಸಂಘರ್ಷ ಪ್ರಸಂಗಕ್ಕೆ ಪ್ರಥಮ

ಅಂತರ ಕಾಲೇಜು ಯಕ್ಷಗಾನ ಸ್ಪರ್ಧೆ
1. ಆಳ್ವಾಸ್ ಸಂಸ್ಥೆಗಾಗಿ ನಿರ್ದೇಶಿಸಿದ ಸುದರ್ಶನ ವಿಜಯ, ಮೋಹಿನಿ ಏಕಾದಶಿ, ತರಣ ಸೇನ ಕಾಳಗ, ಸುಧನ್ವ ಕಾಳಗ ಮುಂತಾದ ಪ್ರಸಂಗಗಳು ಸತತವಾಗಿ ಪ್ರಥಮ ತಂಡ ಪ್ರಶಸ್ತಿ ಮತ್ತು ಬಹುಮಂದಿ ವಿದ್ಯಾರ್ಥಿಗಳು ವೈಯುಕ್ತಿಕ ಪ್ರಶಸ್ತಿಗಳನು ಪಡೆದಿದ್ದಾರೆ. 
2. 2010 ರಲ್ಲಿ ತಾವೇ ಪದ್ಯ ರಚಿಸಿ ಸಂಭಾಷಣೆ ಬರೆದು ನಿರ್ದೇಶಿಸಿದ ರುಕ್ಮಾಂಗದ ಚರಿತ್ರೆ ಆಧಾರಿತ "ಮೋಹಿನಿ ಏಕಾದಶಿ" ಪ್ರಸಂಗಕ್ಕಾಗಿ ಆ ವರ್ಷ ನಡೆದ ಮೂರು ಸ್ಪರ್ಧೆಗಳಲ್ಲೂ ಆಳ್ವಾಸ್ ಸಂಸ್ಥೆ ಪ್ರಥಮ ಪ್ರಶಸ್ತಿಯನ್ನು ಪಡೆದಿದೆ.

ವೈಯುಕ್ತಿಕ ಪ್ರಶಸ್ತಿಗಳು
1. ಕಾಂತಾವರ ಸ್ಪರ್ಧೆಯಲ್ಲಿ ಸ್ತತತ ಮೂರು ವರ್ಷ - ಪ್ರಥಮ ಪುಂಡುವೇಷ ಪ್ರಶಸ್ತಿ. ದೇವವೃತ – 2000, ಸುಧನ್ವ -2001., ತರಣ ಸೇನ - 2002.
2. ನಂದನೇಶ್ವರ ಸ್ಪರ್ಧೆಯಲ್ಲಿ - ತರಣ ಸೇನ ಪಾತ್ರಕ್ಕೆ ಪ್ರಥಮ (ಪುಂಡುವೇಷ)
ಹಾಗೂ ಇತರ ಸ್ಪರ್ಧೆಗಳು: ಮಂಗಳೂರು ಆಕಾಶವಾಣ  ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಹಾಗೂ ಇಂಗ್ಲಿಷ್ ಭಾಷಾ ಯಕ್ಷಗಾನದಲ್ಲಿ ಪಾತ್ರನಿರ್ವಹಣೆ

ಶೇಖರ ಶೆಟ್ಟಿಗಾರ್ ಯಕ್ಷರಂಗದ ಹೆಜ್ಜೆಯಲ್ಲಿ ಸತತ ಸಲಹೆ ಸಹಕಾರ ನೀಡಿ ಪ್ರೋತ್ಸಾಹಿಸಿದ ಮಹನಿಯರುಗಳು : 
* ಅಜ್ಜ ದಿ. ವೀರಯ್ಯ ಶೆಟ್ಟಿಗಾರ್, (ಶನಿಪೂಜೆ ಪ್ರವಚನ ಪ್ರಸಿದ್ಧ ಅರ್ಥಧಾರಿ)
* ದೊಡ್ಡಪ್ಪ ಮಾಧವ ಶೆಟ್ಟಿಗಾರ್, ಮಾವ ಲಿಂಗಪ್ಪ ಶೆಟ್ಟಿಗಾರ್, ಮುಖ್ಯಪ್ರಾಣ ಕಿನ್ನಿಗೋಳಿ (ಚಿಕ್ಕಪ್ಪ)
* ನಾರಾಯಣ ಗುರುಸ್ವಾಮಿ ಯಕ್ಷಗಾನ ಮಂಡಳಿಯ - ಎಂ ಟಿ. ಪೂಜಾರಿ. ಗಣೇಶ ಚಂದ್ರಮಂಡಲ (ಊರಿನ ಗೆಳೆಯ) ಪ್ರಕಾಶ ಪಣ ಯೂರು, ಪ್ರವೀಣ ಶೆಟ್ಟಿ ಎಕ್ಕಾರು.
* ಕಟೀಲು ಮೇಳದ ಭಾಗವತ ಕುರಿಯ ಗಣಪತಿ ಶಾಸ್ತ್ರಿ, ಸುಣ್ಣಂಬಳ ವಿಶ್ವೇಶವರ ಭಟ್, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ರಾಮ ಕುಲಾಲ ದಾಸನಡ್ಕ, ಮಂಜುನಾಥ ಭಟ್, ಕೃಷ್ಣ ಮೂಲ್ಯ ಮತ್ತೆಲ್ಲಾ ಕಲಾವಿದರು.
* ಸಸಿಹಿತ್ಲು ಮೇಳದ ಪೊಳಲಿ ಸುದರ್ಶನ ಶೆಟ್ಟಿ, ರಮೇಶ ಕುಲಶೇಖರ.
*ಕೊರ್ಗಿ ವೆಂಕಟೇಶ ಉಪಾಧ್ಯಾಯರು, ಮುರಳಿಧರ ಭಟ್ ಕಟೀಲು, ಹರೀಶ ಶೆಟ್ಟಿಗಾರ್ ಮುಚ್ಚೂರು, ದಯಾನಂದ ಶೆಟ್ಟಿಗಾರ್ ಮಿಜಾರು, ಮುಂಡ್ಕೂರು ಮೇಳದ ಸರ್ವ ಕಲಾವಿದರು.

ಶೇಖರ ಶೆಟ್ಟಿಗಾರ್ ರವರ ವೈವಿಧ್ಯಮಯ ಪಾತ್ರಗಳು 
ಪುಂಡು ವೇಷ, ಕಿರೀಟ ವೇಷ ಮತ್ತು ನಾಟಕೀಯ ವೇಷಗಳಲ್ಲಿ ಹೆಚ್ಚಿನ ಸಿದ್ಧಿ ಪಡೆದಿದ್ದಾರೆ. ಯವ್ವನದಲ್ಲಿ ಸ್ತ್ರೀವೇಷ ಮಾಡಿದ್ದೂ ಇದೆ. ಅಗತ್ಯಕ್ಕೆ ಬಣ್ಣದ ವೇಷ ಹಾಸ್ಯ ಪಾತ್ರಗಳಲ್ಲಿ ಜನಮನ ಸೆಳೆದಿದ್ದಾರೆ. 
ಪುಂಡು ವೇಷಗಳಲ್ಲಿ: ಸುಧನ್ವ, ಬಬ್ರುವಾಹನ, ದೇವವೃತ್ತ, ರಾಮ, ಕೃಷ್ಣ, ವಿಷ್ಣು, ತರಣ ಸೇನ, ಚಂಡ-ಮುಂಡ, ಲವ-ಕುಶ,
ಕಿರೀಟ ವೇಷಗಳಲ್ಲಿ: ದೇವೆಂದ್ರ, ಅರ್ಜುನ, ಶಂತನು, ದಕ್ಷ, ಕಾತ್ರ್ಯವೀರ್ಯಾರ್ಜುನ, ಬಲರಾಮ, ಶಿಶುಪಾಲ, ಕ್ಪೊರವ, ಕೌಂಡ್ಲಿಕ, ಇಂದಜಿತು, ರಕ್ತಬೀಜ, ಹಿರಣ್ಯಾಕ್ಷ.
ನಾಟಕೀಯ ಪಾತ್ರಗಳಲ್ಲಿ : ಮಧು-ಕೈಟಭ , ಅರುಣಾಸುರ, ಶನೀಶ್ವರ, ಕಂಸ, ಹಿರಣ್ಯಕಶ್ಯಪ, ಭಂಡಾಸುರ, ಘಟೋತ್ಕಚ, ಕೋಟಿ-ಚೆನ್ನಯ್ಯ, ದೇವುಪೂಂಜ.

ಸ್ತ್ರೀ ವೇಷಗಳಲ್ಲಿ: ಶ್ರೀದೇವಿ, ದಾಕ್ಷಾಯಿಣ , ರುಕ್ಮಿಣ , ಮಾಲಿನಿ, ದ್ರೌಪದಿ, ಮಾಯಾ ಶೂರ್ಪನಖಿ, ನಂದಿನಿ ಪ್ರಮುಖವಾದುವು.

ಶೇಖರ್ ಶೆಟ್ಟಿಗಾರ್ ರವರ ಶಿಷ್ಯರೇ ಇಂದು ಗುರುಗಳು : ಇವರ ಕೆಲವು ವಿದ್ಯಾರ್ಥಿಗಳು ಇಂದು ಗುರುಗಳಾಗಿ ವೈಯುಕ್ತಿಕ ಸಾಧನೆ ಮಾಡುತ್ತಿದ್ದಾರೆ.
* ಪ್ರಸಾದ್ ಚೇರ್ಕಾಡಿ - ಕಿರುತೆರೆ ನಟ, ಸಂಭಾಷಣೆಕಾರ, ಅಕ್ಷಯಾಂಬರ - ಪ್ರಸಿದ್ಧ ನಾಟಕದಲ್ಲಿ ರಾಷ್ಟ್ರೀಯಮಟ್ಟದಲ್ಲಿ ಉತ್ತಮ ನಟ ಪ್ರಶಸ್ತಿ ವಿಜೇತ
* ಪವನ್ ಕುಮಾರ್ ಕೆರ್ವಾಸೆ - ಚಲನ ಚಿತ್ರ ಹಿನ್ನೆಲೆ ಗಾಯಕ
* ಹರಿರಾಜ್ ಶೆಟ್ಟಿಗಾರ್, ಕಿನ್ನಿಗೋಳಿ
* ಶರತ್ ಪೂಜಾರಿ - ಯಕ್ಷಮಿತ್ರರು ದುಬಾಯಿಯಲ್ಲಿ ಗುರುಗಳಾಗಿ ಸೇವೆ 
ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಇವರು ತಂಡಕ್ಕೆ ಸೇರ್ಪಡೆಯಾದನಂತರ ಯಕ್ಷಗಾನ ಪ್ರದರ್ಶನಕ್ಕೆ ಶಾಸ್ತ್ರೀಯ ಸ್ಪರ್ಶ ನೀಡಿ ಕ್ರಮಬದ್ಧವಾಗಿ ದುಬಾಯಿಯ ಹವ್ಯಾಸಿ ಕಲಾವಿದರನ್ನು ಉತ್ತಮವಾಗಿ ತಯಾರುಗೊಳಿಸಿ ಹತ್ತಾರು ಮಕ್ಕಳನ್ನು ಸೇರ್ಪಡೆ ಮಾಡಿಕೊಂಡು ವೇದಿಕೆಯಲ್ಲಿ ಪ್ರದರ್ಶನ ನೀಡಲಿಕ್ಕೆ ತಯಾರು ಮಾಡಿದ ಕೀರ್ತಿ ಇವರದ್ದಾಗಿದೆ. ಅದರಲ್ಲಿಯೂ ವಿಶೇಷವಾಗಿ ದುಬಾಯಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಕೆ ಇಲ್ಲದಿದ್ದರೂ ಪ್ರಸಂಗದ ಮಾತುಗಾರಿಕೆಯನ್ನು ಅಂಗ್ಲ ಭಾಷೆಯಲ್ಲಿ ಬರೆದುಕೊಂಡು ಕಠಿಣ ಅಭ್ಯಾಸ ಮಾಡಿಕೊಂಡು ರಂಗದಲ್ಲಿ ನಿರರ್ಗಳವಾಗಿ ತಮ್ಮ ವಾಕ್ ಚಾತುರ್ಯದ ಮೂಲಕ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಹಿಂದಿನ ತಲೆಮಾರಿನಿಂದ ಶಾಸ್ತ್ರೀಯವಾಗಿ ನಡೆದುಕೊಂಡು ಬರುತ್ತಿರುವ ಯಕ್ಷಗಾನ ಕಲೆಯನ್ನು ಶೇಖರ್ ಶೆಟ್ಟಿಗಾರ್ ರವರು ತಮ್ಮ ಜೀವನ ವೃತ್ತಿಯೊಂದಿಗೆ ಪೃವೃತಿಯಾಗಿ ಕಲೆಯನ್ನು ಶಾಸ್ತ್ರೀಯವಾಗಿಯೇ ಉಳಿಸಿಕೊಂಡು ಮುನ್ನಡೆಸುವ ಕಾಯಕವನ್ನು ಮುಂದಿನ ಪೀಳಿಗೆಗೆ ಸೇತುವೆಯಾಗಿ ಕಾರ್ಯ ನಿರ್ವಹಿಸುವುತ್ತಿರುವುದನ್ನು ಕಂಡಾಗ ಇವರ ಬಗ್ಗೆ ಅಪಾರ ಗೌರವ ಮೂಡಿಬರುತ್ತಿದೆ.

ಅಬುಧಾಬಿ ಕರ್ನಾಟಕ ಸಂಘ ನೂರಾರು ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದೆ. ಹಲವಾರು ಹಿರಿಯ ಕಲಾವಿದರನ್ನು ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದೆ. ಈ ಮೊದಲು ಹಲವಾರು ಪ್ರತಿಭಾನ್ವಿತರನ್ನು ಗುರುತ್ತಿಸಿ ಕರ್ನಾಟಕ ರಾಜ್ಯೋತ್ಸವದಂದು "ದ. ರಾ. ಬೇಂದ್ರೆ ಪ್ರಶಸ್ತಿ”ಯನ್ನು ನೀಡಿ ಗೌರವಿಸಿದೆ.

1988ರ ದಶಕದಲ್ಲಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಜೊತೆಗೆ ಹತ್ತೊಂಬತು ಕಲಾವಿದರ ತಂಡವನ್ನು ಬರಮಾಡಿಕೊಂಡು ಯಕ್ಷಗಾನ ಪ್ರದರ್ಶನ ನೀಡಿರುವ ವೇದಿಕೆಯಲ್ಲೇ ಇಂದು ಮತ್ತೊರ್ವ ಸಾಧನೆ ಮಾಡಿರುವ ಯಕ್ಷಗಾನ ಕಲಾವಿದರನ್ನು ಗುರುತ್ತಿಸಿ ಪ್ರತಿಷ್ಠಿತ "ದ. ರಾ. ಬೇಂದ್ರೆ ಪ್ರಶಸ್ತಿ”ಯನ್ನು ಶ್ರೀಯುತ ಶೇಖರ್ ದಾಮೋದಾರ ಶೆಟ್ಟಿಗಾರ್ ಕಿನ್ನಿಗೋಳಿ ಇವರಿಗೆ ನೀಡಿ ಗೌರವಿಸುತ್ತಿರುವುದು  ಯಕ್ಷಗಾನ ಕಲಾರಂಗಕ್ಕೆ ಸಂದ ಗೌರವವಾಗಿದೆ.

ಸಮಸ್ಥ ಅನಿವಾಸಿ ಕನ್ನಡಿಗರ ಪರವಾಗಿ ಶ್ರೀ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರಿಗೆ ಹಾರ್ದಿಕ ಅಭಿನಂದನೆಗಳು. ಯಕ್ಷಗಾನ ಕಲಾರಂಗದಲ್ಲಿ ಸೇವೆ ನಿರಂತರವಾಗಿ ಮುನ್ನಡೆಯಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.

"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"


ಬಿ. ಕೆ. ಗಣೇಶ್  ರೈ
ಅರಬ್ ಸಂಯುಕ್ತ ಸಂಸ್ಥಾನ

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...